ರೈತ,ಅಲ್ಪಸಂಖ್ಯಾತರ ವಿರೋಧಿ ಕರಾಳ ಕಾನೂನು ಹಿಂದಕ್ಕೆ ಪಡೆಯಲು ಒತ್ತಾಯ-ಸಿಎಂ ಭೇಟಿಯಾದ ದ.ಕ. ಜಿಲ್ಲಾ ಕಾಂಗ್ರೆಸ್ ನಿಯೋಗ-ಮುಂದಿನ ಅಧಿವೇಶನದಲ್ಲಿ ತೀರ್ಮಾನ ಕೈಗೊಳ್ಳುವ ಭರವಸೆ

0

ಪುತ್ತೂರು: ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ರೈತ ಹಾಗೂ ಅಲ್ಪಸಂಖ್ಯಾತರ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಿಯೋಗ ನ.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.

ಕಳೆದ ಬಿಜೆಪಿ ಸರಕಾರವು, ಅತಿ ವಿವಾದಿತ ಹಾಗೂ ಕೋಮು ಪ್ರಚೋದಿತ, ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆ 2021 ಹಾಗೂ ಕರ್ನಾಟಕ ಧರ್ಮ ಸ್ವಾತಂತ್ರ ಸಂರಕ್ಷಣಾ ಕಾಯ್ದೆ 2021ನ್ನು ಜಾರಿಗೆ ತಂದಿರುತ್ತದೆ. ಈ ಕರಾಳ ಸಂವಿಧಾನ ವಿರೋಧಿ ಕಾನೂನುಗಳನ್ನು ಬಿಜೆಪಿ ಸರಕಾರ ಜಾರಿಗೆ ತಂದಾಗ, ರಾಜ್ಯದ ಬಹುಪಾಲು ಜನರು ಇದನ್ನು ತೀವ್ರವಾಗಿ ವಿರೋಧಿಸಿದ್ದರು. 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವೂ ಇಂತಹ ಕರಾಳ ಹಾಗೂ ಜನವಿರೋಧಿ ಕಾನೂನುಗಳನ್ನು ಅಧಿಕಾರಕ್ಕೆ ಬಂದ ಒಂದು ವರ್ಷದ ಒಳಗೆ ಹಿಂದಕ್ಕೆ ಪಡೆಯುವ ಬಗ್ಗೆ ಆಶ್ವಾಸನೆಯನ್ನು ಸಹ ನೀಡಿತ್ತು. ಪ್ರಸ್ತುತ ಈ ಕಾನೂನುಗಳ ಅನುಷ್ಠಾನದಿಂದ, ಅದರಲ್ಲೂ ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆ ಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಒಂದು ರೀತಿಯ ಭಯದ ವಾತಾವರಣ ಉಂಟಾಗಿದೆ. ಗೋ ಸಾಗಾಣಿಕದಾರರ ಮೇಲೆ ಪೊಲೀಸರು ಶೂಟೌಟ್ ಮಾಡುವುದು, ಅವರ ಮನೆ ಮುಗ್ಗಟ್ಟುಗಳನ್ನು ಜಪ್ತಿ ಮಾಡುವುದು ಮುಂತಾದ ಕಳವಳಕಾರಿ ಘಟನೆಗಳು ನಡೆದಿರುತ್ತದೆ. ಈ ಕರಾಳ ಕಾನೂನಿಂದಾಗಿ ರೈತರು ತಾವು ಬೆಳೆಸಿದ ಜಾನುವಾರಗಳನ್ನು ಮಾರಾಟ ಮಾಡಲಾಗದ ವಾತಾವರಣ ಸೃಷ್ಟಿಯಾಗಿದೆ. ಹೈನುಗಾರಿಕೆ ಮಾಡಿಕೊಂಡು ಬರುತ್ತಿರುವ ರೈತಾಪಿ ಜನರು ಇದರಿಂದ ಕಂಗಾಲಾಗಿದ್ದಾರೆ.

ಅದೇ ರೀತಿ, ಕರ್ನಾಟಕ ಧರ್ಮ ಸಂರಕ್ಷಣಾ ಕಾಯ್ದೆಯ ನೆಪವನ್ನು ಹೊರಿಸಿ, ಕೋಮುವಾದಿಗಳು ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯವನ್ನು ನಡೆಸುತ್ತಿದ್ದಾರೆ. ಸಂವಿಧಾನ ಬದ್ಧವಾಗಿ ಪ್ರತಿಯೊಬ್ಬರಿಗೂ ಅವರಿಗೆ ಬೇಕಾದ ಧರ್ಮವನ್ನು ಯಾವುದೇ ಒತ್ತಡವಿಲ್ಲದೆ, ಒಪ್ಪಿ, ಆ ಪ್ರಕಾರ ನಡೆದುಕೊಂಡು ಹೋಗಲು ಅವಕಾಶಗಳು ಇರುವಾಗ, ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನು ಚಾಲ್ತಿಯಲ್ಲಿರುವುದು ಸಂವಿಧಾನ ವಿರೋಧಿಯಾಗಿದೆ. ಈ ಕಾನೂನು, ಸಂಘ ಪರಿವಾರದ ಕೋಮು ಅಜೆಂಡಾದಲ್ಲಿ ಒಂದಾಗಿದೆ. ಇದರಿಂದ ಸಂವಿಧಾನದ ಮೂಲ ಆಶಯಕ್ಕೆ ಕೊಡಲಿ ಏಟು ನೀಡಿದಂತಾಗಿದೆ ಎಂಬುದನ್ನು ಮನವಿ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಕರಾಳ ಕಾನೂನುಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.

ನಿಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿʼಸೋಜಾ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಜೆ ಆರ್ ಲೋಬೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್ ಪೂಜಾರಿ, ಇನಾಯತ್ ಅಲಿ ಮೂಲ್ಕಿ, ರಕ್ಷಿತ್ ಶಿವರಾಂ, ಎಂ ಎಸ್ ಮೊಹಮ್ಮದ್, ಕೆಪಿಸಿಸಿ ಸಂಯೋಜಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ದಕ್ಷಿಣ ಕನ್ನಡ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ, ಮುಖಂಡ ಮಾಜಿ ಮೇಯರ್ ಅಶ್ರಫ್, ಅಶ್ರಫ್‌ ಬದ್ರಿಯಾ,ವಿಶ್ವಾಸ್‌ ದಾಸ್‌, ಅಲ್ವಿನ್ ಪ್ರಕಾಶ್, ಶಾಲೆಟ್ ಪಿಂಟೋ, ಚಾರ್ಮಾಡಿ ಹಸನಬ್ಬ, ಜಲೀಲ್ ಕೃಷ್ಣಾಪುರ, ಹೈದರಾಲಿ, ಹಬೀಬುಲ್ಲ ಕಣ್ಣೂರ್, ಸಮದ್ ಸೋಂಪಾಡಿ, ಮುಸ್ತಫಾ ಸುಳ್ಯ, ಶಂಸುದ್ದೀನ್ ಸುಳ್ಯ, ಟಿ.ಹೆಚ್. ಮೊೖದೀನ್, ರಫೀಕ್ ಕಣ್ಣೂರ್, ಅಶ್ರಫ್ ಬಜಾಲ್, ವಿಕ್ಕಿ ಸಿಂಗ್, ಶಬೀರ್ ಸಿದ್ದಕಟ್ಟೆ,ಕರೀಮ್ ಗೇರು ಕಟ್ಟೆ, ಇಬ್ರಾಹಿಂ ಕಾಜೂರ್ ಮತ್ತು ಸಿದ್ಧಿಕ್ ಕಾಜೂರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here