ಬೆಟ್ಟಂಪಾಡಿ: ಪ್ರಿಯದರ್ಶಿನಿ ವರ್ತುಲದ ಮೂರನೇ ಶೈಕ್ಷಣಿಕ ಕಾರ್ಯಗಾರವು ಏ. 8 ರಂದು ಹನುಮಗಿರಿ ವೈದೇಹಿ ಕಲಾ ಮಂದಿರದಲ್ಲಿ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಸಮಿತಿಯ ಸದಸ್ಯ ಸುಬ್ರಹ್ಮಣ್ಯ ಭಟ್ ಕಾಂಚನ ಕಾರ್ಯಗಾರ ಉದ್ಘಾಟಿಸಿ, ‘ಶಿಕ್ಷಕರು ವಿಶಾಲ ಮನೋಭಾವದಿಂದ ಚಿಂತಿಸಿ ಕರ್ತವ್ಯ ನಿರ್ವಹಿಸಿದಾಗ ಒಳ್ಳೆಯ ವಿದ್ಯಾಸಂಸ್ಥೆಯ ನಿರ್ಮಾಣ ಹಾಗೂ ಭವಿಷ್ಯದಲ್ಲಿ ಉತ್ತಮ ಪ್ರಜೆಗಳು ಸೃಷ್ಟಿಯಾಗಲು ಸಾಧ್ಯ’ ಎಂಬ ಮಾತುಗಳೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.
ಕಾರ್ಯಾಗಾರದ ಎರಡನೇ ಅವಧಿಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಣಾಧಿಕಾರಿ ರಘುರಾಜ ಉಬರಡ್ಕ 2022- 23ನೇ ಶೈಕ್ಷಣಿಕ ವರ್ಷದ ವಾರ್ಷಿಕ ಯೋಜನೆಗಳ ಸಿಂಹಾವಲೋಕನ ಕಾರ್ಯಕ್ರಮವನ್ನು ಹಾಡು- ಅಭಿನಯ ಗೀತೆಯೊಂದಿಗೆ ಆರಂಭಿಸಿದರು. ಎರಡನೇ ಅವಧಿಯಲ್ಲಿ 2023 24ನೇ ಸಾಲಿನ ವಾರ್ಷಿಕ ಯೋಜನೆಯ ಬಗ್ಗೆ ಚರ್ಚಿಸಲಾಯಿತು.
ಸಮಾರೋಪ ಭಾಷಣದಲ್ಲಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ರಾಜೇಶ್ ಎನ್ ಮಾತನಾಡುತ್ತಾ, ‘ಅಭ್ಯುದಯ ಮತ್ತು ನಿಶ್ರೇಯಸ್ಸು ಶಿಕ್ಷಣಕ್ಕೆ ಪ್ರಮುಖ ಆಯಾಮಗಳು ಇವೆರಡನ್ನು ನಾವು ಸರಿಯಾಗಿ ಅರ್ಥೈಸಿಕೊಂಡಲ್ಲಿ ಸಮರ್ಥ ಶಿಕ್ಷಕನಾಗಿ ರೂಪುಗೊಳ್ಳಲು ಸಾಧ್ಯ’ ಎಂದರು. ಕಾರ್ಯಾಗಾರದ ಉಭಯ ಸಭಾ ಕಾರ್ಯಕ್ರಮದಲ್ಲಿ ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರುಗ ಶಾಮಣ್ಣ, ಪಂಚಲಿಂಗೇಶ್ವರ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ನರೇಂದ್ರ ಭಟ್, ಕ್ಲಸ್ಟರ್ ಸಂಯೋಜಕಿ ಸಂಧ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಸಹ ಶಿಕ್ಷಕಿ ಮಮತಾ ಹಾಗೂ ಗಜಾನನ ವಿದ್ಯಾಸಂಸ್ಥೆಯ ಸಹ ಶಿಕ್ಷಕಿ ಚೈತ್ರಲಕ್ಷ್ಮಿ ಅನಿಸಿಕೆ ವ್ಯಕ್ತಪಡಿಸಿದರು. ಗಾಯತ್ರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಭವ್ಯ ವಂದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಗಾರ ಸಂಪನ್ನಗೊಂಡಿತು.