ನೆಲ್ಯಾಡಿ: ರಸ್ತೆ ಬದಿಯ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಮಹಿಳೆ ಮೃತಪಟ್ಟು ಇನ್ನಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಮಾ.30ರಂದು ಬೆಳಿಗ್ಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಕರ್ಬಸಂಕ ಎಂಬಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಡಿವೈಡರ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಅನ್ನಪೂರ್ಣ(50ವ.)ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಲಾಯಿಸುತ್ತಿದ್ದ ಮೃತ ಮಹಿಳೆಯ ಪುತ್ರ ಅಶ್ವಿನ್(25ವ.) ಹಾಗೂ ಪತಿ ಭಾಸ್ಕರ(56ವ.)ಗಂಭೀರ ಗಾಯಗೊಂಡಿದ್ದು ಇಬ್ಬರನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಡಿವೈಡರ್‌ಗೆ ಡಿಕ್ಕಿ:
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಕರ್ಬಸಂಕ ಬಳಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಡಿವೈಡರ್ ಅಳವಡಿಸಲಾಗಿದೆ. ಕಾರಿನ ಚಾಲಕನಿಗೆ ಇದರ ಅರಿವಾಗದೇ ಡಿಕ್ಕಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿ ಬಿ.ಎಸ್., ಸಬ್ ಇನ್ಸ್‌ಪೆಕ್ಟರ್ ರಾಜೇಶ್ ಕೆ.ವಿ., ನೆಲ್ಯಾಡಿ ಹೊರಠಾಣೆಯ ಹೆಡ್‌ಕಾನ್‌ಸ್ಟೇಬಲ್ ಬಾಲಕೃಷ್ಣ, ಕುಶಾಲಪ್ಪ ನಾಯ್ಕ್‌ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.