ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 421 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪಾಣಾಜೆ ಗ್ರಾ.ಪಂ. ಅಧ್ಯಕ್ಷೆ ಭಾರತಿ ಭಟ್

0

ಬಡತನದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಇವರ ಕಲಿಕೆಯ ಯಶೋಗಾಥೆ ಇಲ್ಲಿದೆ..

ಪುತ್ತೂರು: ದ್ವಿತೀಯ ಪಿಯು ಪರೀಕ್ಷೆಗೆ ಖಾಸಗಿಯಾಗಿ ಬರೆದು ಪಾಣಾಜೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಭಟ್ ರವರು 421 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.


ಶ್ರಮದಿಂದಲೇ ವಿದ್ಯಾಭ್ಯಾಸ
ಕೂಲಿ ಕೆಲಸ ಮಾಡುತ್ತಿದ್ದ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ್ದ ಭಾರತಿ ಭಟ್ ರವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಆಲೆಟ್ಟಿ ಗ್ರಾಮದ ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಿದರು. 1996-97 ರ ಏಳನೇ ತರಗತಿಯ ಬೋರ್ಡ್ ಎಕ್ಸಾಂ ನಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು‌. 1997-98 ರಲ್ಲಿ ಎಂಟನೇ ತರಗತಿಯಿಂದ ತೇರ್ಗಡೆ ಹೊಂದಿದ ನಂತರ ತಂದೆಯ ವಿಯೋಗದಿಂದಾಗಿ ವಿದ್ಯಾಭ್ಯಾಸ ಕೈಬಿಡಬೇಕಾಯಿತು. ಬಡತನದ ಕಾರಣದಿಂದ ವಿದ್ಯಾಭ್ಯಾಸ ಮುಂದುವರೆಸಲು ಕಷ್ಟಸಾಧ್ಯವಾದ ಕಾರಣ ಎಂಟನೇ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ತನ್ನ ತಾಯಿಗೆ ಬೆನ್ನೆಲುಬಾಗಿ ನಿಂತು ದುಡಿಯುವ ಹಾಗೂ ತನ್ನ ಸಹೋದರಿಗೆ ಉನ್ನತ ವಿದ್ಯಾಭ್ಯಾಸವನ್ನು ಕೊಡಿಸುವ ಸಂಕಲ್ಪದೊಂದಿಗೆ ಸುಮಾರು ಹನ್ನೆರಡು ವರ್ಷಗಳ ಕಾಲ ಕೂಲಿ ಕೆಲಸ ಮಾಡಿ ಜೀವನ ಸಾಗಿಸಿದರು‌. ನಂತರ ಕಾಸರಗೋಡಿನ ಬದಿಯಡ್ಕ ಚಾಂಗುಳಿ ಮನೆತನದ ವೆಂಕಟ್ರಮಣ ಭಟ್ ರವರನ್ನು ವಿವಾಹವಾಗಿ ಪಾಣಾಜೆಯಲ್ಲಿ ವಾಸವಾಗಿದ್ದಾರೆ. 2020-21 ನೇ ಸಾಲಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿ ಸದಸ್ಯೆಯಾಗಿ 2 ವರ್ಷಗಳಿಂದ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಉದಯೋನ್ಮುಖ ಕವಯಿತ್ರಿಯೂ ಆಗಿದ್ದು ಮುಖಪುಟ ಸಾಹಿತ್ಯ ಬಳಗಗಳಲ್ಲಿ ಹೆಸರುವಾಸಿಯಾದ ‘ಯುಗಾದಿ ಸಾಹಿತ್ಯ ಬಳಗದ ಅಡ್ಮಿನ್’ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಾಲ್ಯದಲ್ಲಿ ಅರ್ಧದಲ್ಲಿ ಮೊಟಕುಗೊಂಡಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸುವ ಕನಸನ್ನು ಸದಾ ಕಾಣುತ್ತಿದ್ದ ಭಾರತಿ ಭಟ್ ಅವರು ಇದೀಗ ಸುಮಾರು ಇಪ್ಪತ್ಮೂರು ವರ್ಷಗಳ ನಂತರ ಮತ್ತೆ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದು, ಕಲಿಕೆಗೆ ವಯಸ್ಸಿನ ಪರಿಮಿತಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬೆಳ್ತಂಗಡಿಯ ಕೊಯ್ಯೂರು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿರುವ, ಪಾಣಾಜೆಯ ಬಾಲಕೃಷ್ಣ ಬೇರಿಕೆಯವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದೊಂದಿಗೆ 2021-22 ನೇ ಸಾಲಿನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಪುತ್ತೂರಿನ ನೆಲ್ಲಿಕಟ್ಟೆಯ ಕೋಟ ಶಿವರಾಮ ಕಾರಂತ ಪ್ರೌಢಶಾಲೆಯಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು 54% ಅಂಕಗಳನ್ನು ಪಡೆದು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಎಸ್.ಎಸ್.ಎಲ್.ಸಿ. ಪೂರ್ಣಗೊಳಿಸಿದರು. 2022-23 ನೇ ಸಾಲಿನ ಪಿಯುಸಿ ಪರೀಕ್ಷೆಗೆ ಪುತ್ತೂರು ತಾಲೂಕಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖಾಸಗಿಯಾಗಿ ಬರೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.


ಬಿಡುವಿಲ್ಲದ ಸಮಯದಲ್ಲಿ ಕಲಿಕೆ
ಪಂಚಾಯತ್ ಕೆಲಸ ಹಾಗೂ ಮನೆಯ ನಿರ್ವಹಣೆ ಜೊತೆಗೆ ತಾವು ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಹಿತ್ಯ ಬಳಗಗಳ ಕೆಲಸದ ಮಧ್ಯೆ ಸಿಗುವ ಅಲ್ಪ ಸಮಯದಲ್ಲಿ ಓದಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.‌ ಸಂಬಂಧಿಕರಾದ ವಲ್ಲಿ ಟೀಚರ್ ಹಾಗೂ ವಿನುತಾ ಬಲ್ಲಾಳ್ ಟೀಚರ್, ಕಾರ್ಕಳದಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರ ಸಹೋದರಿ ದಿವ್ಯಜ್ಯೋತಿ, ಧಾರವಾಡದ ಯೂನಿವರ್ಸಿಟಿಯಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕ ಅವಿನಾಶ್ ಸೆರೆಮನಿ, ಉಪನ್ಯಾಸಕ ತೀರ್ಥರಾಜ್ ಮೇಸ್ತರವರು ಇವರಿಗೆ ಮಾರ್ಗದರ್ಶನ ಮಾಡಿರುತ್ತಾರೆ. ಒಟ್ಟಿನಲ್ಲಿ ಕಲಿಕೆಗೆ ವಯಸ್ಸು ಮುಖ್ಯವಲ್ಲ, ಶ್ರಮ ಮತ್ತು ಕಲಿಕೆಯ ಆಸಕ್ತಿಯಿಂದ ಯಶಸ್ಸು ಸಾಧಿಸಬಹುದು ಎಂಬುದನ್ನು ಒಂದು ಗ್ರಾಮದ ಪ್ರಥಮ ಪ್ರಜೆಯಾಗಿ ಭಾರತೀ ಭಟ್ ರವರು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ.

ವಿದ್ಯಾಭ್ಯಾಸಕ್ಕೆ ಮುಳುವಾಗಿದ್ದ ಬಡತನ
1997-98 ರಲ್ಲಿ ಎಂಟನೇ ತರಗತಿಯಿಂದ ತೇರ್ಗಡೆ ಹೊಂದಿದ ನಂತರ ತಂದೆಯ ವಿಯೋಗದಿಂದಾಗಿ ವಿದ್ಯಾಭ್ಯಾಸ ಕೈಬಿಡಬೇಕಾಯಿತು. ಬಡತನದ ಕಾರಣದಿಂದ ವಿದ್ಯಾಭ್ಯಾಸ ಮುಂದುವರೆಸಲು ಕಷ್ಟಸಾಧ್ಯವಾದ ಕಾರಣ ಎಂಟನೇ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ತನ್ನ ತಾಯಿಗೆ ಬೆನ್ನೆಲುಬಾಗಿ ನಿಂತು ದುಡಿಯುವ ಹಾಗೂ ತನ್ನ ಸಹೋದರಿಗೆ ಉನ್ನತ ವಿದ್ಯಾಭ್ಯಾಸವನ್ನು ಕೊಡಿಸುವ ಸಂಕಲ್ಪದೊಂದಿಗೆ ಸುಮಾರು ಹನ್ನೆರಡು ವರ್ಷಗಳ ಕಾಲ ಕೂಲಿ ಕೆಲಸ ಮಾಡಿ ಜೀವನ ಸಾಗಿಸಿದರು‌.

LEAVE A REPLY

Please enter your comment!
Please enter your name here