ಬದ್ಕ್ದ ಬೊಳ್ಪು ಭಜನೆ, ಭಜನೆದ ಅಜನೆ ಇಲ್ಲಡ್ ನಿರಂತರ ಕೇನೊಡು : ಒಡಿಯೂರು ಶ್ರೀ
ಪುತ್ತೂರು: ಭವ ಬಂಧನವನ್ನು ಕಳೆಯುವಂತಹ ಶಕ್ತಿ ಒಂದಿದ್ದರೆ ಅದು ಭಜನೆಗೆ ಮಾತ್ರ, ಇಂತಹ ಭಜನೆಗಳು ಕೇವಲ ಭಜನಾ ಮಂದಿರಗಳಲ್ಲಿ ಮಾತ್ರವಲ್ಲ ನಮ್ಮ ಮನೆಗಳಲ್ಲೂ ನಿರಂತರ ನಡೆಯಬೇಕು. ಭಜನೆದ ಅಜನೆ ನಮ್ಮ ಇಲ್ಲಲ್ ಏಪೊಲ ಕೇನೊಂದು ಉಪ್ಪೊಡು, ಬದ್ಕ್ದ ಬೊಳ್ಪು ಭಜನೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಪೆರಿಗೇರಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪುನಃ ಪ್ರತಿಷ್ಠಾ ಮಹೋತ್ಸವದ ಮೂರನೇ ದಿನವಾದ ಮಾ.27 ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಅಯ್ಯಪ್ಪ ಎಂದಾಗ ನಮ್ಮ ಮನಸ್ಸಿನಲ್ಲಿ ಒಂದು ರೀತಿಯ ತೃಪ್ತಿ ಮೂಡುತ್ತದೆ. ಶರಣಾಗತಿಯ ಭಾವನೆ ಬರುತ್ತದೆ. ಇಂತಹ ಶಕ್ತಿ ಅಯ್ಯಪ್ಪ ಸ್ವಾಮಿಗೆ ಇದೆ ಎಂದ ಸ್ವಾಮೀಜಿಯವರು, ನಾನು ಎನ್ನುವುದು ಅಹಂಕಾರ, ನಾನು ಎಂಬುದನ್ನು ಬಿಟ್ಟು ನೀನೇ ಎಲ್ಲಾ ಎಂಬ ಮನೋಭಾವ ನಮ್ಮಲ್ಲಿ ಬರಬೇಕು, ಬದುಕಲ್ಲಿ ಪ್ರೀತಿ, ತಾಳ್ಮೆ, ಸಹನೆ, ಶರಣಾಗತಿ ಇರಬೇಕು, ಪರಿಗೇರಿ ಭಜನಾ ಮಂದಿರದಲ್ಲಿ ಧರ್ಮಸಂಸ್ಕಾರದ ಅನಾವರಣ ಆಗಿದೆ, ಮುಂದಿನ ದಿನಗಳಲ್ಲಿ ಧರ್ಮಸಂಸ್ಥಾಪನೆಯ ಕೇಂದ್ರವಾಗಲಿ ಎಂದು ಹೇಳಿ ಶುಭಾಶೀರ್ವಾದ ಮಾಡಿದರು.
ಪ್ರಪಂಚ ದೇವಾಲಯವಾದರೆ ಭಾರತ ಅದರ ಗರ್ಭಗುಡಿ: ಕುಂಟಾರು ರವೀಶ ತಂತ್ರಿ
ಧಾರ್ಮಿಕ ಉಪನ್ಯಾಸ ಮಾಡಿದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಮಾತನಾಡಿ, ಪ್ರಪಂಚವೇ ಒಂದು ದೇವಾಲಯ ಅಂದುಕೊಂಡರೆ ಅದರ ಗರ್ಭಗುಡಿ ಭಾರತ ಆಗಿದೆ. ಭಾರತವೇ ಒಂದು ದೇವಾಲಯ ಎಂದುಕೊಂಡರೆ ಅದರ ಗರ್ಭಗುಡಿ ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಆಗಿದೆ. ಏಕೆಂದರೆ ಇಲ್ಲಿರುವಷ್ಟು ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯವನ್ನು ನಾವು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು. ಅಯ್ಯಪ್ಪ ದೇವರಲ್ಲ, ಅವರು ನಮ್ಮ ನಿಮ್ಮ ಹಾಗೆ ಮನುಷ್ಯ ಆದರೆ ಅವರು ಮಾಡಿದ ಸಾಧನೆಯಿಂದ ದೇವರಾಗಿದ್ದಾರೆ. ಪಂದಳರಾಜ ಕುಟುಂಬದಲ್ಲಿ ಜನಿಸಿದ ಅಯ್ಯಪ್ಪ ಮುಂದಿನ ದಿನಗಳಲ್ಲಿ ದೇವರಾಗಿ ನಾವೆಲ್ಲರೂ ಇಂದು ಆರಾಧನೆ ಮಾಡುತ್ತಿದ್ದೇವೆ. ಈ ಕಥೆ ನಮಗೆಲ್ಲರಿಗೂ ಗೊತ್ತಿದೆ. ನಾವು 48 ದಿನಗಳ ಕಾಲ ವೃತ ಮಾಡಿ ಶಬರಿಮಲೆಗೆ ಹೋಗುತ್ತೇವೆ. ಶಬರಿಮಲೆಯಲ್ಲಿ ನಮಗೆ ದೊಡ್ಡದಾದ ಒಂದು ನಾಮಫಲಕ ಕಾಣುತ್ತದೆ. ಅದರಲ್ಲಿ ‘ ತತ್ವಮಸಿ’ ಎಂದು ಬರೆದಿರುತ್ತದೆ. ಇಲ್ಲಿ ತತ್ವಮಸಿ ಎಂದರೆ ನೀನು ಏನನ್ನು ಹುಡುಕಿಕೊಂಡು ಬಂದಿದ್ದೆಯೋ ಅದು ನಿನ್ನಲ್ಲಿಯೇ ಇದೆ ಎಂಬುದು ಆಗಿದೆ ಎಂದು ರವೀಶ ತಂತ್ರಿಯವರು ಹಿಂದೂ ಧರ್ಮ ಹಾಗೂ ಧರ್ಮ ರಕ್ಷಣೆಯ ಬಗ್ಗೆ ಮಾತನಾಡಿದರು.
ಭಕ್ತಿ ಇದ್ದಲ್ಲಿ ಭಗವಂತನ ಅನುಗ್ರಹ ಇದೆ: ಕೆ.ಆರ್.ಲಕ್ಷ್ಮಣ ಗೌಡ
ಸಭಾಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಗೇರು ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಆರ್.ಲಕ್ಷ್ಮಣ ಗೌಡರವರು ಮಾತನಾಡಿ, 48 ದಿನಗಳ ಕಾಲ ವೃತ ಮಾಡಿ ಅಯ್ಯಪ್ಪನ ಸನ್ನಿಧಿಗೆ ಸೇರಿದಾಗ ನಮ್ಮಲ್ಲಿರುವ ಎಲ್ಲಾ ದುರ್ಗುಣಗಳು ನಾಶವಾಗಿ ಒಳ್ಳೆಯತನ ಮೂಡುತ್ತದೆ. ಎಲ್ಲವೂ ಶೂನ್ಯವಾಗಿ ದೇವರೊಂದೇ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ. ಪೆರಿಗೇರಿಯ ಈ ಅಯ್ಯಪ್ಪ ಭಜನಾ ಮಂದಿರ ಬಹಳ ಸುಂದರವಾಗಿ ಮೂಡಿಬರಲು ಇಲ್ಲಿನ ಜನರಲ್ಲಿ ಇದ್ದ ಭಕ್ತಿಯೇ ಕಾರಣವಾಗಿದೆ. ಅದಕ್ಕಾಗಿಯೇ ಎಲ್ಲಿ ಭಕ್ತಿ ಇರುತ್ತದೋ ಅಲ್ಲಿ ಭಗವಂತನ ಅನುಗ್ರಹ ಕೂಡ ಇರುತ್ತದೆ ಎಂಬುದು ಸತ್ಯ ಎಂದು ಹೇಳಿ ಶುಭ ಹಾರೈಸಿದರು.
ಅಯ್ಯಪ್ಪನ ದರ್ಶನದಿಂದ ಕಷ್ಟ ನಿವಾರಣೆ : ಕಡಮಜಲು ಸುಭಾಷ್ ರೈ
ಮನುಷ್ಯ ಜೀವನ ಎಂದ ಮೇಲೆ ಕಷ್ಟಗಳು ಇದ್ದೇ ಇರುತ್ತದೆ. ನೋವು ಇಲ್ಲದೆ ಸುಖ ಸಿಗಲ್ಲ, ಕಷ್ಟಗಳ ನಿವಾರಣೆಗೆ ನಾವು ದೇವರ ಮೊರೆ ಹೋಗುವುದು ಸಹಜ. 48 ದಿನಗಳ ಕಾಲ ವೃತ ಮಾಡಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದರೆ ನಮ್ಮ ಕಷ್ಟಗಳೆಲ್ಲ ಕರಗಿ ಸುಖ ಪ್ರಾಪ್ತಿಯಾಗುತ್ತದೆ ಎಂಬುದು ಮಾತ್ರ ಸತ್ಯ. ದೇವರನ್ನು ಒಲಿಸಿಕೊಳ್ಳಲು ನಾನಾ ಮಾರ್ಗಗಳಿದ್ದರೂ ಭಜನೆ ಅತ್ಯಂತ ಸುಲಭದ ಮಾರ್ಗವಾಗಿದೆ ಭಜನೆಗೆ ದೇವರು ಬೇಗನೇ ಒಲಿಯುತ್ತಾನೆ. ಆದ್ದರಿಂದ ಭಜನೆ ನಿರಂತರವಾಗಿ ನಮ್ಮ ಮನೆಯಲ್ಲಿ ನಡೆಯಬೇಕು ಎಂದು ಹೇಳಿ ಶುಭ ಹಾರೈಸಿದರು.
ಶ್ರದ್ಧಾಕೇಂದ್ರಗಳಿಗೆ ಮಕ್ಕಳನ್ನು ಕರೆದುಕೊಂಡು ಬರಬೇಕು : ಶ್ರೀನಿವಾಸ ಭಟ್ ಚಂದುಕೂಡ್ಲು
ಶ್ರೀ ಕ್ಷೇತ್ರ ಪಡುಮಲೆಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲುರವರು ಮಾತನಾಡಿ, ಭಜನಾ ಮಂದಿರ, ದೇವಸ್ಥಾನಗಳಿಗೆ ನಮ್ಮ ಮನೆಯ ಮಕ್ಕಳನ್ನು ಕರೆದುಕೊಂಡು ಬರುವ ಕೆಲಸವನ್ನು ಮಾಡಬೇಕು ಏಕೆಂದರೆ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿಸಿಕೊಡಬೇಕಾದ ಅಗತ್ಯತೆ ಇದೆ. ಶ್ರದ್ದಾಕೇಂದ್ರಗಳು ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿಕೊಡುವ ಕೇಂದ್ರಗಳಾಗಬೇಕು ಎಂದು ಹೇಳಿ ಶುಭ ಹಾರೈಸಿದರು.
ಪ್ರಗತಿಪರ ಕೃಷಿಕ ವಿನಯ ಭಟ್ ನೂಜಿಲೋಡು, ಕೌಡಿಚ್ಚಾರು ಭಜನ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಮರದಮುತ್ತು ಸಿ.ಆರ್.ಸಿ ಕೌಡಿಚ್ಚಾರು ಪ್ರಗತಿಪರ ಕೃಷಿಕ ಶಿವಪ್ರಸಾದ್ ಭಟ್ ಪಟ್ಟೆ, ಪಟ್ಟೆ ವಿದ್ಯಾಸಂಸ್ಥೆಯ ನಿವೃತ್ತ ಶಿಕ್ಷಕಿ ಶಂಕರಿ ಪಟ್ಟೆ, ನಿವೃತ್ತ ಬ್ಯಾಂಕ್ ಮೆನೇಜರ್ ತಿಮ್ಮಪ್ಪ ರೈರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಪೆರಿಗೇರಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ಕನ್ನಯ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಜಯಶೀಲ, ಶಾರದಾ, ವಸಂತಿ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ಪ್ರಸಾದ್ ಗೌಡ ಕನ್ನಯ ಸ್ವಾಗತಿಸಿದರು. ಪವನ್ ಗೌಡ ಕನ್ನಯ, ಯಶ್ವಿತ್ ಗೌಡ ಕನ್ನಯ, ವಿಶ್ವನಾಥ ಗೌಡ, ಕಿರಣ್ ಗೌಡ, ರೋಹಿತ್ ಪೂಜಾರಿ, ಶ್ರೀಧರ ಗೌಡ ಕನ್ನಯ, ಗಣೇಶ್ ರೈ, ಶೈಲಾ ಡಿ, ಪಾಡುರಂಗ ಭಟ್ರವರುಗಳು ಅತಿಥಿಗಳಿಗೆ ಹೂ, ಶಾಲು ನೀಡಿ ಸ್ವಾಗತಿಸಿದರು. ಅಕ್ಷತಾ ಪೆರಿಗೇರಿ ವಂದಿಸಿದರು. ಕೀರ್ತಿ ಕೌಡಿಚ್ಚಾರು ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಮಿತಿಯ ಪದಾಧಿಕಾರಿಗಳು ಸಹಕರಿಸಿದರು.
ಸನ್ಮಾನ
ಭಜನಾ ಮಂದಿರ ಪ್ರಾರಂಭ ಮಾಡಿ ಮಂದಿರದ ಅಭಿವೃದ್ಧಿಗೆ ಶ್ರಮಿಸಿದ ಮಂದಿರದ ಗೌರವ ಸಲಹೆಗಾರರಾದ ಗಣಪತಿ ಗೌಡ ಕೋಡಿಯಡ್ಕ, ಕೃಷ್ಣ ನಾಯ್ಕ್, ಚಂದ್ರಶೇಖರ ಗೌಡ, ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ ರವರುಗಳನ್ನು ಸ್ವಾಮೀಜಿಯವರು ಶಾಲು, ಸ್ಮರಣಿಕೆ ಕೊಟ್ಟು ಸನ್ಮಾನಿಸಿ ಗೌರವಿಸಿದರು.
ಶ್ರೀ ದೇವರ ಪ್ರತಿಷ್ಠೆ/ ವೈದಿಕ ಕಾರ್ಯಕ್ರಮಗಳು
ಬೆಳಿಗ್ಗೆ ಭಜನೆ ಆರಂಭಗೊಂಡು ಬಳಿಕ ಗಣಪತಿ ಹೋಮ ನಡೆದು 9.22 ರಿಂದ 11.15 ರ ವೃಷಭ ಲಗ್ನದ ಸುಮುಹೂರ್ತದಲ್ಲಿ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ದೇವರ ಪ್ರತಿಷ್ಠೆ, ಮಹಾಪೂಜೆ, ನಿತ್ಯ ನೈಮಿತ್ತ್ಯಾದಿಗಳ ನಿರ್ಣಯ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಮಂದಿರದ ಅರ್ಚಕ ರವಿ ಉಳಿತ್ತಾಯ, ಗುರುಸ್ವಾಮಿ ಐ.ಮೋಹನ್ ಗೌಡ ಪೆರಿಗೇರಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತಾಧಿಗಳು ಶ್ರೀ ದೇವರ ಗಂಧಪ್ರಸಾದದೊಂದಿಗೆ ಅನ್ನಪ್ರಸಾದ ಸ್ವೀಕರಿಸಿದರು.