ಪುತ್ತೂರು:ಸರಕಾರಿ ಪ್ರಥಮ ದರ್ಜೆ ಕಾಲೇಜು ಉಳಿಸುವ ಉದ್ದೇಶ ಮತ್ತು ಪುತ್ತೂರು ಬೆದ್ರಾಳದ ರಸ್ತೆ ಅಗಲೀಕರಣ, ಬಸ್ ವ್ಯವಸ್ಥೆ ಕಲ್ಪಿಸುವುದು ಅಥವಾ ಕಾಲೇಜನ್ನು ಸ್ಥಳಾಂತರಿಸುವುದು, ವಿದ್ಯಾರ್ಥಿಗಳನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಎಮ್.ಎ., ಎಮ್.ಕಾಂ, ಮತ್ತು ಬಿ.ಎ.ಕೋರ್ಸ್‌ಗಳನ್ನು ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜಿಡೆಕಲ್ಲು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಮಾ.27ರಂದು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ ನಾಯಕ ವಿನೀತ್ ಮಾತನಾಡಿ, ಕಾಲೇಜಿನಲ್ಲಿ 120 ವಿದ್ಯಾರ್ಥಿಗಳಿದ್ದು ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಜಾಸ್ತಿ ಆಗಬೇಕು ಎಂದು ಹೇಳುತ್ತಾರೆ. ಇರುವ ಉಪನ್ಯಾಸಕ ಹುದ್ದೆಯನ್ನೂ ಪಿರಿಯಾಪಟ್ಟಣಕ್ಕೆ ಶಿಫ್ಟ್ ಮಾಡುತ್ತಾರೆ. ಹೀಗಾದರೆ ಕಾಲೇಜು ಅಭಿವೃದ್ಧಿ ಆಗುವುದು ಹೇಗೆ? ಕಾಲೇಜಿಗೆ ಆಗಮಿಸಲು ಸರಿಯಾದ ಬಸ್ ವ್ಯವಸ್ಥೆಯೂ ಇಲ್ಲ. ಬೆಳಿಗ್ಗೆ –ಸಂಜೆ ಬಸ್ ಇದೆ. ಆದರೆ ಕೆಲವೊಂದು ಸಮಯಗಳಲ್ಲಿ ಬಸ್ ಬರುವುದೇ ಇಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತರಗತಿ ಪ್ರತಿನಿಧಿ ಎಡ್ವರ್ಡ್ ಮಾತನಾಡಿ, 2, 4 ಹಾಗೂ 6ನೇ ಸೆಮಿಸ್ಟರಿನ ತರಗತಿಗಳು ಮಾರ್ಚ್ 23ಕ್ಕೆ ಆರಂಭಗೊಂಡಿದೆ. ಹಿಂದಿನ ಸೆಮಿಸ್ಟರಿನಲ್ಲಿ ಸೋಶಿಯಾಲಜಿ ಉಪನ್ಯಾಸಕರೇ ಇರಲಿಲ್ಲ. ನಾವೇ ಪಠ್ಯವನ್ನು ಓದಿಕೊಂಡು ಪರೀಕ್ಷೆ ಬರೆದಿದ್ದೇವೆ. ಹಿಂದೆ ಸೋಶಿಯಾಲಜಿ ಪಾಠ ಮಾಡುತ್ತಿದ್ದ ಉಪನ್ಯಾಸಕರು ಭಡ್ತಿಯೊಂದಿಗೆ ಬೇರೆಡೆಗೆ ವರ್ಗಾವಣೆಗೊಂಡರು. ಬಳಿಕ ಆ ಹುದ್ದೆ ಖಾಲಿಯಾಗಿಯೇ ಇದೆ. ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಗ್ರಂಥಪಾಲಕ ಹುದ್ದೆಯನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ. ಜಿಡೆಕಲ್ಲು ಶಾಲೆಯಲ್ಲಿ ಶೇ. 65ರಷ್ಟು ವಿದ್ಯಾರ್ಥಿಗಳು ಕ್ರೀಡಾಪಟುಗಳೇ ಆಗಿರುವುದರಿಂದ ದೈಹಿಕ ಶಿಕ್ಷಣ ನಿರ್ದೇಶಕ ಹುದ್ದೆಯನ್ನೇ ವರ್ಗಾವಣೆ ಮಾಡಿದರೆ ವಿದ್ಯಾರ್ಥಿಗಳು ಏನು ಮಾಡಬೇಕು. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಮಸ್ಯೆ ಪರಿಹಾರ ಆಗುವವರೆಗೆ ತರಗತಿಗಳಿಗೆ ಹಾಜರಾಗುವುದಿಲ್ಲ ಎಂದು ಹೇಳಿದರು.
ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಬಾಲಚಂದ್ರ ಮಾತನಾಡಿ, ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಗ್ರಂಥಪಾಲಕ ಹುದ್ದೆಯನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದ್ದು, ಸೋಶಿಯಾಲಜಿ ಉಪನ್ಯಾಸಕ ಹುದ್ದೆ ಖಾಲಿಯಾಗಿಯೇ ಇದೆ. ಸಮಸ್ಯೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕರ ಗಮನಕ್ಕೆ ತಂದಿದೆಯಾದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸದ್ಯ ಚುನಾವಣೆ ಘೋಷಣೆಯಾಗುವ ಸಂದರ್ಭವಾದ್ದರಿಂದ ವಿದ್ಯಾರ್ಥಿಗಳ ಪ್ರತಿಭಟನೆಗೆ ಯಾವ ರೀತಿಯ ಪ್ರತಿಫಲ ಸಿಗುತ್ತದೆ ಎಂದು ತಿಳಿದಿಲ್ಲ. ಸಹಾಯಕ ಆಯುಕ್ತರಿಗೆ ಮನವಿ ನೀಡಿ, ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದರು.
ಜಿಡೆಕಲ್ಲು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಪ್ಪು ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ, ಬಿಎ ಹಾಗೂ ಬಿ.ಕಾಂ. ತರಗತಿಗಳು ನಡೆಯುತ್ತಿವೆ. ಒಟ್ಟು 6 ತರಗತಿಗಳಿಗೆ ಮಂಜೂರಾದ ಹುದ್ದೆಗಳು 8. ಇದರಲ್ಲಿ ಪ್ರಾಂಶುಪಾಲ ಸೇರಿ 4 ಹುದ್ದೆಗಳು ಭರ್ತಿಯಾಗಿವೆ. ವಾಣಿಜ್ಯಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಸೋಶಿಯಾಲಜಿ ಹುದ್ದೆಗಳು ಖಾಲಿಯಾಗಿದ್ದು, ಅತಿಥಿ ಉಪನ್ಯಾಸಕರನ್ನು ನೇಮಿಸಲಾಗಿದೆ. ಅತಿಥಿ ಉಪನ್ಯಾಸಕರ ಒಟ್ಟು 8 ಹುದ್ದೆಗಳ ಪೈಕಿ 4 ಹುದ್ದೆಗಳು ಖಾಲಿಯಾಗಿವೆ. ಇದೀಗ ಗ್ರಂಥಪಾಲಕ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಹುದ್ದೆ ತೆರವಾಗುತ್ತಿದ್ದು, ಅದಕ್ಕೂ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕಿದೆ. 3ನೇ ಹಂತದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಹಿಂದಿನ ವರ್ಷ ಪ್ರಾಂಶುಪಾಲರೇ ಮುತುವರ್ಜಿ ವಹಿಸಿ ಹಣದ ವ್ಯವಸ್ಥೆ ಮಾಡಿ ಸೋಶಿಯಾಲಜಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿದ್ದರು ಎಂದು ಮಾಹಿತಿ ನೀಡಿದರು.
ಬಸ್ ಸಮಸ್ಯೆ ಬಗ್ಗೆ ಪ್ರಶ್ನಿಸಿದಾಗ, ಬೆಳಿಗ್ಗೆ ಹಾಗೂ ಸಂಜೆ ಬಸ್ ಸಂಚಾರ ಇದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂದಾಗ, ಬಸ್ ಬರುವುದೇ ಇಲ್ಲ. ಆದ್ದರಿಂದ ಕೆ.ಎಸ್.ಆರ್.ಟಿ.ಸಿ.ಗೆ ಮನವಿ ನೀಡಿದ್ದೇವೆ. ಇದೀಗ ಬೆಳಿಗ್ಗೆ ಹಾಗೂ ಸಂಜೆ ಬಸ್ ಬರುತ್ತದೆ. ಬಸ್ ಇಲ್ಲ ಎಂದರೆ ವಿದ್ಯಾರ್ಥಿಗಳು ರಿಕ್ಷಾದಲ್ಲೇ ಹೋಗಬೇಕು ಎಂದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಭಾರತಿ, ರೆಡ್ ಕ್ರಾಸ್ ಅಧ್ಯಕ್ಷ ಹರ್ಷಿತ್, ಎನ್.ಎಸ್.ಎಸ್. ನಾಯಕಿ ನಿತ್ಯಾಶ್ರೀ, ಎನ್.ಎಸ್.ಎಸ್. ನಾಯಕ ಚರಣ್ ರಾಜ್, ತರಗತಿ ಪ್ರತಿನಿಧಿಗಳಾದ ಸ್ವಸ್ತಿ, ವಿವೇಕ್, ಶ್ರಾವ್ಯ ಮೊದಲಾದವರು ಭಾಗಿಯಾದರು.