ಪುತ್ತೂರು: ಕರ್ನಾಟಕ ವಿಧಾನ ಸಭಾ ಚುನಾವಣೆ- 2023ಕ್ಕೆ ಸಂಬಂಧಿಸಿದಂತೆ ಪುತ್ತೂರು ವಿಧಾನ ಸಭಾ ಕ್ಷೇತ್ರ-206ರಲ್ಲಿ ಒಟ್ಟು 13 ನಾಮಪತ್ರಗಳು ಸಲ್ಲಿಕೆಯಾಗಿದೆ.
ಎ.13ರಂದು ಚುನಾವಣೆಗೆ ಅಧಿಸೂಚನೆ ಪ್ರಕಟಗೊಂಡು ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗಳು ಪ್ರಾರಂಭಗೊಂಡು ನಾಮಪತ್ರ ಸಲ್ಲಿಸಲು ಎ.20 ಅಂತಿಮ ದಿನವಾಗಿತ್ತು. ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆಯಾಗಿರುವ ಕಡಬ ತಾಲೂಕು ಕುಂತೂರು ಕುಂಡಡ್ಕದ ಆಶಾ ತಿಮ್ಮಪ್ಪ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರೈ ಎಸ್ಟೇಟ್ ಎಜ್ಯುಕೇಶನಲ್& ಚಾರಿಟೇಬಲ್ ಟ್ರಸ್ಟ್‌ನ ಪ್ರವರ್ತಕರಾಗಿರುವ ಕೋಡಿಂಬಾಡಿ ರೈ ಎಸ್ಟೇಟ್ ಅಶೋಕ್ ಕುಮಾರ್ ರೈ, ಜೆಡಿಎಸ್ ಅಭ್ಯರ್ಥಿಯಾಗಿ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆಯಾಗಿರುವ ಸುಳ್ಯ ತಾಲೂಕು ನಡುಗಲ್ಲು ನಾಲ್ಕೂರು ಗ್ರಾಮದ ಹಳೆಮಜಲು ಚಿಲ್ತಡ್ಕದ ದಿವ್ಯಪ್ರಭಾ ಗೌಡ, ಅಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕೃಷಿ ವಿಜ್ಞಾನಿ ಮೈಸೂರು ಜಯನಗರ ಬಿ.ಕ ವಿಶುಕುಮಾರ್, ಪಕ್ಷೇತರ ಅಭ್ಯರ್ಥಿಗಳಾಗಿ ಹಿಂದು ಸಂಘಟನೆಗಳ ಮುಖಂಡ ಮುಂಡೂರು ಗ್ರಾಮದ ನರಿಮೊಗರು ಪುತ್ತಿಲ ನಿವಾಸಿ ಅರುಣ್ ಕುಮಾರ್ ಪುತ್ತಿಲ, ಜೆಡಿಎಸ್ ಪಕ್ಷದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ನೆಹರು ನಗರದ ಕಲ್ಲೇಗ ನಿವಾಸಿ ಮಹಮ್ಮದ್ ಅಶ್ರಫ್ ಕಲ್ಲೇಗ, ಮಂಗಳೂರು ಮರಕ್ಕಡ ಕುಂಜತ್ತಬೈಲು ಅಯ್ಯಪ್ಪ ಗುಡಿ ಬಳಿಯ ರವಿ ಶೆಟ್ಟಿ ಕಾಂಪೌಂಡ್ ನಿವಾಸಿ ಸುಂದರ ಕೊಲ, ಸುಳ್ಯ ತಾಲೂಕಿನ ಬೆಳ್ಳಾರೆ ಪೆನ್ನೆ ಮನೆ ನಿವಾಸಿ ಐವನ್ ಫೆರಾವೋ ಪಿ., ನರಿಮೊಗರು ಗ್ರಾಮದ ಬೆದ್ರಾಳ ಸಾಗರ್ ಪ್ಯಾಲೇಸ್‌ನ ನಿವಾಸಿ ಪಿ. ಇಬ್ರಾಹಿಂ, ಸುಳ್ಯ ತಾಲೂಕು ಬೆಳ್ಳಾರೆಯ ಕುಂಞಿಗುಡ್ಡೆ ಮನೆಯ ಇಸ್ಮಾಯಿಲ್ ಶಾಫಿ ಕೆಯವರು ನಾಮಪತ್ರ ಸಲ್ಲಿಸಿದ್ದಾರೆ.
ಈ ಪೈಕಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ತಲಾ ಎರಡು ನಾಮಪತ್ರ ಸಲ್ಲಿಸಿದ್ದಾರೆ.
ಎ.21ರಂದು ನಾಮಪತ್ರ ಪರಿಶೀಲನೆ
ಚುನಾವಣೆಗೆ ಸ್ಪರ್ಧಿಸಿ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಎ.20ರಂದು ತಾಲೂಕು ಆಡಳಿತ ಸೌಧದಲ್ಲಿರುವ ಸಹಾಯಕ ಆಯುಕ್ತ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಎ.24ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ಮೇ.10ರಂದು ಚುನಾವಣೆ ನಡೆದು ಮೇ.13ರಂದು ಮತ ಎಣಿಕೆ ಕಾರ್ಯಗಳು ನಡೆದು ಫಲಿತಾಂಶ ಘೋಷಣೆಯಾಗಲಿದೆ.