‘ಹಿಂದು ನಾಯಕನಾಗಬೇಕಾದರೆ ಎಮ್‌ಎಲ್‌ಎ ಆಗಲೇಬೇಕಾ?’ – ಅರುಣ್ ಕುಮಾರ್ ಪುತ್ತಿಲರಿಗೆ ಡಾ.ಎಂ.ಕೆ ಪ್ರಸಾದ್ ಪ್ರಶ್ನೆ

0
  • ಯಾವುದೇ ತೊಂದರೆ, ಕಷ್ಟ ಅನುಭವಿಸದೆ ಪುತ್ತಿಲ ಶಾಸಕತ್ವ ಕೇಳುತ್ತಿದ್ದಾರೆ
  • ಬಿಜೆಪಿ ಕಚೇರಿಗೇ ಬಾರದೆ, ನಾಯಕರನ್ನು ಭೇಟಿಯಾಗದೆ ಶಾಸಕತ್ವದ ಟಿಕೆಟ್ ಕೇಳುವುದು ಹಾಸ್ಯಾಸ್ಪದ
  • ಮೋದಿ, ಶಾ, ನಡ್ಡಾ ಸೂಚಿಸಿದ್ದ ಅಭ್ಯರ್ಥಿಯನ್ನೇ ಧಿಕ್ಕರಿಸಿರುವ ಪುತ್ತಿಲರಿಂದ ಮೋದಿಗೆ ಬೆಂಬಲದ ಹೇಳಿಕೆ
  • ಪುತ್ತಿಲ ಯಾವುದೇ ಕಾರಣಕ್ಕೂ ಗೆಲ್ಲೋದಿಲ್ಲ-ಬಿಜೆಪಿಗೆ ತೊಂದರೆಯಾಗಬಹುದು ಆದರೆ ರಾಷ್ಟ್ರೀಯ ಪಕ್ಷಕ್ಕೆ ಸಾವಿಲ್ಲ

ಪುತ್ತೂರು: ಹಿಂದುತ್ವಕ್ಕಾಗಿ ವೀರ ಸಾವರ್ಕರ್, ದೀನ್ ದಯಾಳ್ ಉಪಾಧ್ಯಾಯ ಸೇರಿದಂತೆ ಹಲವಾರು ಮಂದಿ ಹೋರಾಟ ಮಾಡಿದ್ದಾರೆ. ಆದರೆ ಅವರಿಗೆ ಯಾವ ಆಕಾಂಕ್ಷೆ ಇರಲಿಲ್ಲ. ಇವತ್ತು ಅರುಣ್ ಕುಮಾರ್ ಪುತ್ತಿಲ ಹಿಂದು ನಾಯಕ ಎಂದು ಹೇಳಿಕೊಂಡು ಎಮ್‌ಎಲ್‌ಎ ಆಗುವ ಆಕಾಂಕ್ಷೆ ಇಟ್ಟು ಕೊಂಡಿದ್ದಾರೆ. ಹಿಂದು ನಾಯಕನಾಗಿರಬೇಕಾದರೆ ಎಮ್‌ಎಲ್‌ಎ ಆಗಲೇ ಬೇಕಾ ಎಂದು ಪುತ್ತೂರು ಆದರ್ಶ ಆಸ್ಪತ್ರೆಯ ಜನಪ್ರಿಯ ವೈದ್ಯ ಡಾ.ಎಂ.ಕೆ.ಪ್ರಸಾದ್ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಮಾಡಿದ್ದಾರೆ.

ನಮ್ಮ ಅನೇಕ ನಾಯಕರು ಹಿಂದುತ್ವದ ಉಳಿವಿಗಾಗಿ ತುರ್ತು ಪರಿಸ್ಥಿತಿಯ ಕಾಲದಿಂದಲೂ ಹೋರಾಟ ಮಾಡುತ್ತಾ ಬಂದಿದ್ದಾರೆ, ಜೈಲಿಗೆ ಹೋಗಿದ್ದಾರೆ, ರಾಟೆ ಹಾಕಿಸಿಕೊಂಡಿದ್ದಾರೆ. ಪೆಟ್ಟು ತಿಂದಿದ್ದಾರೆ. ಕೇಸು ಹಾಕಿಸಿಕೊಂಡಿದ್ದಾರೆ. ಇಂಥದ್ದನ್ನೆಲ್ಲ ನೆನಪಿಸಿಕೊಂಡಾಗ ಅನೇಕ ಮಂದಿ ಕಾರ್ಯಕರ್ತರು ಕಷ್ಟಪಟ್ಟಿದ್ದಾರೆ. ಇದನ್ನು ನಾವು ಸ್ಮರಿಸಬೇಕು. ತುಂಬಾ ತೊಂದರೆಗೊಳಗಾದಾಗಲೂ ಕೆಲಸ ಮಾಡಿದವರು ಇವತ್ತಿಗೂ ಬಿಜೆಪಿಯಲ್ಲಿ ಇದ್ದಾರೆ. ಆದರೆ ಅವರ‍್ಯಾರೂ ಶಾಸಕತ್ವದ ಟಿಕೆಟ್ ಕೇಳಿಲ್ಲ. ಆದರೆ ಅರುಣ್ ಪುತ್ತಿಲ ಯಾವುದೇ ತೊಂದರೆ, ಕಷ್ಟ ಅನುಭವಿಸದೆ ಶಾಸಕತ್ವ ಕೇಳುತ್ತಾರೆ ಆದರೆ ಪುತ್ತೂರು ಬಿಜೆಪಿಯ ಕಚೇರಿಗೆ ಬಾರದೇ, ಬಿಜೆಪಿಯ ಮುಖಂಡರನ್ನು ಸಂಪರ್ಕಿಸದೇ ತನಗೆ ಶಾಸಕ ಸ್ಥಾನದ ಟಿಕೆಟ್ ನೀಡಬೇಕೆಂದು ಆಗ್ರಹಿಸುವುದು ಹಾಸ್ಯಾಸ್ಪದ ಎಂದು ಡಾ.ಪ್ರಸಾದ್ ಹೇಳಿದರು.

ಅರುಣ್ ಕುಮಾರ್ ಪುತ್ತಿಲರಿಗೆ ಬಿಜೆಪಿಯಿಂದ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಲು ಯಾಕೆ ಟಿಕೆಟ್ ನೀಡಿಲ್ಲ ಎಂಬುದು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯವಾಗಿದೆ. ಆದರೆ ಯಾವ ಕಾರಣಕ್ಕೆ ಟಿಕೆಟ್ ಸಿಗಲಿಲ್ಲ ಎಂಬ ಕುರಿತು ಕಾರ್ಯಕರ್ತರಿಗೂ ತಿಳಿಯದೇ ಇರುವ ಅನೇಕ ಸಂಗತಿಗಳು ಇವೆ. ಅರುಣ್ ಪುತ್ತಿಲ ಅವರು ಈ ಹಿಂದೆ ಬಜರಂಗದಳದ ಜಿಲ್ಲಾ ಸಂಚಾಲಕರಾಗಿದ್ದರು. ಅವರ ನಡವಳಿಕೆಯಿಂದಾಗಿ ಅವರಾಗಿಯೇ ಪರಿವಾರ ಸಂಘಟನೆಯಿಂದ ಹೊರ ನಡೆದರು. ಬಳಿಕ ಪ್ರಮೋದ್ ಮುತಾಲಿಕರೊಂದಿಗೆ ಕೈ ಜೋಡಿಸಿ ಶ್ರೀರಾಮ ಸೇನೆಯ ಸಂಚಾಲಕರಾದರು. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವೃದ್ಧಿಯಾದಾಗ ಪುತ್ತಿಲರು ಶ್ರೀರಾಮ ಸೇನೆಯಿಂದ ಹೊರ ಬಂದರು. ತನ್ನದೇ ಹಿಂದು ಸೇನೆ ರಚಿಸಿ ಅದನ್ನೂ ಸಹ ಅರ್ಧದಲ್ಲೇ ಕೈ ಬಿಟ್ಟರು. 2013ರಲ್ಲಿ ಸಂಘ ಪರಿವಾರದ ಹಿರಿಯರು ಬಿಜೆಪಿಯಲ್ಲಿ ಕಾರ್ಯದರ್ಶಿ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹೇಳಿದಾಗ ತನಗೆ ಅಧ್ಯಕ್ಷ ಸ್ಥಾನವನ್ನೇ ಕೊಡಬೇಕೆಂದು ಹಠ ಹಿಡಿದ ಕಾರಣದಿಂದ, ಬಿಜೆಪಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ತಾನಾಗಿಯೇ ಕಳೆದುಕೊಂಡರು.ಸಂಘದ ಹಿರಿಯರು ಬಿಜೆಪಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸೂಚಿಸಿದರೂ ಪಕ್ಷಕ್ಕೆ ಬರಲಿಲ್ಲ. ನಂತರವು ಕೂಡಾ ಸಂಘ ಪರಿವಾರದ ಹಿರಿಯರು ಪುತ್ತಿಲರನ್ನು ಕಡೆಗಣಿಸದೇ ಸಂಘಟನೆಯಲ್ಲಿ ಕೆಲಸ ಮಾಡುವ ಸಲುವಾಗಿ ನಮೋ ಬ್ರಿಗೇಡ್‌ನ ನೇತೃತ್ವ ನೀಡಲಾಗಿತ್ತು. ಪುತ್ತಿಲ ಅವರು ಎಷ್ಟು ಬಾರಿ ಬಿಜೆಪಿಗೆ ಓಟ್ ಹಾಕಿದ್ದಾರೆ ಎಂದು ಪ್ರಶ್ನಿಸಿದ ಡಾ.ಪ್ರಸಾದ್, 2008ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶಕುಂತಳಾ ಶೆಟ್ಟಿಯವರೊಂದಿಗೆ ಕೆಲಸ ಮಾಡಿ ಬಿಜೆಪಿಗೆ ವಿರುದ್ಧವಾಗಿ ನಡೆದರು. 2013 ಮತ್ತು 2018ರ ಚುನಾವಣೆಯಲ್ಲೂ ಪಕ್ಷದ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿ ಬಿಜೆಪಿಗೆ ವಿರುದ್ಧವಾಗಿ ನಡೆದರು. ಹೀಗೆ ಅವರು ಸದಾ ಚುನಾವಣೆ ಹತ್ತಿರ ಬರುವಾಗ ಪಕ್ಷಕ್ಕೆ ವಿರುದ್ದವಾಗಿ ನಡೆಯುತ್ತಿರುವುದು ಸಾಮಾನ್ಯವಾಗಿ ಕಾಣುತ್ತಿದೆ ಎಂದು ಹೇಳಿದ ಡಾ.ಎಂ.ಕೆ.ಪ್ರಸಾದ್ ಅವರು, ಓರ್ವ ವ್ಯಕ್ತಿ ಶಾಸಕನಾಗಬೇಕಾದರೆ ಆತ ಶಾಂತ ಸ್ವಭಾವವನ್ನು ಹೊಂದಿರಬೇಕು.ಸಾರ್ವಜನಿಕರ ಕಷ್ಟ ಸುಖಗಳಲ್ಲಿ ಸ್ಪಂದಿಸಿ, ಪಕ್ಷದಲ್ಲಿ ಜವಾಬ್ದಾರಿಯನ್ನು ನಿರ್ವಹಿಸಬೇಕು.ಆದರೆ ಪುತ್ತಿಲ ಇದಕ್ಕೆ ವಿರುದ್ಧವಾಗಿ ನಡೆಯತ್ತಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಗಲಾಟೆ ಮಾಡುವವರು ಅಲ್ಲ. ಶಾಂತವಾಗಿ, ಅಭಿವೃದ್ಧಿಯ ಬಗ್ಗೆ ಆಲೋಚನೆ ಮಾಡಿ ಎಲ್ಲರ ತೊಂದರೆಗಳನ್ನು ಆಲಿಸುವಂತಹ ಶಾಸಕರು ನಮಗೆ ಬೇಕು.ಸಂಘರ್ಷ ಮಾಡುವವರು ಬೇಕಾಗಿಲ್ಲ.ನಮಗೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಬೇಕು. ಅರುಣ್ ಕುಮಾರ್ ಪುತ್ತಿಲರಂತೆ ಶೋ ಕೊಡುವವರು ಬೇಕಾಗಿಲ್ಲ ಎಂದರಲ್ಲದೆ, ಅರುಣ್ ಪುತ್ತಿಲ ಸ್ವ ಪ್ರತಿಷ್ಠೆಗೋಸ್ಕರ ಬಿಜೆಪಿಯನ್ನು ಬಲಿ ಕೊಡುತ್ತಿದಾರೆ ಎಂದು ಆರೋಪಿಸಿದರು.

ಬಿಜೆಪಿ ಪ್ರತಿಭಟನೆ ಮಾಡಿದಾಗ ಪ್ರತ್ಯೇಕ ಇನ್ನೊಂದು ಪ್ರತಿಭಟನೆ: ಬಿಜೆಪಿಯಿಂದ ಪ್ರತ್ಯೇಕವಾಗಿ ಬೇರೆಯೇ ಸಂಘಟನೆ ಮಾಡಿಕೊಂಡು ಬಿಜೆಪಿ ಅಧ್ಯಕ್ಷರು, ಸದಸ್ಯರಿಗೆ ವಿರುದ್ಧವಾಗಿ ಬೇರೆಯೇ ಕೂಟ ರಚಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಅವರು ಹಲವು ಸಂದರ್ಭದಲ್ಲಿ ಹಿಂದುತ್ವಕ್ಕೆ ಸಂಬಂಧಿಸಿ ಬಿಜೆಪಿಯಿಂದ ಯಾವುದಾದರೊಂದು ಪ್ರತಿಭಟನೆ ಸಭೆ ಮಾಡಿದಾಗ ಅರುಣ್ ಕುಮಾರ್ ಪುತ್ತಿಲ ಅವರು ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ಪ್ರತಿಭಟನೆ ಮಾಡುತ್ತಿದ್ದರು. ಇದು ಎಷ್ಟರ ಮಟ್ಟಿಗೆ ಸರಿ ಎಂದು ಡಾ.ಎಂ.ಕೆ.ಪ್ರಸಾದ್ ಪ್ರಶ್ನಿಸಿದರು.

ಶಿಷ್ಯನ ವಿರುದ್ಧವೇ ಪತ್ರಿಕಾಗೋಷ್ಟಿ ಮಾಡುವುದು ನೋವಾಗಿದೆ: ಮೋದಿಯವರು ದೇಶದಲ್ಲಿ ಕಣಕ್ಕಿಳಿದಾಗ ಮೋದಿಯವರನ್ನು ಜನರಿಗೆ ಪರಿಚಯಿಸಲು ನಾನು ಅರುಣ್ ಕುಮಾರ್ ಪುತ್ತಿಲ, ಅಜಿತ್ ರೈ ಸೇರಿಕೊಂಡು ನಮೋ ಬ್ರಿಗೇಡ್ ಮಾಡಿ ಊರೆಲ್ಲ ಸುತ್ತಿದ್ದು ಈ ಸಂದರ್ಭ ಪುತ್ತಿಲ ಒಳ್ಳೆ ಕೆಲಸ ಮಾಡಿದ್ದಾರೆ. ಗಣೇಶೋತ್ಸವದಲ್ಲೂ ಉತ್ತಮ ಕೆಲಸ ಮಾಡಿದ್ದಾರೆ. ಒತ್ತೆಕೋಲ, ಕುಕ್ಕಿನಡ್ಕ ದೇವಸ್ಥಾನ,ಮುಂಡೂರು ಮೃತ್ಯುಂಜೇಶ್ವರ ದೇವಸ್ಥಾನದಲ್ಲೂ ಕೆಲಸ ಮಾಡಿದ್ದಾರೆ. ಆದರೆ ಅಲ್ಲಿ ಅವರು ಸರಿಯಾಗಿ ಲೆಕ್ಕ ಕೊಡಲಿಲ್ಲ ಎಂಬ ಆರೋಪ ಇದೆ. ಮೃತ್ಯುಂಜೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿ ಅವರ ವಿರುದ್ಧ ಅನೇಕ ಕೇಸುಗಳಿವೆ. ಶನಿಪೂಜೆ ಸಂದರ್ಭ ಮೆರವಣಿಗೆಗೆ ಅನುಮತಿ ಕೊಡದೇ ಇದ್ದರೂ ಮೆರವಣಿಗೆ ಮಾಡಲು ಹೋಗಿ ಅವರ ಜೊತೆಗಿದ್ದ ಎಷ್ಟೋ ಹಿಂದೂ ಕಾರ್ಯಕರ್ತರು ಪೊಲೀಸರ ಪೆಟ್ಟು ತಿನ್ನುವಂತಾಗಿತ್ತು. ಡಿಡಿಯವರಿಂದಾಗಿ ಈ ಘಟನೆ ಸಂಭವಿಸಿದೆ ಎಂಬ ಸುಳ್ಳು ಆರೋಪವ್ನೂ ಆ ಸಂದರ್ಭ ಹೊರಿಸಿದ್ದರು. ಶನಿಪೂಜೆ ಸಂದರ್ಭ ಸಂಗ್ರಹವಾದ ಹಣದ ಲೆಕ್ಕವನ್ನೂ ಕೊಡಲಿಲ್ಲ ಎಂದೂ ಕೆಲವರು ಹೇಳುತ್ತಿದ್ದಾರೆ. ಹೀಗೆ ಅವರು ನಮಗೆ ಎಷ್ಟು ಅನ್ಯಾಯ ಮಾಡಲಾಗುತ್ತದೆಯೋ ಅಷ್ಟು ಅನ್ಯಾಯ ಮಾಡಿದ್ದಾರೆ. ಆದರೂ ನಾನು ಅವರನ್ನು ಕ್ಷಮಿಸಿ ಒಳ್ಳೆಯ ನಾಯಕನಾಗಿ ನಮ್ಮೊಂದಿಗೆ ಬರಲಿ ಎಂದು ಅವರನ್ನು ಸೇರಿಸಿಕೊಂಡೆ. ಆದರೆ ಅವರ ಮನಸ್ಸು ವಕ್ರವಾಗಿದೆ. ಬರೀ ಅಧಿಕಾರದ ಆಸೆ ಅವರದ್ದು, ನನಗೆ ಶಾಸಕನಾಗಲೇಬೇಕೆಂಬ ಪ್ರವೃತ್ತಿ ಇರುವವರು ನಮಗೆ ಬೇಡ. ಇವತ್ತು ಆಶಾ ತಿಮ್ಮಪ್ಪರಿಗೆ ವಯಸ್ಸಾಗಿದೆ, ಅವರಿಗೆ ಕೂಡುವುದಿಲ್ಲ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಗೆದ್ದರೆ ಬಿಜೆಪಿ ಗೆದ್ದಂತೆ, ನಾನು ಗೆದ್ದರೆ ಬಿಜೆಪಿಗೇ ಬೆಂಬಲ ಎಂದು ಹೇಳುತ್ತಿದ್ದಾರೆ. ಜೊತೆಗೆ ಮೋದಿಗೆ ಬೆಂಬಲ ಕೊಡುವುದಾಗಿಯೂ ಹೇಳಿದ್ದಾರೆ. ಆದರೆ, ಸ್ವತಃ ಮೋದಿ, ಅಮಿತ್ ಶಾ, ನಡ್ಡಾ ಅವರು ಗುರುತಿಸಿ ಸೂಚಿಸಿರುವ ಅಭ್ಯರ್ಥಿಯನ್ನೇ ಅರುಣ್ ಕುಮಾರ್ ಪುತ್ತಿಲ ಧಿಕ್ಕರಿಸಿದ್ದಾರೆ. ಯಡಿಯೂರಪ್ಪ ಫೋನ್ ಕರೆ ಮಾಡಿ ನಾಮಿನೇಶನ್ ವಿದ್‌ಡ್ರಾ ಮಾಡಲು ಹೇಳಿದ ಬಳಿಕ ಅಮಿತ್ ಶಾರಿಗೆ ಫೋನ್ ಮಾಡುವುದಾಗಿ ಹೇಳಿ ಬಳಿಕ ಅವರ ಸಂಪರ್ಕಕ್ಕೂ ಸಿಗದೆ ಬಿಜೆಪಿಯನ್ನು ಧಿಕ್ಕರಿಸಿರುವ ಅರುಣ್ ಕುಮಾರ್ ಪುತ್ತಿಲ ಯಾವ ಕಾಲಕ್ಕೂ ಗೆಲ್ಲುವುದಿಲ್ಲ. ಬಿಜೆಪಿಗೆ ತೊಂದರೆಯಾಗಬಹುದು. ಆದರೆ ಬಿಜೆಪಿ ರಾಷ್ಟ್ರೀಯ ಪಕ್ಷ, ಅದಕ್ಕೆ ಅಂತ್ಯವಿಲ್ಲ ಎಂದು ಡಾ.ಪ್ರಸಾದ್ ಹೇಳಿದರು. ಮುಂಡೂರು ಮೃತ್ಯುಂಜಯೇಶ್ವರ ದೇವಳದಲ್ಲಿ ಅಧ್ಯಕ್ಷ ಲೋಕಪ್ಪ ಗೌಡರಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಬಿಡದಿರುವುದು ಸೇರಿದಂತೆ ಪುತ್ತಿಲ ಅವರ ಬಗ್ಗೆ ಹಲವು ಆರೋಪಗಳನ್ನು ಮಾಡಿದರು.

ವೈಯಕ್ತಿಕ ದ್ವೇಷವಿಲ್ಲ: ಅರುಣ್ ಕುಮಾರ್ ಪುತ್ತಿಲ ಅವರೊಂದಿಗೆ ಇವತ್ತಿಗೂ ನನಗೆ ವೈಯುಕ್ತಿಕ ದ್ವೇಷವಿಲ್ಲ. ಆದರೆ ಪಕ್ಷದೊಂದಿಗೆ ಅವರ ನಡೆತೆ ತುಂಬಾ ಬೇಸರ ತಂದಿದೆ. ಇನ್ನೂ ಅವರು ಸರಿ ಮಾಡಿಕೊಂಡು ಗಣೇಶೋತ್ಸವಕ್ಕೆ ಬಂದರೆ ಖಂಡಿತಾ ತೆಗೆದುಕೊಳ್ಳುತ್ತೇನೆ. ಶಿಷ್ಯನ ವಿರುದ್ಧವೇ ಪತ್ರಿಕಾಗೋಷ್ಟಿ ಮಾಡುವುದು ನೋವಾಗಿದೆ ಎಂದು ಡಾ.ಎಂ.ಕೆ.ಪ್ರಸಾದ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು, ಮಾಜಿ ತಾ.ಪಂ.ಅಧ್ಯಕ್ಷ ಡಿ.ಶಂಭು ಭಟ್, ಚಂದ್ರಶೇಖರ್ ರಾವ್ ಬಪ್ಪಳಿಗೆ, ಸಹಜ್ ರೈ ಬಳಜ್ಜ ಉಪಸ್ಥಿತರಿದ್ದರು.

ಮಠಂದೂರು ಬದಲಾಯಿಸಲು ವರಿಷ್ಠರಿಗೆ ನಾನೇ ಪತ್ರ ಬರೆದಿದ್ದೆ

ಪುತ್ತೂರಿನಲ್ಲಿ ಕೆಲವೊಂದು ಕಾರಣಕ್ಕಾಗಿ ಅಭ್ಯರ್ಥಿಯ ಬದಲಾವಣೆ ಆಗಿದೆ. ಮಠಂದೂರು ಅವರ ಬದಲಾವಣೆಗೆ ಜನರ ಒತ್ತಡ ಇತ್ತು. ಜನರೊಂದಿಗೆ ಬೆರೆಯುತ್ತಿಲ್ಲ ಎಂಬ ಅರೋಪ ಅವರ ಮೇಲಿತ್ತು. ಆದರೆ ಅವರು ಪುತ್ತೂರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ವಂಡರ್ ಫುಲ್. ಸೋಲುವ ಹೆದರಿಕೆಯಿಂದ, ಕೆಲವೊಂದು ಕಾರಣಗಳಿಗಾಗಿ ಮಠಂದೂರು ಅವರನ್ನು ಬದಲಾವಣೆ ಮಾಡಬೇಕು ಇಲ್ಲವೇ ಅವರಲ್ಲಿನ ತಪ್ಪುಗಳನ್ನು ತಿಳಿಸಿ ಸರಿಪಡಿಸಿಕೊಳ್ಳಲು ಹೇಳಬೇಕು ಎಂದು ವರ್ಷದ ಹಿಂದೆಯೇ ನಾನು ವರಿಷ್ಟರಿಗೆ ಪತ್ರ ಬರೆದಿದ್ದೆ. ಆರು ತಿಂಗಳ ಹಿಂದೆಯೂ ಒಂದು ಬಾರಿ ಪತ್ರ ಬರೆದಿದ್ದೆ ಎಂದು ಡಾ.ಎಂ.ಕೆ,ಪ್ರಸಾದ್ ಹೇಳಿದರು.

LEAVE A REPLY

Please enter your comment!
Please enter your name here