ಪುತ್ತೂರು:ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಎ.28ರಂದು ನಡೆಯಲಿರುವ ವರ್ಷಾವಧಿ ನೇಮ ನಡಾವಳಿಯ ಅಂಗವಾಗಿ ಎ.25ರಂದು ಮುಂಡ್ಯ ಹಾಕುವ ಕಾರ್ಯಕ್ರಮವು ಪೂರ್ವ ಸಂಪ್ರದಾಯದಂತೆ ನೆರವೇರಿತು.
ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ನೇಮ ನಡಾವಳಿಗೆ ಗೊನೆ ಮುಹೂರ್ತ ನಡೆದು 5 ದಿನಗಳ ಬಳಿಕ ವಾಲಸರಿ ಗದ್ದೆಯಲ್ಲಿ ಮುಂಡ್ಯ ಹಾಕುವ ಮತ್ತು ಚೆಂಡು ಉರುಳಿಸುವ ಕಾರ್ಯಕ್ರಮದ ಮೂಲಕ ನೇಮ ನಡಾವಳಿಗೆ ಚಾಲನೆ ನೀಡಲಾಗುತ್ತದೆ. ದೈವಸ್ಥಾನದ ಮೂಲ ಸ್ಥಾನದಲ್ಲಿ ಪ್ರದಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯರವರು ಪ್ರಾಥಿಸಿದ ಬಳಿಕ ಮಲರಾಯ ದೈವದ ದರ್ಶನ ಪಾತ್ರಿಯೊಂದಿಗೆ ಆಡಳಿತ ಮಂಡಳಿ ಹಾಗೂ ಊರ ಭಕ್ತಾದಿಗಳು ಸೇರಿಕೊಂಡು ವಾಲಸರಿ ಗದ್ದೆಗೆ ಹೋಗಿ ಅಲ್ಲಿ ಮುಂಡ್ಯ ಹಾಕಿ ಬಳಿಕ ಗದ್ದೆಗೆ ಚೆಂಡು ಉರುಳಿಸುವ ಕಾರ್ಯಕ್ರಮ ನಡೆಯಿತು. ದೈವಸ್ಥಾನದ ಪ್ರದಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ ಅವರು ಗದ್ದೆಗೆ ಚೆಂಡನ್ನು ಉರುಳಿಸಿದರು. ಸಂಪ್ರದಾಯದಂತೆ ಉಮೇಶ್ ಗೌಡ ಅವರು ಗದ್ದೆಯುದ್ದಕ್ಕೂ ಚೆಂಡನ್ನು ಉರುಳಿಸಿಕೊಂಡು ಮೂರು ಸುತ್ತು ಬರುವ ಮೂಲಕ ನೇಮ ನಡಾವಳಿಗೆ ಚಾಲನೆ ನೀಡಲಾಯಿತು. ಪುತ್ತೂರು ಪಡೀಲ್ ನಿವಾಸಿಯಾಗಿರುವ ಮತ್ತು ನಗರಸಭೆ ಕಚೇರಿ ಬಳಿಯಲ್ಲಿ ಅಂಗಡಿ ಹೊಂದಿರುವ ಶೀನ ಎಂಬವರು ಹಿರಿಯರ ಮಾರ್ಗದರ್ಶನದಂತೆ ಚರ್ಮದಿಂದ ಚೆಂಡು ತಯಾರಿಸಿ ಬಳಿಕ ಮುಂಡ್ಯ ಹಾಕುವ ಸಂದರ್ಭದಲ್ಲಿ ದೈವಸ್ಥಾನದಲ್ಲಿ ಅದನ್ನು ಸಮರ್ಪಣೆ ಮಾಡುತ್ತಾರೆ.
ಈ ಸಂದರ್ಭದಲ್ಲಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಸದಸ್ಯರಾದ ಕಿರಣ್ ಕುಮಾರ್ ರೈ, ಭೋಜರಾಜ ಗೌಡ, ಶ್ಯಾಮಣ್ಣ ನಾಯಕ್, ನಾರಾಯಣ ಪೂಜಾರಿ, ಅಶೋಕ್ ಕುಮಾರ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ತಿಮ್ಮಪ್ಪ ಗೌಡ, ಮಾಜಿ ಸದಸ್ಯರಾದ ಚಿದಾನಂದ ಬೈಲಾಡಿ, ಆನಂದ ಸುವರ್ಣ, ಮನೇಜರ್ ಚಂದ್ರಶೇಖರ್ ಭಟ್ ಸೇರಿದಂತೆ ಹಲವಾರು ಮಂದಿ ಭಕ್ತರು ಉಪಸ್ಥಿತರಿದ್ದರು.