ಸಮಾಜಕ್ಕೆ ಬಾಲ ಗೋಕುಲ ಅನಿವಾರ್ಯ ಹಾಗೂ ಅಗತ್ಯ : ಶ್ರೀನಿವಾಸ ಭಟ್ ಚಂದುಕೂಡ್ಲು
ಬೆಟ್ಟಂಪಾಡಿ: ಬಡಗನ್ನೂರು ಪರಿಸರದ ಬಾಲವಾಡಿಯಿಂದ ಪ್ರೌಢಶಾಲಾ ವಿಭಾಗದೊಳಗಿನ ಮಕ್ಕಳ ಬಾಲಗೋಕುಲ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಮಾ.25ರಂದು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.
ಸುಮಾರು 35 ರಿಂದ 40 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಪೋಷಕರು ಉಪಸ್ಥಿತರಿದ್ದರು. ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ಉದ್ಘಾಟಿಸಿ ‘ಇಂದಿನ ಸಮಾಜದಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಯ ಕೊರತೆ ಬಹಳಷ್ಟು ಇದೆ. ಇದನ್ನು ಹೋಗಲಾಡಿಸಲು ಬಾಲ ಗೋಕುಲದಂತಹ ಕಾರ್ಯಕ್ರಮಗಳು ಅಗತ್ಯ ಹಾಗೂ ಅನಿವಾರ್ಯ’ ಎಂದರು. ಬಡಗನ್ನೂರು ಗ್ರಾ. ಪಂ. ಅಧ್ಯಕ್ಷೆ ಕೆ. ಶ್ರೀಮತಿ ಯವರು ಶುಭ ಹಾರೈಸಿದರು.
ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು, ಉದ್ಯಮಿ ಸತೀಶ್ ರೈ ಕಟ್ಟಾವು, ಪಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಶಂಕರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ರಾಜೇಶ್ ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾರ್ವಿ ರೈ ಕಟ್ಟಾವು ಪ್ರಾರ್ಥಿಸಿದರು. ಸಹಶಿಕ್ಷಕಿ ಸಂಧ್ಯಾ ವಂದಿಸಿದರು. ಸಹಶಿಕ್ಷಕಿ ಭವ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಶ್ಲೋಕ, ಕಥೆ ಹಾಗೂ ಕೆಲವು ಆಟಗಳನ್ನು ಆಡಿಸಲಾಯಿತು. ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.