94ಸಿಗೆ ದೃಡೀಕರಣ ನೀಡಲು ಪಂಚಾಯತ್ಗಳಿಗೆ ಶೀಘ್ರ ಆದೇಶ
ಪುತ್ತೂರು:94ಸಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸುವಾಗ ಫಲಾನುಭವಿಗಳಿಗೆ ಪಂಚಾಯತ್ನಿಂದ ದೃಡೀಕರಣ ಕಡ್ಡಾಯವಾಗಿದ್ದು, ಪಂಚಾಯತ್ನಿಂದ ದೃಡೀಕರಣ ನೀಡುವಂತೆ ಶೀಘ್ರದಲ್ಲಿಯೇ ಆದೇಶ ಮಾಡುವುದಾಗಿ ಗ್ರೇಡ್-2 ತಹಶೀಲ್ದಾರ್ ಬಲ್ನಾಡಿನಲ್ಲಿ ನಡೆದ ತಹಶೀಲ್ದಾರ್ ಗ್ರಾಮ ವಾಸ್ತವ್ಯದಲ್ಲಿ ತಿಳಿಸಿದರು.
ತಹಶೀಲ್ದಾರ್ ಜೆ. ಶಿವಶಂಕರ್ರವರ ಗ್ರಾಮ ವಾಸ್ತವ್ಯವು ಮಾ.18 ರಂದು ಬೆಳಿಯೂರುಕಟ್ಟೆಯಲ್ಲಿರುವ ಬಲ್ನಾಡು ಗ್ರಾ.ಪಂ ಸಭಾ ಭವನದಲ್ಲಿ ನಡೆಯಿತು. ಬಲ್ನಾಡು ಗ್ರಾ.ಪಂ ಉಪಾಧ್ಯಕ್ಷೆ ಪರಮೇಶ್ವರಿ ಭಟ್ ಮಾತನಾಡಿ, 94ಸಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸುವಾಗ ಗ್ರಾ.ಪಂನಿಂದ ದೃಡೀಕರಣ ಬೇಕಾಗುತ್ತದೆ. ಆದರೆ ಪಿಡಿಓರವರು ದೃಡೀಕರಣ ನೀಡುತ್ತಿಲ್ಲ. ಕಾರಣ ಕೇಳಿದರೆ ದೃಡೀಕರಣ ನೀಡಲು ನಮಗೆ ಆದೇಶವಿಲ್ಲ ಎನ್ನುತ್ತಾರೆ. ಇದರಿಂದಾಗಿ ಬಹಳಷ್ಟು ಮಂದಿಗೆ ಸಂಕಷ್ಟ ಅನುಭವಿಸುವಂತಾಗಿದ್ದು ಇದಕ್ಕೊಂದು ಪರಿಹಾರ ಸೂಚಿಸುವಂತೆ ಅವರು ಆಗ್ರಹಿಸಿದರು. ಪ್ರತಿಕ್ರಿಯಿಸಿದ ಗ್ರೇಡ್-2 ತಹಶೀಲ್ದಾರ್ ಲೋಕೇಶ್ ಮಾತನಾಡಿ, 94ಸಿಗೆ ಪಂಚಾಯತ್ನಿಂದ ದೃಡೀಕರಣ ಕಡ್ಡಾಯ ಎಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಜಿಲ್ಲೆಯ ಇತರ ತಾಲೂಕುಗಳ ಪಂಚಾಯತ್ಗಳಲ್ಲಿ ದೃಡೀಕರಣ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಆದೇಶ ಮಾಡಿಸಿದ್ದಾರೆ ಎಂದು ತಿಳಿಸಿದರು. ನಮಗೆ ಯಾವುದೇ ರೀತಿಯ ಆದೇಶ ಬಂದಿಲ್ಲ ಎಂದು ತಾ.ಪಂ ಯೋಜನಾಧಿಕಾರಿ ಸುಕನ್ಯಾ ತಿಳಿಸಿದರು. ನಿಮಗೆ ಆದೇಶ ಬಾರದಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಎಲ್ಲಾ ತಾ.ಪಂ, ಗ್ರಾ.ಪಂಗಳಿಗೆ ಅದೇಶ ಮಾಡುವಂತೆ ಮುಂದಿನ ಸೋಮವಾರವೇ ಆದೇಶ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಗ್ರೇಡ್-2 ತಹಶೀಲ್ದಾರ್ ಲೋಕೇಶ್ ತಿಳಿಸಿದರು.
ಕಾಡುಪ್ರಾಣಿಗಳಿಂದ ಕೃಷಿಗೆ ರಕ್ಷಣೆಕೊಡಿ:
ಕಾಡುಕೋನಗಳ ಹಾವಳಿಯಿಂದ ಕೃಷಿ ಹಾನಿಯಾಗುತ್ತಿದ್ದು ಇದರಿಂದ ರಕ್ಷಣೆ ನೀಡುವಂತೆ ಮಹಿಳೆಯೊಬ್ಬರು ಸಭೆಯಲ್ಲಿ ಮನವಿ ಮಾಡಿದರು. ಅರಣ್ಯ ಇಲಾಖೆಯಿಂದ ಸೋಲಾರ್ ಬೇಲಿ ಅಳವಡಿಸಲು ಅವಕಾಶವಿದ್ದು ಅದಕ್ಕೆ ಸಹಾಯಧನ ದೊರೆಯುತ್ತಿದೆ ಎಂದು ಉಪ ವಲಯಾರಣ್ಯಾಧಿಕಾರಿ ಶಿವಾನಂದ ಆಚಾರ್ಯರವರು ತಿಳಿಸಿದರು. ಕಾಡುಕೋನಗಳಿಗಿಂತ ಮಂಗಗಳ ಹಾವಳಿಯಿಂದ ಬಹಳಷ್ಟು ಕೃಷಿ ಹಾನಿಯಾಗುತ್ತಿದ್ದು 20 ಮನೆಗಳಿಗೊಂದು ಏರ್ಗನ್ ನೀಡುವಂತೆ ಗಣೇಶ್ ರೈಯವರು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಶಶಿಧರ ರೈಯವರು, ಮಂಗಗಳ ಹಾವಳಿ ಬಹುದೊಡ್ಡ ಸಮಸ್ಯೆಯಾಗಿದೆ. ರೈತರು ಬೆಳೆದ ಬೆಳೆಗಳನ್ನು ಹಾನಿಮಾಡುತ್ತಿದೆ. ದೈವ-ದೇವರಿಗೆ ಅರ್ಪಣೆಗೆ ಸೀಯಾಳ ಇಲ್ಲದಂತೆ ಸ್ಥಿತಿ ನಿರ್ಮಾಣವಾಗಿದೆ. ತಹಶೀಲ್ದಾರ್ ಶಿವಶಂಕರ ಮಾತನಾಡಿ, ಈ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ಇಂತಹ ಪರಿಶೀಲನೆ ಭರವಸೆ ಹಲವು ಬಾರಿಯಾಗಿದೆ. ನಮ್ಮ ಸಂಕಷ್ಟಗಳಿಗೆ ಪರಿಹಾರ ದೊರೆತಿಲ್ಲ ಎಂದು ಶಶಿಧರ ರೈ ತಿಳಿಸಿದರು. ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸುವಂತೆ ಗಣೇಶ್ ರೈಯವರು ತಿಳಿಸಿದರು. ಕಾಡು ಪ್ರಾಣಿಗಳಿಂದ ಕೃಷಿಯ ಹಾನಿಗಿಂತ ಚಿರತೆ ದಾಳಿಯು ಇನ್ನಷ್ಟು ಗಂಬೀರವಾಗಿದೆ. ಮನೆಯ ಸಾಕು ನಾಯಿಯನ್ನು ಕೊಂದ ಉದಾಹರಣೆಯಿದೆ. ಈ ಕುರಿತು ಕ್ರಮಕೈಗೊಳ್ಳಬೇಕಾಗಿದೆ ಎಂದು ಎ.ಎಂ ಪ್ರವೀಣಚಂದ್ರ ಆಳ್ವ ತಿಳಿಸಿದರು. ವಾರಕ್ಕೆ ಒಂದು ಬಾರಿಯಾದರೂ ಕೂಂಬಿಂಗ್ ನಡೆಸುವಂತೆ ಶಶಿಧರ ರೈ ಒತ್ತಾಯಿಸಿದರು.
ಹಳೆಯ ಕಾಲುದಾರಿ ಊರ್ಜಿತಗೊಳಿಸಿ:
ಬೆಳಿಯೂರುಕಟ್ಟೆಯ ಪಾಪುದಕಂಡೆಯಲ್ಲಿ ಹಲವು ವರ್ಷಗಳಿಂದ ಇದ್ದ ಕಾಲುದಾರಿಯನ್ನು ಈ ಹಿಂದೆ ಒಂದು ಬಾರಿ ಬಂದ್ ಮಾಡಿದ್ದು, ಹಿಂದಿನ ಪಿಡಿಓ, ಅಧ್ಯಕ್ಷರು, ಉಪಾಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಿದ್ದರು. ಈಗ ಮತ್ತೆ ಏಕಾಏಕಿಯಾಗಿ ಬಂದ್ ಮಾಡಿದ್ದಾರೆ. ಇದನ್ನು ತೆರವುಗೊಳಿಸುವಂತೆ ಗ್ರಾಮಸ್ಥರಾದ ಗಣೇಶ್ ರೈ ಹಾಗೂ ಶಶಿಧರ ರೈಯವರು ಆಗ್ರಹಿಸಿದರು. ಹಿಂದಿನ ಕಾಲುದಾರಿಯು ಖಾಸಗಿಯವರ ಕೃಷಿ ಜಾಗದ ಮಧ್ಯೆ ಹಾದುಹೋಗುತಿದೆ. ಅದಕ್ಕಾಗಿ ಹೊಸ ಕಾಲುದಾರಿಯನ್ನು ಅವರ ಜಾಗದ ಬದಿಯಲ್ಲಿ ನಿರ್ಮಿಸಿಕೊಡಲಾಗುತ್ತಿದೆ ಎಂದು ಅಧ್ಯಕ್ಷೆ ಇಂದಿರಾ ಎಸ್.ರೈಯವರು ತಿಳಿಸಿದರು. ಹೊಸ ಕಾಲುದಾರಿ ನಿರ್ಮಾಣವಾಗುವ ತನಕ ಹಳೆಯ ದಾರಿಯನ್ನು ಊರ್ಜಿತಗೊಳಿಸುವಂತೆ ಶಶಿಧರ ರೈ ಆಗ್ರಹಿಸಿದರು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳವುದಾಗಿ ಅಧ್ಯಕ್ಷ ಇಂದಿರಾ ಎಸ್ ರೈ ತಿಳಿಸಿದರು.
ಗ್ರಾಮ ವಾಸ್ತವ್ಯವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ತಹಶೀಲ್ದಾರ್ ಜೆ.ಶಿವಶಂಕರ್ ಮಾತನಾಡಿ, ಗ್ರಾಮ ವಾಸ್ತವ್ಯದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದು ಗ್ರಾಮಸ್ಥರಿಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆ, ಅಹವಾಲುಗಳನ್ನು ಸಲ್ಲಿಸಿ ಇತ್ಯರ್ಥಪಡಿಸಿಕೊಳ್ಳಬಹುದು. ಗ್ರಾಮ ವಾಸ್ತವ್ಯದಲ್ಲಿ ಪರಿಹರಿಸಲಾಗದ ಅಹವಾಲುಗಳನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಇತ್ಯರ್ಥಪಡಿಸಿಕೊಳ್ಳಲು ಕ್ರಮಕೈಗೊಳ್ಳಲಾಗವುದು ಎಂದರು.
ಬಲ್ನಾಡು ಗ್ರಾ.ಪಂ ಅಧ್ಯಕ್ಷ ಇಂದಿರಾ ಎಸ್ ರೈ ಮಾತನಾಡಿ, ಗ್ರಾಮ ವಾಸ್ತವ್ಯದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ, ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕಿ ರಮಾದೇವಿ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ತಾ.ಪಂ ಯೋಜನಾಧಿಕಾರಿ ಸುಕನ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಲ್ನಾಡು ಗ್ರಾ.ಪಂ ಪಿಡಿಓ ದೇವಪ್ಪ ಪಿ.ಆರ್ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಗೋಪಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.