ಸುಳ್ಯಕ್ಕೆ ಎಚ್.ಎಂ.ನಂದಕುಮಾರ್‌ಗೆ ಟಿಕೆಟ್ ನೀಡಿ ಕಾಂಗ್ರೆಸ್ ಕಾರ್ಯಕರ್ತರಿಂದ ಡಿಸಿಸಿ ಕಚೇರಿ ಮುಂದೆ ಪ್ರತಿಭಟನೆ

0

ನೆಲ್ಯಾಡಿ: ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರವಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಘೋಷಣೆಯಾಗಿರುವ ಅಭ್ಯರ್ಥಿ ಜಿ.ಕೃಷ್ಣಪ್ಪರನ್ನು ಬದಲಿಸಿ ಕೆಪಿಸಿಸಿ ಸದಸ್ಯ ಎಚ್.ಎಂ.ನಂದಕುಮಾರ್‌ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಕಡಬ, ನೆಲ್ಯಾಡಿ ಸೇರಿದಂತೆ ಸುಳ್ಯ ಕ್ಷೇತ್ರದ ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮಾ.29ರಂದು ಮಂಗಳೂರಿನಲ್ಲಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.


ಕಡಬ ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್‌ನ ಮುಖಂಡರು, ಕಾರ್ಯಕರ್ತರು 10 ಬಸ್ಸುಗಳಲ್ಲಿ ಮಂಗಳೂರಿಗೆ ತೆರಳಿ ಅಲ್ಲಿ ಡಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕಾರ್ಯಕರ್ತರ ಅಭಿಪ್ರಾಯ ಪಡೆಯದೇ ಸುಳ್ಯ ಕ್ಷೇತ್ರಕ್ಕೆ ಜಿ.ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್‍ಯಕರ್ತರು ಜಿ. ಕೃಷ್ಣಪ್ಪ ಅವರನ್ನು ಬದಲಿಸಿ ಎಚ್.ಎಂ. ನಂದಕುಮಾರ್‌ಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿದರು. ನಂದಕುಮಾರ್ ಅವರಿಗೆ ಬಿ ಫಾರಂ ಕೊಡಿ, ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕೊಡುತ್ತೇವೆ. ನಾಯಕರ ಅಭ್ಯರ್ಥಿ ನಮಗೆ ಬೇಡ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಿ. ಹೈಕಮಾಂಡ್ ತೀರ್ಮಾನ ಪರಾಮರ್ಶೆ ಮಾಡಿ ನಂದಕುಮಾರ್‌ಗೆ ಟಿಕೆಟ್ ನೀಡಿ ಎಂಬ ಫಲಕ ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮನವಿ ಸ್ವೀಕರಿಸಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೇ ಆಗಮಿಸಬೇಕೆಂದು ಪಟ್ಟು ಹಿಡಿದು ಧರಣಿ ಕುಳಿತರು.


ಕಾರ್ಯಕರ್ತರಿಗೆ ನೋವಾಗಿದೆ:
ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಗೋಕುಲ್‌ದಾಸ್ ಸುಳ್ಯ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್‌ರವರು ಈ ಸಂದರ್ಭದಲ್ಲಿ ಮಾತನಾಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ೩೫ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲದ ಕಾರಣದಿಂದಾಗಿ ಪಕ್ಷದ ಕಾರ್ಯಕರ್ತರು ತೊಂದರೆಗೊಳಗಾಗಿದ್ದಾರೆ. ಎಚ್.ಎಂ.ನಂದಕುಮಾರ್ ಅವರು ಸುಳ್ಯ ಕ್ಷೇತ್ರಕ್ಕೆ ಪಕ್ಷದ ಉಸ್ತುವಾರಿಯಾಗಿ ಆಗಮಿಸಿದ ಬಳಿಕ ಕ್ಷೇತ್ರದ ಕಾರ್ಯಕರ್ತರನ್ನು ಒಗ್ಗೂಡಿಸಿ ಕ್ಷೇತ್ರದಾದ್ಯಂತ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೋವಿಡ್-19 ಸಮಯದಲ್ಲಿ ಕ್ಷೇತ್ರದ ಎಲ್ಲಾ ಕಡೆ ಆಹಾರ ಕಿಟ್‌ಗಳನ್ನು ವಿತರಣೆ ಮಾಡಿರುತ್ತಾರೆ. ಬಡವರ, ವಿಕಲಚೇತನರ ಪಾಲಿನ ಆಶಾಕಿರಣರಾಗಿರುತ್ತಾರೆ. ಧಾರ್ಮಿಕ ಕಾರ್ಯಕ್ರಮ, ಕ್ರೀಡಾ ಕಾರ್ಯಕ್ರಮಗಳಿಗೆ ಸಹಕಾರ ನೀಡಿ ಪಕ್ಷದ ಕಾರ್ಯಕರ್ತರ ಅಪೇಕ್ಷೆಯಂತೆ ಕೂಡಲೇ ಸ್ಪಂದಿಸಿ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದ್ದಾರೆ. ಕ್ಷೇತ್ರದಾದ್ಯಂತ ಕಳೆದ ೪ ವರ್ಷಗಳಿಂದ ಪ್ರತಿ ಹಳ್ಳಿ ಹಳ್ಳಿಗಳಿಗೆ ತೆರಳಿ ಜನಸೇವೆಗೈಯುತ್ತಿರುವ ಅವರು ಜನಮೆಚ್ಚುಗೆ ಗಳಿಸಿದ್ದಾರೆ. ಪಕ್ಷಾತೀತವಾಗಿ ಅತೀ ಹೆಚ್ಚು ಜನ ಬೆಂಬಲ ಹೊಂದಿದ್ದಾರೆ. ಅವರಿಗೆ ಪಕ್ಷದ ಟಿಕೆಟ್ ನೀಡಬೇಕು. ಪಕ್ಷದ ಹೈಕಮಾಂಡ್ ಈಗಾಗಲೇ ಜಿ.ಕೃಷ್ಣಪ್ಪರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಇದು ಪಕ್ಷದ ನಿಷ್ಠಾವಂತ ಸಾವಿರಾರು ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ನೋವುಂಟು ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರಾದ ಶಶಿಧರ್ ಎಂ.ಜೆ., ಸಚಿನ್‌ರಾಜ್ ಶೆಟ್ಟಿ, ಅನಿತಾ ರೈ ಬೆಳ್ಳಾರೆ, ಅಶಾಲಕ್ಷ್ಮಣ್ ಗುಂಡ್ಯ, ಸತ್ಯಕುಮಾರ್ ಆವಂಜೆ, ಚೇತನ್‌ಕಜೆಗದ್ದೆ, ಗಣೇಶ್ ಕೈಕುರೆ, ಪ್ರವೀಣ್ ಕೆಡೆಂಜಿ, ಸುಧೀರ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯದರ್ಶಿಯಿಂದ ಮನವಿ ಸ್ವೀಕಾರ
ಬೆಂಗಳೂರಿನಲ್ಲಿ ಕೆಪಿಸಿಸಿ ಸಭೆಯಲ್ಲಿದ್ದ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್‌ರವರು ಧರಣಿ ನಿರತ ಪಕ್ಷದ ಮುಖಂಡರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಕಾರ್ಯಕರ್ತರ ಅಹವಾಲನ್ನು ಪಕ್ಷದ ಅಧ್ಯಕ್ಷರ ಗಮನಕ್ಕೆ ಇಂದೇ ತರುವುದಾಗಿ ಭರವಸೆ ನೀಡಿದರು. ಬಳಿಕ ಪಕ್ಷದ ಮುಖಂಡರು ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಡಿಸಿಸಿ ಕಾರ್ಯದರ್ಶಿ ಸಂತೋಷ್ ಅವರಿಗೆ ಮನವಿ ಪತ್ರ ನೀಡಿದರು.

LEAVE A REPLY

Please enter your comment!
Please enter your name here