





1 ವರ್ಷದ ಮಗು ಸಹಿತ 14 ಮಂದಿಗೆ ಗಾಯ ಸುಬ್ರಹ್ಮಣ್ಯ, ಧರ್ಮಸ್ಥಳ ಯಾತ್ರಾರ್ಥಿಗಳಿದ್ದ ವಾಹನ
ಕಡಬ:ಆಲ್ಟೋ ಕಾರು ಮತ್ತು ತೂಫಾನ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ನಾಲ್ವರು ಮೃತಪಟ್ಟ ದಾರುಣ ಘಟನೆ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ನೆಟ್ಟಣ ಸೇತುವೆ ಸಮೀಪ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. 1 ವರ್ಷದ ಮಗು ಸೇರಿದಂತೆ 14 ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.


ಆಲ್ಟೋ ಕಾರಿನಲ್ಲಿದ್ದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ತಗರೆ ನಿವಾಸಿಗಳಾದ ಉಲ್ಲಾಸ್ (28ವ.), ಗಣೇಶ್(26ವ.), ತಾನ್ವಿಕ್(4 ವರ್ಷ ಆರು ತಿಂಗಳು) ಹಾಗೂ ತೂಫಾನ್ ವಾಹನದಲ್ಲಿದ್ದ ಬೇಲೂರು ತಾಲೂಕಿನ ಚಂದನಹಳ್ಳಿಯ ನೇತ್ರಾವತಿ(28ವ.)ಮೃತರು ಎಂದು ಗುರುತಿಸಲಾಗಿದೆ. ಬೇಲೂರು ತಗರೆ ನಿವಾಸಿಗಳಾದ ವರ್ಷ(17ವ.), ಸಂಗೀತ(22ವ.), ತೇಜಸ್(1ವ.), ಸುಶೀಲ(50ವ.), ಆನಂದ (30ವ.), ಘಾನವಿ(14ವ.),ದೀಪ(32ವ.), ಹಂಸನಿ(10ವ.), ಶಿವಾನಿ(5ವ.), ಶೋಭಾ(40ವ.), ರಾಘು(32ವ.), ಸಂಜು(22ವ.), ರಾಜೇಶ್(28ವ.)ಗಾಯಗೊಂಡು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ತೀವ್ರ ಗಾಯಗೊಂಡಿರುವ ರೇಣುಕಾ (65ವ.) ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.





ಸುಬ್ರಹ್ಮಣ್ಯ-ಧರ್ಮಸ್ಥಳ ಯಾತ್ರಾರ್ಥಿಗಳು: ಆಲ್ಟೋ ಕಾರಿನಲ್ಲಿದ್ದವರು ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ಹಾಗೂ ತೂಫಾನ್ ವಾಹನದಲ್ಲಿದ್ದವರು ಧರ್ಮಸ್ಥಳ ಕಡೆಗೆ ತೆರಳುತ್ತಿದ್ದವರು. ನೆಟ್ಟಣದ ಸೇತುವೆ ಸಮೀಪ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡು ನಜ್ಜುಗುಜ್ಜಾಗಿವೆ. ಕಾರು ಅರ್ಧ ಭಾಗದಷ್ಟು ಪುಡಿಯಾಗಿದ್ದು, ಕಾರಿನಲ್ಲಿದ್ದವರು ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದಾರೆ.ನಾಲ್ವರ ಮೃತದೇಹಗಳನ್ನು ಕಡಬ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು.
ಶವ ಹೊರ ತೆಗೆಯಲು ಹರಸಾಹಸ: ಅಪಘಾತದ ತೀವ್ರತೆಗೆ ಎರಡೂ ವಾಹನದಲ್ಲಿಯೂ ಗಾಯಾಳು ಪ್ರಯಾಣಿಕರು ಸಿಲುಕಿಕೊಂಡಿದ್ದರು. ಸ್ಥಳೀಯರು ಕೂಡಲೇ ಧಾವಿಸಿ ವಾಹನದಲ್ಲಿ ಸಿಲುಕ್ಕಿದ್ದ ಸುಮಾರು 10ಕ್ಕೂ ಅಧಿಕ ಗಾಯಾಳುಗಳನ್ನು ಜೀಪು, ರಿಕ್ಷಾ, ಕಾರು, ಆಂಬುಲೆನ್ಸ್ ಮೂಲಕ ಕಡಬ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ, ಪುತ್ತೂರು, ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮೂವರು ಸ್ಥಳದಲ್ಲೇ ಹಾಗೂ ಓರ್ವರು ಆಸ್ಪತ್ರೆ ಸಾಗಿಸುವ ದಾರಿಮಧ್ಯೆ ಮೃತರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ, ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಡಾ|ವೀರಯ್ಯ ಹಿರೇಮಠ್, ಉಪ್ಪಿನಂಗಡಿ ವೃತ್ತ ನಿರೀಕ್ಷಕ ಬಿ.ಎಸ್.ರವಿ, ಕಡಬ ಎಸ್‌ಐ ಹರೀಶ್ ಹಾಗೂ ಪೊಲೀಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಪಾಜೆ ಘಟನೆ ಮಾಸುವ ಮುನ್ನವೇ ಇನ್ನೊಂದು ಅಪಘಾತ: ಏ.13ರಂದು ದಕ್ಷಿಣ ಕನ್ನಡ ಗಡಿ ಭಾಗದ ಕೊಡಗು ಸಂಪಾಜೆಯಲ್ಲಿ ಸರಕಾರಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದರು. ಆ ಘಟನೆಯ ಕಹಿನೆನೆಪು ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಅಪಘಾತಕ್ಕೆ ನಾಲ್ವರು ಮೃತಪಟ್ಟಿದ್ದು ಆಘಾತವನ್ನು ತಂದೊಡ್ಡಿದೆ.
ಟೂರಿಸ್ಟ್ ವಾಹನಗಳ ವೇಗಕ್ಕೆ ಬೇಕಿದೆ ಕಡಿವಾಣ;
ಕುಕ್ಕೆ ಸುಬ್ರಹ್ಮಣ್ಯ-ಧರ್ಮಸ್ಥಳ ಕ್ಷೇತ್ರಗಳಿಗೆ ನಿತ್ಯ ಸಾವಿರಾರು ವಾಹನಗಳು ಈ ರಸ್ತೆ ಮೂಲಕ ಸಂಚರಿಸುತ್ತಿದ್ದು, ಹೀಗೆ ಬರುವ ಟೂರಿಸ್ಟ್ ವಾಹನಗಳು ಅತ್ಯಂತ ವೇಗವಾಗಿ ಸಂಚರಿಸುತ್ತಿರುವುದೇ ಅಪಘಾತಗಳು ಸಂಭವಿಸಲು ಕಾರಣ ಎಂಬ ಆರೋಪ ವ್ಯಕ್ತವಾಗುತ್ತಿದ್ದು, ಟೂರಿಸ್ಟ್ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕಿದೆ ಎಂಬ ಒತ್ತಾಯ ನಾಗರಿಕ ವಲಯದಿಂದ ಕೇಳಿಬಂದಿದೆ.













