ಬಿಜೆಪಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ; ಪುತ್ತೂರು, ಸುಳ್ಯದಲ್ಲಿ ಹಾಲಿ ಶಾಸಕರಿಗೆ ಕೈ ತಪ್ಪಲಿದೆಯಾ ಅವಕಾಶ?

0

ಪುತ್ತೂರು: ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಚುನಾವಣಾ ಕಣ ರಂಗೇರುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‌ಡಿಪಿಐ, ಆಮ್ ಆದ್ಮಿ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದೆ. ಕಾಂಗ್ರೆಸ್, ಜೆಡಿಎಸ್, ಎಸ್‌ಡಿಪಿಐ, ಆಮ್ ಆದ್ಮಿ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿ ಮೊದಲ ಪಟ್ಟಿಯನ್ನೂ ಬಿಡುಗಡೆಗೊಳಿಸಿದೆ. ಆದರೆ ರಾಜ್ಯದಲ್ಲಿ ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಲವು ಸವಾಲುಗಳನ್ನೆದುರಿಸುತ್ತಿದ್ದು ಇನ್ನೂ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೇ ಬಿಡುಗಡೆಗೊಳಿಸಿಲ್ಲ. ದ.ಕ.ಜಿಲ್ಲೆಯಲ್ಲಿ ಪುತ್ತೂರು, ಸುಳ್ಯ ಸೇರಿ ರಾಜ್ಯದ ಕೆಲವೊಂದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲಗಳಿದ್ದು ಪಕ್ಷಕ್ಕೆ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.

ಗುಜರಾತ್ ಮಾದರಿಯಲ್ಲೇ ಅಭ್ಯರ್ಥಿಗಳ ಆಯ್ಕೆಗೆ ಪಕ್ಷದ ಹೈಕಮಾಂಡ್ ತೀರ್ಮಾನಿಸಿದ್ದು ಕೆಲವು ಹಾಲಿ ಶಾಸಕರುಗಳಿಗೆ ಬಿಜೆಪಿ ಟಿಕೆಟ್ ಕೈ ತಪ್ಪಲಿದೆ. ಪುತ್ತೂರು ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿಯೂ ಹಾಲಿ ಶಾಸಕರನ್ನು ಬದಲಾವಣೆ ಮಾಡಿ ಹೊಸಮುಖಗಳಿಗೆ ಅವಕಾಶ ಮಾಡಿಕೊಡುವ ಕುರಿತು ಚರ್ಚೆ ನಡೆದಿದೆ. ಶಾಸಕ ಸಂಜೀವ ಮಠಂದೂರು ಅವರನ್ನು ಪಕ್ಷದ ನಾಯಕರು ಬೆಂಗಳೂರುಗೆ ಕರೆಸಿ ಈ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ ಎಂದು ವರದಿಯಾಗಿದೆ. ಸಂಜೀವ ಮಠಂದೂರು ಅವರು ಶಾಸಕರಾದ ನಂತರ ಸಾವಿರಾರು ಕೋಟಿ ರೂ.ಅನುದಾನವನ್ನು ತಂದು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮನ್ನಣೆ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೆ ಪ್ರಚಾರವಿಲ್ಲದ ಸೈಲೆಂಟ್ ವರ್ಕರ್ ಎಂದೇ ಗುರುತಿಸಿಕೊಂಡಿದ್ದಾರೆ. ಆದರೂ ಕೆಲವೊಂದು ವಿಚಾರದಲ್ಲಿ ಹಿಂದೂಪರ ಸಂಘಟನೆಗಳ ಕೆಲವು ಕಾರ್ಯಕರ್ತರ ವಿರೋಧಕ್ಕೆ ಗುರಿಯಾಗಿರುವ ಇವರ ಮೇಲೆ ಹಲವು ಆರೋಪಗಳನ್ನು ಮಾಡಲಾಗುತ್ತಿದೆ.ಮತ್ತೊಂದೆಡೆ ಇದೀಗ ಇವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋವೊಂದರ ವಿಚಾರ ಸದ್ದು ಮಾಡುತ್ತಿದೆ. ಇದು ಅಸಲಿಯೋ, ನಕಲಿಯೋ ಗೊತ್ತಿಲ್ಲ. ಆದರೆ ಸದ್ದು ಮಾಡುತ್ತಿದೆ. ಒಟ್ಟಾರೆಯಾಗಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಲ್ಲಿ ಪುತ್ತೂರು ಮತ್ತು ಸುಳ್ಯ ಕ್ಷೇತ್ರದಲ್ಲಿ ಹಾಲಿ ಶಾಸಕರನ್ನು ಬದಲಿಸಿ ಈ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡುವ ಕುರಿತು ಚರ್ಚೆಗಳು ನಡೆದಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಇದು ನಿಜವೇ ಅಥವಾ ಊಹಾಪೋಹವೇ ಎನ್ನುವುದು ಕೆಲವೇ ದಿನಗಳಲ್ಲಿ ಸ್ಪಷ್ಟವಾಗಲಿದೆ.

LEAVE A REPLY

Please enter your comment!
Please enter your name here