- ಪುತ್ತಿಲ ಪರ ಬಿಎಸ್‌ವೈ ಬ್ಯಾಟಿಂಗ್
- ಕಂಜಿಪಿಲಿ/ಆಶಾ ತಿಮ್ಮಪ್ಪ ಪರ ಕಟೀಲ್ ಒಲವು
- ಸಂಘ ಪರಿವಾರದಿಂದ ಕಿಶೋರ್ ಬೊಟ್ಯಾಡಿ, ಯತೀಶ್ ಆರ‍್ವಾರ ಹೆಸರು
- ಕೊನೇ ಕ್ಷಣದಲ್ಲಿ ಮತ್ತೆ ಮಠಂದೂರರೇ?
ಪುತ್ತೂರು:ರಾಜ್ಯ ವಿಧಾನಸಭೆಯ 224 ಸ್ಥಾನಗಳಿಗೂ ಮೇ 10ರಂದು ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಕ್ಕೆ ಇನ್ನು ಕೇವಲ ಎರಡು ದಿನಗಳು ಬಾಕಿ ಉಳಿದಿರುವುದಾದರೂ ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿ ಪ್ರಮುಖ ರಾಜಕೀಯ ಪಕ್ಷಗಳಾಗಿರುವ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಇನ್ನೂ ಆಗಿಲ್ಲ.ಈ ನಡುವೆ ಬಿಜೆಪಿಯಿಂದ ಹರೀಶ್ ಕಂಜಿಪಿಲಿ, ಅರುಣ್ ಕುಮಾರ್ ಪುತ್ತಿಲ ಮತ್ತು ಆಶಾ ತಿಮ್ಮಪ್ಪ ಗೌಡ ಅವರ ಹೆಸರು ಫೈನಲ್ ರೇಸ್‌ನಲ್ಲಿದೆ.
ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪಕ್ಷದ ವರಿಷ್ಠರು ಈಗಾಗಲೇ ಸಭೆ ನಡೆಸಿದ್ದಾರಾದರೂ ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ. ಅಭ್ಯರ್ಥಿಗಳು ಯಾರಾಗಬಹುದು ಎನ್ನುವ ಕುರಿತು ಪಕ್ಷದ ವರಿಷ್ಠರು ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರಾದರೂ ಒಮ್ಮತದ ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿ ಬಿಜೆಪಿಯಿಂದ ಹಾಲಿ ಶಾಸಕ ಸಂಜೀವ ಮಠಂದೂರು ಅವರ ಹೆಸರು ಆರಂಭದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿತ್ತಾದರೂ ಇದೀಗ ಮಠಂದೂರು ಅವರ ಬದಲಿಗೆ ಬೇರೆಯವರ ಹೆಸರುಗಳೂ ಕೇಳಿ ಬರುತ್ತಿವೆ. ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸುಳ್ಯ ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಾಜಿ ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ,ಕಿಶೋರ್ ಕುಮಾರ್ ಬೊಟ್ಯಾಡಿ, ಯತೀಶ್ ಗೌಡ ಆರ‍್ವಾರ ಅವರ ಹೆಸರು ಬಿಜೆಪಿಯಿಂದ ಅಭ್ಯರ್ಥಿತನಕ್ಕೆ ಕೇಳಿ ಬರುತ್ತಿತ್ತಾದರೂ ಇದೀಗ ಅರುಣ್ ಕುಮಾರ್ ಪುತ್ತಿಲ, ಹರೀಶ್ ಕಂಜಿಪಿಲಿ ಮತ್ತು ಆಶಾ ತಿಮ್ಮಪ್ಪ ಗೌಡ ಅವರ ಹೆಸರು ಫೈನಲ್ ಪಟ್ಟಿಯಲ್ಲಿರುವುದಾಗಿ ತಿಳಿದು ಬಂದಿದೆ.
ಅರುಣ್ ಕುಮಾರ್ ಪುತ್ತಿಲ ಅವರಿಗೆ ಅವಕಾಶ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ವರಿಷ್ಠರಿಗೆ ಒತ್ತಡ ಹೇರಿದ್ದಾರೆ. ಮತ್ತೊಂದೆಡೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹರೀಶ್ ಕಂಜಿಪಿಲಿ ಇಲ್ಲವೇ ಮಾಜಿ ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡರಾಗಬಹುದು ಎಂದು ಒಲವು ವ್ಯಕ್ತಪಡಿಸಿದ್ದಾರೆ. ಸಂಘ ಪರಿವಾರದವರು ಕಿಶೋರ್ ಕುಮಾರ್ ಬೊಟ್ಯಾಡಿ ಮತ್ತು ಯತೀಶ್ ಗೌಡ ಆರ‍್ವಾರ ಅವರ ಹೆಸರನ್ನು ಸೂಚಿಸಿದ್ದಾರೆ.
ಗುಜರಾತ್ ಮಾದರಿಯಲ್ಲಿ ಕೆಲವೊಂದು ಹಾಲಿ ಶಾಸಕರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ಮಾಡಿಕೊಡುವ ಚಿಂತನೆ ನಡೆಸಿರುವ ಬಿಜೆಪಿ ಪುತ್ತೂರು, ಸುಳ್ಯ ಸೇರಿದಂತೆ ಜಿಲ್ಲೆಯ ಕೆಲವೊಂದು ಕ್ಷೇತ್ರಗಳಿಗೂ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಿದೆ. ಇದರಲ್ಲಿ ಪುತ್ತೂರು ಕ್ಷೇತ್ರಕ್ಕೆ ಪ್ರಮುಖವಾಗಿ ಹರೀಶ್ ಕಂಜಿಪಿಲಿ, ಅರುಣ್ ಕುಮಾರ್ ಪುತ್ತಿಲ ಮತ್ತು ಆಶಾ ತಿಮ್ಮಪ್ಪ ಗೌಡ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಈ ಆಕಾಂಕ್ಷಿಗಳ ಪರವಾಗಿರುವ ಪಕ್ಷದ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ವರಿಷ್ಠರು ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದು, ಇಂದು ಇಲ್ಲವೇ ನಾಳೆ ಅಭ್ಯರ್ಥಿಗಳ ಘೋಷಣೆಯಾಗುವ ಮೂಲಕ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ ಎಂದು ದೆಹಲಿ ಮೂಲಗಳು ತಿಳಿಸಿವೆ. ಕೊನೆಯ ಕ್ಷಣದಲ್ಲಿ ಮತ್ತೆ ಸಂಜೀವ ಮಠಂದೂರು ಅವರನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.