ಮುಂಡಾಳಗುತ್ತು ಡಾ. ತಿಮ್ಮಪ್ಪ ರೈಯವರಿಗೆ ಶದ್ಧಾಂಜಲಿ ಸಭೆ

0

ಸಮುದ್ರ ಸಿಂಧುವಿಗೆ ಸಮಾನ – ಕಡಮಜಲು
ಅರಿಯಡ್ಕದ ಹಿರಿಮೆ ಗರಿಮೆ ಹೆಚ್ಚಿಸಿದವರು – ಲಕ್ಷ್ಮಿನಾರಾಯಣ ಶೆಟ್ಟಿ
ಅವರ ಕುಟುಂಬದವನೆಂದು ಹೇಳಿಕೊಳ್ಳಲು ಹೆಮ್ಮೆಯಿದೆ – ಮುಂಡಾಳಗುತ್ತು ಜಯರಾಮ ರೈ

ಪುತ್ತೂರು: ಮುಂಡಾಳಗುತ್ತು ಮತ್ತು ಅರಿಯಡ್ಕ ಮನೆತನದ ಘನಸ್ಥಿಕೆ ಹೆಚ್ಚಿಸಿದ ಧೀಮಂತ ವ್ಯಕ್ತಿತ್ವವನ್ನು ಹೊಂದಿ ಸಾರ್ಥಕ ಬದುಕನ್ನು ಬದುಕಿದವರು ಮುಂಡಾಳಗುತ್ತು ಡಾ. ತಿಮ್ಮಪ್ಪ ರೈಯವರು ಎಂದು ಅವರ ನುಡಿನಮನ ಕಾರ್ಯಕ್ರಮದಲ್ಲಿ ಬಣ್ಣಿಸಲಾಯಿತು.

ಇತ್ತೀಚೆಗೆ ನಿಧನರಾದ ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷರೂ, ಮುಂಡಾಳಗುತ್ತು ಕುಟುಂಬದ ಹಿರಿಯ ವ್ಯಕ್ತಿ, ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನ ನಿವೃತ್ತ ಮುಖ್ಯಸ್ಥರೂ ಆದ ಡಾ. ತಿಮ್ಮಪ್ಪ ರೈ ರವರ ಶ್ರದ್ಧಾಂಜಲಿ ಸಭೆಯು ಮಾ. 8 ರಂದು ಕೆದಂಬಾಡಿ ಸನ್ಯಾಸಿಗುಡ್ಡೆ ಸದ್ಗುರು ಡಾII ಎಸ್. ಆರ್. ಗೋಪಾಲನ್ ನಾಯರ್ ರಂಗಮಂದಿರದಲ್ಲಿ ನಡೆಯಿತು. ಡಾ. ತಿಮ್ಮಪ್ಪ ರೈಯವರ ಕಿರಿಯ ಪುತ್ರ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅತಿಥಿಗಳನ್ನು ಸ್ವಾಗತಿಸಿದರು.

ಮುಂಡಾಳಗುತ್ತು ಬೊಳ್ಳಿ ಬೊಲ್ಪು – ಸುಭಾಸ್ ರೈ
ನುಡಿನಮನ ಸಲ್ಲಿಸಿ ಮಾತನಾಡಿದ ಕಡಮಜಲು ಸುಭಾಸ್ ರೈಯವರು ‘ನಮ್ಮ ಬಾಬು ಬಾವ ಎಂದೇ ಕರೆಯಲ್ಪಡುತ್ತಿದ್ದ ಡಾ. ತಿಮ್ಮಪ್ಪ ರೈಯವರು ಶಾರೀರಿಕವಾಗಿ ಇಲ್ಲದಿದ್ದರೂ ನಮ್ಮೆಲ್ಲರ ಹೃದಯದಲ್ಲಿ ಭಾವನಾತ್ಮಕವಾಗಿ ಇದ್ದಾರೆ. ಸ್ಮರಣೆಗೆ ಮರಣವಿಲ್ಲ’ ಎಂಬಂತೆ ಅವರ ಸ್ಮರಣೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅವರ 90 ರ ಹುಟ್ಟುಹಬ್ಬಕ್ಕೆ ನಾವೆಲ್ಲಾ ಅವರನ್ನು ಸನ್ಮಾನಿಸುವ ಭಾಗ್ಯ ನಮಗೆ ಬಂದಿತ್ತು. ಅವರಿಗೆ ‘ಮುಂಡಾಳಗುತ್ತು ಬೊಳ್ಳಿ ಬೊಲ್ಪು’ ಬಿರುದು ನೀಡಿ ಗೌರವಿಸಿದ್ದೆವು. ಈ ಮಣ್ಣಿನ ಗೌರವವನ್ನು ಹತ್ತೂರಿನಲ್ಲಿ ಪಸರಿಸಿ ವೃದ್ದಿಸಿದ ಶ್ರೇಷ್ಠ ವ್ಯಕ್ತಿತ್ವವನ್ನು ಪ್ರೀತಿ, ಪ್ರೇಮ, ವಾತ್ಸಲ್ಯದ ಚಿಲುಮೆಯಾಗಿ ಸಂಪದ್ಭರಿತವಾದ ವ್ಯಕ್ತಿತ್ವ ಹೊಂದಿದ್ದರು‌.
ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದ್ದರು‌. ಮದ್ರಾಸ್ ವಿವಿಯಲ್ಲಿ ವೈದ್ಯಕೀಯ ವಿಜ್ಞಾನ ಡಿಗ್ರಿ ಪಡೆದ ಮುಂಡಾಳಗುತ್ತು ಕುಟುಂಬದ ಪ್ರಥಮ ವ್ಯಕ್ತಿಯಾಗಿದ್ದಾರೆ. ಬೆಂಗಳೂರಿನಲ್ಲಿದ್ದರೂ ತನ್ನೂರಿನ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿ ಬೆಂಗಳೂರಿನ ಪ್ರತಿಷ್ಠಿತ, ದಾನಿಗಳನ್ನು ಸಂಪರ್ಕಿಸಿ ಊರಿನ ಸಮಾಜಸೇವಾ ಕಾರ್ಯಕ್ಕೆ ವಿನಿಯೋಗಿಸುತ್ತಿದ್ದರು. ತಂದೆಯ ಪುಣ್ಯದ ಕಾರ್ಯದ ಫಲವಾಗಿ ಅವರ‌ ಮಕ್ಕಳು ವಿಶೇಷವಾಗಿ ಅವರ ಪುತ್ರ ಡಾ. ದೀಪಕ್ ರೈ ತಾಲೂಕು ಆರೋಗ್ಯಾಧಿಕಾರಿಯಾಗಿ ತಿಮ್ಮಪ್ಪ ರೈಯವರ ಶ್ರೇಷ್ಠತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಮುಂಡಾಳಗುತ್ತುವಿನ ‘ಗುತ್ತು’ ದ ಗೌರವ ಹೆಚ್ಚಿಸಿದವರು ಡಾ. ತಿಮ್ಮಪ್ಪ ರೈಯವರು’ ಎಂದರು. ಡಾ. ತಿಮ್ಮಪ್ಪ ರೈಯವರ ಸುದೀರ್ಘ ವೃತ್ತಿ ಬದುಕು, ಸಾಂಸಾರಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳ ಬಗ್ಗೆ ಮೆಲುಕು ನುಡಿಯಾಡಿದ ಸುಭಾಸ್ ರೈಯವರು ‘ಡಾ. ರೈರವರ ವ್ಯಕ್ತಿತ್ವ ಸಮುದ್ರದ ಸಿಂಧುವಿಗೆ ಸಮಾನ. ಅದರ ಬಿಂದುಗಳಾಗಿ ನಾವೆಲ್ಲಾ ಅವರ ಆದರ್ಶ ಪರಿಪಾಲಿಸೋಣ. ಪೂರ್ವಾಬ್ದ ಪುಣ್ಯದ ಫಲದಂತೆ ಅವರ ‘ಬದುಕಿನ ಬೊಳ್ಳಿ’ ಗಳಾಗಿ ಅವರ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಏರಿಸುವ ಕಾರ್ಯಗಳನ್ನು ಮಾಡಿ ಎಂದು ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೆ ಕರೆ ನೀಡಿದರು. ಬಳಿಕ ಗಾಯತ್ರಿ ಮಂತ್ರ ಪಠಿಸಿ ಅಗಲಿದ ಚೇತನಕ್ಕೆ ಶಾಂತಿ ಬಯಸಿದರು.

ಡಾ. ತಿಮ್ಮಪ್ಪ ರೈ ಅಜಾತ ಶತ್ರು – ಲಕ್ಷ್ಮಿನಾರಾಯಣ ಶೆಟ್ಟಿ
ನುಡಿನಮನ ಸಲ್ಲಿಸಿದ ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣ ಶೆಟ್ಟಿ ಅರಿಯಡ್ಕರವರು ಮಾತನಾಡಿ ‘ಅರಿಯಡ್ಕ ಕುಟುಂಬದಲ್ಲಿಯೂ ಆದರಾತಿಥ್ಯಕ್ಕೆ ಹೆಸರಾಗಿದ್ದವರು ಡಾ. ಎಂ.ಟಿ. ರೈಯವರು. ಅರಿಯಡ್ಕದ ಕುಟುಂಬದವರೂ ಅವರಲ್ಲಿ ವಿಶೇಷ ಅಭಿಮಾನ ಹೊಂದಿದ್ದರು. ಬೆಂಗಳೂರಿನಲ್ಲಿ ಅರಿಯಡ್ಕ ಮತ್ತು ಮುಂಡಾಳಗುತ್ತುವಿನ ಹೆಸರಿಗೆ ಕೀರ್ತಿ ತಂದವರು ಡಾ. ಎಂ.ಟಿ. ರೈರವರು. ಯಾವೊಬ್ಬ ವ್ಯಕ್ತಿಗೂ ಅವರಿಂದ ಅನ್ಯಾಯ ಅಪಚಾರ ನಡೆದಿರಲು ಸಾಧ್ಯವೇ ಇಲ್ಲ. ಅಜಾತಶತ್ರುವಾಗಿ, ಸರ್ವರೂ ಪೂಜ್ಯನೀಯ ಭಾವ ತಳೆಯುವ ವಿಶೇಷ ವ್ಯಕ್ತಿತ್ವವನ್ನು ಧರಿಸಿಕೊಂಡ ಡಾ.ತಿಮ್ಮಪ್ಪ ರೈಯವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಸಾರ್ಥಕ ಬದುಕಿನ ಹಾದಿಗಳು ನಮಗೆಲ್ಲಾ ದಾರಿದೀಪವಾಗಲಿ’ ಎಂದರು.

ಮಾವ ಅತ್ತೆಯವರಿಗೆ ಸರಿಸಾಟಿಗಳಿಲ್ಲ – ಜಯರಾಮ ರೈ
ನುಡಿನಮನ ಸಲ್ಲಿಸಿದ ಡಾ. ತಿಮ್ಮಪ್ಪ ರೈಯವರ ಅಳಿಯ ಮುಂಡಾಳಗುತ್ತು ಜಯರಾಮ ರೈಯವರು ‘ನನ್ನ ಮಾವ ಮತ್ತು ಅತ್ತೆ ಬೇರಾರಿಗೂ ಸರಿಸಾಟಿಯಿಲ್ಲದಂತೆ ಬದುಕಿ ಬಾಳಿದವರು. ಸದಾ ಹಸನ್ಮುಖಿಯಾಗಿ, ಆದರಾತಿಥ್ಯದ ಶ್ರೀಮಂತಿಕೆಯ ಮನಸ್ಸು ಹೃದಯ ಹೊಂದಿದ್ದವರು. ಎಲ್ಲರಲ್ಲೂ ಬೆರೆತು, ಎಲ್ಲರಿಗೂ ಬೇಕಾದವರಾಗಿ ಮುಂಡಾಳಗುತ್ತು ಮತ್ತು ಅರಿಯಡ್ಕ ಕುಟುಂಬದಲ್ಲಿ ಗೌರವ ಸ್ಥಾನಮಾನಕ್ಕೆ ಒಳಗಾದವರು. ಅವರ ವ್ಯಕ್ತಿತ್ವ ಚೇರ್‌ಮ್ಯಾನ್ ಗಳಿಗೆ ಚೇರ್‌ಮ್ಯಾನ್ ರೀತಿಯಲ್ಲಿತ್ತು. ಅವರ ಕುಟುಂಬದಲ್ಲಿ ನಾವಿದ್ದೇವೆ ಎನ್ನುವ ಹೆಮ್ಮೆಯ ಭಾವ ನಮ್ಮೆಲ್ಲರಲ್ಲಿದೆ’ ಎಂದರು.

ಮೌನ ಪ್ರಾರ್ಥನೆ ಸಲ್ಲಿಸಿದ ಬಳಿಕ ಡಾ. ತಿಮ್ಮಪ್ಪ ರೈಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ಸಹಭೋಜನ ನಡೆಯಿತು.

ಶಾಸಕ ಸಂಜೀವ‌ ಮಠಂದೂರು, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ‌ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಸವಣೂರು ಸೀತರಾಮ ರೈ, ಅರಿಯಡ್ಕ ಚಿಕ್ಕಪ್ಪ ನಾಯ್ಕ್‌, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.‌ ಶಿವಾನಂದ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಗಣ್ಯರು, ಪುತ್ತೂರಿನ ಹಲವು ವೈದ್ಯರುಗಳು, ಮುಂಡಾಳಗುತ್ತು ಮತ್ತು ಅರಿಯಡ್ಕ ಕುಟುಂಬಿಕರು, ಬಂಧು ಮಿತ್ರರು ಪಾಲ್ಗೊಂಡು ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

LEAVE A REPLY

Please enter your comment!
Please enter your name here