ಎ.30: ಸರ್ವೆ ಎಸ್‌ಜಿಎಂ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಶ್ರೀನಿವಾಸ್ ಸೇವಾ ನಿವೃತ್ತಿ

0

ಪುತ್ತೂರು: ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ಶ್ರೀನಿವಾಸ್ ಅವರು ಎ.30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. 1985ರಲ್ಲಿ ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯಲ್ಲಿ ಶಿಕ್ಷಕಿ ವೃತ್ತಿಗೆ ಸೇರಿದ ಜಯಶ್ರೀ ಅವರು ಸುಧೀರ್ಘ 38 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿದ್ದಾರೆ. ಇವರು 2020 ನ.1ರಿಂದ ಶಾಲಾ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಪ್ರಾಥಮಿಕ ವಿದ್ಯಾಭ್ಯಾಸವನ್ನು ವಗ್ಗ ನೀರ್ಖಾನ ಪ್ರಾಥಮಿಕ ಶಾಲೆಯಲ್ಲಿ ಪಡೆದಿರುವ ಜಯಶ್ರೀ ಅವರು ಉಡುಪಿ ಬೀಡಿನಗುಟ್ಟೆ ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರೌಢ ವಿದ್ಯಾಭ್ಯಾಸ ಪಡೆದರು. ಉಡುಪಿ ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಹಾಗೂ ಬಂಟ್ವಾಳ ಎಸ್‌ವಿಎಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಉಡುಪಿ ಎಂಜಿಎಂ ಕಾಲೇಜಿನಲ್ಲಿ ಬಿಎಡ್ ಪದವಿ ಪಡೆದುಕೊಂಡರು. ಕುವೆಂಪು ಓಪನ್ ಯುನಿವರ್ಸಿಟಿಯಲ್ಲಿ ಗಣಿತ ವಿಷಯದಲ್ಲಿ ಎಂಎಸ್‌ಸಿ ಪದವಿ ಪಡೆದುಕೊಂಡಿದ್ದಾರೆ.


ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸಾಧನೆಗೈಯಲು ಮತ್ತು ಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಇವರು ವೃತ್ತಿ ಜೀವನದಲ್ಲಿ ಅನೇಕ ಪ್ರಶಸ್ತಿ, ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.
ಜಯಶ್ರೀ ಅವರ ಪತಿ `ಜನಮೆಚ್ಚಿದ ಶಿಕ್ಷಕ’ ಖ್ಯಾತಿಯ ಶ್ರೀನಿವಾಸ್ ಎಚ್.ಬಿ ಅವರು 36 ವರ್ಷಗಳ ಕಾಲ ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿ 2020 ಅ.31ರಂದು ರಂದು ಸೇವಾ ನಿವೃತ್ತಿ ಹೊಂದಿದ್ದರು. ಶಾಲೆಯ ಅಭಿವೃದ್ಧಿಯಲ್ಲಿ ಇವರಿಬ್ಬರೂ ಮಹತ್ತರ ಪಾತ್ರ ವಹಿಸಿದ್ದು ಊರವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜನಕ ರಾವ್ ಕೆ ಹಾಗೂ ಕೆ.ಜೆ ಸರಸ್ವತಿಯವರ ಪುತ್ರಿಯಾಗಿರುವ ಜಯಶ್ರೀ ಶ್ರೀನಿವಾಸ್ ದಂಪತಿಗೆ ಶ್ರೇಯಸ್ ಎಚ್.ಎಸ್ ಹಾಗೂ ರಕ್ಷಿತ್ ಎಚ್.ಎಸ್ ಎಂಬ ಇಬ್ಬರು ಪುತ್ರರಿದ್ದಾರೆ. ಜಯಶ್ರೀ ಶ್ರೀನಿವಾಸ್ ಕುಟುಂಬ ಪ್ರಸ್ತುತ ಬೊಳ್ವಾರು ವೆಸ್ಟ್ ಶ್ರೀರಕ್ಷಾ ನಿವಾಸದಲ್ಲಿ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here