ಪುತ್ತೂರು ಮಹಾಲಿಂಗೇಶ್ವರ ದೇವಳದ ತಂತ್ರಿ ಸ್ಥಾನದ ವಿವಾದ : ಕೆಮ್ಮಿಂಜೆ ಕಾರ್ತಿಕ್ ತಂತ್ರಿಯವರ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್: ತಂತ್ರಿಯಾಗಿ ಮುಂದುವರಿಯಲು ಕುಂಟಾರು ರವೀಶರಿಗೆ ಅವಕಾಶ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿ ಸ್ಥಾನ ನಿರ್ವಹಿಸಲು ತನಗೆ ಅವಕಾಶ ನೀಡುವಂತೆ ಕೆಮ್ಮಿಂಜೆ ಕಾರ್ತಿಕ್ ತಂತ್ರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ‌ ಹೈಕೋರ್ಟ್ ವಜಾಗೊಳಿಸಿದ್ದು ಕುಂಟಾರು ರವೀಶ ತಂತ್ರಿಯವರನ್ನು ದೇವಳದ ತಂತ್ರಿಯಾಗಿ ಮುಂದುವರಿಯಲು ಅವಕಾಶ ಕಲ್ಪಿಸಿ ಆದೇಶ ನೀಡಿದೆ.

ತಂತ್ರಿ ಸ್ಥಾನದ ವಿಚಾರ:

ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಯಾಗಿ ಕುಂಟಾರು ರವೀಶ ತಂತ್ರಿ ಅವರು 2003ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿಯೇ ದೇವಳದ ಜಾತ್ರೋತ್ಸವ, ಬ್ರಹ್ಮಕಲಶೋತ್ಸವ ಸಹಿತ ಎಲ್ಲಾ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ‌.

ಆದರೆ, 2017ರ ಎಪ್ರಿಲ್ 10ರಿಂದ 20ರವರೆಗಿನ ಅವಧಿಗೆ ದೇವಳದ ಆಗಿನ ಆಡಳಿತ ಮಂಡಳಿಯವರು ಕೆಮ್ಮಿಂಜೆ ಕಾರ್ತಿಕ್ ತಂತ್ರಿ ಅವರನ್ನು ದೇವಳದ ತಂತ್ರಿಯನ್ನಾಗಿ ನೇಮಕ‌ ಮಾಡಿದ್ದರು. ಕಾರ್ತಿಕ್ ತಂತ್ರಿಯವರ ನೇಮಕ ಪ್ರಶ್ನಿಸಿ ಅಂದು ದೇವಳದ ಭಕ್ತ ಭಾಸ್ಕರ ರೈ ಎಂಬವರು ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾರ್ತಿಕ್ ತಂತ್ರಿ ಅವರ ನೇಮಕವನ್ನು ಪ್ರಶ್ನಿಸಿದ್ದರು.

ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳು ಕಾರ್ತಿಕ್ ತಂತ್ರಿಯವರ ನೇಮಕ ರದ್ದುಗೊಳಿಸಿ ಆದೇಶಿಸಿದ್ದರು. ಆ ಸಮಯದಲ್ಲಿ ಕುಂಟಾರು ರವೀಶ ತಂತ್ರಿಯವರೇ ತಂತ್ರಿಯಾಗಿ ಮುಂದುವರಿದಿದ್ದರಲ್ಲದೆ ಜಾತ್ರೋತ್ಸವ ಅವರ ನೇತೃತ್ವದಲ್ಲಿಯೇ ನಡೆದಿತ್ತು. ಬಳಿಕ 2021ರಲ್ಲಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿಯವರು ತನ್ನನ್ನು ದೇವಳದ ತಂತ್ರಿಯನ್ನಾಗಿಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಮಾಡಿದ್ದರು.

ಇಲಾಖೆ ಯಾವುದೇ ಸ್ಪಂದನ‌ ನೀಡದ ಹಿನ್ನೆಲೆಯಲ್ಲಿ ಕಾರ್ತಿಕ್ ತಂತ್ರಿಯವರು ಹೈಕೋರ್ಟ್ ಮೊರೆ ಹೋಗಿದ್ದರು. ತನ್ನ ಮನವಿಯನ್ನು ಇಲಾಖೆ ಪುರಸ್ಕರಿಸಿಲ್ಲ. ಆದ್ದರಿಂದ ನ್ಯಾಯಪೀಠ ತನಗೆ ನ್ಯಾಯ ಒದಗಿಸಿ ದೇವಳದ ತಂತ್ರಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಕಾರ್ತಿಕ್ ತಂತ್ರಿ ಮನವಿ ಮಾಡಿದ್ದರು. ಎ.6ರಂದು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ತೀರ್ಪು ಪ್ರಕಟಿಸಿದ್ದು ಕಾರ್ತಿಕ್ ತಂತ್ರಿಯವರ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಕುಂಟಾರು ರವೀಶ ತಂತ್ರಿಯವರನ್ನು ದೇವಳದ ತಂತ್ರಿಯಾಗಿ ಮುಂದುವರಿಯಲು ನ್ಯಾಯಮೂರ್ತಿ ಅವಕಾಶ ಕಲ್ಪಿಸಿ ಆದೇಶ ನೀಡಿದ್ದಾರೆ.

ಕುಂಟಾರು ರವೀಶ ತಂತ್ರಿ ಪರ ನ್ಯಾಯವಾದಿ ಶಾಂತಿಭೂಷಣ್ ಎಚ್, ಸರಕಾರದ ಪರವಾಗಿ ಹಿರಿಯ ವಕೀಲರಾದ ಅಡಿಷನಲ್ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಮ್ ಮತ್ತು ದೇವಳದ ಈಗಿನ ಆಡಳಿತ ಮಂಡಳಿಯ ಪರವಾಗಿ ಅಗರ್ತ ಕೇಶವ ಭಟ್ ವಾದಿಸಿದ್ದರು. ಅರ್ಜಿದಾರ ಕಾರ್ತಿಕ್ ತಂತ್ರಿ ಪರ ನ್ಯಾಯವಾದಿ ಸನತ್ ಕುಮಾರ್ ವಾದಿಸಿದ್ದರು.

LEAVE A REPLY

Please enter your comment!
Please enter your name here