ಸಹೃಯದರಿಗೆ ಆಸ್ವಾದನೆ ನೀಡುವ ಹೊಣೆ ಸಾಹಿತಿಯಲ್ಲಿರಬೇಕು: ಪುತ್ತೂರು ಉಮೇಶ್ ನಾಯಕ್
ಪುತ್ತೂರು: ಸಾಹಿತ್ಯ ಸಹಜವಾಗಿ ಮೂಡಿ ಬರುವಂತದ್ದು. ಅದು ಒತ್ತಾಯಪೂರ್ವಕವಾಗಿ ಹುಟ್ಟುವಂತದ್ದಲ್ಲ. ಸಾಹಿತಿಗಳು ಪಕ್ವತೆಯನ್ನು ತಮ್ಮ ಸಾಹಿತ್ಯದಲ್ಲಿ ತೋರಿಸಬೇಕು. ಪದ ಪ್ರಯೋಗದಲ್ಲಿ ಪ್ರಾವೀಣ್ಯತೆ ಪಡೆಯಬೇಕು. ಸಾಹಿತ್ಯದ ಮೂಲಕ ಸಹೃದಯನಿಗೆ ಆಸ್ವಾದನೆ ನೀಡುವಲ್ಲಿ ಕವಿ ಶ್ರಮಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು, ಕ.ಸಾ.ಪ ಪುತ್ತೂರು, ಜನ್ಮ ಫೌಂಡೇಶನ್ ಟ್ರಸ್ಟ್ ಪುತ್ತೂರು ಮತ್ತು ವಿವೇಕಾನಂದ ಕಾಲೇಜು ಪುತ್ತೂರು ಇವುಗಳ ಸಹಯೋಗದಲ್ಲಿ ಚಿಗುರು ವರುಷ ಹರುಷ ಸಂಭ್ರಮ 2023 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತ್ಯದಲ್ಲಿ ಸಕ್ರಿಯವಾಗಿರಲು ವಯಸ್ಸಿನ ಮಿತಿ ಇಲ್ಲ. ಸಾಹಿತ್ಯದ ಆಸಕ್ತಿ, ತುಡಿತ ಮುಖ್ಯ. ಚಿಗುರೆಲೆ ಸಾಹಿತ್ಯ ಬಳಗವು ಅನೇಕ ಕವಿಗಳಿಗೆ ವೇದಿಕೆ, ಅವಕಾಶವನ್ನು ಒದಗಿಸಿದೆ. ಸಾಹಿತ್ಯ ಪರಿಷತ್ತಿನಂತೆ ಬಹಳ ಸಕ್ರಿಯವಾಗಿ ಸಾಹಿತಿಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಬಳಗದ ಕಾರ್ಯವನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಪಿಂಗಾರ ಪತ್ರಿಕೆ ಸಂಪಾದಕ ರೇಮಂಡ್ ಡಿಕೋನ ತಾಕೊಡೆ ಉದ್ಘಾಟಿಸಿ ಶುಭ ಹಾರೈಸಿದರು. ಚಿಗುರೆಲೆ ಸಾಹಿತ್ಯ ಬಳಗದ ಹೊಸ ಲಾಂಛನವನ್ನು ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕಾ.ವೀ. ಕೃಷ್ಣದಾಸ್ ಬಿಡುಗಡೆಗೊಳಿಸಿದರು. ಬಳಿಕ ಲಾಂಛನವನ್ನು ಬಳಗ ನಿರ್ವಾಹಕರಿಗೆ ಹಸ್ತಾಂತರಿಸಲಾಯಿತು.
ಧನ್ವಿತಾ ಬರೆದ ಶಕ್ತಿಯ ಸೆಲೆ, ಶೀರ್ಷಿತಾ ಬರೆದ ನನ್ನ ಜಗ ಕವನ ಸಂಕಲನವನ್ನು ಲೀಲಾ ಕುಮಾರಿ ತೋಡಿಕಾನ ಲೋಕಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕೃತಿಗಳನ್ನು ರೇಷ್ಮಾ ಶೆಟ್ಟಿ ಗೊರೂರು ಪರಿಚಯಿಸಿದರು. ನಂತರ ‘ಕೃತಿ ಅರ್ಪಣೆ ನಮ್ಮ ಅಭಿನಂದನೆ’ ಹಾಗೂ ‘ಸಾಧನೆಗೊಂದು ಸಲಾಂ’ ಕಾರ್ಯಕ್ರಮ ಜರುಗಿತು.
ವೇದಿಕೆಯಲ್ಲಿ ಜನ್ಮ ಪೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ| ಹರ್ಷ ಕುಮಾರ್ ರೈ ಮಾಡಾವು, ಬಾಲಕೃಷ್ಣ ಕಾರಂತ್ ಎರುಂಬು, ಶ್ರೀಕಾಂತ್ ಪೂಜಾರಿ ಬಿರಾವು, ಚಂದ್ರಮೌಳಿ ಕಡಂದೇಲು, ಅಪೂರ್ವ, ಧನ್ವಿತಾ, ಶೀರ್ಷಿತಾ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ರಶ್ಮಿತಾ ಸುರೇಶ್ ಮಾಣಿ ಸ್ವಾಗತಿಸಿದರು. ನಾರಾಯಣ ಕುಂಬ್ರ ಪ್ರಸ್ತಾವನೆಗೈದರು.ಮಾನಸವಿಜಯ್ ಕೈಂತಜೆ ಪ್ರಾರ್ಥಿಸಿದರು. ನವ್ಯಶ್ರೀ ಸ್ವರ್ಗ ವಂದಿಸಿ, ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬಳಗದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜಯರಾಮ ಪಡ್ರೆ ಮತ್ತು ಅಪೂರ್ವ ಕಾರ್ಯಕ್ರಮ ನಿರ್ವಹಿಸಿದರು.