ಕೇಂದ್ರ, ರಾಜ್ಯ ಸರಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶ

0

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ನ್ನು ಜನ ಡಸ್ಟ್‌ಬಿನ್‌ಗೆಸೆಯುತ್ತಾರೆ-ಸಿಎಂ ಬೊಮ್ಮಾಯಿ

ಮಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶ ಮಾ.16ರಂದು ಮಂಗಳೂರು ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಿತು.ಪುತ್ತೂರು,ಕಡಬ, ವಿಟ್ಲ ಸೇರಿದಂತೆ ದ.ಕ.ಜಿಲ್ಲೆಯ ಸಾವಿರಾರು ಮಂದಿ ಫಲಾನುಭವಿಗಳು ಪಾಲ್ಗೊಂಡಿದ್ದರು.

ಸಮಾವೇಶವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾತನಾಡಿ, ಕಾಂಗ್ರೆಸ್‌ನ ಭರವಸೆಗಳನ್ನು ಜನ ನಂಬುವುದಿಲ್ಲ.ಜನರಿಗೆ ಕಾಂಗ್ರೆಸ್ ನೀಡುತ್ತಿರುವುದು ಗ್ಯಾರಂಟಿ ಕಾರ್ಡ್ ಅಲ್ಲ.ಅದು ವಿಸಿಟಿಂಗ್ ಕಾರ್ಡ್.ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಈ ಕಾರ್ಡ್‌ನ್ನು ಜನ ಡಸ್ಟ್‌ಬಿನ್‌ಗೆ ಎಸೆಯುತ್ತಾರೆಯೇ ಹೊರತು ಯಾವುದೇ ಮಾನ್ಯತೆ ನೀಡುವುದಿಲ್ಲ ಎಂದು ಹೇಳಿದರು.


ಈ ಹಿಂದಿನ ಸರಕಾರದ ಅವಧಿಯಲ್ಲಿ ಸರಕಾರದ ಯಾವುದೇ ಯೋಜನೆಯ ಸಂಪೂರ್ಣ ಮೊತ್ತ ಫಲಾನುಭವಿಗೆ ತಲುಪುತ್ತಿರಲಿಲ್ಲ.ಶೇ.85ರಷ್ಟು ಮಧ್ಯವರ್ತಿಗಳ ಪಾಲಾಗುತ್ತಿತ್ತು.ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ಯೋಜನೆಗಳ ಸಂಪೂರ್ಣ ಲಾಭವನ್ನು ಜನತೆ ಪಡೆಯುತ್ತಿದ್ದಾರೆ.ಯೋಜನೆಯ ಮೊತ್ತ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಡಬಲ್ ಇಂಜಿನ್ ಸರಕರಾದಿಂದ ಡಬಲ್ ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಸಿಎಂ ಹೇಳಿದರು.


ತುಳುನಾಡಿನಲ್ಲಿ ಕನ್ನಡ ನಾಡಿನ ಅಭಿವೃದ್ಧಿ:
ತುಳುನಾಡಿನಲ್ಲಿ ಕನ್ನಡ ನಾಡಿನ ಅಭಿವೃದ್ಧಿ ಕಾಣಲು ಸಾಧ್ಯವಾಗಿದ್ದು, ಇದಕ್ಕೆ ಮಹಿಳೆಯರು ಹಾಗೂ ಯುವಕರ ಸಹಿತ ಎಲ್ಲರ ಸಾಮರ್ಥ್ಯ ಕಾರಣ ಎಂದು ಮುಖ್ಯಮಂತ್ರಿ ಹೇಳಿದರು.ಮಹಿಳೆಯರು ಹಾಗೂ ಯುವಕರು ರಾಜ್ಯ ಕಟ್ಟುವ ಕೈಗಳಾಗಿದ್ದು, ದುಡ್ಡೇ ದೊಡ್ಡಪ್ಪ ಎಂದಿದ್ದದ್ದು ಈಗ ದುಡಿಮೆಯೇ ದೊಡ್ಡಪ್ಪ ಎಂಬಂತಾಗಿದೆ.ಇವರಿಗೆ ಶಿಕ್ಷಣ, ಉದ್ಯೋಗ ನೀಡಿದರೆ ಬಲಿಷ್ಠರಾಗುತ್ತಾರೆ.ವಿವಿಧ ಯೋಜನೆಗಳ ಮೂಲಕ ಅವರಿಗೆ ಸರ್ಕಾರ ಶಕ್ತಿ ತುಂಬಿಸುವ ಕೆಲಸ ಮಾಡುತ್ತಿದೆ ಎಂದರು.


13 ಲಕ್ಷ ವಿದ್ಯಾರ್ಥಿಗಳಿಗೆ ರೈತ ನಿಧಿ ನೆರವು:
ರೈತರಿಗೆ ಕಿಸಾನ್ ಸನ್ಮಾನ್ ಯೋಜನೆ ಜಾರಿಗೊಳಿಸಿ, ಕೇಂದ್ರದಿಂದ 6 ಸಾವಿರ ರು.ಗೆ ರಾಜ್ಯದ 4 ಸಾವಿರ ರು. ಸೇರಿಸಿ ಒಟ್ಟು 10 ಸಾವಿರ ರು. ಮೊತ್ತವನ್ನು ರೈತರ ಖಾತೆಗೆ ನೇರ ಜಮೆ ಮಾಡಲಾಗುತ್ತಿದೆ. ಪ್ರಧಾನಿ ಮೋದಿಗಿಂತ ಮೊದಲು ಈ ಯೋಜನೆ ಇರಲಿಲ್ಲ.ರಾಜ್ಯದಲ್ಲಿ 53.43 ಲಕ್ಷ ರೈತರ ಖಾತೆಗೆ 16 ಸಾವಿರ ಕೋಟಿ ರೂ.ಜಮೆಯಾಗಿದೆ.ದ.ಕ.ದಲ್ಲಿ 1,39,571 ರೈತರಿಗೆ 500 ಕೋಟಿ ರೂ. ನೀಡಲಾಗಿದೆ.ರೈತ ವಿದ್ಯಾನಿಧಿಯಲ್ಲಿ ದ.ಕ.ದಲ್ಲಿ 41,859 ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದಲ್ಲಿ 13 ಲಕ್ಷ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಲಭಿಸಿದೆ. ಸ್ತ್ರೀಶಕ್ತಿ ಯೋಜನೆಯಲ್ಲಿ ಸ್ವಉದ್ಯೋಗಕ್ಕೆ ಜಿಲ್ಲೆಯಲ್ಲಿ 2048 ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ನೆರವು ನೀಡಲಾಗಿದೆ.ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಲ್ಲಿ 5 ಲಕ್ಷ ರು. ವರೆಗೆ ನೆರವು ನೀಡಲಾಗಿದೆ.22 ಕಾಯಕಗಳಿಗೆ ತಲಾ 50 ಸಾವಿರ ರೂ.ವರೆಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ ಎಂದರು.


ಕಡಲ ಪ್ರವಾಸೋದ್ಯಮಕ್ಕೆ ಒತ್ತು:
ಕರಾವಳಿಯಲ್ಲಿ ನಾರಾಯಣಗುರು ಹೆಸರಿನಲ್ಲಿ ನಾಲ್ಕು ವಸತಿ ಶಾಲೆ ಮಂಜೂರು ಮಾಡಲಾಗಿದ್ದು,ತಲಾ 25 ಕೋಟಿ ರು.ಗಳನ್ನು ನೀಡಲಾಗಿದೆ.ಇನ್ನೂ ನಾಲ್ಕು ಶಾಲೆಗಳಿಗೆ ಬಜೆಟ್‌ನಲ್ಲಿ ಅನುದಾನ ಕಾದಿರಿಸಲಾಗಿದೆ.ಸರ್ಕಾರಿ ಶಾಲೆಗಳಲ್ಲಿ ಹೆಣ್ಮಕ್ಕಳಿಗೆ ಶೌಚಾಲಯ ಸೌಲಭ್ಯ, ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಕೆಲವರ ವಿರೋಧದ ಹೊರತೂ ಬೇಡಿಕೆ ಈಡೇರಿಸಲಾಗಿದೆ ಎಂದು ಸಿಎಂ ಹೇಳಿದರು.ಸಿಆರ್‌ಝಡ್ ನಿಯಮ ಸರಳೀಕರಣಗೊಳಿಸಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ.ಮಂಗಳೂರು-ಕಾರವಾರದ 8 ಬಂದರುಗಳ ಅಭಿವೃದ್ಧಿ, ತೇಲುವ ಜೆಟ್ಟಿ ಸ್ಥಾಪನೆ, ಉಳ್ಳಾಲದ ಬಟ್ಟಪಾಡಿಯಲ್ಲಿ ಸೀವೇವ್ ಬ್ರೇಕ್‌ಗೆ ಅನುಮತಿ, ಮೀನುಗಾರಿಕಾ ಬೋಟ್‌ಗಳಿಗೆ 10 ತಿಂಗಳಿಗೆ ಸೀಮೆಎಣ್ಣೆ ವಿಸ್ತರಣೆ, ಬೋಟ್ ಎಂಜಿನ್ ಡೀಸೆಲ್‌ಗೆ ಪರಿವರ್ತಿಸಲು ಶೇ.50 ಸಬ್ಸಿಡಿ, ಲಕ್ಷದ್ವೀಪ ಪ್ರವಾಸಕ್ಕೆ ೬೫ ಕೋಟಿ ರು.ಗಳಲ್ಲಿ ಜೆಟ್ಟಿ ನಿರ್ಮಾಣ, ಮಂಗಳೂರು-ಕಾರವಾರ-ಗೋವಾ-ಮುಂಬೈ ನಡುವೆ ವಾಟರ್ ವೇ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದರು.


ದ.ಕ.ದಲ್ಲಿ 21 ಲಕ್ಷ ಮಂದಿ ಫಲಾನುಭವಿಗಳು:
ಸುನಿಲ್ ಕುಮಾರ್: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಮಾತನಾಡಿ, ದ.ಕ.ಜಿಲ್ಲೆಯಲ್ಲಿ 23 ಲಕ್ಷ ಜನಸಂಖ್ಯೆ ಇದ್ದು ಬರೋಬ್ಬರಿ 21 ಲಕ್ಷ ಮಂದಿ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದಿದ್ದಾರೆ.ಯೋಜನೆಗಳ ಲಾಭ ಪರಿಣಾಮಕಾರಿಯಾಗಿ ಜನರಿಗೆ ತಲುಪುತ್ತಿದೆ ಎಂಬುದಕ್ಕೇ ಇದುವೇ ಉದಾಹರಣೆ ಎಂದರು.
ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಿದ ಶ್ರೇಯಸ್ಸು ನಮ್ಮ ಸರ್ಕಾರದ್ದು. ಮಹಿಳೆಯರ ಪರವಾಗಿ ಮಾತನಾಡುವವರು ಬಹಳ ಮಂದಿ ಇದ್ದಾರೆ.ಆದರೆ ಅವರಿಗಾಗಿ ಏನು ಮಾಡಿದ್ದಾರೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದರು.

20 ಕೋಟಿ ಮೀನುಮರಿ ಕೊರತೆ-ಅಂಗಾರ:
ಬಂದರು, ಮೀನುಗಾರಿಕೆ, ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ, ಬಿಜೆಪಿ ಸರ್ಕಾರ ಬರುವವರೆಗೆ ಮೀನುಗಾರಿಕಾ ಇಲಾಖೆ ಇತ್ತೆಂಬುದೇ ಜನತೆಗೆ ಗೊತ್ತಿರಲಿಲ್ಲ.ಬಿಜೆಪಿ ಸರ್ಕಾರಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಅವರ ಬೇಡಿಕೆಗಳನ್ನು ಈಡೇರಿಸಿದೆ.ನಾಡದೋಣಿ ಮೀನುಗಾರರ ಸೀಮೆಎಣ್ಣೆ ಸಮಸ್ಯೆಯನ್ನೂ ಬಗೆಹರಿಸಿದೆ.ಮೀನುಮರಿಗಳ ಉತ್ಪಾದನೆಯಲ್ಲೂ ಸ್ವಾವಲಂಬನೆ ಸಾಧಿಸಲಾಗಿದೆ.ಪ್ರಸಕ್ತ 60 ಕೋಟಿ ಮೀನುಮರಿಗಳ ಅವಶ್ಯಕತೆಯಿದ್ದು, 40 ಕೋಟಿ ಮಾತ್ರ ಉತ್ಪಾದನೆಯಾಗುತ್ತಿದೆ.20 ಕೋಟಿ ಮೀನುಗಳನ್ನು ಬೇರೆ ಕಡೆಯಿಂದ ತರಿಸಬೇಕಾಗುತ್ತದೆ.ಇದನ್ನು ಮನಗಂಡು ಆಲಮಟ್ಟಿಯಲ್ಲಿ ಮೀನುಮರಿ ಉತ್ಪಾದನಾ ಕೇಂದ್ರ ಆರಂಭಿಸಲಾಗುತ್ತಿದೆ.ಕಡಲ್ಕೊರೆತ ತಡೆಗೆ ವೈಜ್ಞಾನಿಕ ರೀತಿಯಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ.ಇದಕ್ಕಾಗಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ಹೇಳಿದರು.


ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು.ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ,ಎಸ್.ಟಿ.ಸೋಮಶೇಖರ್, ಕೋಟ ಶ್ರೀನಿವಾಸ ಪೂಜಾರಿ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಶಾಸಕರಾದ ಸಂಜೀವ ಮಠಂದೂರು,ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಡಾ.ಭರತ್ ಶೆಟ್ಟಿ, ರಾಜೇಶ್ ನಾಕ್ ಉಳಿಪ್ಪಾಡಿ,ಪ್ರತಾಪ್‌ಸಿಂಹ ನಾಯಕ್,ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮೈಸೂರು ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎ.ವಿ.ತೀರ್ಥರಾಮ, ಜಿಲ್ಲಾಧಿಕಾರಿ ಎಂ.ಆರ್.ರವಿ ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ|ಅಮಟೆ ವಿಕ್ರಮ್,ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ.ಕುಮಾರ್,ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್, ಮಂಗಳೂರು ಸಹಾಯಕ ಕಮಿಷನರ್ ರಾಜು, ಪಾಲಿಕೆ ಆಯುಕ್ತ ಚೆನ್ನಬಸಪ್ಪ ಇದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಮತ್ತು ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ನಿರೂಪಿಸಿದರು.

ಪುತ್ತೂರು,ಕಡಬದಿಂದಲೂ ಸಾವಿರಾರು ಫಲಾನುಭವಿಗಳು
ಪುತ್ತೂರು,ಕಡಬ ತಾಲೂಕು ಮತ್ತು ವಿಟ್ಲ ವ್ಯಾಪ್ತಿಯಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.ಫಲಾನುಭವಿಗಳನ್ನು ಕರೆದೊಯ್ಯಲು ಕೆಎಸ್‌ಆರ್‌ಟಿಸಿಯಿಂದ ನೂರಾರು ಬಸ್ಸುಗಳನ್ನು ಒಪ್ಪಂದದ ಮೇರೆಗೆ ಬಳಸಿಕೊಂಡಿದ್ದರಿಂದ ಕೆಲವೆಡೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ರಬ್ಬರ್ ಕಾರ್ಮಿಕರಿಗೆ ಶೇ.20 ಬೋನಸ್‌ಗೆ ಒಪ್ಪಿಗೆ
ಸುಳ್ಯದ ರಬ್ಬರ್ ತೋಟಗಳಲ್ಲಿ ನೆಲೆಸಿರುವ ವಲಸಿಗ ರಬ್ಬರ್ ಕಾರ್ಮಿಕರಿಗೆ ರಬ್ಬರ್ ಟ್ಯಾಪಿಂಗ್ ಮೇಲೆ ಇಲ್ಲಿವರೆಗೆ ಶೇ.8 ಬೋನಸ್ ನೀಡುತ್ತಿದ್ದುದನ್ನು ಶೇ.12ರಷ್ಟು
ಹೆಚ್ಚಿಸಿ ಒಟ್ಟು ಶೇ.20ರಷ್ಟು ಬೋನಸ್ ನೀಡಲು ಸ್ಥಳದಲ್ಲೇ ಸಮ್ಮತಿಸಿದ್ದಾಗಿ ಮೀನುಗಾರಿಕಾ ಸಚಿವ ಅಂಗಾರ ಅವರ ಮನವಿಗೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

LEAVE A REPLY

Please enter your comment!
Please enter your name here