ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರಿಂದ ನಾಮಪತ್ರ ಸಲ್ಲಿಕೆ; ಸಾವಿರಾರು ಕಾರ್ಯಕರ್ತರು ,ಪಕ್ಷದ ಪ್ರಮುಖರಿಂದ ಬೃಹತ್ ಪಾದಯಾತ್ರೆ

0

ಕಿಲ್ಲೆ ಮೈದಾನದಲ್ಲಿ ಬೃಹತ್ ಸಮಾವೇಶ, ನಾಯಕರಿಂದ ಒಗ್ಗಟ್ಟು ಪ್ರದರ್ಶನ

ಪುತ್ತೂರು: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಏ.19ರಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಮೊದಲು ದರ್ಬೆಯಿಂದ ತಾಲೂಕು ಆಡಳಿತ ಸೌಧದ ತನಕ ಬೃಹತ್ ಪಾದಯಾತ್ರೆ ನಡೆಯಿತು. ಪಕ್ಷದ ಸಾವಿರಾರು ಕಾರ್ಯಕರ್ತರು, ಪ್ರಮುಖರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ನಾಯಕರೂ ಒಗ್ಗಟ್ಟು ಪ್ರದರ್ಶಿಸಿದರು. ಚೆಂಡೆ, ವಾದ್ಯದ ಸದ್ದು, ಕೊಂಬು ಕಹಳೆ ಸಹಿತ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗದ ನೃತ್ಯ, ಹುಲಿ ವೇಷ ನೃತ್ಯ ಪಾದಯಾತ್ರೆಗೆ ಮೆರುಗು ನೀಡಿತ್ತು. ಎಲ್‌ಇಡಿ ಪರದೆಯ ಮೇಲೆ ಅಶೋಕ್ ಕುಮಾರ್ ರೈ ಅವರು ನಾಮಪತ್ರ ಸಲ್ಲಿಕೆ ಕುರಿತು ಮಾಹಿತಿ ಪ್ರದರ್ಶನ ಮಾಡಲಾಗುತ್ತಿತ್ತು.

ಬೆಳಿಗ್ಗೆ ದರ್ಬೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರಿಗೆ ಜೈ ಕಾರ ಹಾಕುತ್ತಿದ್ದರು. ಆರಂಭದಲ್ಲಿ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನ ಮತ್ತು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಶೋಕ್ ಕುಮಾರ್ ರೈಯವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅವಭೃತ ಸ್ನಾನಕ್ಕೆ ವೀರಮಂಗಲಕ್ಕೆ ತೆರಳಿದ್ದ ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನ ಮುಗಿಸಿ ದರ್ಬೆಯ ಮೂಲಕ ದೇವಳಕ್ಕೆ ತೆರಳಿದ ಬಳಿಕ ದರ್ಬೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯಲ್ಲಿ ಶ್ರೀ ದೇವರ ಪೀಠಕ್ಕೆ ಹಾರಾರ್ಪಣೆ ಮಾಡಿದ ಅಶೋಕ್ ಕುಮಾರ್ ರೈ ಅವರು ದರ್ಬೆಯಿಂದ ಯಶಸ್ವಿ ಪಾದಯಾತ್ರೆಗೆ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಮಾಜಿ ಜಿ.ಪಂ.ಉಪಾಧ್ಯಕ್ಷ ಎಂ.ಎಸ್ ಮೊಹಮ್ಮದ್, ಜಿಲ್ಲಾ ಕಾಂಗ್ರೆಸ್ ಮಾಜಿ ಕೋಶಾಽಕಾರಿ, ವಿಜಯ ಕುಮಾರ್ ಸೊರಕೆ, ಸಹಿತ ಹಲವು ಪ್ರಮುಖರು ತೆಂಗಿನ ಕಾಯಿ ಒಡೆದು ಪಾದಯಾತ್ರೆಗೆ ಚಾಲನೆ ನೀಡಿದರು.ಪಾದಯಾತ್ರೆ ಹಾದಿಯುದ್ದಕ್ಕೂ ಕಾಂಗ್ರೆಸ್ ಪಕ್ಷದ ಹಿರಿಯರಿಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಽ ಮತ್ತು ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರಿಗೆ ಜೈಕಾರ ಹಾಕುತ್ತಾ ಪಾದಯಾತ್ರೆ ಮುಂದೆ ಸಾಗುತ್ತಿತ್ತು.

ಗಾಂಧಿ ಪ್ರತಿಮೆಗೆ ಹಾರಾರ್ಪಣೆ: ಪಾದಯಾತ್ರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ತಲುಪುತ್ತಿದ್ದಂತೆ ಅಶೋಕ್ ಕುಮಾರ್ ರೈ ಅವರು ಮಹಾತ್ಮಗಾಂಧಿ ಕಟ್ಟೆಯಲ್ಲಿ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮಾಡಿದರು. ಈ ಸಂದರ್ಭ ಗಾಂಧಿಕಟ್ಟೆ ಸಮಿತಿಯ ಕೃಷ್ಣಪ್ರಸಾದ್ ಆಳ್ವ ಸಹಕರಿಸಿದರು. ಕೆ.ಎಸ್.ಆರ್.ಟಿ.ಸಿ ಮುಖ್ಯರಸ್ತೆ ಜಂಕ್ಷನ್‌ನಲ್ಲಿ ಅಶೋಕ್ ಕುಮಾರ್ ರೈ ಅವರನ್ನು ಕಾರ್ಯಕರ್ತರು ಮೇಲೆತ್ತಿ ಹೆಗಲಮೇಲೆ ಏರಿಸಿಕೊಂಡು ಹರ್ಷೋದ್ಗಾರ ಮಾಡುತ್ತಿದ್ದರು. ಪಾದಯಾತ್ರೆ ಮರೆವಣಿಗೆ ಮುಂದೆ ಸಾಗಿ ಶ್ರೀಧರ್ ಭಟ್ ಅಂಗಡಿಯ ಬಳಿಯಿಂದ ಮಾರುಕಟ್ಟೆ ಮೂಲಕ ಕಿಲ್ಲೆ ಮೈದಾನದಲ್ಲಿ ಸಮಾರೋಪಗೊಂಡಿತ್ತು.ಅಲ್ಲಿಂದ ಅಶೋಕ್ ಕುಮಾರ್ ರೈ ಅವರು ತಾಲೂಕು ಆಡಳಿತ ಸೌಧಕ್ಕೆ ತೆರಳಿ ಚುನಾವಣಾಧಿಕಾರಿ ಗಿರೀಶ್ ನಂದನ್ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್ ಮೊಹಮ್ಮದ್ ಜೊತೆಗಿದ್ದರು.

ಕಿಲ್ಲೆ ಮೈದಾನದಲ್ಲಿ ಸಮಾವೇಶ – ಒಗ್ಗಟ್ಟು ಪ್ರದರ್ಶನ: ಪಾದಯಾತ್ರೆ ಕಿಲ್ಲೆ ಮೈದಾನಕ್ಕೆ ಬಂದ ಬಳಿಕ ಅಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಿತು.ಪುತ್ತೂರುನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದವರ ಪೈಕಿ ಈಗಾಗಲೇ ಜೆಡಿಎಸ್ ಸೇರ್ಪಡೆಗೊಂಡಿರುವ ದಿವ್ಯಪ್ರಭಾ ಚಿಲ್ತಡ್ಕ ಹೊರತು ಪಡಿಸಿ ಉಳಿದವರು ಒಂದೇ ವೇದಿಕೆಯಲ್ಲಿ ಒಟ್ಟು ಸೇರಿ ಒಗ್ಗಟ್ಟು ಪ್ರದರ್ಶನ ಮಾಡಿದರು. ಚುನಾವಣಾ ಉಸ್ತುವಾರಿ ಶಿಬರ್ ರಾಮಚಂದ್ರನ್, ಜಿಲ್ಲಾ ಯುವಕ ಕಾಂಗ್ರೆಸ್ ಆಧ್ಯಕ್ಷ ಲುಕ್ಮಾನ್, ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಲೆಟ್ ಪಿಂಟೊ, ಜಿಲ್ಲಾ ಪ್ರಚಾರ ಸಮಿತಿ ಸಂಯೋಜಕ ಭರತ್ ಮುಂಡೋಡಿ, ಸಂಯೋಜಕ ಭಾಸ್ಕರ್ ಕೋಡಿಂಬಾಳ,ಪ್ರಹ್ಲಾದ್, ಸಾಯಿರಾ ಜುಬೇರ್, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ, ಜಿಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕರಾದ ವಿಜಯ ಕುಮಾರ್ ಸೊರಕೆ, ಶೀನಪ್ಪ ಗೌಡ ಬೈತ್ತಡ್ಕ, ಎಸ್.ಬಿ. ದಾರಿಮಿ, ಮೆಲ್ವಿನ್ ಮೊಂತೆರೋ, ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ನಝೀರ್ ಮಠ, ಮುರಳೀಧರ ರೈ ಮಠಂತಬೆಟ್ಟು, ಉಲ್ಲಾಸ್ ಕೋಟ್ಯಾನ್, ವೇದನಾಥ ಸುವರ್ಣ, ಮಹೇಶ್ ರೈ ಅಂಕೊತ್ತಿಮಾರು,ಕೆಪಿಸಿಸಿ ಮಾಜಿ ಸದಸ್ಯ ಡಾ.ರಘುಯುವಕ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಎನ್‌ಎಸ್‌ಯುಐ ಘಟಕ, ಪುತ್ತೂರು ಬ್ಲಾಕ್ ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್‌ನ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿದ್ದ ಎನ್.ಚಂದ್ರಹಾಸ ಶೆಟ್ಟಿ, ಕಿರಣ್ ಕುಮಾರ್ ಬುಡ್ಲೆಗುತ್ತು, ಸುಳ್ಯದ ಎಂ.ವೆಂಕಪ್ಪ ಗೌಡ, ಯಂಗ್ ಬ್ರಿಗೇಡ್ ತಂಡದ ರಂಜಿತ್ ಬಂಗೇರ ತಂಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ನಗರ ಕಾಂಗೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ, ಕೊಳ್ತಿಗೆ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಸಂತ ರೈ, ಮುಂಡೂರು ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ರಾಜಶೇಖರ್ ರೈ, ಪುರುಷೋತ್ತಮ ರೈ ಬೂಡಿಯಾರು, ನಗರಸಭೆ ಮಾಜಿ ಅಧ್ಯಕ್ಷ ಜಯಂತಿ ಬಲ್ನಾಡು ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಿದ್ದರು.

ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ ಸರ್ವ ಸಮಾಜದ ಹಿತಕ್ಕಾಗಿ ದುಡಿಯುವೆ : ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಸಮಾವೇಶದಲ್ಲಿ ಮಾತನಾಡಿ, ನಾನು ಅಭ್ಯರ್ಥಿಯಾದ ಬಳಿಕ ಅಷ್ಟೇ ಜವಾಬ್ದಾರಿ ಇದೆ ಎಂದು ಹಿರಿಯರು ಸಲಹೆ ನೀಡಿದ್ದರು.ಅವರ ಮಾತನ್ನು ನಾನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.14 ಮಂದಿ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಗಳಿದ್ದರೂ ಯಾರಿಗೇ ಪಕ್ಷ ಸೀಟು ನೀಡಿದರೂ ಅದರ ಬಳಿಕ ನಾವು ಒಂದೇ ವೇದಿಕೆಯಲ್ಲಿ ಕೂತು ಪಕ್ಷದ ಅಭ್ಯರ್ಥಿಯ ಪರ ಕೆಲಸ ಮಾಡಬೇಕೆಂದು ಹೇಳಿದ್ದೆವು.ಇವತ್ತು ಆ ಮಾತಿಗೆ ಯಾರೂ ಹಿಂದೇಟು ಹಾಕದೆ ಎಲ್ಲರೂ ಒಂದೇ ವೇದಿಕೆಯಲ್ಲಿ ಕೂತು ಸಾಕ್ಷಿಯಾಗಿದ್ದಾರೆ.ಕಾರ್ಯಕರ್ತರು ಮನಸ್ಸಿನಲ್ಲಿ ಯಾವುದೇ ಭಾವನೆ ಇಟ್ಟುಕೊಳ್ಳದೆ ಅಶೋಕ್ ರೈಯೊಂದಿಗೆ ಯಾವತ್ತೂ ಮುಚ್ಚು ಮರೆಯಿಲ್ಲದೆ ಮಾತನಾಡಬಹುದು.ಯಾವ ರೀತಿಯ ಅಂತರವನ್ನೂ ನಾನು ಇಟ್ಟು ಕೊಳ್ಳುವುದಿಲ್ಲ.ನೀವೆಲ್ಲ ನಮ್ಮ ಬಂಧುಗಳೆಂದು ನಾವು ಕೆಲಸ ಮಾಡುತ್ತೇನೆ ಎಂದರು.

ಕಳೆದ ಐದು ವರ್ಷದ ಬಿಜೆಪಿ ಆಡಳಿತದಲ್ಲಿ ಅಕ್ರಮ-ಸಕ್ರಮ, 94ಸಿಯಲ್ಲಿ ಬಡವರನ್ನು ಲೂಟಿ ಮಾಡಲಾಗಿದೆ.ನಾನು ಶಾಸಕನಾಗಿ ಆಯ್ಕೆಯಾದರೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ ಸರ್ವ ಸಮಾಜದ ಹಿತಕ್ಕಾಗಿ ದುಡಿಯುವೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಶಕು ಅಕ್ಕನೂ ನನ್ನ ಹಾಗೆ ಬಿಜೆಪಿಯಲ್ಲಿದ್ದವರು: ಕಾರ್ಯಕರ್ತರು ನಮ್ಮ ಆಧಾರ ಸ್ತಂಭ ಎಂದು ಸಲಹೆ ನೀಡಿದ್ದರು.ಶಕು ಅಕ್ಕನೂ ಕೂಡಾ ನನ್ನ ಥರನೇ ಬಿಜೆಪಿಯಲ್ಲಿದ್ದವರು.ಅವರು ಕಾಂಗ್ರೆಸ್‌ಗೆ ಬಂದಾಗ ನನ್ನ ಪರಿಸ್ಥಿತಿ ಅವರಿಗೂ ಇತ್ತು.ಅವರು ಕೂಡಾ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಶಕು ಅಕ್ಕ ನೀವು ಯಾವ ರೀತಿ ಮಾರ್ಗದರ್ಶನ ಕೊಡುತ್ತೀರಿ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಯಕರ್ತರನ್ನು ಮುಂದೆ ಕೊಂಡೊಯ್ಯುತ್ತೇನೆ. ಇಲ್ಲಿ ಸೇರಿದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಆಶೀರ್ವಾದ ಮಾಡಿ ಎಂದು ಹೇಳಿದ ಅಶೋಕ್ ಕುಮಾರ್ ರೈಯವರು, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕಾಗಿದೆ. ಇವತ್ತು ನಾನು ಬಿಜೆಪಿಯಿಂದ 2 ತಿಂಗಳ ಹಿಂದೆಯಷ್ಟೆ ಬಂದಿರಬಹುದು. ಆದರೆ ನಿರಂತರ ಸಮಾಜ ಸೇವೆಯನ್ನು ಹತ್ತು ಹನ್ನೆರಡು ವರ್ಷದಿಂದ ಮಾಡಿಕೊಂಡು ಬಂದಿದ್ದೇನೆ. ಸುಮಾರು 22 ಸಾವಿರ ಕುಟುಂಬಗಳಿಗೆ ಸಹಾಯ ಮಾಡಿದ್ದೇನೆ. ನಾನು ಬಿಜೆಪಿಯಲ್ಲಿದ್ದಾಗಲೂ 2,200 ಮುಸ್ಲಿಂ ಕುಟಂಬಗಳಿಗೆ ಸಹಾಯ ಮಾಡಿದ್ದೇನೆ. ನಾನು ಅಲ್ಲಿ ಬಿಜೆಪಿ, ಕಾಂಗ್ರಸ್, ಮುಸ್ಲಿಂ, ಹಿಂದು, ಕ್ರೈಸ್ತ ಎಂದು ನೋಡಿಲ್ಲ.ಮನುಷ್ಯ ಎಂದಷ್ಟೆ ನೋಡಿ ಕೆಲಸ ಮಾಡಿದ್ದೇನೆ.ನಾವು ಮಾಡಿದ ಕೆಲಸ ಮನೆ ಮನೆಗೆ ಮುಟ್ಟುವ ಕೆಲಸ ಆದಾಗ ಜನರ ಆಶೀರ್ವಾದ ಸಿಗುತ್ತದೆ.ಮುಂದಿನ 15 ದಿವಸದಲ್ಲಿ ಎಲ್ಲಾ ಮನೆಗಳಿಗೆ ಕಾಂಗ್ರೆಸ್ ಸರಕಾರದ ಯೋಜನೆ, ಗ್ಯಾರೆಂಟಿ ಕಾರ್ಡ್ ಅನ್ನು ಅವರು ಪಡೆಯುವುದಲ್ಲ ನಾವು ಮನೆಗೇ ತಲುಪಿಸಬೇಕೆಂದು ಹೇಳಿದರು. ಮುಂದಿನ ದಿವಸಗಳಲ್ಲಿ ಪುರಸಭೆ, ಗ್ರಾ.ಪಂ ಚುನಾವಣೆಯಲ್ಲಿ ನಿಮ್ಮ ಯಾವುದೇ ಆಸೆ ಆಕಾಂಕ್ಷೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಈ ಅಶೋಕ್ ರೈ ಕೆಲಸ ಮಾಡಿ ತೋರಿಸುತ್ತಾನೆ. ನೀವು ನನ್ನನ್ನು ಗೆಲ್ಲಿಸಿ. ನಿಮ್ಮ ಆಶೀರ್ವಾದ ಅಶೋಕ್ ರೈಗೆ ಯಾವತ್ತೂ ಇರಲಿ ಎಂದು ಅಶೋಕ್ ರೈ ಮನವಿ ಮಾಡಿದರು.

ಬಿಜೆಪಿ ಸರಕಾರದಿಂದ ನೀತಿಯ ಬದಲು ಭ್ರಷ್ಟಾಚಾರ ಹೆಚ್ಚಾಗಿದೆ: ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಅವರು ಮಾತನಾಡಿ ಬಿಜೆಪಿ ಸರಕಾರದಿಂದ ಕರ್ನಾಟಕ ಜನತೆಯ ಜೀವನ ದುಸ್ಥಿತಿಯಲ್ಲಿದೆ. ಹಿಂದೆ 5 ವರ್ಷ ಆಡಳಿತ ಮಾಡಿದ ಸಿದ್ದರಾಮಯ್ಯ ಸರಕಾರ ಬಡವರ, ಯುವಜನತೆ, ಅಲ್ಪಸಂಖ್ಯಾತರ, ದಲಿತ, ಹಿಂದುಳಿದ ವರ್ಗದವರ ಪರವಾಗಿ ಉತ್ತಮ ಯೋಜನೆ ಮಾಡಿ ನೀತಿ ತಂದಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸರಕಾರ ಯಾವುದಾದರೂ ಒಂದು ಉತ್ತಮ ನೀತಿ ತಂದಿದ್ಯಾ ಎಂದು ಪ್ರಶ್ನಿಸಿದರು. ಬಿಜೆಪಿ ಸರಕಾರದಿಂದ ನೀತಿಯ ಬದಲು ಭ್ರಷ್ಟಾಚಾರ ಹೆಚ್ಚಾಗಿದೆ. 40 ಪರ್ಸೆಂಟ್ ಕಮಿಷನ್ ತಿನ್ನುವುದು ಹೆಚ್ಚಾಗಿದೆ. ಇದೊಂದು ಲಂಚ ಹೊಡೆಯುವ ಸರಕಾರ. ಇದನ್ನು ಕಾಂಗ್ರೆಸ್ ಪಕ್ಷ ಹೇಳುತ್ತಿಲ್ಲ. ಗುತ್ತಿಗೆದಾರರೇ ಪ್ರಧಾನ ಮಂತ್ರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿದ್ದಾರೆ. ಇವತ್ತು ಸರಕಾರಿ ಕಚೇರಿಯಲ್ಲಿ 2 ಲಕ್ಷ ಖಾಲಿ ಕುರ್ಚಿ ಇದೆ. ಸರಕಾರಿ ಉದ್ಯೋಗಕ್ಕೆ ಪರೀಕ್ಷೆ ಬರೆಯುವಲ್ಲಿ ಅಕ್ರಮ ನಡೆಯುತ್ತಿದೆ. ಇವತ್ತಿನ ಸರಕಾರ ಕರ್ನಾಟಕದ ಜನತೆಗೆ ಒಳ್ಳೆದು ಮಾಡಲು ಅಲ್ಲ.ಬದಲಾಗಿ ತಮ್ಮ ಖಜಾನೆ ತುಂಬಿಸಲು ಮಾಡಲಾಗಿದೆ.ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಹಲವು ಗ್ಯಾರೆಂಟಿಯೊಂದಿಗೆ ನಿಮ್ಮ ಬಳಿಗೆ ಬರುತ್ತಿದೆ ಎಂದರು.

ಕಡಿಮೆ ಅಂತರದಿಂದಲ್ಲ ಬಹುಮತದಿಂದ ಗೆಲ್ಲಿಸಿ: ಇವತ್ತು ಪ್ರಧಾನಿಯವರು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಅದಕ್ಕಿಂತ ಸಾವಿರ ಸರ್ಜಿಕಲ್ ಸ್ಟ್ರೈಕ್ ನಮ್ಮ ಸರಕಾರ ಇರುವಾಗ ಮಾಡಿದೆ.ಆದರೆ ಅದನ್ನು ಹೇಳಿ ರಾಜಕೀಯ ಲಾಭ ಮಾಡುತ್ತಿಲ್ಲ. ಬಿಜೆಪಿ ಸರಕಾರಕ್ಕೆ ಇವತ್ತು ಚೈನ ಹೆಸರು ಹೇಳಲು ಭಯವಾಗಿದೆ. ಮಂಗಳೂರಿನ ಏರ್ ಪೋರ್ಟ್, ವಿಜಯ ಬ್ಯಾಂಕ್ ಸಹಿತ ಹಲವು ವ್ಯವಸ್ಥೆಗಳನ್ನು ಗುಜರಾತಿಗೆ ಕಳುಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗುರುತನ್ನೇ ಬಿಜೆಪಿ ಸರಕಾರ ಬದಲಿಸುತ್ತಿದೆ. ಈ ಕುರಿತ ಅನ್ಯಾಯಕ್ಕೆ ಬುದ್ದಿ ಕಲಿಸಲು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು.ಇದಕ್ಕಾಗಿ ಅಶೋಕ್ ಕುಮಾರ್ ರೈ ಅವರನ್ನು ಪುತ್ತೂರಿನಲ್ಲಿ ಗೆಲ್ಲಿಸಬೇಕು. ಕೇವಲ ಕಡಿಮೆ ಅಂತರದಲ್ಲಿ ಗೆಲ್ಲಿಸುವುದಲ್ಲ. ಬಹುಮತದಿಂದ ಗೆಲ್ಲಿಸಬೇಕೆಂದು ಹೇಳಿದ ಭವ್ಯ ನರಸಿಂಹಮೂರ್ತಿ, ಇನ್ನು 20 ದಿವಸದಲ್ಲಿ ಎಲ್ಲಾ ಸಿದ್ದತೆ ಮಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರಬೇಕು ಎಂದು ಹೇಳಿದರು.

ಅಭ್ಯರ್ಥಿ ಮುಖ್ಯವಲ್ಲ-ಹಸ್ತ ಪಕ್ಷ ಮುಖ್ಯ: ವಿಧಾನ ಪರಿಷತ್ ಶಾಸಕ ಡಾ|ಮಂಜುನಾಥ್ ಭಂಡಾರಿಯವರು ಮಾತನಾಡಿ ನಮ್ಮ ಚುನಾವಣೆ ಭ್ರಷ್ಟಾಚಾರದ ವಿರುದ್ಧ. ಇಲ್ಲಿ ನಮಗೆ ಅಭ್ಯರ್ಥಿ ಮುಖ್ಯವಲ್ಲ. ಹಸ್ತ ಮತ್ತು ಪಕ್ಷ ಮುಖ್ಯ. ಹಾಗಾಗಿ ಅಶೋಕ್ ಕುಮಾರ್ ರೈ ಅವರ ಗೆಲುವು ಕಾಂಗ್ರೆಸ್ ಪಕ್ಷದ ಗೆಲುವು ಎಂದರಲ್ಲದೆ,ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರು ಮತ್ತು ಕಟ್ಟ ಕಡೆಯ ಬೂತ್ ಕಾರ್ಯಕರ್ತರು ಮುಖ್ಯ. ಈ ಬಾರಿ ರಾಜ್ಯದಲ್ಲಿ 150 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬರುವ ಸುದ್ದಿ ಇದೆ. ಯಾರೇ ಅಭ್ಯರ್ಥಿ ಆದರೂ ಪುತ್ತೂರಿನಲ್ಲಿ ಕಾಂಗ್ರೆಸ್ ಗೆಲ್ಲುವ ಸೂಚನೆ ಇತ್ತು ಇಂತಹ ಒಳ್ಳೆಯ ಘಳಿಗೆಯಲ್ಲಿ ಅಶೋಕ್ ಕುಮಾರ್ ರೈ ಅವರು ಬಂದಿದ್ದಾರೆ. ಹಾಗಾಗಿ ಅಶೋಕ್ ಕುಮಾರ್ ರೈ ಅವರನ್ನು ಸರ್ವರೂ ಬಹುಮತದಿಂದ ಗೆಲ್ಲಿಸಬೇಕೆಂದರು.ವಾರದೊಳಗೆ ಪುತ್ತೂರು ಮತ್ತು ಸುಳ್ಯಕ್ಕೆ ಡಿ.ಕೆ.ಶಿವಕುಮಾರ್ ಬರಲಿದ್ದಾರೆ.ಈ ಕುರಿತು ಅವರೇ ನನಗೆ -ನ್ ಕರೆ ಮಾಡಿದ್ದಾರೆ ಎಂದು ಭಂಡಾರಿ ಹೇಳಿದರು.

ಬಿಜೆಪಿಯವರಿಗೆ ಅಸ್ತ್ರ ಇಲ್ಲದಿದ್ದರೆ ಪೆಟ್ರೋಲ್ , ಬೆಂಕಿ ಕಡ್ಡಿ ಹಿಡಿಯುತ್ತಾರೆ: ಬಿಜೆಪಿಯವರಿಗೆ ಚುನಾವಣೆ ಸಂದರ್ಭ ಅಸ್ತ್ರ ಇಲ್ಲದಾಗ ಕೊನೆಗೆ ಪೆಟ್ರೋಲ್ ಮತ್ತು ಬೆಂಕಿ ಕಡ್ಡಿಯನ್ನು ಹಿಡಿಯುತ್ತಾರೆ. ಈ ಬಾರಿ ರಾಷ್ಟ್ರಭಕ್ತ ಮತ್ತು ಭಯೋತ್ಪಾದಕ ನಡುವೆ ಚುನಾವಣೆ ಎಂದು ಬಿಜೆಪಿ ಮಂತ್ರಿಯೊಬ್ಬರು ಹೇಳಿಕೆ ನೀಡಿದ್ದಾರೆ. ಈ ಭಯೋತ್ಪಾದಕ ಯಾರು ಎಂದು ಬಿಜೆಪಿಯವರು ತಿಳಿಸಬೇಕು. ಗಾಂಧಿ ಕೊಂದ ಪಕ್ಷದವರು ಭಯೋತ್ಪಾದಕರೋ, ಸ್ವಾತಂತ್ರ್ಯ ತಂದ ಪಕ್ಷದವರೋ ಎಂದು ಇತ್ಯರ್ಥ ಆಗಬೇಕೆಂದು ಮಂಜುನಾಥ ಭಂಡಾರಿಯವರು ಹೇಳಿದರು.

ಒಟ್ಟಿಗೆ ನಿಂತು ಫೋಸ್ ಕೊಡುವವರನ್ನು ನಿಲ್ಲಿಸಬೇಡಿ: ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಮಾತನಾಡಿ, ಅಶೋಕ್ ಅಣ್ಣನನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ ಸಂದರ್ಭ ನನ್ನ 45 ವರ್ಷದ ರಾಜಕೀಯದಲ್ಲಿ ನಾನು ಏನು ಪಡೆದಿದ್ದೇನೆ ಎಂಬುದು ಅವತ್ತು ನನಗೆ ಗೊತ್ತಾಯಿತು.ನಾನು ಅಭ್ಯರ್ಥಿ ಆಗಬೇಕು. ಆಗುತ್ತೇನೆ ಎಂಬ ಕನಸ್ಸು ಕಟ್ಟಿಲ್ಲ. ಆದರೆ ಕಾರ್ಯಕರ್ತರು ಹೇಳಿಕೊಂಡದ್ದು ಅಷ್ಟೆ. ನಾನು ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಗೆ ಬಂದಾಗ ಯಾರೋ ಪ್ರೆಸ್‌ನವರು ಕರೆ ಮಾಡಿದ್ದರು. ಅಶೋಕ್ ರೈ ಅವರಿಗೆ ಸಿಟ್ ಡಿಕ್ಲೇರ್ ಆಗಿದೆ ಎಂದರು. ಆಗ ನಾನು ಸಂತೋಷದಿಂದ ಅವರು ಗೆದ್ದು ಬರಲಿ ಎಂದು ನಮ್ಮ ಪ್ರಯತ್ನ ಎಂದು ಹೇಳಿದ್ದೆ. ಈ ಸಂದರ್ಭ ನನ್ನ ಜೊತೆಗಿದ್ದ ಯುವಕರು ಮೌನವಾಗಿ ಮನದೊಳಗೆ ಅವಲತ್ತುಗೊಂಡರು. ಆದರೆ ಅವರು ನಾನು ಯಾವಾಗ ಗುರು ರಾಮ್ ಭಟ್ ಅವರ ಮೂಲಕ ಕಾಂಗ್ರೆಸ್ ಸೇರಿದ್ದೆನೋ ಅಂದಿನಿಂದ ಇಲ್ಲಿನ ತನಕ ನನ್ನೊಂದಿಗೆ ಕಾರ್ಯಕರ್ತರು ಪೂರ್ಣ ಸಹಕಾರ ನೀಡಿದ್ದಾರೆ. ಆರಂಭದಲ್ಲಿ ನನಗೆ ಕಾಂಗ್ರೆಸ್ ಬರುವುದು ಇಷ್ಟ ಇರದಿದ್ದರೂ ಸೇರಿದ ಬಳಿಕ ಕಾರ್ಯಕರ್ತರ ಬಾಂಧವ್ಯ ಇವತ್ತು ನನಗೆ ಸಾರ್ಥಕತೆ ಕೊಟ್ಟಿದೆ. ನಾನು ಕಾಂಗ್ರೆಸ್ ಬರುವಾಗ ನನ್ನೊಂದಿಗೆ ಬಂದ ಅನೇಕರಿಗೆ ಒಂದು ಚಹಾ, ಊಟ ಕೊಡಲಿಲ್ಲ. ಈ 45 ವರ್ಷದಲ್ಲಿ ಅವರು ಶಕು ಅಕ್ಕನೊಟ್ಟಿಗೆ ಇರುವುದು ಪ್ರೀತಿಯನ್ನು ತೋರಿಸಿದೆ ಎಂದರು.

ವಿನಯ ಕುಮಾರ್ ಸೊರಕೆ ನನಗೆ ಆಧಾರ ಸ್ತಂಭವಾಗಿ ಇದ್ದರು. ಇನ್ನೋರ್ವರು ಸತೀಶ್ ಕುಮಾರ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಉಳಿಯಬೇಕೆಂದು ನಾನು ಅಭ್ಯರ್ಥಿ ಆಗಲು ತುಂಬಾ ಸಹಕಾರ ಮಾಡುತ್ತಿದ್ದರು.ಅಂತಹ ಸಾವಿರಾರು ಯುವಕರು ಇವತ್ತು ಕಾಂಗ್ರೆಸ್‌ನಲ್ಲಿ ಇದ್ದಾರೆ. ನಾಳೆ ಅವರಿಗೆ ನೋವಾಗಬಾಗರದು. ಆ ಕಾರ್ಯಕರ್ತರನ್ನು ದೇವರಂತೆ ಕಾಣಿ ಎಂದು ಅಶೋಕ್ ಕುಮಾರ್ ರೈ ಅವರಿಗೆ ಸಲಹೆ ನೀಡಿದ ಶಕುಂತಳಾ ಶೆಟ್ಟಿಯವರು, ದೇವದುರ್ಲಭ ಕಾರ್ಯಕರ್ತರು ನಮ್ಮೊಂದಿಗೆ ಇರುತ್ತಾರೆಂದು ವಾಜಪೇಯಿ ಹೇಳುತ್ತಿದ್ದರು. ನಿಜವಾಗಿಯೂ ಅಂತಹ ಕಾರ್ಯಕರ್ತರು ನಮ್ಮೊಂದಿಗೆ ಇದ್ದಾರೆ.ಆದರೆ ಇವತ್ತು ನಮ್ಮೊಂದಿಗೆ ಶಕುಅಕ್ಕ ಶಾಸಕನಾಗಿದ್ದಾಗ ಎಷ್ಟೋ ಜನ ನನ್ನೊಂದಿಗೆ ಇದ್ದರು.ದೇವರ ದಯದಿಂದ ನಾನು ಸೋತ ಬಳಿಕ ಕೆಲವರು ಬಿಟ್ಟರೆ ಉಳಿದದವರು ಯಾರೂ ಇಲ್ಲ.ಯಾಕೆಂದರೆ ಅವರಿಗೆ ಕೆಲಸ ಆಗಿದೆ. ಎಷ್ಟೋ ಜನರನ್ನು ನಾಮನಿರ್ದೇಶನ ಮಾಡಿದ್ದೆ. ಒಬ್ಬರು ಕೂಡಾ ನನ್ನ ಬಳಿ ಬರುತ್ತಿಲ್ಲ.ಹಿಂದಿನಿಂದ ‘ಆ ಆಪರಬ್ಬುಗು ಬೇತೆ ಕೆಲಸ ಇಜ್ಜಿ’ ಎಂದು ಹೇಳುತ್ತಾರೆ.ಹಾಗಾಗಿ ಅಶೋಕ್ ಕುಮಾರ್ ರೈ ಅವರೇ, ನಿಮ್ಮೊಂದಿಗೆ ಕಾರ್ಯಕರ್ತರನ್ನು ಜೊತೆಗೆ ನಿಲ್ಲಿಸಿ.ಆದರೆ ಫೋಸ್ ಕೊಡುವವರನ್ನು ನಿಲ್ಲಿಸಬೇಡಿ. ಇವತ್ತು ಬಿಜೆಪಿಯಿಂದ ನಮ್ಮ ಕಡೆ ಓಡೋಡಿ ಬರುತ್ತಿದ್ದಾರೆ. ಇವತ್ತು ಹಿಂದುತ್ವದಿಂದ ಜಾತ್ಯಾತೀತ ರಾಷ್ಟ್ರ ಅಗತ್ಯವಾಗಿ ಬೇಕೆಂದು ಗೊತ್ತಾಗಿದೆ. ದೇಶ, ಊರು, ಅಭಿವೃದ್ಧಿ, ಕಾರ್ಯಕರ್ತರ ರಕ್ಷಣೆ ಇವತ್ತು ಅಗತ್ಯ. ಅಶೋಕ್ ರೈ ಗೆದ್ದ ಬಳಿಕ ಕೋಮು ಸೌಹಾರ್ದತೆಯನ್ನು ಉಳಿಸುವ ಪ್ರಯತ್ನ ಮಾಡಬೇಕು.ಹೆಣ್ಣು ಮಕ್ಕಳಿಗೆ ತೊಂದರೆ ಆದಾಗ ಆತ ಯಾರೇ ಆಗಲಿ ನಮ್ಮ ಪಕ್ಷದವನೇ ಆಗಲಿ ಆತನ ಬಗ್ಗೆ ಕನಿಕರ ತೋರಿಸಿದೆ ನ್ಯಾಯವನ್ನು ಎತ್ತಿ ತೋರಿಸುವ ಶಾಸಕನಾಗಿ ಬೆಳೆಯಬೇಕೆಂದರು.ನನ್ನ ಒಂದು ಆಸೆ ಪುತ್ತೂರಿಗೆ ಮೆಡಿಕಲ್ ಕಾಲೇಜು ಮತ್ತು ಸರಕಾರಿ ಆಸ್ಪತ್ರೆಯನ್ನು ೩೦೦ ಬೆಡ್‌ಗೆ ಏರಿಸುವ ಕೆಲಸವನ್ನು ಮಾಡುವ ಮೂಲಕ ನನ್ನ ಋಣಸಂದಾಯ ಮಾಡುವಂತೆ ಶಕುಂತಳಾ ಶೆಟ್ಟಿ ವಿನಂತಿಸಿದರು.

ಬಿಜೆಪಿಯನ್ನು ಟಾರ್ಚ್ ಹಾಕಿ ಹುಡುಕಬೇಕಾದೀತು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರಲಿದೆ. ಜಿಲ್ಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿಯನ್ನು ಟಾರ್ಚ್ ಹಾಕಿ ಹುಡುಕುವಂತಾಗಲಿದೆ ಎಂದರು.

ಪಕ್ಷಕ್ಕೆ ಸೇರ್ಪಡೆ: ಆರ್ಯಾಪು ವಲಯದ ಬಿಜೆಪಿ ಮಾಜಿ ಅಧ್ಯಕ್ಷೆ ಗೀತಾ ಅವರ ಪತಿ ಚಿನ್ನಪ್ಪ ಮರಿಕೆ, ಅರಿಯಡ್ಕ ವಲಯದಿಂದ ರವೀಂದ್ರ ಮಣಿಯಾಣಿ, ಚಂದ್ರ ಮಣಿಯಾಣಿ ಅವರನ್ನು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.

ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ ಸೋಜ ವಂದೇ ಮಾತರಂ ಹಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್.ಬಿ. ವಿಶ್ವನಾಥ ರೈ ಸ್ವಾಗತಿಸಿದರು. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ವಂದಿಸಿದರು.ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ನಿರಂಜನ್ ರೈ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರು, ಕಾರ್ಯಕ್ರಮ ನಿರ್ವಹಿಸಿದರು.

ನಿಮಗೆ ಬುದ್ದಿ ಕಲಿಸುತ್ತೇನೆ ಮಗಾ

ಎದೆ ತಟ್ಟಿ ಮುಂದೆ ಹೋಗಿ.ನಾವು ನಿಮ್ಮ ಹಿಂದೆ ಇದ್ದೇವೆ.ನೀವೇನು ಅವರೊಂದಿಗೆ ಗಲಾಟೆ ಮಾಡಲು ನಾವು ಹೇಳುತ್ತಿಲ್ಲ.ನಮ್ಮ ಒಳ್ಳೆಯ ಕಾರ್ಯಕ್ರಮಗಳನ್ನು ಅವರಿಗೆ ಹೇಳಿ.ಬಿಜೆಪಿ ನಾಲ್ಕು ವರ್ಷದಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸಿ.ಅದೇ ಪ್ರಶ್ನೆಯನ್ನು ನನಗೂ ನೀವು ಕೇಳಬಹುದು.ಅದಕ್ಕೆ ಉತ್ತರವಾಗಿ ನಾನು ಬೇಸತ್ತು ಕಾಂಗ್ರೆಸ್‌ಗೆ ಬಂದಿದ್ದು.ನಿಮಗೆ ಬುದ್ದಿ ಕಲಿಸುತ್ತೇನೆ ಮಗ.ನಾನು ಇನ್ನೊಂದು ಪಕ್ಷಕ್ಕೆ ಹೋಗುತ್ತೇನೆ.ಕಾಂಗ್ರೆಸ್ ಸೇರುತ್ತೇನೆ.ಅಲ್ಲಿ ನಿಮಗೆ ಬುದ್ದಿ ಕಲಿಸುತ್ತೇನೆ.ಮತದಾರರಿಗೆ ಅನ್ಯಾಯವಾದಾಗ ಅವರೊಂದಿಗೆ ನಿಲ್ಲುತ್ತೇನೆ.ಭ್ರಷ್ಟಾಚಾರ ನಿಲ್ಲಿಸುತ್ತೇನೆ ಎಂದು ಹೇಳಿದ ಅಶೋಕ್ ಕುಮಾರ್ ರೈ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದುಡ್ಡು ಮಾಡಲು ಬಂದಿಲ್ಲ: ಅಶೋಕ್ ಕುಮಾರ್ ರೈ ದುಡ್ಡು ಮಾಡಲು ರಾಜಕೀಯಕ್ಕೆ ಬಂದಿಲ್ಲ.ನನಗೆ ದುಡ್ಡು ಮಾಡಲು ಉದ್ಯಮ ಇದೆ.ದೇವರು ಕೊಟ್ಟಿದ್ದಾನೆ.ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ.ಬಡವರ ಕಣ್ಣೀರನ್ನು ಒರೆಸಲು ರಾಜಕೀಯಕ್ಕೆ ಬಂದಿದ್ದೇನೆ.ನನ್ನ ಸಂಪಾದನೆಯ ಒಂದು ಭಾಗವನ್ನು ಸಮಾಜಕ್ಕೆ ಕೊಡುವುದು ನನ್ನ ಧ್ಯೇಯ ಎಂದೂ ಅಶೋಕ್ ಕುಮಾರ್ ರೈ ಹೇಳಿದರು.

LEAVE A REPLY

Please enter your comment!
Please enter your name here