ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರ ಚುನಾವಣಾ ಕಛೇರಿ ದರ್ಬೆಯ ಬೈಪಾಸ್ ರಸ್ತೆಯಲ್ಲಿರುವ ಆರ್.ಇ.ಬಿ. ಎನ್ಕ್ಲೇವ್ ನಲ್ಲಿ ಎ.17ರಂದು ಬೆಳಿಗ್ಗೆ 9.30ಕ್ಕೆ ಶುಭಾರಂಭಗೊಂಡಿತು.ವೈದಿಕ ವಿಧಾನದೊಂದಿಗೆ ಕಾರ್ಯಾಲಯ ಉದ್ಘಾಟಿಸಲಾಯಿತು
ಅರ್ಚಕ ಹರಿಪ್ರಸಾದ್ ಬನಾರಿಯವರ ನೇತೃತ್ವದಲ್ಲಿ ಗಣಪತಿ ಹವನ, ಪೂಜಾ ವಿಧಿವಿಧಾನಗಳು ನೆರವೇರಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ, ಹಿರಿಯರಾದ ವಲೇರಿಯನ್ ಡಯಾಸ್ ಮೊದಲಾದವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕರ್ತರಿಗೆ ನೋವಾಗದಂತೆ ಕಾರ್ಯನಿರ್ವಹಿಸಿ- ಶಕುಂತಳಾ ಶೆಟ್ಟಿ ಸಲಹೆ;
ಕಚೇರಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ, ರಥೋತ್ಸವದ ಸುಸಂದರ್ಭದಲ್ಲಿಯೇ ಅಶೋಕ್ ರೈಯವರ ಪಕ್ಷದ ಕಚೇರಿಯು ಉದ್ಘಾಟನೆಗೊಳ್ಳುತ್ತಿದ್ದು ಪುತ್ತೂರಿನಲ್ಲಿ ಹಾಗೂ ರಾಜ್ಯದಲ್ಲಿ ಪಕ್ಷದ ತೇರು ಎಳೆಯುವಂತಾಗಲಿ ಎಂದರು.
ಪುತ್ತೂರಿನಲ್ಲಿ 14 ಮಂದಿ ಆಕಾಂಕ್ಷಿಯಾಗಿದ್ದರು. ಅವರವರ ಅಭಿಮಾನದಲ್ಲಿ ಹಲವು ಮಂದಿಯಿದ್ದರು. ಟಿಕೆಟ್ ವಿಚಾರದಲ್ಲಿ ಯಾವುದೇ ಮನಸ್ಸಿಗೆ ನೋವಿಲ್ಲದೆ ಕೆಲಸಮಾಡಬೇಕು. ಫೋಸ್ ಕೊಡುವವರು ಯಾರೂ ಕೆಲಸ ಮಾಡುವುದಿಲ್ಲ. ಕಾರ್ಯಕರ್ತರು ಮಾತ್ರ ಕೆಲಸ ಮಾಡುವುದು. ನಾನು ಪಕ್ಷಕ್ಕೆ ಬರುವಾಗಲೂ ಇದೇ ಸಮಸ್ಯೆ ಇತ್ತು. ಮುಸ್ಲಿಂ ವಿರೋಧಿ ಎಂದು ಹಣೆಪಟ್ಟಿ ಕಟ್ಟಿದ್ದರು. ಅದೂ ಮಸ್ಲಿಮರಲ್ಲ. ಹಿಂದುಗಳೇ. ನಿಮಗೆ ಟಿಕೆಟ್ ದೊರೆತಿರುವುದು ಸಂತೋಷ ತಂದಿದ್ದು ಸತ್ಯ ದರ್ಶನವಾಗಿದೆ. ಯಾರನ್ನೂ ನಂಬಬೇಡಿ. ಪ್ರಯೋಜವಿದ್ದಾಗ ಮಾತ್ರ ನಿಮ್ಮ ಬಳಿ ಬರುತ್ತಾರೆ. ಕಾರ್ಯಕರ್ತರೇ ಜೀವಾಳ. ಹೀಗಾಗಿ ಕಾರ್ಯಕರ್ತರಿಗೆ ಬೆಲೆ ಕೊಡಬೇಕು. ಕಾರ್ಯಕರ್ತರಿಗೆ ನೋವಾಗದಂತೆ ನಡೆದರೆ ಈ ಭಾರಿ ಜಯಗಳಿಸುವುದು ಖಂಡಿತ. ಅಭಿಮಾನದ ಕಾರ್ಯಕರ್ತರಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸದಲ್ಲಿ ಪಕ್ಷ ಗೆದ್ದ ಬರಬೇಕು ಎಂದು ಹೇಳಿದರು.
ಭ್ರಷ್ಟಾಚಾರ ರಹಿತ ಆಡಳಿತವೇ ನನ್ನ ಗುರಿ-ಅಶೋಕ್ ಕುಮಾರ್ ರೈ:
ರಾಜ್ಯದಲ್ಲಿರುವ ಬಿಜೆಪಿ ಸರಕಾರ ಭ್ರಷ್ಠಾಚಾರದಿಂದ ತುಂಬಿ ತುಳುಕಿದೆ. ಬಿಜೆಪಿಯ ಎಲ್ಲಾ ನಾಯಕರು ಪಕ್ಷ ತೊರೆದು ಕಾಂಗ್ರೆಸ್‌ನತ್ತ ಬರುತ್ತಿದ್ದಾರೆ. ಅಕ್ರಮ ಸಕ್ರಮದಲ್ಲಿ ಒಂದು ಎಕರೆಗೆ 3 ಲಕ್ಷ ರೂಪಾಯಿ ಹಾಗೂ 94ಸಿಯಲ್ಲಿ 20,೦೦೦ ನೀಡಬೇಕಾದ ಪರಿಸ್ಥಿತಿಯಿದೆ. ಬಿಜೆಪಿ ಸರಕಾರದಲ್ಲಿ ಈಗಿರುವಷ್ಟು ಭ್ರಷ್ಟಾಚಾರ ಈ ಹಿಂದೆ ಯಾರಿಂದಲೂ ನಡೆದಿಲ್ಲ. ಅಕ್ರಮ-ಸಕ್ರಮದಲ್ಲಿ ನಾನು ಸಲ್ಲಿಸಿದ ಅರ್ಜಿ 2 ಲಕ್ಷ ರೂಪಾಯಿ ನೀಡುವಂತೆ ತಿಳಿಸಿದ್ದಾರೆ. ನಾನು ಹಣ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ. ಪಕ್ಷಕ್ಕಾಗಿ ದುಡಿಯುತ್ತೇನೆ. ಬಡವರ , ದೀನ ದಲಿತರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಬಡವರಿಗೆ ದೊರೆಯಬೇಕಾದ 94ಸಿಯನ್ನು ಮನೆ ಮನೆ ಹೋಗಿ ನ್ಯಾಯ ಒದಗಿಸುತ್ತೇನೆ. ಅದರಲ್ಲಿ ಯಾವುದೇ ರಾಜಿಯಿಲ್ಲ. ಯಾವುದೇ ಪಕ್ಷ ಬೇಧವಿಲ್ಲದೆ ಎಲ್ಲರಿಗೂ ಕಾನೂನು ಬದ್ದವಾಗಿ ದೊರೆಯಬೇಕಾದ ಸವಲತ್ತುಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಪ್ರಯತ್ನಿಸುತ್ತೇನೆ. ಭ್ರಷ್ಠಾಚಾರ ರಹಿತ ಆಡಳಿತ ನೀಡುವುದೇ ನನ್ನ ಗುರಿಯಾಗಿದೆ ಎಂದ ಅವರು, ಪುತ್ತೂರಿನಲ್ಲಿ 14 ಮಂದಿ ಆಕಾಂಕ್ಷಿಗಳಿದ್ದರೂ ನನಗೆ ಅವಕಾಶ ದೊರೆತಿದೆ. ಬಹಳಷ್ಟು ಜವಾಬ್ದಾರಿ ನನ್ನ ತಲೆ ಮೇಲಿದ್ದು ನನ್ನ ಜವಾಬ್ದಾರಿ ಅರಿತು ಕೆಲಸ ಮಾಡುತ್ತೇನೆ ಎಂದರು.
ಎ.19ರಂದು ನಾಮಪತ್ರ ಸಲ್ಲಿಕೆ :
ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎ.19ರಂದು ನಾಮಪತ್ರ ಸಲ್ಲಿಸಲಾಗುವುದು. ಬೆಳಿಗ್ಗೆ 9.30ಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಾಗುವುದು. ಇದಕ್ಕೆ ಪೂರಕವಾಗಿ ಮೇ.18ರಂದು ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಳ್ಳಲಾಗುವುದು. ಮೆರವಣಿಗೆಯಲ್ಲಿ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಸೇರಿದಂತೆ 25,೦೦೦ ಮಂದಿ ಭಾಗವಹಿಸುವ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಲಾಗುವುದು , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈಯವರ ನೇತೃತ್ವದಲ್ಲಿ ಪಕ್ಷದಲ್ಲಿ ಉತ್ತಮ ಸಂಘಟನೆಯಾಗಿದೆ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಪಕ್ಷದ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ, ಪಕ್ಷದ ಕಾರ್ಯಕರ್ತರು ಪ್ರತಿಯೊಬ್ಬರೂ ನಾನೇ ಅಭ್ಯರ್ಥಿ ಎಂಬ ಭಾವನೆಯೊಂದಿಗೆ ಚುನಾವಣಾ ಹೋರಾಟದಲ್ಲಿ ಭಾಗಿಗಳಾಗುವ ಮೂಲಕ ಪಕ್ಷದ ಗೆಲುವಿಗೆ ಕಾರಣರಾಗಬೇಕು. ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಮಾತ್ರವಲ್ಲದೆ ರಾಜ್ಯದಲ್ಲಿಯೂ ಬದಲಾವಣೆಯನ್ನು ತರುವಂತಾಗಬೇಕು. ಕಾಂಗ್ರೆಸ್ ಪಕ್ಷದ ಶಾಸಕರ ಮೂಲಕ ಪುತ್ತೂರಿನಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳಾಗಬೇಕು. ವಿಜಯದ ಸಂಕೇತ ಕಚೇರಿಯಿಂದ ಪ್ರಾರಂಭವಾಗಿದ್ದು ಮೆ.13ರ ಫಲಿತಾಂಶವು ಇದೇ ಕಚೇರಿಯಲ್ಲಿ ನಡೆಯಬೇಕು ಎಂದು ಹೇಳಿದರು.
ಜಿ.ಪಂ ಮಾಜಿ ಸದಸ್ಯ ಎಂ.ಎ ಮಹಮ್ಮದ್ ಮಾತನಾಡಿ, ಜಿ.ಪಂನ ಸಾಮಾನ್ಯ ಸಭೆಯಲ್ಲಿ ಸರಿಯಾಗಿ ಮಾತನಾಡಲು ಸಾಮರ್ಥ್ಯ ಇಲ್ಲದ ಆಶಾ ತಿಮ್ಮಪ್ಪ ಗೌಡರವರನ್ನು ಅಭ್ಯರ್ಥಿಯನ್ನು ಬಿಜೆಪಿಯವರು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮೂಲಕ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಲಿಸಿದ್ದಾರೆ. ಅಂತಹ ಅಭ್ಯರ್ಥಿಯ ಮೂಲಕ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಬಿಜೆಪಿಯಲ್ಲಿ ಬಿನ್ನಾಭಿಪ್ರಾಯಗಳಿದ್ದು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಯಂತ ಘಟಾನುಘಟಿ ನಾಯಕರು ಕಾಂಗ್ರೆಸ್‌ಗೆ ಬರುತ್ತಿದ್ದು ಬಿಜೆಪಿ ಎತ್ತ ಸಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಪರವಾಗಿ ಪ್ರತಿಯೊಬ್ಬರೂ ಆತ್ಮ ವಿಶ್ವಾಸದಿಂದ ಕೆಲಸ ಮಾಡಬೇಕು. ಕಾಂಗ್ರೆಸ್ ಮುಕ್ತ ಮಾಡಲು ಹೊರಟ ಬಿಜೆಪಿಯನ್ನೇ ಕರ್ನಾಟಕದಲ್ಲಿ ಬಿಜೆಪಿ ಮುಕ್ತ ಮಾಡಬೇಕು. ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿಯೂ ಬಿಜೆಪಿ ಮುಕ್ತ ಪುತ್ತೂರು ನಿರ್ಮಾಣ ಮಾಡಬೇಕು ಎಂದರು.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.