ಲಯನ್ಸ್ ಸೇವಾ ಮಂದಿರದಲ್ಲಿ ಮೂರು ದಿನಗಳ ಕೃತಕ ಹೂವುಗಳ ಉಚಿತ ಪ್ರದರ್ಶನ
ಪುತ್ತೂರು: ಅಲ್ಲಿ ಬಣ್ಣ ಬಣ್ಣದ ವಿವಿಧ ಬಗೆಯ ಹೂವುಗಳದ್ದೇ ಕಾರುಬಾರು. ನೋಡುವಾಗ ಜೀವಂತ ಹೂವುಗಳಂತೆ ಕಾಣುತ್ತಿದ್ದರೂ ಅದೆಲ್ಲಾ ಕೃತಕವಾದ ಹೂವುಗಳು. ಈ ಕೃತಕ ಹೂವು ಮತ್ತು ಎಲೆಗಳ ಪ್ರದರ್ಶನದ ಸಿಂಗಾರ ನೈಸರ್ಗಿಕ ಹೂವುಗಳನ್ನೇ ಹೋಲುವಂತಿದೆ.
ಹೌದು..! ಇದೆಲ್ಲಾ ಕಾಣ ಸಿಗುವುದು ಇಲ್ಲಿನ ಲಯನ್ಸ್ ಸೇವಾ ಮಂದಿರದಲ್ಲಿ. ನೆಹರುನಗರದ ರೋಹಿಣಿ ಹೊಲಿಗೆ ಆರ್ಟ್ ಕ್ರಾಫ್ಟ್ ತರಬೇತಿ ಕೇಂದ್ರ ಹಾಗೂ ಲಯನ್ಸ್ ಕ್ಲಬ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಲಯನ್ಸ್ ಸೇವಾ ಮಂದಿರದಲ್ಲಿ ಮೂರುದಿನಗಳ ಕಾಲ ಆಯೋಜಿಸಿರುವ ಕೃತಕ ಹೂವುಗಳ ಪ್ರದರ್ಶನದಲ್ಲಿ ಈ ಅದ್ಬುತ ಕಲಾಕೃತಿಗಳನ್ನು ಕಾಣಬಹುದಾಗಿದೆ.
ನೆಹರು ನಗರದ ರೋಹಿಣಿ ಹೊಲಿಗೆ ಕೇಂದ್ರದ ವ್ಯವಸ್ಥಾಪಕಿಯಾಗಿರುವ ರೋಹಿಣಿ ರಾಘವ ಆಚಾರ್ಯರವರ ಕಲ್ಪನೆ ಹಾಗೂ ಕೈಚಳಕದಿಂದ ಇಂತಹ ವಿಶಿಷ್ಠ ಕೃತಕ ಹೂವುಗಳ ಲೋಕ ಮೂಡಿಬಂದಿದೆ. ಮನೆಯಲ್ಲಿ ಉಪಯೋಗಿಸಿ ಬಿಸಾಡುವ ಕಸಗಳಿಂದ ವಿಶಿಷ್ಠ, ವಿನ್ಯಾಸದ ಹೂವುಗಳ ರಚನೆಗೊಂಡಿದೆ. ನೋಡುವಾಗ ಜೀವಂತ ಹೂವುಗಳಂತೆ ಕಾಣುತ್ತಿವೆ. ನ್ಯೂಸ್ ಪೇಪರ್, ಟಿಶ್ಯೂ ಪೇಪರ್, ಆಮಂತ್ರಣ ಪತ್ರಿಕೆ, ಐಸ್ಕ್ರೀಂ ಕಪ್ಗಳು, ತರಕಾರಿ ಬೀಜಗಳು, ಹಳೆಯ ಬಟ್ಟೆಗಳು, ಗುಡ್ಡದಲ್ಲಿರುವ ಕಮ್ಯೂನಿಷ್ಟ್ ಗಿಡಗಳು, ವೈಟ್ಪೇಪರ್ಗಳು ಮೊದಲಾದ ತ್ಯಾಜ್ಯಗಳಿಂದ ರಚಿಸಲಾಗಿರುವ ಅದ್ಬುತ ಕಲಾ ಕುಸುಮಗಳು ಇಲ್ಲಿ ಪ್ರದರ್ಶಗೊಂಡಿದೆ. ಕಸದಿಂದ ರಸ ಎನ್ನುವ ಮಾತಿನಂತೆ, ಕಸದಿಂದ ಹೂವುಗಳನ್ನು ನಿರ್ಮಿಸಲಾಗಿದೆ. ಸುಮಾರು ನೂರಕ್ಕೂ ಅಧಿಕ ಜಾತಿಯ ಕೃತಕ ಹೂವುಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಹಲವು ಮಂದಿ ಸಾರ್ವಜನಿಕರು ಈ ಅದ್ಬುತಾ ಕಲಾ ಕುಸುಮಗಳ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದಾರೆ. ಈ ಕೃತಕ ಹೂವುಗಳ ಪ್ರದರ್ಶನವು ಮಾ.15ರಂದು ಪ್ರಾರಂಭಗೊಂಡಿದ್ದು ಮಾ.17ರ ತನಕ ನಡೆಯಲಿದ್ದು ಸಾರ್ವಜನಿಕರ ವೀಕ್ಷಣೆ ಮಾಡುವಂತೆ ರೋಹಿಣಿ ರಾಘವ ಆಚಾರ್ಯರವರು ತಿಳಿಸಿದ್ದಾರೆ.
ಕೃತಕ ಹೂವು ಪ್ರದರ್ಶನವನ್ನು ಉದ್ಘಾಟಿಸಿದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಮಾತನಾಡಿ, ಕೃತಕ ಹೂವುಗಳ ತಯಾರಿಕೆಯು ಉತ್ತಮ ಕೌಶಲ್ಯವಾಗಿದೆ. ಇಂತಹ ಹೂವುಗಳ ತಯಾರಿಕೆಯಿಂದಲೂ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ. ಇಂತಹ ಹೂವುಗಳ ತಯಾರಿ ಉದ್ಯೋಗ ಸೃಷ್ಠಿಗೆ ಸಹಕಾರಿಯಾಗಲಿದೆ. ಇಂತಹ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕವೂ ಉದ್ಯೋಗವನ್ನಾಗಿಸಿ ಬದುಕು ರೂಪಸಿಕೊಳ್ಳಲು ಸಹಕಾಯಾಗಲಿದೆ ಎಂದು ಹೇಳಿದರು.
ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಿ ಟಿ ಹೆಗಡೆ ಮಾತನಾಡಿ, ಕೃತಕ ಹೂವುಗಳ ನಿರ್ಮಾಣದಲ್ಲಿನ ಕಲಾತ್ಮಕತೆ ಅಪೂರ್ವವಾಗಿದೆ. ಈ ಕಲಾತ್ಮಕತೆಯ ಹಿಂದಿನ ಕೈಚಳಕವನ್ನು ನಾವು ಗುರುತಿಸಬೇಕಾಗಿದೆ. ರೋಹಿಣಿ ಅವರು ವೇಸ್ಟ್ ವಸ್ತುಗಳಿಗೆ ತನ್ನ ಕಲಾತ್ಮಕತೆಯ ಮೂಲಕ ಜೀವಂತಿಕೆಯನ್ನು ನೀಡಿದ್ದಾರೆ ಎಂದರು.
ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಆಧ್ಯಕ್ಷೆ ನಯನಾ ರೈ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಗಣೇಶ್ ಶೆಟ್ಟಿ ಶುಭ ಹಾರೈಸಿದರು. ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೇಶವ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರೋಹಿಣಿ ಹೊಲಿಗೆ ಆರ್ಟ್ ಕ್ರಾಫ್ಟ್ ತರಬೇತಿ ಕೇಂದ್ರದ ವ್ಯವಸ್ಥಾಪಕಿ ರೋಹಿಣಿ ರಾಘವ ಆಚಾರ್ಯರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ನಗರಸಭಾ ಸದಸ್ಯೆ ಗೌರಿ ಬನ್ನೂರು, ಮಧು ಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ, ವನಿತಾ ಸಮಾಜದ ಉಪಾಧ್ಯಕ್ಷೆ ವತ್ಸಲಾ ರಾಜ್ಞಿ, ಮಹಿಳಾ ಒಕ್ಕೂಟದ ಗೌರವ ಅಧ್ಯಕ್ಷೆ ಪ್ರೇಮಲತಾ ರಾವ್, ಲಯನ್ಸ್ ಕ್ಲಬ್ನ ಸದಸ್ಯೆ ಜಯಶ್ರೀ ಶೆಟ್ಟಿ, ಗುರುಸೇವಾ ಬಳಗದ ಕಾರ್ಯದರ್ಶಿ ಶಾರದಾ ಅರಸ್ ಮತ್ತಿತರರು ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕೇಶವ ನಾಯ್ಕ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಸದಸ್ಯೆ ಸುಮಂಗಳ ಶೆಣೈ ವಂದಿಸಿದರು. ನ್ಯಾಯವಾದಿ ಹರೀಣಾಕ್ಷಿ ಜೆ ಶೆಟ್ಟಿ ನಿರೂಪಿಸಿದರು.
3 ವರ್ಷಗಳ ಹಿಂದೆಯೇ ಈ ಪ್ರದರ್ಶನಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ಮುಂದೂಡಲಾಗಿತ್ತು. ಇದೀಗ ಅವಕಾಶ ಒದಗಿ ಬಂದಿದೆ. ವಿದ್ಯಾವಂತರ ನಿರುದ್ಯೋಗ ಸಮಸ್ಯೆ ತಡೆಯಲು ಖರ್ಚಿಲ್ಲದೆ ಇಂತಹ ವಸ್ತುಗಳ ತಯಾರಿಕೆಯು ಸಹಕಾರಿಯಾಗಿದೆ. ನಾವು ಬಳಸಿದ ವಸ್ತುಗಳನ್ನು ಎಸೆಯದೆ ಇಲ್ಲಿ ಕಚ್ಚಾವಸ್ತುಗಳನ್ನಾಗಿ ಮಾಡಿ ಹೂವು, ಹೂಜಿ ಇನ್ನಿತರ ಆಲಂಕಾರಿಕ ವಸ್ತುಗಳನ್ನು ತಯಾರಿಸಲಾಗಿದೆ. ನಾವೆಲ್ಲರೂ ಬಳಸಿದ ವಸ್ತುಗಳನ್ನು ಎಸೆಯುವ ಬದಲು ಇಂತಹ ತಯಾರಿಗಳ ಬಗ್ಗೆ ಚಿಂತನೆ ನಡೆಸಬೇಕು. ಬಳಸಿದ ವಸ್ತುಗಳನ್ನು ಎಸೆಯುವ ಬದಲು ಅದರಿಂದಲೇ ಇಂತಹ ಹೂವು ಇತರ ವಸ್ತುಗಳನ್ನು ನಿರ್ಮಿಸುವ ಮೂಲಕ ಕಸದಿಂದ ರಸ ಮಾಡುವ ಕಾರ್ಯ ಪರಿಸರ ಹಾಗೂ ಸ್ವ ಉದ್ಯೋಗಕ್ಕೂ ಪೂರಕವಾಗಿದೆ.
-ರೋಹಿಣಿ ರಾಘವ ಆಚಾರ್ಯ, ವ್ಯವ್ಯಸ್ಥಾಪಕರು
ರೋಹಿಣಿ ಹೊಲಿಗೆ ಆರ್ಟ್ ಕ್ರಾಫ್ಟ್ ತರಬೇತಿ ಕೇಂದ್ರ