ದರ್ಬೆಯಿಂದ ಬೃಹತ್ ಪಾದಯಾತ್ರೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು
ಪುತ್ತೂರು: ಹಿಂದುತ್ವದ ಹೆಸರಿನಲ್ಲಿ ಸ್ವಾಭಿಮಾನಿ ಸ್ವತಂತ್ರ ಅಭ್ಯರ್ಥಿಯಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಏ.17ರಂದು ಬೆಳಿಗ್ಗೆ ದರ್ಬೆಯಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರೊಂದಿಗೆ ಪಾದಯಾತ್ರೆಯ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮೊದಲು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ದರ್ಬೆ ವೃತ್ತದಲ್ಲಿರುವ ಶ್ರೀ ಮಹಾಲಿಂಗೇಶ್ವರ ಕಟ್ಟೆಯಲ್ಲಿ ಪುಷ್ಪಾರ್ಚನೆ ಮಾಡಿದರು. ಕೊನೆಗೆ ತಾಲೂಕು ಆಡಳಿತ ಸೌಧದ ಎದುರಿನ ಧ್ವಜಸ್ತಂಭಕ್ಕೂ ಗೌರವ ಸಲ್ಲಿಸಿದರು.ದರ್ಬೆಯಿಂದ ಹೊರಟ ಮೆರವಣಿಗೆ ತಾಲೂಕು ಆಡಳಿತ ಸೌಧದಲ್ಲಿ ಸಮಾವೇಶಗೊಂಡಿತು.
ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಪುತ್ತಿಲ ಅವರ ಸಹಸ್ರಾರು ಅಭಿಮಾನಿಗಳು ಮೆರವಣಿಗೆಯಲ್ಲಿ ಸಾಗುತ್ತಾ ಪುತ್ತಿಲ ಅವರಿಗೆ ಜೈಕಾರದ ಘೋಷಣೆಗಳನ್ನು ಕೂಗಿ ಬೆಂಬಲ ವ್ಯಕ್ತಪಡಿಸಿದರು. ತಾಲೂಕು ಆಡಳಿತ ಸೌಧದ ತನಕ ಮೆರವಣಿಗೆಯಲ್ಲಿ ಸಾಗಿದ ಅರುಣ್ ಕುಮಾರ್ ಪುತ್ತಿಲ ಅವರು ತಾಲೂಕು ಆಡಳಿತ ಸೌಧದಲ್ಲಿ ಚುನಾವಣಾಧಿಕಾರಿ ಗಿರೀಶ್ ನಂದನ್‌ರವರಿಗೆ ನಾಮಪತ್ರ ಸಲ್ಲಿಸಿದರು. ಪ್ರತ್ಯೇಕವಾಗಿ ಮೂರು ಸೆಟ್ ನಾಮಪತ್ರಗಳನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಸಂದರ್ಭ ಪ್ರಸನ್ನ ಕುಮಾರ್ ಮಾರ್ತ ಇಳಂತಾಜೆ, ವಿಜೇತ್, ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪ, ಕೆದಂಬಾಡಿ ಗ್ರಾ.ಪಂ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ ಜೊತೆಗಿದ್ದರು.
ಭಾಸ್ಕರ್ ಆಚಾರ್ಯ ಹಿಂದಾರು, ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿ, ಸುಜಯ ತಂತ್ರಿ, ಗುರು ತಂತ್ರಿ, ಬ್ರಹ್ಮವಾಹಕ ರಾಧಾಕೃಷ್ಣ ಪುತ್ತೂರಾಯ, ಸುಖಾನಂದ ಶೆಟ್ಟಿಯವರ ಸಹೋದರ ಸಂತೋಷ್ ಶೆಟ್ಟಿ, ಶ್ರೀಕೃಷ್ಣ ಉಪಾಧ್ಯಾಯ, ಅರುಣ್ ಕುಮಾರ್ ಪುತ್ತಿಲ ಅವರ ಪತ್ನಿ ಭಾನುಮತಿ ಸಹಿತ ಹಲವಾರು ಮಂದಿ ದರ್ಬೆ ಶ್ರೀ ಮಹಾಲಿಂಗೇಶ್ವರ ಕಟ್ಟೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಮಾಲಾರ್ಪಣೆ ಮಾಡಿ ಶುಭಕೋರಿದರು. ಮೆರವಣಿಗೆಯು ದರ್ಬೆ ವೃತ್ತದಿಂದ ಹೊರಟು ಮುಖ್ಯರಸ್ತೆಯಲ್ಲಿ ಸಾಗಿ ಬಸ್‌ನಿಲ್ದಾಣದ ಬಳಿಯಿಂದಾಗಿ ತಾಲೂಕು ಆಡಳಿತ ಸೌಧದ ತನಕ ನಡೆಯಿತು.
ಮೆರವಣಿಗೆಯಲ್ಲಿ ಗಮನ ಸೆಳೆದ ಕೇಸರಿ ಶಲ್ಯ: ಅರುಣ್ ಕುಮಾರ್ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಹಿಂದಿನ ದಿನವೇ ಸಾಮಾಜಿಕ ಜಾಲತಾಣದಲ್ಲಿ ಸೂಚನೆ ನೀಡಿದಂತೆ ಮೆರವಣಿಗೆಗೆ ಆಗಮಿಸಿದ್ದ ಹೆಚ್ಚಿನವರು ಕೇಸರಿ ಶಲ್ಯವನ್ನು ತಂದಿದ್ದರು. ಶಲ್ಯ ಇಲ್ಲದವರಿಗೆ ದರ್ಬೆಯಲ್ಲೇ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಪರಿಣಾಮ ಮೆರವಣಿಗೆಯುದ್ದಕ್ಕೂ ಕೇಸರಿ ಶಲ್ಯವೇ ಗಮನ ಸೆಳೆಯುತ್ತಿತ್ತು.
ಮೊಳಗಿದ ಜೈಕಾರ, ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಘೋಷಣೆ: ನಾಮಪತ್ರ ಸಲ್ಲಿಕೆಗೆ ತೆರಳಲು ದರ್ಬೆಯಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರು ಜೈಕಾರ ಹಾಕಿದರು. ದಾರಿಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ ಸಹಿತ ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತು ಹಂತಕರಿಂದ ಹತ್ಯೆಯಾಗಿದ್ದ ಕಾರ್ತಿಕ್ ಮೇರ್ಲ, ಪ್ರವೀಣ್ ನೆಟ್ಟಾರು ಅವರ ಹೆಸರನ್ನೂ ಉಲ್ಲೇಖಿಸುತ್ತಾ ಘೋಷಣೆ ಮೊಳಗಿಸಲಾಗುತ್ತಿತ್ತು. ‘ಪುತ್ತಿಲ ಗೆದ್ದರೆ ಹಿಂದುತ್ವದ ಗೆಲುವು’ ಎಂದು ಉದ್ಘೋಷಕರು ಘೋಷಣೆ ಹಾಕಿದರು.
ಕೇಸರಿ ಶಾಲನ್ನು ಶಲ್ಯವನ್ನು ತಿರುಗಿಸಿ ಸ್ವಾಗತಿಸಿದ ಬೆಂಬಲಿಗರು: ದರ್ಬೆಯಲ್ಲಿ ಮೆರವಣಿಗೆಗೆ ಸಿದ್ದತೆ ನಡೆಯುತ್ತಿರುವ ಸಂದರ್ಭ ಅರುಣ್ ಕುಮಾರ್ ಪುತ್ತಿಲ ಅವರು ಅಲ್ಲಿಗೆ ಆಗಮಿಸಿದ ತಕ್ಷಣ ಮೆರವಣಿಗೆಯಲ್ಲಿದ್ದವರು ತಮ್ಮಲ್ಲಿದ್ದ ಕೇಸರಿ ಶಲ್ಯವನ್ನು ಮೇಲೆತ್ತಿ ತಿರುಗಿಸುವ ಮೂಲಕ ಪುತ್ತಿಲರನ್ನು ಸ್ವಾಗತಿಸಿದರು.
ನಾಸಿಕ್ ಬ್ಯಾಂಡ್ ಸದ್ದು: ಮೆರವಣಿಗೆಯ ಉದ್ದಕ್ಕೂ ಮೂರು ನಾಸಿಕ್ ಬ್ಯಾಂಡ್ ತಂಡಗಳು ಪ್ರದರ್ಶನ ನೀಡಿದ್ದು ಬೆಂಕಿ ಉಗುಳುವ ನೃತ್ಯದ ಮೂಲಕ ನಾಸಿಕ್ ಬ್ಯಾಂಕ್ ಸದ್ದು ಎಲ್ಲರ ಗಮನ ಸೆಳೆಯಿತು.
ರೈತ ಸಂಘದಿಂದ ಬೆಂಬಲ: ರಾಜ್ಯ ರೈತ ಸಂಘದ ಶ್ರೀಧರ ಶೆಟ್ಟಿ ಪುಣಚ ಅವರು ಅರುಣ್ ಕುಮಾರ್ ಪುತ್ತಿಲ ಅವರು ನಾಮಪತ್ರ ಸಲ್ಲಿಸಿ ಹೊರ ಬರುತ್ತಿದ್ದಂತೆ, ‘ಕರ್ನಾಟಕ ರಾಜ್ಯ ರೈತ ಸಂಘದಿಂದ ನಿಮಗೆ ಬೆಂಬಲ ನೀಡುತ್ತೇವೆ.ಆದರೆ ವಿಟ್ಲ ತಾಲೂಕು ರಚನೆ ಮತ್ತು ಎಸ್ಪಿ ಕಚೇರಿಯನ್ನು ಪುತ್ತೂರುಗೆ ಸ್ಥಳಾಂತರಿಸುವ ಭರವಸೆ ನೀಡಬೇಕು’ ಎಂದು ಮನವಿ ಮಾಡಿದರು. ಉತ್ತರಿಸಿದ ಅರುಣ್ ಕುಮಾರ್ ಪುತ್ತಿಲ ಅವರು, ಈಗಾಗಲೇ ನಮ್ಮ ಪ್ರಣಾಳಿಕೆಯಲ್ಲಿ ಎಸ್ಪಿ ಕಚೇರಿಯ ಸ್ಥಳಾಂತರ ಕುರಿತು ಚಿಂತನೆ ಮಾಡಲಾಗಿದೆ.ಮುಂದೆ ವಿಟ್ಲ ತಾಲೂಕು ರಚನೆಯನ್ನು ಚಿಂತನೆ ಮಾಡಲಾಗುವುದು ಎಂದರು.
ಕೇಸರಿ ಶಲ್ಯ ಧರಿಸಿದ ವಾಹನ ಸವಾರರನ್ನು ತಡೆದ ಪೊಲೀಸರು-ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ: ಅರುಣ್ ಕುಮಾರ್ ಪುತ್ತಿಲ ಅವರ ಮೆರವಣಿಗೆಗೆಂದು ವಾಹನದಲ್ಲಿ ಆಗಮಿಸುತ್ತಿದ್ದವರನ್ನು ಪೊಲೀಸರು ತಡೆದು ಕೇಸರಿ ಶಲ್ಯ ತೆರವು ಮಾಡುವಂತೆ ತಿಳಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಪುತ್ತೂರು ಜಾತ್ರೋತ್ಸವ ದಿನದಂದೇ ಕೇಸರಿ ಶಾಲು ಹಾಕಿದ ವಾಹನ ಸವಾರರ ತಡೆಯುತ್ತಿರುವ ಪೊಲೀಸರು ಮತ್ತು ಪುತ್ತಿಲ ನಾಮಪತ್ರ ವೇಳೆ ಜನ ಸೇರುವುದನ್ನು ತಡೆಯುವ ಯತ್ನ ಇದಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಹಣದ ಆಸೆ, ಹೆಸರಿಗಾಗಿ ಸ್ಪರ್ಧಿಸುತ್ತಿಲ್ಲ
ನಾನು ಹಣದ ಆಸೆ ಹೆಸರಿಗಾಗಿ ಸ್ಪರ್ಧಿಸುತ್ತಿಲ್ಲ. ನನ್ನ ಕೊನೆಯ ತನಕವೂ ಸಾಮಾನ್ಯ ಕಾರ್ಯಕರ್ತರ ಜೊತೆಗಿರುತ್ತೇನೆ. ಅನೇಕ ಆರೋಪಗಳಿಗೆ ಮಹಾಲಿಂಗೇಶ್ವರ ದೇವರು ಉತ್ತರ ಕೊಡಲಿದ್ದಾರೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು. ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನಾಮಪತ್ರ ಸಲ್ಲಿಕೆ ಕಾರ್ಯಕ್ರಮವಲ್ಲ ಹಿಂದೂ ಸಮಾಜದ ವಿಜಯೋತ್ಸವ
ತಾಲೂಕು ಆಡಳಿತ ಸೌಧಕ್ಕೆ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಕೋರ್ಟ್ ರಸ್ತೆಯ ಜಂಕ್ಷನ್‌ನಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಗೆ ಮತ್ತು ಬಿಜೆಪಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದೇನೆ. ಹಿಂದುತ್ವದ ರಕ್ಷಣೆ ಮತ್ತು ಕಾರ್ಯಕರ್ತರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನನ್ನ ಸ್ಪರ್ಧೆ. ಇದು ನಾಮಪತ್ರ ಸಲ್ಲಿಕೆ ಕಾರ್ಯಕ್ರಮವಲ್ಲ ಹಿಂದೂ ಸಮಾಜದ ವಿಜಯೋತ್ಸವವಾಗಿದೆ. ಕಟ್ಟ ಕಡೆಯ ವ್ಯಕ್ತಿಯ ಜೊತೆಗೂ ನಾವಿದ್ದೇವೆ ಎಂಬುದುನ್ನು ತೋರಿಸಿಕೊಡಬೇಕಾಗಿದೆ. ಅತೀ ಶೀಘ್ರವಾಗಿ ನಮ್ಮ ಸ್ಪರ್ಧೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದರು. ಆರ್‌ಎಸ್‌ಎಸ್‌ಗೆ 100 ವರ್ಷವಾಗುತ್ತಿರುವ ಈ ಸಂದರ್ಭದಲ್ಲಿ ಭಗವಧ್ವಜದ ಅಡಿಯಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ. ನಿಮ್ಮ ಮನೆಯ ಮಗನೆಂದು ನೀವು ನನ್ನನ್ನು ಸ್ವೀಕರಿಸಬೇಕು.ಹಿಂದುತ್ವದ ಅಡಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ತೋರಿಸಿಕೊಡೋಣ ಎಂದು ಪುತ್ತಿಲ ಹೇಳಿದರು.