ಕುಡಿಯುವ ನೀರಿನ ಶುಲ್ಕ ಸಂಗ್ರಹ ವಿಚಾರದ ಗೊಂದಲ; ಸಭೆಯಿಂದ ಎದ್ದು ಹೋದ ಅಧ್ಯಕ್ಷರು

0

34 ನೆಕ್ಕಿಲಾಡಿ ಸಾಮಾನ್ಯ ಸಭೆ

ಉಪ್ಪಿನಂಗಡಿ: ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಿಲ್ ಸಂಗ್ರಹ ಸರಿಯಾಗಿ ಆಗುತ್ತಿಲ್ಲ. ಈ ಆಡಳಿತ ಮಂಡಳಿ ಬಂದ ಬಳಿಕ ಪ್ರತಿ ಸಾಮಾನ್ಯ ಸಭೆಯಲ್ಲೂ ಇದೇ ವಿಚಾರ ಚರ್ಚಿಸಿ ಸಾಕಾಗಿದೆ. ಸಿಬ್ಬಂದಿಯ ಬೇಜವಾಬ್ದಾರಿ ಬಗ್ಗೆ ಅಧಿಕಾರಿಗಳೂ ಮಾತನಾಡುತ್ತಿಲ್ಲ. ಏನಾದರೂ ಲೋಪಗಳಾದರೆ ಗ್ರಾ.ಪಂ. ಆಡಳಿತಕ್ಕೂ ವಿಷಯ ತಿಳಿಸುತ್ತಿಲ್ಲ. ಚುನಾಯಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗದಿದ್ದರೆ ಮತ್ಯಾಕೆ ಸಭೆ ನಡೆಸುವುದು ಎಂದು ಆಕ್ರೋಶ ವ್ಯಕ್ತಪಡಿಸಿ ಗ್ರಾ.ಪಂ. ಅಧ್ಯಕ್ಷರೇ, ಸಭೆಯಿಂದ ಅರ್ಧದಲ್ಲೇ ಎದ್ದು ಹೋದ ಅಪರೂಪದ ಘಟನೆ ಮಾ.16ರಂದು 34 ನೆಕ್ಕಿಲಾಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್. ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನನ್ನ ಮನೆಗೆ ಎರಡು ತಿಂಗಳಲ್ಲಿ ನೀರಿನ ಬಿಲ್ ಸಂಗ್ರಹಕ್ಕೆ ಬಂದಿಲ್ಲ. ಹಾಗೆ ಮಾಡಿದಾಗ ನನಗೆ ನೀರಿನ ಬಿಲ್ ಹೆಚ್ಚುವರಿ ಬೀಳುತ್ತದೆ ಎಂದು ಗ್ರಾಹಕರೋರ್ವರು ಸಲ್ಲಿಸಿದ್ದ ಅರ್ಜಿಯನ್ನು ಸಭೆಯ ಮುಂದಿಡಲಾಯಿತು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಅವರು ನೀರಿನ ಬಿಲ್ ಸಂಗ್ರಹಕ್ಕೆ ಹೋಗದಿರುವ ಬಗ್ಗೆ ಕಾರಣ ಕೇಳಿದರಲ್ಲದೆ, ಈ ಬಗ್ಗೆ ನಿಮಗೆ ಗೊತ್ತಿದ್ದೂ ನಮ್ಮ ಗಮನಕ್ಕೆ ಯಾಕೆ ತಂದಿಲ್ಲ. ನೀರಿನ ಬಿಲ್ ವಸೂಲಿಗೆ ಹೋಗದ ಸಿಬ್ಬಂದಿಯ ತಪ್ಪಿನಿಂದ ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳುವಂತಾಗಿದೆ. ನಾವು ಪ್ರತಿ ತಿಂಗಳು 20 ಯುನಿಟ್‌ಗೆ 100 ರೂ. ಶುಲ್ಕ ಹಾಕುತ್ತಿದ್ದು, ಆ ಬಳಿಕ ವಾಣಿಜ್ಯ ಶುಲ್ಕ ಹಾಕಲಾಗುತ್ತದೆ. ಇದು ಐದೈದು ಯುನಿಟ್‌ನಂತೆ ಹೆಚ್ಚಾಗುತ್ತಲೇ ಹೋಗುತ್ತದೆ. ಇದರಿಂದ ತಿಂಗಳಿಗೊಮ್ಮೆ ನೀರಿನ ಬಿಲ್ ಸಂಗ್ರಹಿಸದಿದ್ದರೆ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ಬೀಳುತ್ತದೆ. ಗ್ರಾ.ಪಂ.ನ ಸಮಸ್ಯೆಯಿಂದ ನೀರಿನ ಮೀಟರ್ ರೀಡಿಂಗ್ ತೆಗೆಯಲು ಸಾಧ್ಯವಾಗದಿದ್ದರೆ, ಅದರ ಹೊರೆಯನ್ನು ಗ್ರಾಹಕರಿಗೆ ಹೊರಿಸುವುದು ಸರಿಯಲ್ಲ. ಆಡಳಿತ ಮಂಜೂರಾತಿ ಪಡೆದುಕೊಂಡು ಅದಕ್ಕೆ ಪರಿಹಾರ ನೀಡಬೇಕು. ಆದರೆ ಇಲ್ಲಿ ಎರಡು ತಿಂಗಳು ನೀರಿನ ಬಿಲ್ ಸಂಗ್ರಹಿಸಿಲ್ಲ ಅನ್ನೋದು ನಮ್ಮ ಗಮನಕ್ಕೆ ಈಗ ಬಂದಿದೆಯಷ್ಟೇ. ಅದನ್ನು ಯಾಕೆ ನಮಗೆ ತಿಳಿಸಿಲ್ಲ ಎಂದು ಪಿಡಿಒ ಸತೀಶ್ ಬಂಗೇರ ಅವರಲ್ಲಿ ಪ್ರಶ್ನಿಸಿದರು. ಆಗ ಪಿಡಿಒ ಅವರು ಈ ರೀತಿ ಆದರೆ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ ಅನ್ನೋದು ನನಗೂ ಗೊತ್ತಿರಲಿಲ್ಲ. ನಾನು ಬಂದ ಬಳಿಕ ಈ ಬಗ್ಗೆ ಯಾರೂ ನನಗೆ ಹೇಳಿಲ್ಲ ಎಂದರು. ಆಗ ಪರಸ್ಪರ ಮಾತುಗಳು ನಡೆದು, ಚುನಾಯಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗದಿದ್ದರೆ ಮತ್ಯಾಕೆ ಸಭೆ ನಡೆಸುವುದು ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾ.ಪಂ. ಅಧ್ಯಕ್ಷರು, ನಾನು ಈ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅರ್ಧದಲ್ಲೇ ಸಭೆಯಿಂದ ಎದ್ದು ಹೊರ ನಡೆದರು. ಸತತ ಮನವಿಯ ಬಳಿಕ ಅವರು ವಾಪಸ್ಸಾದಾಗ ಸಭೆ ಮತ್ತೆ ಮುಂದುವರಿಯಿತು.

ಕೆಲವರು ಲೇ ಔಟ್‌ಗಳನ್ನು ನಿರ್ಮಿಸಿ ಅದರಲ್ಲಿ ಕಟ್ಟಡ ಕಟ್ಟಿ ಮಾರುತ್ತಾರೆ. ಆದರೆ ಅವರು ಅದರ ರಸ್ತೆಯನ್ನು ಗ್ರಾ.ಪಂ.ನ ಹೆಸರಿಗೆ ಮಾಡಿರುವುದಿಲ್ಲ. ಆದ್ದರಿಂದ ಮುಂದೆ ಅಲ್ಲಿಗೆ ದಾರಿ ದೀಪ, ರಸ್ತೆ ಕಾಂಕ್ರಿಟೀಕರಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅಂತಹ ಲೇ ಔಟ್‌ನ ಯೋಜನೆ ರೂಪಿಸಿಕೊಂಡು ಕಟ್ಟಡ ಕಟ್ಟುವವರಿಗೆ ಅವರು ಅಲ್ಲಿನ ರಸ್ತೆಯನ್ನು ಗ್ರಾ.ಪಂ. ಹೆಸರಿಗೆ ವರ್ಗಾಯಿಸದ ಹೊರತು ಕಟ್ಟಡ ನಂಬ್ರ ನೀಡಬಾರದು ಎಂದು ನಿರ್ಣಯ ಕೈಗೊಳ್ಳಲಾಯಿತು.

ರಾಜಕೀಯ ಪ್ರಭಾವವಿರುವ ಖಾಸಗಿ ವ್ಯಕ್ತಿಯೋರ್ವರು ಅಂಬೇಲದಲ್ಲಿ ಸರಕಾರಿ ಜಾಗವನ್ನು ಅಕ್ರಮ- ಸಕ್ರಮದಲ್ಲಿ ತನ್ನ ಹೆಸರಿಗೆ ಮಾಡಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ. ಅದು ಅವರು ಈ ಮೊದಲು ಅನುಭವಿಸಿಕೊಂಡು ಬಂದಿರುವ ಜಾಗವಲ್ಲ. ಅಲ್ಲದೇ, ಅಲ್ಲಿ ಕೃಷಿ ಕೂಡಾ ಇಲ್ಲ ಆದ್ದರಿಂದ ಈ ಜಾಗವನ್ನು ಅವರಿಗೆ ಅಕ್ರಮ- ಸಕ್ರಮದಡಿ ನೀಡಬಾರದು. ಅದನ್ನು ಸರಕಾರಿ ಉದ್ದೇಶಕ್ಕೆ ಬಳಸಿಕೊಳ್ಳಬೇಕೆಂದು ಕಳೆದ ಗ್ರಾಮ ಸಭೆಯಲ್ಲಿ ನಿರ್ಣಯ ಆಗಿದೆ. ಇದನ್ನು ಉಲ್ಲೇಖಿಸಿ ಇಲ್ಲಿನ ಗ್ರಾಮ ಆಡಳಿತಾಧಿಕಾರಿಯವರು ತನ್ನ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಕ್ಕಾಗಿ ಆ ವ್ಯಕ್ತಿ ತನ್ನ ರಾಜಕೀಯ ಪ್ರಭಾವ ಬಳಸಿ ಅವರನ್ನು ಬೇರೆಡೆ ವರ್ಗಾವಣೆ ಮಾಡಿಸಿದ್ದಾರೆ. ಆ ಜಾಗವನ್ನು ಆ ವ್ಯಕ್ತಿಗೆ ಅಕ್ರಮ- ಸಕ್ರಮದಲ್ಲಿ ಮಾಡಿಕೊಡುವುದಕ್ಕೆ ನಮ್ಮದೂ ಆಕ್ಷೇಪವಿದೆ ಹಾಗೂ ಇಲ್ಲಿ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಈ ಮೊದಲಿದ್ದ ಇಲ್ಲಿನ ಗ್ರಾಮ ಆಡಳಿತಾಧಿಕಾರಿಯವರನ್ನು ಇಲ್ಲಿಗೆ ಮರು ನಿಯೋಜಿಸಬೇಕು ಎಂದು ಸಭೆಯಲ್ಲಿ ಸದಸ್ಯರು ಚರ್ಚಿಸಿದರು. ಈ ಜಾಗವನ್ನು ಅಕ್ರಮ- ಸಕ್ರಮದಲ್ಲಿ ಮಾಡುವುದಕ್ಕೆ ನನ್ನದೂ ಬಲವಾದ ಆಕ್ಷೇಪವಿದೆ. ಒಂದು ವೇಳೆ ಅದು ಆದದ್ದೇ ಆದರೆ ವೈಯಕ್ತಿಕ ಹೋರಾಟಕ್ಕೂ ನಾನು ಸಿದ್ಧ ಎಂದು ಸದಸ್ಯ ವಿಜಯಕುಮಾರ್ ತಿಳಿಸಿದರು.

ಸಭೆಯಲ್ಲಿ ಸದಸ್ಯರ ಹಾಜರಾತಿಯು ಇನ್ನು ಮುಂದೆ ಡಿಜಿಟಲೀಕರಣಕ್ಕೆ ಸರಕಾರ ಸುತ್ತೋಲೆ ಹೊರಡಿಸಿದೆ. ಇದರ ಪ್ರಕಾರ ಸಭೆ ಆರಂಭವಾಗುವಾಗ ಹಾಜರಾತಿ ಹಾಕಿದವರು, ಸಭೆ ಮುಗಿದ ನಂತರವೂ ಹಾಜರಾತಿ ಹಾಕಿ ತಮ್ಮ ಇರುವಿಕೆಯನ್ನು ಖಾತ್ರಿ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಸ್ವಪ್ನ ಜೀವನ್, ಸದಸ್ಯರಾದ ರತ್ನಾವತಿ, ಗೀತಾ ವಾಸುಗೌಡ, ವೇದಾವತಿ, ಸುಜಾತ ಆರ್. ರೈ, ಶ್ರೀಮತಿ ತುಳಸಿ, ರಮೇಶ್ ನಾಯ್ಕ, ಹರೀಶ್ ಕುಲಾಲ್, ಹರೀಶ್ ಡಿ. ಇದ್ದು ಸಲಹೆ ಸೂಚನೆ ನೀಡಿದರು. ಗ್ರಾ.ಪಂ. ಪಿಡಿಒ ಸತೀಶ ಬಂಗೇರ ಸ್ವಾಗತಿಸಿ, ವಂದಿಸಿದರು.

ಅಮಾಯಕತೆ ದುರುಪಯೋಗಪಡಿಸಿಕೊಂಡು ವಂಚನೆ: ಗ್ರಾ.ಪಂ. ಮಾಜಿ ಸದಸ್ಯೆ ವಿರುದ್ಧ ದೂರು
ಗ್ರಾ.ಪಂ.ನ ಮಾಜಿ ಸದಸ್ಯೆಯಾಗಿರುವ ಸತ್ಯವತಿ ಎಂಬವರು ಅನಕ್ಷರಸ್ಥೆಯಾಗಿರುವ ಲೀಲಾ ಎಂಬವರ ಅಮಾಯಕತೆಯನ್ನು ದುರುಪಯೋಗಪಡಿಸಿಕೊಂಡು ಬೀತಲಪ್ಪುವಿನ ಅಣ್ಣು ಎಂಬವರ ಪತ್ನಿ ಲೀಲಾ ಅವರ ದಾಖಲೆಗಳನ್ನಿಟ್ಟು ಖಾಸಗಿ ಸಂಸ್ಥೆಯಿಂದ ಸಾಲ ಪಡೆದು, ಲೀಲಾ ಅವರಿಗೆ ವಂಚಿಸಿದ್ದಾರೆ ಎಂಬ ದೂರು ಗ್ರಾ.ಪಂ.ನ ಸಾಮಾಜಿಕ ನ್ಯಾಯ ಸಮಿತಿಗೆ ಬಂದಿದೆ ಎಂದು ತಿಳಿಸಿದ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್. ಅವರು, ಈ ದೂರಿನಲ್ಲಿ ಲೀಲಾ ಅವರು ತಿಳಿಸಿರುವ ಹಾಗೆ, “ನನ್ನ ಹೆಸರಿನಲ್ಲಿ 30 ಸಾವಿರ ರೂಪಾಯಿಯನ್ನು ಸತ್ಯವತಿ ಅವರು ಸಾಲವಾಗಿ ತೆಗೆದಿದ್ದಾರೆ. ಈ ವಿಷಯ ನನಗೆ ಅದೇ ಫೈನಾನ್ಸ್‌ಗೆ ವೈಯಕ್ತಿಕ ಸಾಲ ಕೇಳಲು ಹೋದಾಗ ತಿಳಿದು ಬಂತು. ಆ ಸಾಲವೀಗ ಕಟ್ಟದ್ದರಿಂದ ಅಸಲು- ಬಡ್ಡಿ ಸೇರಿ 52 ಸಾವಿರ ರೂ. ಆಗಿದೆ. ಅವರಲ್ಲಿ ಈ ಬಗ್ಗೆ ನಾನು ಕೇಳಲು ಅವರ ಮನೆಗೆ ಹೋದಾಗ ನನ್ನನ್ನು ಹೆದರಿಸಿ, ಬೆದರಿಸಿದ್ದಲ್ಲದೆ, ಜಾತಿ ನಿಂದನೆಯನ್ನೂ ಮಾಡಿರುತ್ತಾರೆ. ಇಲ್ಲಿ ಇವರು ನನ್ನ ಅಮಾಯಕತೆಯನ್ನು ದುರುಪಯೋಗಪಡಿಸಿಕೊಂಡು ನನಗೆ ವಂಚಿಸಿದ್ದು, ಆದ್ದರಿಂದ ಗ್ರಾ.ಪಂ.ನ ಸಾಮಾಜಿಕ ನ್ಯಾಯ ಸಮಿತಿ ಮಧ್ಯ ಪ್ರವೇಶಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ ಎಂದರು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತ್ತಲ್ಲದೆ, 34 ನೆಕ್ಕಿಲಾಡಿಯ ಆದರ್ಶನಗರ, ಸುಭಾಶ್‌ನಗರ, ಬೀತಲಪ್ಪುಗಳಲ್ಲಿ ಇದೇ ರೀತಿ ಕೆಲವರ ಅಮಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ವಂಚನೆಗಳು ನಡೆದಿವೆ. ಆದ್ದರಿಂದ ಜನರು ಜಾಗೃತರಾಗಬೇಕು. ಈ ದೂರು ಅರ್ಜಿಗೆ ಸಂಬಂಧಿಸಿ ಏಳು ದಿನಗಳೊಳಗೆ ಈ ಬಗ್ಗೆ ಸಮಿತಿಯ ಮುಂದೆ ಹಾಜರಾಗಿ ಸ್ಪಷ್ಟನೆ ನೀಡಲು ಸಂಬಂಧಪಟ್ಟವರಿಗೆ ನೋಟಿಸ್ ನೀಡಲು ನಿರ್ಣಯ ಕೈಗೊಳ್ಳಲಾಯಿತು.

LEAVE A REPLY

Please enter your comment!
Please enter your name here