ನಗರಸಭಾ ಸದಸ್ಯ ಶಿವರಾಮ ಸಪಲ್ಯ ನೇಣು ಬಿಗಿದು ಆತ್ಮಹತ್ಯೆ

0

ಪುತ್ತೂರು:ನಗರಸಭಾ ಸದಸ್ಯ ಶಿವರಾಮ ಸಪಲ್ಯ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.ಚಿಕ್ಕಮುಡ್ನೂರು ಗ್ರಾಮದ ಊರಮಾಲ್ ಸಮೀಪ ಇರುವ ಅವರ ನಿವಾಸದಲ್ಲಿ ಮಾ.16ರಂದು ಘಟನೆ ನಡೆದಿದೆ.

ನೆಹರುನಗರ ರಕ್ತೇಶ್ವರಿ ವಠಾರ ಶಿವನಗರದ ದಿ.ಶೀನ ಸಪಲ್ಯ ಅವರ ಪುತ್ರ, ಪ್ರಸ್ತುತ ಚಿಕ್ಕಮುಡ್ನೂರು ಗ್ರಾಮದ ಊರಮಾಲ್‌ನಲ್ಲಿ ವಾಸ್ತವ್ಯವಿದ್ದ ಶಿವರಾಮ ಸಪಲ್ಯ (45ವ)ರವರು ಪ್ರಥಮ ಬಾರಿಗೆ ನಗರಸಭೆ ಸದಸ್ಯರಾಗಿ ಚುನಾಯಿತರಾಗಿದ್ದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಜನಾನುರಾಗಿಯಾಗಿದ್ದರು.ನಗರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಶಿವರಾಮ ಸಪಲ್ಯ ಅವರು, ಲಿಂಗದಗುಡ್ಡೆ ಸೋಮಲಿಂಗೇಶ್ವರ ಮಂದಿರದ ಸದಸ್ಯರಾಗಿದ್ದರು.

ಕೆಲ ದಿನಗಳ ಹಿಂದೆ ನಡೆದ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ಜಾತ್ರೋತ್ಸವದಲ್ಲಿ ಭಂಡಾರ ಬರುವ ಸಂದರ್ಭ ಸೂಟೆ ಬೆಳಕಿನ ಸೇವಾ ಪರಿಚಾರಕರಾಗಿ ದೈವಸ್ಥಾನದ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.ಪ್ರತಿ ಸೋಮವಾರ ಸಂಜೆ ರಕ್ತೇಶ್ವರಿ ವಠಾರದ ಲಿಂಗದಗುಡ್ಡೆ ಸೋಮಲಿಂಗೇಶ್ವರ ಮಂದಿರದಲ್ಲಿ ನಡೆಯುವ ಭಜನಾ ಕಾರ್ಯಕ್ರಮವದ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು.ನಗರಸಭಾ ಸದಸ್ಯರಾಗಿ ಚುನಾಯಿತರಾಗುವ ಮೊದಲು ಟ್ಯಾಂಕರ್ ಚಾಲಕಾಗಿದ್ದ ಅವರು ಬಳಿಕ ಬದಲಿ ಚಾಲಕನಾಗಿ ವೃತ್ತಿ ಮಾಡಿಕೊಂಡಿದ್ದರು.ಈ ನಡುವೆ ಸ್ವಂತ ವಾಹನ ಖರೀದಿಸಿ ಬಾಡಿಗೆ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದ ಅವರು ಇತ್ತೀಚೆಗೆ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದರೆನ್ನಲಾಗಿದೆ

ಮಾ.16ರಂದು ಬೆಳಿಗ್ಗೆ ನಗರಸಭೆ ಕಚೇರಿಗೆ ಆಗಮಿಸಿದ್ದ ಅವರು ಬಳಿಕ ಕಲ್ಲಾರೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಬಳಿ ಇದ್ದರು.ಬೆಳಿಗ್ಗೆ ಗಂಟೆ 11.05ಕ್ಕೆ ಶ್ರೀ ಗುರುರಾಘವೇಂದ್ರ ಸ್ವಾಮಿಯವರ ಹಾಡೊಂದನ್ನು ಅವರು ತನ್ನ ಮೊಬೈಲ್ ಫೋನ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದರು.ಮಧ್ಯಾಹ್ನದ ವೇಳೆ ಅವರು ಮನೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಪತ್ನಿ ಮಮತಾರವರು ಮೊಬೈಲ್ ‌ಫೋನ್‌ಗೆ ಕರೆ ಮಾಡಿದಾಗ ಶಿವರಾಮ ಸಪಲ್ಯ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದುದರೀಂದ ಮಮತಾರವರು ನೆರೆ ಮನೆಯವರಿಗೆ ಕರೆ ಮಾಡಿ ವಿಚಾರಿಸಿದಾಗ ಶಿವರಾಮ ಸಪಲ್ಯ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಮೃತರು ತಾಯಿ ಸೀತಾ, ಪತ್ನಿ ಮಮತಾ, ಪುತ್ರ, ಪುತ್ರಿ, ಸಹೋದರರಾದ ನಾರಾಯಣ, ವಿಶ್ವನಾಥ ಮತ್ತು ಲಂಡನ್‌ನಲ್ಲಿ ಉದ್ಯೋಗದಲ್ಲಿರುವ ವಿಜಯ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.ಶಿವರಾಮ ಸಪಲ್ಯ ಅವರ ಪತ್ನಿ ಮಮತಾ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಜೆಪಿ ಪ್ರಮುಖರ ಭೇಟಿ:

ಶಿವರಾಮ ಸಪಲ್ಯ ಅವರು ಮೃತಪಟ್ಟ ವಿಚಾರ ತಿಳಿದು ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸಹಿತ ಹಲವಾರು ಮಂದಿ ಪ್ರಮುಖರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.ಬಳಿಕ ಶಿವರಾಮ ಸಪಲ್ಯ ಅವರ ಮೃತ ದೇಹವನ್ನು ಸರಕಾರಿ ಆಸ್ಪತ್ರೆಯ ಶವಾಗಾರ ಕೊಠಡಿಯಲ್ಲಿ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲೂ ಬಿಜೆಪಿಯ ಹಲವು ಕಾರ್ಯಕರ್ತರು ನೆರೆದಿದ್ದರು.

LEAVE A REPLY

Please enter your comment!
Please enter your name here