ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ 6ನೇ ವಾರ್ಷಿಕ ಸಮಾರಂಭ-ಧರ್ಮಸಿಂಹಾಸನಂ ಯಕ್ಷಗಾನ

0


ಪಟ್ಲ ಸತೀಶ್‌ರವರಿಂದ ಭಾರತೀಯ ಕಲೆಯು ಪ್ರಪಂಚದಾದ್ಯಂತ ವಿಸ್ತರಿಸಿದೆ-ಕೇಶವಪ್ರಸಾದ್ ಮುಳಿಯ

ಪುತ್ತೂರು: ಪಟ್ಲ ಸತೀಶ್ ಶೆಟ್ಟಿಯವರ ಯಕ್ಷಧ್ರುವ ಫೌಂಡೇಶನ್ ಭಾರತದಲ್ಲಿ ಮಾತ್ರವಲ್ಲ ಹೊರದೇಶದಲ್ಲೂ ಶಾಖೆಗಳಿರುವುದು ಶ್ಲಾಘನೀಯ. ಯಕ್ಷಗಾನದ ಮೂಲಕ ಭಾರತೀಯ ಕಲೆಯನ್ನು ಪ್ರಪಂಚದಾದ್ಯಂತ ವಿಸ್ತರಿಸುವಲ್ಲಿ ಪಟ್ಲ ಸತೀಶ್ ಶೆಟ್ಟಿಯವರ ಶ್ರಮವನ್ನು ನಾವು ಮೆಚ್ಚಬೇಕಾಗಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವಪ್ರಸಾದ್ ಮುಳಿಯರವರು ಹೇಳಿದರು.


ಎ.19 ರಂದು ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ 6ನೇ ವಾರ್ಷಿಕ ಸಮಾರಂಭದಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಮಾತನಾಡಿದರು.

ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಇತ್ತೀಚೆಗೆ ಹಿಂದೂ ಧಾರ್ಮಿಕ ಶಿಕ್ಷಣವನ್ನು ಸುಮಾರು ಹದಿನೈದು ಕೇಂದ್ರಗಳಲ್ಲಿ 1200ಕ್ಕೂ ಹೆಚ್ಚು ಮಕ್ಕಳು ಪಡೆಯುತ್ತಿದ್ದಾರೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಹಿಂದೆ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣವು ಸ್ವಲ್ಪ ಸ್ವಲ್ಪ ಸಿಗುತ್ತಿತ್ತು. ಯಾವಾಗ ರಾಜಕೀಯ ವ್ಯವಸ್ಥೆಗಳಿಂದಾಗಿ ಅಥವಾ ಮೆಕಾಲೆ ಪದ್ಧತಿಯಿಂದಾಗಿ ನಮ್ಮ ಧರ್ಮ ಸ್ವಲ್ಪ ಶಿಕ್ಷಣದಿಂದ ಹೊರ ಬಂತು. ಇದರ ಮಧ್ಯೆ ಸ್ವಲ್ಪ ಕೊಂಡಿಯಾಗಿ ಉಳಿದ ಯಕ್ಷಗಾನ, ಸಂಗೀತ, ಭರತನಾಟ್ಯ ಮುಂತಾದುವುಗಳಿಂದಾಗಿ ನಮ್ಮ ಸಂಸ್ಕೃತಿಯು ಉಳಿಸಿ ಮುಂದೆ ಕೊಂಡೊಯ್ಯಲು ಸಹಕಾರಿಯಾಗಿದೆ ಎಂದ ಅವರು ಹಿಂದೆ ಯಕ್ಷಗಾನವು ಬೆಳಿಗ್ಗೆಯವರೆಗೆ ನಡೆಯುತ್ತಿತ್ತು. ಆಗಿನ ವ್ಯವಸ್ಥೆಯೇ ಬೇರೆ, ಈಗಿನ ವ್ಯವಸ್ಥೆಯೇ ಬೇರೆ. ನಮ್ಮ ಮುಳಿಯ ಮನೆತನ ಕೂಡ ಯಕ್ಷಗಾನಕ್ಕೆ ಬಹಳ ಹತ್ತಿರವಾಗಿದೆ. ಧಾರ್ಮಿಕ ಶಿಕ್ಷಣ ಹಾಗೂ ಇಂದಿಲ್ಲಿ ಪ್ರಸ್ತುತಪಡಿಸುವ ಧರ್ಮಸಿಂಹಾಸನಕ್ಕೆ ಬಹಳ ಸಾಮ್ಯತೆಯಿದೆ ಹಾಗೂ ಹತ್ತಿರವಾಗಿದೆ. ಪಟ್ಲ ಸತೀಶ್ ರವರ ಈ ಸಣ್ಣ ಪ್ರಾಯದ ಸಾಧನೆ ಮುಂದೆ ದೊಡ್ಡ ಪಯಣವನ್ನು ಮಾಡಲು ಮಹಾಲಿಂಗೇಶ್ವರ ದೇವರು ಅನುಗ್ರಹಿಸಲಿ ಎಂದು ಅವರು ಹೇಳಿದರು.


ಅಶಕ್ತ ಕಲಾವಿದರ ಬಾಳಿಗೆ ಭದ್ರತೆಯನ್ನು ಪಟ್ಲ ಫೌಂಡೇಶನ್ ನೀಡಿದೆ-ಸೀತಾರಾಮ್ ರೈ:
ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ ಗೌರವಾಧ್ಯಕ್ಷರಾಗಿರುವ ಕೆ. ಸೀತಾರಾಮ ರೈ ಸವಣೂರುರವರು ಮಾತನಾಡಿ, ಪಟ್ಲ ಫೌಂಡೇಶನ್ ಏಳು ವರ್ಷ ಕಳೆದು ಎಂಟನೇ ವರ್ಷಕ್ಕೆ ಕಾಲಿಡುತ್ತಿದೆ. ದೇಶದಾದ್ಯಂತ ಪಟ್ಲ ಫೌಂಡೇಶನ್ ಸಂಸ್ಥೆಯು 37 ಘಟಕಗಳನ್ನು ಹೊಂದಿದ್ದು, ಈ ಘಟಕದವರು ಪಟ್ಲ ಸತೀಶ್‌ರವರಲ್ಲಿ ನಮ್ಮಲ್ಲಿ ಯಕ್ಷಗಾನ ಕಾರ್ಯಕ್ರಮ ನೀಡಿ, ಎಲ್ಲ ಖರ್ಚು ವೆಚ್ಚಗಳನ್ನು ನಾವೇ ಭರಿಸುತ್ತೇವೆ ಅಂತ ಹೇಳುವಾಗ ಬಹಳ ಸಂತೋಷವಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಯಕ್ಷಗಾನ ಕಲಾವಿದರ ಬಾಳು ಸಂಕಷ್ಟದಲ್ಲಿದ್ದಾಗ ಇದೇ ಪಟ್ಲ ಸತೀಶ್ ರವರ ಸಂಸ್ಥೆಯು ಸ್ಪಂದಿಸಿ ಅವರಿಗೆ ಭದ್ರತೆಯನ್ನು ಒದಗಿಸಿರುವುದು ಶ್ಲಾಘನೀಯ ಎಂದರು.


ಯಕ್ಷಗಾನದ ಕೊಡುಗೆಯನ್ನು ನಾನು ನನ್ನ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡಿದ್ದೇನೆ-ಡಾ|ಯದುಕುಮಾರ್:
ಎನ್.ಆರ್.ಸಿ.ಸಿ. ಪುತ್ತೂರು ಇದರ ನಿವೃತ್ತ ವಿಜ್ಞಾನಿ ಡಾ|ಎನ್. ಯದುಕುಮಾರ್ ಕೊಳತ್ತಾಯ ಮಾತನಾಡಿ, ಯಕ್ಷಗಾನದ ಕೊಡುಗೆ ಎಂಬುದನ್ನು ನಾನು ನನ್ನ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡಿದ್ದೇನೆ. ಯಕ್ಷಗಾನದಲ್ಲಿ ಸಾಕಷ್ಟು ವಿಷಯಗಳಿವೆ, ಇತಿಹಾಸವಿದೆ, ಪೌರಾಣಿಕ ಕಥೆಗಳಿವೆ, ಉಪ ಕಥೆಗಳಿವೆ. ಯಕ್ಷಧ್ರುವ ಫೌಂಡೇಶನ್ ರವರ ಕಾರ್ಯಕ್ರಮ ಅದು ಅದ್ಭುತ ಕಾರ್ಯಕ್ರಮ. ಯಕ್ಷಗಾನದ ಕಥೆಗಳ ಚುಟುಕುಗಳು, ಭಾಗವತರ ಗಾಯನ, ನೃತ್ಯಗಳು, ಪಾತ್ರಧಾರಿಗಳಿಗೆ ಸನ್ಮಾನ ಬಹಳ ಗಮನ ಸೆಳೆಯುತ್ತದೆ. ಅದರಲ್ಲೂ ಪಾತ್ರಧಾರಿಗಳ ಆರ್ಥಿಕ ಪರಿಸ್ಥಿತಿಗೆ ಯಕ್ಷಧ್ರುವ ಫೌಂಡೇಶನ್ ಸಂಸ್ಥೆಯು ನೆರವಾಗಿರುವುದು ಮಾತ್ರವಲ್ಲ ಹಲವರಿಗೆ ಸೂರನ್ನು ಕಲ್ಪಿಸಿದಾಗ ಯಕ್ಷಗಾನ ಬೆಳೆಯುತ್ತದೆ. ಪಟ್ಲ ಸತೀಶ್‌ರವರ ಅಭಿಮಾನಿಯಾಗಿರುವ ನಾನು ಪಟ್ಲರವರ ಇಂಪಾದ ಗಾಯನ ವಿಶಿಷ್ಟ ರೀತಿಯಲ್ಲಿದ್ದು ಗಾಯನದಲ್ಲಿ ಸ್ವಂತಿಕೆಯಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಪುತ್ತೂರು ಘಟಕವು ಈ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.


ಏಳು ವರ್ಷದಲ್ಲಿ ರೂ.7 ಕೋಟಿ ಸಹಾಯಹಸ್ತ ಪಟ್ಲ ಫೌಂಡೇಶನ್‌ನಿಂದ-ಸತೀಶ್ ಶೆಟ್ಟಿ:
ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ ಶೆಟ್ಟಿ ಮಾತನಾಡಿ, ಕಲಾವಿದರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ. ಕೇವಲ ಯಕ್ಷಗಾನದ ಕಲಾವಿದರಿಗೆ ಮಾತ್ರವಲ್ಲ, ಅದು ಎಲ್ಲಾ ಪ್ರಕಾರದ ಕಲಾವಿದರಿಗೂ ಹಬ್ಬಿಸಬೇಕು, ಸ್ವಲ್ಪಮಟ್ಟಿನ ನೆರವನ್ನಾದರೂ ನೀಡಬೇಕು ಎನ್ನುವ ನಿಟ್ಟಿನಲ್ಲಿ ಸುಮಾರು ಏಳು ವರ್ಷದಲ್ಲಿ ರೂ.7 ಕೋಟಿಯಷ್ಟು ಹಣದ ಸಹಾಯವನ್ನು ಈಗಾಗಲೇ ಪಟ್ಲ ಫೌಂಡೇಶನ್‌ನಿಂದ ನೀಡಿದ್ದೇವೆ. ಅದು ಸಾಧ್ಯವಾಗಿರುವುದು ಹೃದಯವಂತ ದಾನಿಗಳಿಂದ ಹಾಗೂ ಪ್ರೋತ್ಸಾಹಕರಿಂದ ಎಂದು ಹೇಳಲು ಖುಶಿ ಪಡುತ್ತೇನೆ. ನಾನೊಬ್ಬ ಯಕ್ಷಗಾನ ಕಲಾವಿದ, ಯಕ್ಷಗಾನದಿಂದಾಗಿ ಎಲ್ಲರ ಪ್ರೀತಿಯನ್ನು ಗಳಿಸಲು ಸಾಧ್ಯವಾಗಿದೆ. ನಮ್ಮ ಆಶಯ ಏನೆಂದರೆ ನೂರು ಮಂದಿ ಅಶಕ್ತ ಕಲಾವಿದರಿಗೆ ಮನೆ ಕಟ್ಟಿಸಿಕೊಡುವುದಾಗಿದೆ, ಈಗಾಗಲೇ 19 ಮಂದಿಗೆ ಮನೆ ಕಟ್ಟಿಸಿ ಕೊಟ್ಟಿದ್ದೇವೆ. ಹಿರಿಯರಾದ ಸೀತಾರಾಮ್ ರೈಯವರ ಮಾರ್ಗದರ್ಶನ, ಜೈರಾಜ್ ಭಂಡಾರಿಯವರ ಚುರುಕುತನದಿಂದಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಪುತ್ತೂರು ಘಟಕ ಆದರ್ಶಯುಕ್ತವಾಗಿ, ಗಟ್ಟಿತನದಿಂದ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದರು.


ದೇಣಿಗೆ:
ಯಕ್ಷಗಾನ ಕಲಾವಿದ ಸಂಘಟಕ ದಿ.ಕುಂಬ್ರ ಬಾಲಕೃಷ್ಣ ರೈಯವರ ಸ್ಮರಣಾರ್ಥ ಅವರ ಮಗ ಸಂತೋಷ್ ರೈ ಮೇಗಿನಗುತ್ತುರವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ರೂ. 25 ಸಾವಿರ ದೇಣಿಗೆಯ ಚೆಕ್ ಅನ್ನು ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಸಲಹೆಗಾರ ಚಂದ್ರಹಾಸ ರೈ ತುಂಬೆಕೋಡಿ ಪ್ರಾರ್ಥಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪುತ್ತೂರು ಘಟಕದ ಅಧ್ಯಕ್ಷ ನೋಣಾಲು ಜೈರಾಜ್ ಭಂಡಾರಿರವರು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಉದಯ ವೆಂಕಟೇಶ್ ವಂದಿಸಿದರು. ಪ್ರಧಾನ ಸಂಚಾಲಕ ಪ್ರಶಾಂತ್ ರೈ ಮುಂಡಾಲಗುತ್ತು ಕಾರ್ಯಕ್ರಮ ನಿರೂಪಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಯಕ್ಷಗಾನ ಪ್ರಿಯರು ಯಕ್ಷಗಾನವನ್ನು ವೀಕ್ಷಿಸಿದರು.


ಮನಸೂರೈಗೈದ `ಧರ್ಮಸಿಂಹಾಸನಂ’..
ಸಭಾ ಕಾರ್ಯಕ್ರಮದ ಬಳಿಕ ಪಟ್ಲ ಸತೀಶ್ ಶೆಟ್ಟಿರವರ ನೇತೃತ್ವದಲ್ಲಿ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಜನಪ್ರಿಯ ಪ್ರಸಂಗ “ಧರ್ಮ ಸಿಂಹಾಸನ”(ಪೌರಾಣಿಕ ಪುಣ್ಯ ಕಥಾನಕ) ಪ್ರದರ್ಶನಗೊಂಡಿತು. ಭಾಗವತರಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಪ್ರಫುಲ್ಲಚಂದ್ರ ನೆಲ್ಯಾಡಿ, ಮದ್ದಳೆ-ಚೆಂಡೆ ವಾದಕರಾಗಿ ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು, ಕೌಶಿಕ್ ರಾವ್ ಪುತ್ತಿಗೆ, ಚಕ್ರತಾಳದಲ್ಲಿ ರಾಜೇಂದ್ರ ಕೃಷ್ಣ, ಸ್ತ್ರೀ ಪಾತ್ರಧಾರಿಗಳಾಗಿ ಅಕ್ಷಯ್ ಕುಮಾರ್ ಮಾರ್ನಾಡ್, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು, ಹಾಸ್ಯ ಕಲಾವಿದರಾಗಿ ಸಂದೇಶ್ ಮಂದಾರ, ಪೂರ್ಣೇಶ್ ಆಚಾರ್ಯ, ಪ್ರಧಾನ ಪಾತ್ರಧಾರಿಗಳಾಗಿ ರಾಧಾಕೃಷ್ಣ ನಾವಡ ಮಧೂರು, ದಿವಾಣ ಶಿವಶಂಕರ್ ಭಟ್, ದಿನೇಶ್ ಶೆಟ್ಟಿ ಕಾವಳಕಟ್ಟಿ, ಸಂತೋಷ್ ಕುಮಾರ್, ರಾಕೇಶ್ ರೈ ಅಡ್ಕ, ಡಿ. ಮಾಧವ ಬಂಗೇರ ಕೊಳ್ತಮಜಲ್, ಮೋಹನ್ ಬೆಳ್ಳಿಪ್ಪಾಡಿ, ಲೋಕೇಶ್ ಮುಳ್ಳೂರು, ಜಯಕೀರ್ತಿ ಜೈನ್ ಮಾಳ, ಮನೀಷ್ ಪಾಟಾಳಿ ಎಡನೀರು, ಸಚಿನ್ ಅಮೀನ್ ಉದ್ಯಾವರ, ಮಧುರಾಜ್ ಪೆರ್ಮುದ, ಭುವನ್ ಮೂಡುಜೆಪ್ಪು, ಹರಿರಾಜ್ ಶೆಟ್ಟಿಗಾರ್ ಕಿನ್ನಿಗೋಳಿ, ರಮೇಶ್ ಪಟ್ರಮೆ, ಮನೋಜ್ ವೇಣೂರು, ಮನ್ವಿತ್ ನಿಡ್ಕೊಡಿ, ಲಕ್ಷ್ಮಣ ಪೆರ್ಮುದೆ, ದಿವಾಕರ ಕಣಿಯೂರುರವರು ಅಭಿನಯಿಸಿರುತ್ತಾರೆ.

ಕಲಾವತಿ ಟೀಚರ್ ಮನೆಮಗ ನಾನು..
ಅಟ್ಲೂರಿನ ಕಲಾವತಿ ಟೀಚರ್ ಅವರು ನನ್ನ ಅಮ್ಮ ಅಲ್ಲದಿದ್ದರೂ ಅವರು ನನಗೆ ಯಕ್ಷಗಾನದ ಅಮ್ಮ.ಕಲಾವತಿ ಟೀಚರ್ ನಮ್ಮ ಯಕ್ಷಗಾನದ ಕಲಾವಿದರಿಗೆ ಗೊತ್ತಿಲ್ಲ ಎಂಬುದಿಲ್ಲ. ಅವರ ಆರೋಗ್ಯ ಸರಿಯಿಲ್ಲದಿದ್ದರೂ ನಮ್ಮ ಯಾವುದೇ ಕಾರ್ಯಕ್ರಮ ಮಿಸ್ ಮಾಡುವವರಲ್ಲ. ನನ್ನನ್ನು ಅವರು ಮಗ’ ಅಂತಲೇ ಕರೆಯುವುದು ಮಾತ್ರವಲ್ಲ ಅವರು ಯಾವಾಗಲೂ ನನ್ನನ್ನು ಅವರಮನೆಮಗ’ ಅಂತಲೇ ಕರೆಸಿಕೊಳ್ಳುವುದು. ಅವರ ಉಪಸ್ಥಿತಿ ನನಗೆ ಬಹಳ ಖುಶಿ ತಂದಿದ್ದು ಕಲಾವತಿ ಟೀಚರ್‌ರವರಿಗೆ ನಾನು ಸದಾ ಗೌರವಿಸುತ್ತೇನೆ ಎಂದು ಪಟ್ಲ ಸತೀಶ್ ಶೆಟ್ಟಿಯವರು ತುಂಬಿದ ಸಭೆಯಲ್ಲಿ ಆಸೀನರಾಗಿದ್ದ ಕಲಾವತಿ ಟೀಚರ್‌ರವರ ಬಗ್ಗೆ ಹೇಳಿದ ಮಾತುಗಳಾಗಿವೆ.

LEAVE A REPLY

Please enter your comment!
Please enter your name here