ಪುತ್ತೂರು: 6 ವರ್ಷದ ಹಿಂದೆ ಮಡಿಕೇರಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ವಿಚಾರಣೆ ನಡೆಸಿದ ಪುತ್ತೂರು 5ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಮಡಿಕೇರಿ ಚಾಮುಂಡೇಶ್ವರಿ ನಗರದ ರವಿ ಕೆ ಎಂಬವರು ಕೊಲೆಗೀಡಾದವರು. ಅವರು ಅದೇ ಊರಿನ ಡಾಲು ಯಾನೆ ಡಾಲಿ ಎಂ ಅವರಿಂದ ರೂ. 3.50ಲಕ್ಷ ಸಾಲ ಪಡೆದಿದ್ದರು. ಆದರೆ ಸಾಲ ಹಿಂದಿರುಗಿಸಿಲ್ಲ ಎಂಬ ಕಾರಣಕ್ಕೆ ಡಾಲು ಯಾನೆ ಡಾಲಿ ಎಮ್ ಬಿ, ಚಿಕ್ಕಮಗಳೂರಿನ ಜೀವನ್, ಮಡಿಕೇರಿ ಮಕ್ಕಂದೂರಿನ ಜೀವನ್ ಪ್ರಶಾಂತ್ ಯಾನೆ ಪಾಪು, ಕಾರು ಚಾಲಕ ಮಡಿಕೇರಿ ಓಂಕಾರೇಶ್ವರ ದೇವಸ್ಥಾನ ಬಳಿ ನಿವಾಸಿ ಹರೀಶ್, ಪ್ರಮೋದ್ ಯಾನೆ ಡಿಸ್ಕ್ ಎಂಬವರು ರವಿ ಎಂಬವರನ್ನು ಕೊಲೆ ಮಾಡುವ ಉದ್ದೇಶದಿಂದ ಒಳ ಸಂಚು ನಡೆಸಿ 2017ರ ಮಾ.31 ರಂದು ಸುಳ್ಯದ ಕೆ.ವಿ.ಜಿ ಜಂಕ್ಷನ್‌ನಿಂದ ಆರೊಪಿಗಳು ಅಪಹರಿಸಿ ಮಡಿಕೇರಿಯ ಸ್ಟೂನ್ ಹಿಲ್‌ನ ರಕ್ಷಿತಾರಣ್ಯದ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ ಅಲ್ಲಿ ಹೂತು ಹಾಕಿದ್ದರು.
ಘಟನೆ ಕುರಿತು ರವಿ ನಾಪತ್ತೆಯಾಗಿರುವ ಕುರಿತು ಅವರ ಪತ್ನಿ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು 2017ರ ಎ. 6ರಂದು ಪ್ರಥಮ ಆರೋಪಿ ಡಾಲು ಯಾನೆ ಡಾಲಿ ಎಮ್ ಅವರನ್ನು ಮಡಿಕೇರಿಯಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ ರವಿ ಅವರನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿತ್ತು. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸುಮಾರು 54 ಮಂದಿ ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2020ರ ಮಾ.6ರಂದು ಸಾಕ್ಷಿಗಳ ವಿಚಾರಣೆ ನಡೆಸಿತು. ಇದೀಗ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ಆರೋಪಿಗಳನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ. ವಿಚಾರಣೆ ನಡೆಯುವ ಕೊನೆ ತನಕವೂ ಪ್ರಥಮ ಆರೋಪಿ ಡಾಲು ಯಾನೆ ಡಾಲಿ ಅವರು ನ್ಯಾಯಾಂಗ ಬಂಧನಲ್ಲಿದ್ದರು. ಆರೋಪಿಗಳ ಪೈಕಿ 1, 2, 3, 5ನೇ ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡ್, ರಾಕೇಶ್ ಮಸ್ಕರೇನಸ್, ನಿಶಾ, ಮೋಹಿನಿ ವಾದಿಸಿದರು. 4ನೇ ಆರೋಪಿ ಪರ ನರಸಿಂಹಪ್ರಸಾದ್, ಜಯಾನಂದ ಕೆ, ಕೀರ್ತನ್ ವಾದಿಸಿದರು.