ಮಜಲುಮಾರು ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ, ಧಾರ್ಮಿಕ ಸಭೆ

0

ಬ್ರಹ್ಮಕಲಶೋತ್ಸವದ ಮೂಲಕ ಭಕ್ತಿ ವೃದ್ಧಿಸುವ ಕಾರ್ಯ-ಸುಬ್ರಹ್ಮಣ್ಯ ಶ್ರೀ

ಪುತ್ತೂರು: ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಮೂಲಕ ಕಲ್ಮಶಗಳು ದೂರವಾಗಿ ಭಕ್ತಿ ವೃದ್ಧಿಸುವ ಕಾರ್ಯವಾಗುತ್ತಿದೆ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ಜಾತ್ರೋತ್ಸವದ ಅಂಗವಾಗಿ ಮಾ.26ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ನಾವು ಗಳಿಸುವ ಸಂಪತ್ತು ಧರ್ಮಾಧಾರಿತವಾಗಿರಬೇಕು. ಅಧರ್ಮದಿಂದ ಸಂಪಾದಿಸುವ ಸಂಪತ್ತು ಶಾಶ್ವತವಲ್ಲ. ದೈಹಿಕವಾಗಿ ದೊರೆಯುವ ಸುಖವೇ ಮುಖ್ಯವಲ್ಲ. ಇದರ ಆಚೆಗಿರುವ ಪರಮೋಚ್ಚವಾದ ಸುಖವನ್ನು ಪಡೆಯಬೇಕಾದರೆ ಪುಣ್ಯದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಊರಿನ ದೇವರು, ದೇವಸ್ಥಾನಗಳ ಅಭಿವೃದ್ಧಿ ಆದಾಗ ಗ್ರಾಮ ಅಭಿವೃದ್ಧಿ ಸಾಧ್ಯ. ಜನರಿಗೆ ದೇವರ ಮೇಲಿನ ಭಕ್ತಿಗಾಗಿ ಶ್ರದ್ದಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಧಾರ್ಮಿಕ ಉಪನ್ಯಾಸ ನೀಡಿದ ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಮಾತನಾಡಿ, ನಮ್ಮ ಶ್ರದ್ಧಾ ಕೇಂದ್ರಗಳನ್ನು ಸರಕಾರ ವ್ಯವಹಾರಿಕವಾಗಿ ಬಳಸುವುದು ಸರಿಯಲ್ಲ. ದೇವಸ್ಥಾನಗಳು ಪಾಳು ಬಿದ್ದಾಗ ಸರಕಾರ ಕೇಳುವುದೇ ಇಲ್ಲ. ಅನುದಾನಕ್ಕೆ ಅರ್ಜಿ ನೀಡಿದರೂ ಸ್ಪಂದನೆಯೇ ಇಲ್ಲ. ನಮ್ಮ ಹಣದಲ್ಲಿ ದೇವಸ್ಥಾನ ನಿರ್ಮಾಣ ಆಗುತ್ತಿದೆ. ಭಕ್ತಾದಿಗಳಿಂದ ಸಂಗ್ರಹವಾಗುವ ದೇಣಿಗೆಯಿಂದ ದೇವಸ್ಥಾನದ ಅಭಿವೃದ್ಧಿ ಆಗುತ್ತಿದೆ. ಇದಾದ ಬಳಿಕ ಸರಕಾರ ಅಲ್ಲಿಗೆ ಪ್ರವೇಶ ಮಾಡುತ್ತದೆ. ಇದರ ಬಗ್ಗೆ ನಾವು ವಿಮರ್ಶೆ ಮಾಡಬೇಕು. ಹಿಂದು ಸಮುದಾಯ ಎದ್ದು ನಿಂತು ಪ್ರಶ್ನಿಸಬೇಕು. ಸರಕಾರದ ಈ ಧೋರಣೆಯ ವಿರುದ್ಧ ಆಂದೋಲನ ನಡೆಯಬೇಕು ಎಂದು ಹೇಳಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ದೇವಸ್ಥಾನಗಳ ಅಭಿವೃದ್ಧಿ, ನಿತ್ಯ ಕಾರ್ಯಕ್ರಮಗಳಿಗೆ ಸರಕಾರ ಅನುದಾನ ನೀಡುತ್ತಿದೆ. ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳಿರುವ ಜಾಗಗಳನ್ನು ಉಳಿಸಿಕೊಳ್ಳುವ ಕಾರ್ಯ ಸರಕಾರದ ಮೂಲಕ ನಡೆಯುತ್ತಿದೆ. ಶ್ರದ್ಧಾ ಕೇಂದ್ರಗಳು, ಆಚರಣೆ, ಸಂಸ್ಕಾರದ ಬಗ್ಗೆ ಟೀಕೆ ಮಾಡಿದರೆ ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಶ್ರದ್ಧಾ ಕೇಂದ್ರಗಳು ಪೂಜೆ, ಆಚರಣೆಗೆ ಸೀಮಿತವಾಗಿರದೆ ಅದು ಹಿಂದು ಧರ್ಮ ಉಳಿಸುವ ಕೇಂದ್ರವಾಗಿ ಬೆಳೆಯುತ್ತದೆ. ಮೊಬೈಲ್ ಕೇಂದ್ರಿಕೃತವಾಗಿರುವ ನಮ್ಮ ಇಂದಿನ ಮನಸ್ಸುಗಳನ್ನು ಧರ್ಮದ ಕೇಂದ್ರವಾಗಿ ಬದಲಾಯಿಸಬೇಕು. ದೇವಸ್ಥಾನದ ಬ್ರಹ್ಮಕಲಶೋತ್ಸವ ಮೂಲಕ ಜನರ ಮನಸ್ಸು ಬದಲಾಯಿಸುವ ಕಾರ್ಯವಾಗುತ್ತಿದೆ. ನಾವೆಲ್ಲಾ ಹಿಂದು ಸಮಾಜದ ಒಳಿತಿಗಾಗಿ ಚಿಂತಿಸಬೇಕಾದ ಆವಶ್ಯಕತೆಯಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿಯವರು ಮಾತನಾಡಿ, ಊರ, ಪರವೂರ ಭಕ್ತಾದಿಗಳ ಸಹಕಾರದಿಂದ ಕ್ಷೇತ್ರದಲ್ಲಿ ಶೀಘ್ರವಾಗಿ ಅಭಿವೃದ್ಧಿ ಕಾರ್ಯಗಳು ನೆರವೇರಿದೆ. ನೂತನವಾಗಿ ಸಮರ್ಪಣೆಗೊಂಡಿರುವ ಪುಷ್ಪರಥವು ಕ್ಷೇತ್ರದ ವೈಭವವನ್ನು ಇನ್ನಷ್ಟು ವೃದ್ಧಿಸಿದೆ. ಯುವಕರು, ಕಾರ್ಯಕರ್ತರ ಸಹಕಾರದಿಂದ ಬ್ರಹ್ಮಕಲಶೋತ್ಸವ ಬಹಳಷ್ಟು ವಿಜ್ರಂಭಣೆಯಿಂದ ನೆರವೇರುವಲ್ಲಿ ಸಹಕಾರಿಯಾಗಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ನವೀನ್ ರೈ ಶಿಬರ ಪ್ರಾಸ್ತಾವಿಕವಾಗಿ ಮಾತನಾಡಿ, 2009ರಲ್ಲಿ ಕ್ಷೇತ್ರದ ಬ್ರಹ್ಮಕಲಶೋತ್ಸವ ನಡೆದು ಇದೀಗ ಎರಡನೇ ಬಾರಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ದೇವಸ್ಥಾನವು ಟ್ರಸ್ಟ್‌ನ ಆಡಳಿತದಲ್ಲಿ ನಡೆಯುತ್ತಿದೆ. ಭಕ್ತರ ಸಹಕಾರದಿಂದ ರೂ.1ಕೋಟಿ ರೂ. ಅಧಿಕ ಮೊತ್ತದ ಅಭಿವೃದ್ಧಿ ನಡೆದಿದೆ. ದೇವಸ್ಥಾನಕ್ಕೆ ಹಲವು ಮಂದಿ ಜಾಗ ದಾನವಾಗಿ ನೀಡಿ ಸಹಕರಿಸಿದ್ದಾರೆ. ಕೊರೋನಾದಿಂದಾಗಿ ಬ್ರಹ್ಮಕಲಶೋತ್ಸವು ಎರಡು ವರ್ಷ ವಿಳಂಬವಾಗಿದೆ. ಊರಿನ ಯುವಕರು ಹಾಗೂ ಭಕ್ತಾದಿಗಳ ಸಹಕಾರದಿಂದ ಎಲ್ಲಾ ಅಭಿವೃದ್ಧಿ ಕಾರ್ಯಗಳು ನಡೆದಿರುತ್ತದೆ ಎಂದರು.

ಬೆದ್ರಾಳ ಲಕ್ಷ್ಮೀ ಸಾ ಮಿಲ್ ನ ಮ್ಹಾಲಕ ಶ್ರೀನಿವಾಸ ಪೈ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯ ತಂತ್ರಿ ಕೆಮ್ಮಿಂಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ನಿಧಿ ಹೆಬ್ಬಾರ್ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಸ್ವಾಗತಿಸಿದರು. ಶ್ರೀಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಸದಸ್ಯ ಸುಜಯ್ ತಂತ್ರಿ ವಂದಿಸಿದರು. ಶಿಕ್ಷಕರಾದ ರಮೇಶ್ ಉಳಯ ಹಾಗೂ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಯಕ್ಷಶ್ರೀ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಲೆ, ಮಧ್ಯಾಹ್ನ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾಯಿಲಕ್ಷ್ಮೀ ಬಳಗದವರಿಂದ ಶಾಸ್ತ್ರೀಯ ಸಂಗೀತ, ಸಂಜೆ ಆರ್ಟ್ ಆಫ್ ಲಿವಿಂಗ್ ಪುತ್ತೂರು, ಶ್ರೀ ದುರ್ಗಾ ಭಜನಾ ಮಂಡಳಿ ಪುರುಷರಕಟ್ಟೆಯವರಿಂದ ಭಜನೆ, ರಾತ್ರಿ ಶ್ರೀ ಶಾರದಾ ಕಲಾ ಕೇಂದ್ರ ಪುತ್ತೂರು ಇವರಿಂದ ಭರತನಾಟ್ಯ ಮತ್ತು ಶ್ರೀ ನಿವಾಸ ಕಲ್ಯಾಣ ನೃತ್ಯ ರೂಪಕ ನಡೆಯಿತು.‌

ವೈದಿಕ, ತಾಂತ್ರಿಕ ವಿಧಿವಿಧಾನಗಳು: ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಬಹಳ ಬೆಳಿಗ್ಗೆ ಉಷಾಃಪೂಜೆ, ಮಹಾಗಣಪತಿಹೋಮ, ಅಂಕುರಪೂಜೆ, ಚತುಃಶುದ್ಧಿ, ಧಾರೆ, ಅವಗಾಹ, ಪಂಚಕ ಬಿಂಬಶುದ್ಧಿ, ಖನನಾದಿ ಸ್ಥಳಶುದ್ಧಿ, ದಹನ, ಪ್ರಾಯಶ್ಚಿತ್ತ, ಪ್ರಾಯಶ್ಚಿತ್ತ ಹೋಮ, ಪ್ರೋಕ್ತ ಹೋಮ, ಮಧ್ಯಾಹ್ನ ಹೋಮಗಳು, ಕಲಶಾಭಿಷೇಕ,ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ದುರ್ಗಾಪೂಜೆ, ಅಂಕುರಪೂಜೆ, ಕುಂಡಶುದ್ಧಿ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು.

ಬ್ರಹ್ಮಕಲಶೋತ್ಸವದಲ್ಲಿ ಇಂದು ..
ಕ್ಷೇತ್ರದಲ್ಲಿ ಮಾ. 27ರಂದು ಬೆಳಿಗ್ಗೆ ಹಾಗೂ ಸಂಜೆ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ಬೆಳಿಗ್ಗೆ ಆಂಜನೇಯ ಹವ್ಯಾಸಿ ಯಕ್ಷಗಾನ ಬಳಗದವರಿಂದ ತಾಳಮದ್ದಲೆ, ವಜ್ರಮಾತಾ ಭಜನಾ ಮಂಡಳಿ ಪುತ್ತೂರು, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಉದಯಗಿರಿ ಹಾಗೂ ಸೇರಾಜೆ ಶ್ರೀ ಶಾರದಾಂಬಾ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ- ಸಾಹಿತ್ಯ-ಸಂಭ್ರಮ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here