ವಿಟ್ಲ – ಉಪ್ಪಿನಂಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಟ್ಲದಲ್ಲಿ ಕರಾವಳಿ ಪ್ರಜಾಧ್ವನಿ

0

ಭ್ರಷ್ಟಾಚಾರವನ್ನು ವೈಭವೀಕರಿಸುವ ಕೆಲಸ ಬಿಜೆಪಿಯಿಂದ ಆಗುತ್ತಿದೆ: ಬಿ. ಕೆ. ಹರಿಪ್ರಸಾದ್

ಪಕ್ಷದ ಫೌಂಡೇಶನ್ ಅನ್ನು ಗಟ್ಟಿಗೊಳಿಸುವ ಕೆಲಸವಾಗುತ್ತಿದೆ: ಡಾ.ಮಂಜುನಾಥ ಭಂಡಾರಿ

ನಮ್ಮ ಗ್ಯಾರೆಂಟಿ ಕಾರ್ಡ್ ನೋಡಿದ ಜನರಿಗೆ ನಮ್ಮಲ್ಲಿ ಧೈರ್ಯ ಬಂದಿದೆ: ಶಕುಂತಳಾ ಟಿ ಶೆಟ್ಟಿ

ವಿಟ್ಲ: ಎಪ್ಪತ್ತು ವರ್ಷ ನಾವೇನು ಮಾಡಿದ್ದೇವೆ ಅನ್ನೋದನ್ನು ಕೇಳುವ ಬದಲು ಬಿಜೆಪಿ ಒಂಭತ್ತು ವರ್ಷದಲ್ಲಿ ಜನಸಾಮಾನ್ಯರಿಗೆ ಏನು ಮಾಡಿದೆ ಎಂದು ಹೇಳಬೇಕಾಗಿದೆ. ಬಿಜೆಪಿಯ ನೈಜ ನಾಯಕರಿಂದ ಭಾರತೀಯ ಜನತಾಪಾರ್ಟಿಯ ನಿಜಬಣ್ಣ ಬಯಲಾಗುತ್ತಿದೆ. ಭ್ರಷ್ಟಾಚಾರವನ್ನು ವೈಭವೀಕರಿಸುವ ಕೆಲಸ ಬಿಜೆಪಿಯಿಂದ ಆಗುತ್ತಿದೆ. ಕಾಂಗ್ರೆಸ್ ಪಕ್ಷ ಜನರ ಪರವಾಗಿರುವ ಪಕ್ಷ, ಅವರ ನೋವು ನಲಿವಿಗೆ ಸ್ಪಂದಿಸಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಹೇಳಿದರು.

ಅವರು ಮಾ.15ರಂದು ವಿಟ್ಲದ ಸ್ಟೈಲ್ ಪಾರ್ಕ್ ಮೈದಾನದಲ್ಲಿ ವಿಟ್ಲ – ಉಪ್ಪಿನಂಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಎಲ್ಲರನ್ನು ಸಾಕ್ಷರರನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದೆ. ಆದರೆ ಬಿಜೆಪಿ ಚಾಕು ಚೂರಿ ವಿಚಾರ ಹೇಳಿ ಮಕ್ಕಳನ್ನು ಭಯೋತ್ಪಾದಕರನ್ನಾಗಿ ಮಾಡುತ್ತಿದೆ. ಬಿಜೆಪಿ ಕರಾವಳಿಯಲ್ಲಿ ಧರ್ಮದ ಹೆಸರಿನಲ್ಲಿ ಕೊಲೆ ನಡೆಸಿ ಅದರ ಹೆಸರಿನಲ್ಲಿ ಅಮಾಯಕರನ್ನು ಜೈಲಿಗಟ್ಟುವ ಕೆಲಸ ಮಾಡುತ್ತಿದೆ. ಜನರು ಯೋಚಿಸಬೇಕಾದ ಕಾಲಘಟ್ಟವಿದು. ಬಿಜೆಪಿಯವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿರುವರು. ಬಿಜೆಪಿಯವರಿಂದ ದೇಶ ಭಕ್ತಿ ಕಲಿಯಬೇಕಾಗಿರುವ ಅವಶ್ಯಕತೆ ನಮಗಿಲ್ಲ.
ಕಾಂಗ್ರೆಸ್ ಬದುಕಿನ ಬಗ್ಗೆ ಚಿಂತನ ಮಾಡಿದರೆ, ಬಿಜೆಪಿ ಭಾವನಾತ್ಮಕತೆಯನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದೆ. ಭ್ರಷ್ಟಾಚಾರವನ್ನು ವೈಭವೀಕರಣ ಮಾಡುತ್ತಿರುವ ಬಿಜೆಪಿಯವರು ಬೇರೆಯವರಿಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಶೇ.30ರಷ್ಟು ಕೆಲಸದಲ್ಲಿ ಶೇ.40ರಷ್ಟು ಕಮಿಷನ್ ಪಡೆದದ್ದೇ ಸ್ಮಾರ್ಟ್ ಸಿಟಿಯ ಸಾಧನೆಯಾಗಿದೆ. ಹಿಂದುತ್ವದಲ್ಲಿ ಮಹಿಳೆಯರ ಸ್ಥಾನಮಾನ ಏನೆಂಬುದನ್ನು ತಿಳಿಸುವ ಕಾರ್ಯವಾಗಬೇಕು. ಸುಳ್ಳನ್ನೇ ಮನೆ ದೇವರು ಮಾಡಿಕೊಂಡವರು, ತಿಮಿಂಗಿಲವನ್ನೇ ನುಂಗುತ್ತಿದ್ದಾರೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ತು ಸದಸ್ಯ ಡಾ. ಮಂಜುನಾಥ ಭಂಡಾರಿ ಮಾತನಾಡಿ ಪಕ್ಷದ ಫೌಂಡೇಶನ್ ಅನ್ನು ಗಟ್ಟಿಗೊಳಿಸುವ ಪ್ರಯತ್ನ ನಮ್ಮ ನಾಯಕರಿಂದ ಆಗುತ್ತಿದೆ. ಕಾರ್ಯಕ್ರಮವನ್ನು ಮನದಟ್ಟು ಮಾಡಿ ಮನೆಮನೆಗೆ ತಲುಪಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕಿದೆ. ಪ್ರಜಾಧ್ವನಿ ಎಂದರೆ ಜನರಿಂದ ಜನರಿಗಾಗಿ ಮಾಡಿರುವ ನಮ್ಮ ಕಾರ್ಯಕ್ರಮವಾಗಿದೆ. ಭಾವನಾತ್ಮಕ ಹೇಳಿಕೆಯ ಮೂಲಕ ಬಿಜೆಪಿ ಮತಗಿಟ್ಟಿಸುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರಾಳಿಯಲ್ಲಿ ಐಟಿ ಹಾಗೂ ಗಾರ್ಮೆಂಟ್ ಇಂಡಸ್ಟ್ರೀ ಪಾರ್ಕ್ ಸ್ಥಾಪನೆಯ ಮೂಲಕ 1ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆ ಹಾಕಲಾಗಿದೆ. ಕರಾವಳಿಯ ಅಭಿವೃದ್ಧಿಯ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಯೋಜನೆ ಹಾಕಲಾಗಿದೆ. ಬೆಲೆ ಏರಿಕೆಗೆ ಜಿಎಸ್ ಟಿ ಪ್ರಮುಖ ಕಾರಣ. ಯಾವುದೇ ಉದ್ವೇಗಕಾರಿ ಹೇಳಿಕೆಗೆ ಯಾರೂ ರಿಯಾಕ್ಟ್ ಆಗಬೇಡಿ. ನಾಳಿದ್ದು ನಡೆಯುವ ಮತದಾನದ ದಿನ ನಾವು ಸರಿಯಾದ ಉತ್ತರ ನೀಡೋಣ ಎಂದರು.

ಮಾಜಿ‌ ಶಾಸಕರಾದ ಶಕುಂತಳಾ ಟಿ.ಶೆಟ್ಟಿರವರು ಮಾತನಾಡಿ ನಮ್ಮ ಗ್ಯಾರೆಂಟಿ ಕಾರ್ಡ್ ನೋಡಿದ ಮೇಲೆ ಜನರಿಗೆ ನಮ್ಮಲ್ಲಿ ಧೈರ್ಯ ಬಂದಿದೆ. ಬಿಜೆಪಿಗೆ ಪ್ರತಿಭಟನೆ ಮಾಡಿ ಗೊತ್ತು, ಕಾಂಗ್ರೆಸ್ ಗೆ ಅಭಿವೃದ್ಧಿ ಮಾಡಿ ಗೊತ್ತು. ಕೊಡುವುದನ್ನೆಲ್ಲ ಕಾಂಗ್ರೆಸ್ ಕೊಟ್ಟಿದೆ ಆದರೆ ಅದನ್ನು ಜನರಿಗೆ ತಿಳಿಸುವ ಪ್ರಯತ್ನವಾಗದೆ ನಾವು ಸೋತೆವು. ಬೇಧ ಭಾವ ಮರೆತು ಬೆಳೆಯಲು ಕಾಂಗ್ರೆಸ್ ಅಗತ್ಯ. ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳೆಲ್ಲರೂ ಒಗ್ಗಟ್ಟಿನಿಂದಿದ್ದೇವೆ. ಪಕ್ಷ ಯಾರಿಗೆ ಅವಕಾಶ ನೀಡುತ್ತದೊ ಅವರಿಗಾಗಿ ನಾವೆಲ್ಲರೂ ಕೆಲಸ ಮಾಡಲು‌ ಸಿದ್ಧರಿದ್ದೇವೆ ಎಂದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕೆ.ಪಿ.ಸಿ.ಸಿ. ಸದಸ್ಯರಾದ ದಿನೇಶ್ ಅಡ್ಪಂಗಾಯ, ಕೃಪಾ ಅಮರ್ ಆಳ್ವ, ಪ್ರಮುಖರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಸತೀಶ್ ಕೆಡೆಂಜ, ಚಂದ್ರಹಾಸ ಶೆಟ್ಟಿ, ಪ್ರಹ್ಲಾದ ಬೆಳ್ಳಿಪ್ಪಾಡಿ, ಜಿಲ್ಲಾ ಸೇವಾ ದಳದ ಅಧ್ಯಕ್ಷ ಜೋಕಿಮ್ ಸಿಕ್ವೇರಾ ಮೊದಲಾದವರು ಉಪಸ್ಥಿತರಿದ್ದರು.

ವಿಟ್ಲ ಉಪ್ಪಿನಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ. ಬಿ. ಸ್ವಾಗತಿಸಿದರು. ಪಟ್ಟಣ ಪಂಚಾಯತ್ ಸದಸ್ಯ ವಿ.ಕೆ.ಎಂ. ಅಶ್ರಫ್ ವಂದಿಸಿದರು. ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷರಾದ ವಿಟ್ಲ ಶ್ರೀನಿವಾಸ ಶೆಟ್ಟಿ ಕೊಲ್ಯ ಸಹಕರಿಸಿದರು

LEAVE A REPLY

Please enter your comment!
Please enter your name here