ಪುತ್ತೂರು: ವಿಧಾನಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿ ಸಿದ್ದವಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಏ.20ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಚಲನಚಿತ್ರ ನಟಿ ಶೃತಿ ಮತ್ತು ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಭಾಗವಹಿಸಲಿದ್ದಾರೆ ಎಂದು ಪುತ್ತೂರು ಬಿಜೆಪಿ ಮಾಧ್ಯಮ ಪ್ರಮುಖರಾದ ಚಂದ್ರಶೇಖರ ರಾವ್ ಬಪ್ಪಳಿಗೆ ಹೇಳಿದ್ದಾರೆ.
ಎ.19ರಂದು ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಿಗ್ಗೆ ಗಂಟೆ 9.30ರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಅಶೀರ್ವಾದ ಪಡೆದು ಮೆರವಣಿಗೆ ಪ್ರಾರಂಭಗೊಳ್ಳಲಿದೆ. ಪುತ್ತೂರು ಕೇಂದ್ರ ಅಂಚೆಕಚೇರಿ ಬಳಿಯಿಂದ ಮೆರವಣಿಗೆ ಆರಂಭಗೊಳ್ಳಲಿದೆ. ಅಲ್ಲಿಂದ ಬಸ್‌ಸ್ಟ್ಯಾಂಡ್‌ಗೆ ತೆರಳಿ ಅಲ್ಲಿಂದ ಕೋರ್ಟ್ ರಸ್ತೆ ಮುಖಾಂತರ ಕಿಲ್ಲೆ ಮೈದಾನಕ್ಕೆ ಮೆರವಣಿಗೆ ತೆರಳಲಿದೆ. ಕಿಲ್ಲೆ ಮೈದಾನಕ್ಕೆ 10 ಗಂಟೆಗೆ ಮೆರವಣಿಗೆ ತಲುಪಲಿದ್ದು, ಬಳಿಕ ಕಿಲ್ಲೆ ಮೈದಾನದಲ್ಲಿ ಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿ ಶೃತಿ ಮತ್ತು ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಭಾಗವಹಿಸುತ್ತಿದ್ದಾರೆ. ಕ್ಷೇತ್ರದ ಎಲ್ಲಾ 220 ಬೂತ್‌ಗಳಿಂದ ಕೂಡ ಕಾರ್ಯಕರ್ತರು ಮತ್ತು ಹಿತೈಷಿಗಳು ವಿಶೇಷವಾಗಿ ಮಹಿಳಾ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಹಿತೈಷಿಗಳು ಬರಲಾರರು ಎಂದೇನಿಲ್ಲ: ಮೆರವಣಿಗೆಯಲ್ಲಿ ಪುತ್ತೂರು ಕ್ಷೇತ್ರದ ಹೊರಗಿನಿಂದ ಜನರನ್ನು ಕರೆಸಲಾಗುತ್ತಿದೆ ಎನ್ನುವ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಚಂದ್ರಶೇಖರ್ ರಾವ್ ಅವರು, ಇಂತಹ ಆರೋಪ ಸತ್ಯಕ್ಕೆ ದೂರವಾದ ಮಾತು. ನಮ್ಮ ಪುತ್ತೂರು ಕ್ಷೇತ್ರದ ಕಾರ್ಯಕರ್ತರು ಬೇರೆ ಬೇರೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಅಲ್ಲಿಗೆ ತೆರಳಿದ್ದಾರೆ. ಹಾಗಾಗಿ ಹಿತೈಷಿಗಳು ಬರಲಾರರು ಎಂದೇನಿಲ್ಲ. ಪುತ್ತೂರು ಕ್ಷೇತ್ರದ ಪ್ರತೀ ಬೂತ್‌ನಿಂದ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. 10-15 ಸಾವಿರ ಜನರ ಟಾರ್ಗೆಟ್ ಇದೆ. ಇದನ್ನು ಖಂಡಿತಾ ತಲುಪುತ್ತೇವೆ ಎಂದು ಚಂದ್ರಶೇಖರ್ ರಾವ್ ಹೇಳಿದರು.
ಯೋಗಿ ಆದಿತ್ಯವಾಥರನ್ನು ಕರೆಸಲು ಬೇಡಿಕೆ: ಚುನಾವಣಾ ಪ್ರಚಾರಕ್ಕಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಪುತ್ತೂರು ಭಾಗಕ್ಕೆ ಕರೆಸಬೇಕೆಂದು ಬೇಡಿಕೆ ಇಟ್ಟಿದ್ದೇವೆ. ಅದು ಪರಿಗಣನೆಯಲ್ಲಿದೆ ಎಂದರು.
ಕಾಂಗ್ರೆಸ್ಸೇ ಎದುರಾಳಿ ಬೇರೆ ಯಾರೂ ಎದುರಾಳಿಗಳಿಲ್ಲ: ನಮಗೆ ಚುನಾವಣೆಯಲ್ಲಿ ಕಾಂಗ್ರೆಸ್ಸೇ ಪ್ರಮುಖ ಎದುರಾಳಿ. ಬೇರೆ ಯಾರು ಕೂಡ ಎದುರಾಳಿಗಳಿಲ್ಲ. ಬೇರೆ ಯಾರ ಬಗ್ಗೆಯೂ ನಾವು ಯೋಚನೆ ಮಾಡುತ್ತಿಲ್ಲ. ಅಭ್ಯರ್ಥಿಯ ಬಗ್ಗೆ ಒಂದು ಬಾರಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಿದರೆ ಬದಲಾವವಣೆ ಆಗುವುದಿಲ್ಲ. ನಮ್ಮ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರೇ ಎಂದು ಚಂದ್ರಶೇಖರ್ ರಾವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪುತ್ತೂರು ಚುನಾವಣಾ ನಿರ್ವಹಣಾ ತಂಡದ ಕ್ಷೇತ್ರ ಸಹಸಂಚಾಲಕ ರಾಧಾಕೃಷ್ಣ ಬೋರ್ಕರ್, ಚುನಾವಣಾ ಕಾರ್ಯಾಲಯದ ಪ್ರಮುಖರಾದ ರಾಮದಾಸ್ ಹಾರಾಡಿ, ಶಿವಕುಮಾರ್, ಮಾಧ್ಯಮ ಸಹಪ್ರಮುಖ್ ಪುನೀತ್ ಮಾಡತ್ತಾರು ಉಪಸ್ಥಿತರಿದ್ದರು.