ಕಡಬ: ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ರಶ್ಮಿ ಕೆ.ಎಂ.ರವರು ಮುಂಬಡ್ತಿ ಹೊಂದಿ ಮಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಿರಿಯ ಸಹಾಯಕ ನಿರ್ದೇಶಕರಾಗಿ ನಿಯೋಜನೆಗೊಂಡಿರುತ್ತಾರೆ.
2006ರಿಂದ 2019ರ ತನಕ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು 2017ರಲ್ಲಿ ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿಶು ಅಭಿವೃದ್ಧಿ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಬಳಿಕ 2019ರ ಮಾರ್ಚ್ 22ರಂದು ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ತರಬೇತಿ ಮುಗಿಸಿ 2019 ಸೆಪ್ಟೆಂಬರ್ 21ರಂದು ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು.
ಪಶುವೈದ್ಯ ಪರಿವೀಕ್ಷಕರಾಗಿದ್ದ ಗುತ್ತಿಗಾರು ಗ್ರಾಮದ ಕಮಿಲ ದಿ. ಮೋಹನ ಗೌಡ ಕತ್ಲಡ್ಕ ಮತ್ತು ನಿವೃತ್ತ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ನಿಲಾವತಿ ದಂಪತಿಯ ಪುತ್ರಿಯಾಗಿರುವ ರಶ್ಮಿಯವರು ಸುಬ್ರಹ್ಮಣ್ಯ ತಾ.ಪಂ. ಕ್ಷೇತ್ರದ ನಿಕಟಪೂರ್ವ ಸದಸ್ಯರಾಗಿರುವ ಅಶೋಕ್ ನೆಕ್ರಾಜೆಯವರ ಪತ್ನಿ. ರಶ್ಮಿ ಅಶೋಕ್ ದಂಪತಿಯ ಪುತ್ರಿ ಕು. ಸೃಷ್ಠಿ ಎನ್.ಎ ಗುತ್ತಿಗಾರು ಸರಕಾರಿ ಸಂಯುಕ್ತ ಪ.ಪೂ. ಕಾಲೇಜಿನ 9 ನೇ ತರಗತಿ ವಿದ್ಯಾರ್ಥಿನಿಯಾಗಿದ್ದರೆ, ಪುತ್ರ ಸೃಜನ್ ಗೌಡ ಎನ್.ಎ. ಗುತ್ತಿಗಾರು ಸರಕಾರಿ ಹಿ.ಪ್ರಾ.ಶಾಲಾ 4ನೇ ತರಗತಿ ವಿದ್ಯಾರ್ಥಿ.
ಗುತ್ತಿಗಾರು ಸ.ಮಾ.ಹಿ.ಪ್ರಾ. ಶಾಲೆ ಮತ್ತು ಹಾಸನದ ಸಂತ ಫಿಲೋಮಿನ ಶಾಲೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಗುತ್ತಿಗಾರು ಸ.ಪ.ಪೂ. ಕಾಲೇಜಿನಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿದ ಶ್ರೀಮತಿ ರಶ್ಮಿಯವರು ತಮ್ಮ ಪದವಿ ಶಿಕ್ಷಣವನ್ನು ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನಲ್ಲಿ ಪಡೆದು ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎಸ್.ಡಬ್ಲ್ಯೂ ಸ್ನಾತಕೋತ್ತರ ಪದವಿಯನ್ನು ಪಡೆದರು. ಬಳಿಕ ಕುವೆಂಪು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ಪದ್ಧತಿಯ ಮೂಲಕ ಮನಃಶಾಸ್ತ್ರದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ, ಪರ್ಸನಲ್ ಮ್ಯಾನೇಜ್ಮೆಂಟ್ & ಇಂಡಸ್ಟ್ರಿಯಲ್ ರಿಲೇಶನ್ಸ್ ವಿಷಯದಲ್ಲಿ ಪಿ.ಜಿ. ಡಿಪ್ಲೋಮಾ ಪದವಿ ಪಡೆದು, ಸಮಾಜ ಕಾರ್ಯ ವಿಷಯದಲ್ಲಿ ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (NET) ಮತ್ತು ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (KSET) ಯಲ್ಲಿ ತೇರ್ಗಡೆ ಹೊಂದಿದ್ದಾರೆ.