ನೆಲ್ಯಾಡಿ: ಎ.27ರಂದು ಕೊಂಬಾರು ಗ್ರಾಮದ ಬಗ್ಪುಣಿ ಎಂಬಲ್ಲಿ ಹೊಳೆ ನೀರಿನಲ್ಲಿ ಕಾಣಿಸಿಕೊಂಡಿದ್ದ ಅಸ್ವಸ್ಥ ಕಾಡಾನೆಯ ಮೃತದೇಹ ಎ.28ರಂದು ಬೆಳಿಗ್ಗೆ ಬಗ್ಪುಣಿ ಸಮೀಪ ಪತ್ತೆಯಾಗಿದೆ.
ಕೆಲ ದಿನಗಳಿಂದ ಸುಬ್ರಹ್ಮಣ್ಯ-ಗುಂಡ್ಯ ಹೆದ್ದಾರಿಯ ಚೇರು, ಎರ್ಮಾಯಿಲು ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಗಂಡು ಕಾಡಾನೆ ಎ.27ರಂದು ಬೆಳಿಗ್ಗೆ ಕೊಂಬಾರು ಗ್ರಾಮದ ಕೆಂಜಾಳ ಬಗ್ಪುಣಿ ಎಂಬಲ್ಲಿ ಹೊಳೆಯ ನೀರಿನಲ್ಲಿ ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡಿದ್ದರಿಂದ ಆನೆಗೆ ಓಡಾಟ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಸಂಜೆ ವೇಳೆಗೆ ಆನೆ ಕಷ್ಟಪಟ್ಟು ಹೊಳೆ ನೀರಿನಿಂದ ಮೇಲೆ ಬಂದು ಅರಣ್ಯದೊಳಗೆ ಸಂಚರಿಸಿತ್ತು. ಈ ಆನೆಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ಆನೆಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಆದರೆ ಅಸ್ವಸ್ಥಗೊಂಡಿದ್ದ ಆನೆ ನಿಶ್ಯಕ್ತಿಯಿಂದ ನಡೆದಾಡಲು ಸಾಧ್ಯವಾಗದೇ ನಿತ್ರಾಣಗೊಂಡು ಬಗ್ಪುಣಿ ಸಮೀಪ ಅರಣ್ಯಪ್ರದೇಶದಲ್ಲಿ ಮೃತಪಟ್ಟಿದೆ. ಹೊಳೆಯಿಂದ ಮೇಲೆ ಬಂದು ಕಾಡಿನತ್ತ ಪ್ರಯಾಣಿಸಿದ್ದ ಆನೆ ಸುಮಾರು 500 ಮೀಟರ್ ಸಂಚರಿಸುವಾಗಲೇ ನಿತ್ರಾಣಗೊಂಡು ಬಿದ್ದು ಮೃತಪಟ್ಟಿದೆ ಎಂದು ತಿಳಿದುಬಂದಿದೆ.