ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಾಗಿ ಸರಕಾರ ಮತ್ತು ರಾಜಕೀಯ ಪಕ್ಷಗಳಿಗೆ ಸುಮಾರು 15 ಸಾವಿರ ಕೋಟಿ ಖರ್ಚಾಗುತ್ತಿದೆ.
ಆದರೆ ಪ್ರಜಾತಂತ್ರ ವ್ಯವಸ್ಥೆ ಜಾತಿ ರಾಜಕೀಯದಿಂದ ಬಳಲುತ್ತಿದೆ. ಟಿಕೇಟ್ ಪಡೆಯುವ ಸಾಧ್ಯತೆ ಪ್ರಾಮಾಣಿಕತೆ,ಪಾರದರ್ಶಕತೆ ಹಾಗೂ ಸಮರ್ಪಣಾಭಾವದ ಹೊರತಾಗಿ ಜಾತಿ ನೆಲೆಯಲ್ಲಿ ಸಾಕಾರಗೊಳ್ಳುತ್ತಿದೆ.ಹಾಗಾಗಿ ಈ ದೇಶದ ಮಾಹಾ ಜನತೆಗಾಗಿ ಒಂದು ಸಲಹೆ.
ಪ್ರತೀ ಜಾತಿಗೊಂದು ಮಠ-ಸಂಘಟನೆಗಳಿರುವ ಮತ್ತು ಟಿಕೇಟ್ ಗಾಗಿ ಹೋರಾಡುವ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕೇವಲ ಅಣಕವಾಗಿ ಗೋಚರಿಸುತ್ತಿದೆ. ಹಾಗಾಗಿ ಇಂತಹ ದುರ್ಬಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಿತ್ತು ಹಾಕಿ ಸಂಘಟನೆಗಳ ಮತ್ತು ಜಾತೀಯ ಬಹು ಸಂಖ್ಯೆಯ ಅಧಾರದಲ್ಲಿ ಸಂಘಟನೆಯ ಮುಖಂಡರುಗಳು ಮತ್ತು ಆಯಾ ಜಾತಿ ಪಂಥದ ಮಠಾಧಿಪತಿಗಳು ಸೇರಿಕೊಂಡು ಅವರವರ ಜಾತಿಯಿಂದ ನಮ್ಮನ್ನಾಳುವ ರಾಜಕಾರಿಣಿಗಳನ್ನು ಆರಿಸಿ ಕಳುಹಿಸಿದರೆ ಧಾರಾಳ ಸಾಕು. ಹಾಗಾದಾಗ ಯಾವುದೇ ಚುನಾವಣೆ ಬೇಡ. ಕಡಿಮೆ ಸಂಖ್ಯೆಯ ಜಾತಿಯವರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಮತ್ತು ಅವರ ಅಸ್ತಿತ್ವವನ್ನು ಪರಿಗಣಿಸುವ ಅಗತ್ಯವೂ ಇರುವುದಿಲ್ಲ. ಅವರು ಸಾಧ್ಯವಾದರೆ ಬದುಕಿಕೊಳ್ಳಲಿ. ಅಳಿದರೂ ‘ರಾಜಕೀಯ’ಕ್ಕೇನೂ ಹಾನಿಯಿಲ್ಲ.
ಡಾರ್ವಿನ್ ನ ವಿಕಾಸವಾದ “Survival of the Fittest” ಎಂಬಂತೆ ಪ್ರಬಲ ಜಾತಿಯವರು ನಮ್ಮ ದೇಶವನ್ನಾಳಿದರೆ ಸಾಕು. ರಾಜಕಾರಿಣಿಯಾಗುವವನಿಗೆ ಜಾತಿ ಪ್ರಭಾವಲಳಿ ಇದ್ದರೆ ಸಾಕು, ಅವನ ಸಾಮರ್ಥ್ಯದ ಬಗ್ಗೆ ಯಾವುದೇ ಮಾನದಂಡದ ಅವಶ್ಯಕತೆ ಇರುವುದಿಲ್ಲ. ಹೇಗೂ ಅಲ್ಪಸಂಖ್ಯೆಯ ಜಾತಿ ಬಲ ಉಳ್ಳವರು ಪ್ರತಿಭೆಯಿದ್ದರೂ ಅವಕಾಶ ವಂಚಿತರಾಗುತ್ತಿರುವುದರಿಂದ ಶಾಶ್ವತವಾಗಿ ‘ನಿಮಗೆ ಇಲ್ಲ, ಅತ್ಯಧಿಕ ಮಂದಿ ಇರುವ ಜಾತಿಯವರೇ ನಾಯಕರು’ ಎಂದುಬಿಟ್ಟರೆ ಗೊಂದಲ ಇರುವುದಿಲ್ಲ. ಅಂತೆಯೇ ಜಾತಿಯ ಹಿನ್ನೆಯಲ್ಲಿ ಆಯ್ಕೆ ಆಧಾರಿತ ರಾಜಕೀಯ ವ್ಯವಸ್ಥೆ ಜಾರಿಗೊಂಡಾಗ ಅನಾವಶ್ಯಕ ಗೊಂದಲಗಳು ಮತ್ತು ಬಾರೀ ಪ್ರಮಾಣದಲ್ಲಿ ಖರ್ಚನ್ನು ಉಳಿಸಬಹುದಲ್ಲವೇ…?
ದೇಶಕ್ಕಿಂತ, ಸಮಾಜದ ಹಿತಕ್ಕಿಂತ ಜಾತಿಯೇ ಮುಖ್ಯ. ನಮ್ಮ ನಮ್ಮ ಜಾತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಬೇರೆಜಾತಿಯವರು ಬೇಕಾದರೆ ಸಾಯಲಿ, ಹೆಚ್ಚು ಜನ ಇರುವ ಜಾತಿಯವರಿಗೇ ಅಧಿಕಾರ ಕೊಡುವುದು ಧರ್ಮ. ಆದ್ದರಿಂದ ಅಧಿಕ ಜನ ಇರುವ ಜಾತಿ ನಾಯಕತ್ವ ವಹಿಸುವುದು ಎಲ್ಲಾ ರೀತಿಯಲ್ಲೂ ಸರಿ. ಈ ನೆಲೆಯಲ್ಲಿ ಮಠಾಧಿಪತಿಗಳು ಮತ್ತು ಸಂಘಟನೆಯ ನಾಯಕರುಗಳು ತಮ್ಮ ತಮ್ಮ ಜಾತಿಯ ರಾಜಕಾರಿಣಿಗಳನ್ನು ಆರಿಸಲಿ.
ಬನ್ನಿ ಚುನಾವಣಾ ಪ್ರಕ್ರಿಯೆಯಿಂದ ಹೊರಬರೋಣ, ಅತ್ಯಧಿಕ ಸಂಖ್ಯೆಯಿರುವ ಜಾತಿಯನ್ನು ಮೆರೆಸೋಣ. ಜಾತಿಗೆ ಜಯವಾಗಲಿ
ಸುಬ್ರಹ್ಮಣ್ಯ ನಟ್ಟೋಜ
ಕಾರ್ಯದರ್ಶಿಗಳು
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು