ಕಾಣಿಯೂರು: ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಕನಸಿನ ಮನೆ ‘ಪ್ರವೀಣ್ ನಿಲಯ’ದ ಗೃಹ ಪ್ರವೇಶ ಕಾರ್ಯಕ್ರಮ ಎ.27 ರಂದು ನಡೆಯಿತು. ನಾಯಕರು, ಸ್ವಾಮೀಜಿಗಳ ಸಹಿತ ಸಾವಿರಾರು ಮಂದಿ ಈ ಕ್ಷಣಕ್ಕೆ ಸಾಕ್ಷಿಯಾದರು.
ಪ್ರವೀಣ್ ನೆಟ್ಟಾರು ಅವರ ಕನಸಿನಂತೆ ಅವರ ಮನೆಯವರಿಗೆ ಹೊಸ ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದ ಬಿಜೆಪಿ ಕೊಟ್ಟ ಮಾತಿನಂತೆ ಮನೆ ನಿರ್ಮಾಣಕ್ಕೆ ಮುಗರೋಡಿ ಸಂಸ್ಥೆಗೆ ಕಾಮಗಾರಿ ನಿರ್ವಹಿಸುವ ಜವಾಬ್ದಾರಿ ನೀಡಿತ್ತು. ಕಳೆದ ನವೆಂಬರ್ 2ರಂದು ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಗಣ್ಯರು ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಹಳೆ ಮನೆಯಿದ್ದ ಸ್ಥಳದಲ್ಲೇ ಹಳೆ ಮನೆಯನ್ನು ಕೆಡವಿ ಜಾಗವನ್ನು ಸಮತಟ್ಟು ಮಾಡಿ ಸುಸಜ್ಜಿತ ಮನೆಯನ್ನು ನಿರ್ಮಿಸಲಾಗಿದ್ದು, ಮನೆಗೆ ‘ಪ್ರವೀಣ್ ನಿಲಯ’ ಹೆಸರಿಡಲಾಗಿದೆ. 2,7೦೦ ಚದರ ಅಡಿಯ ಮನೆ ನಿರ್ಮಿಸಲಾಗಿದೆ. ಬೆಳಿಗ್ಗೆ ಶ್ರೀ ಗಣಪತಿ ಹೋಮ, ಬಳಿಕ ಸತ್ಯನಾರಾಯಣ ಪೂಜೆ ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷ ದ.ಕ. ಸಂಸದ ನಳಿನ್‌ಕುಮಾರ್ ಕಟೀಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಮಾಣಿಲ ಸಂಸ್ಥಾನದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಣಿಯೂರು ಮಠದ ಶ್ರೀ ಶ್ರೀ ಮಹಾಬಲ ಸ್ವಾಮೀಜಿ, ಸೋಲೂರು ಮಠದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ, ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಜಿಲ್ಲಾ ಬಿಜೆಪಿ ಮುಖಂಡರಾದ ಜಗದೀಶ್ ಅಧಿಕಾರಿ, ಬೂಡಿಯಾರು ರಾಧಾಕೃಷ್ಣ ರೈ, ಬಿಜೆಪಿ ಅಭ್ಯರ್ಥಿಗಳಾದ ಭಾಗೀರಥಿ ಮುರುಳ್ಯ, ಆಶಾ ತಿಮ್ಮಪ್ಪ, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ, ಚಂದ್ರಶೇಖರ್ ಪನ್ನೆ, ಬಜರಂಗದಳದ ನಾಯಕರಾದ ರಘು ಸಕಲೇಶಪುರ, ಮುರಳಿಕೃಷ್ಣ ಹಸಂತಡ್ಕ, ಸಹಜ್ ರೈ ಬಳೆಜ್ಜ, ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಂಟಾರು ರವೀಶ ತಂತ್ರಿ, ಬಿಜೆಪಿ ಮುಖಂಡ ರಮೇಶ್ ಹುಬ್ಬಳ್ಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ಪದ್ಮರಾಜ್, ಕಾಂಗ್ರೆಸ್ ಮುಖಂಡರಾದ ವಿಜಯ ಕುಮಾರ್ ಸೊರಕೆ, ವೆಂಕಪ್ಪ ಗೌಡ ಮಾಚಿಲ, ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ, ಎಸ್.ಎನ್. ಮನ್ಮಥ, ಪುಷ್ಪಾವತಿ ಬಾಳಿಲ, ಶುಭದಾ ರೈ, ಚನಿಯ ಕಲ್ತಡ್ಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನ. ಸೀತಾರಾಮ, ಸುಭಾಶ್ಚಂದ್ರ ಕಳಂಜ, ಡಾ. ಎಂ.ಕೆ. ಪ್ರಸಾದ್, ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು, ರಾಕೇಶ್ ರೈ ಕೆಡೆಂಜಿ, ಪ್ರಮೀಳಾ ಜನಾರ್ದನ, ಇಂದಿರಾ ಬಿ. ಕೆ ಸೇರಿದಂತೆ ಸಾವಿರಾರು ಮಂದಿ ಸಮಾರಂಭಕ್ಕೆ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಕುಟುಂಬದ ವತಿಯಿಂದ ಮಂಗಳ ನಿಧಿ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಮನೆಯ ನಾಮಫಲಕವನ್ನು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅನಾವರಣಗೊಳಿಸಿದರು. ಪ್ರವೀಣ್ ನೆಟ್ಟಾರು ಅವರ ಸಮಾಧಿಯ ಮೇಲೆ ನಿರ್ಮಿಸಲಾದ ಕಂಚಿನ ಪುತ್ಥಳಿಯನ್ನು ಮೋಹನದಾಸ ಪರಮಹಂಸ ಸ್ವಾಮೀಜಿಯವರು ಅನಾವರಣಗೊಳಿಸಿದರು. ಬಿಲ್ಲವ ಸಂಘದ ಮುಖಂಡ, ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕರೂ ಆಗಿರುವ ಜಯಂತ ನಡುಬೈಲು ಪುತ್ಥಳಿಗೆ ಹಾರಾರ್ಪಣೆಗೈದರು.
ಪ್ರವೀಣ್ ಅವರ ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ, ಪತ್ನಿ ನೂತನ, ಸಹೋದರಿಯರಾದ ರೋಹಿಣಿ, ಹರಿಣಿ, ನಳಿನಿ ಅವರು ಆಗಮಿಸಿದವರನ್ನು ಸ್ವಾಗತಿಸಿ ಬರಮಾಡಿಕೊಂಡರು. ಬೆಳಗ್ಗೆ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ನಡೆಯಿತು.
ಸನ್ಮಾನ: ಪ್ರವೀಣ್ ನೆಟ್ಟಾರ್ ಅವರ ಕನಸಿನ ಮನೆ ನಿರ್ಮಿಸಿಕೊಡಲು ಕಾರಣಕರ್ತರಾದ ಸಂಸದ ನಳಿನ್‌ಕುಮಾರ್ ಕಟೀಲ್, ಮನೆ ನಿರ್ಮಾಣ ಮಾಡಿದ ಮೊಗೆರೋಡಿ ಕನ್‌ಸ್ಟ್ರಕ್ಷನ್‌ನ ಸುಧಾಕರ ಶೆಟ್ಟಿ ಹಾಗೂ ಉಸ್ತುವಾರಿಯಲ್ಲಿ ಸಹಕರಿಸಿದ ಆರ್.ಕೆ. ಭಟ್ ಕುರುಂಬುಡೇಲು ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಕೊಟ್ಟ ಮಾತು ಪಾಲಿಸಿದೆ : ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‌ಕುಮಾರ್ ಕಟೀಲ್ ಮಾಧ್ಯಮದವರ ಜೊತೆ ಮಾತನಾಡಿ, ಮತಾಂಧರ ಕೃತ್ಯಕ್ಕೆ ಪ್ರವೀಣ್ ನೆಟ್ಟಾರು ಬಲಿಯಾದದ್ದು ನೋವಿನ ಸಂಗತಿ. ಇದಕ್ಕೆ ಪ್ರತಿಫಲವಾಗಿ ಏನೂ ಕೊಡಲು ಸಾಧ್ಯವಿಲ್ಲ. ಆದರೆ ಬಿಜೆಪಿ ಪ್ರವೀಣ್ ಕುಟುಂಬಕ್ಕೆ ಏನು ಮಾತು ಕೊಟ್ಟಿದೆಯೋ ಅದನ್ನು ಪಾಲಿಸಿದೆ ಎಂದರು.
ಪ್ರವೀಣ್ ನೆಟ್ಟಾರು ಕನಸಿನ ಮನೆಯ ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ಪುತ್ಥಳಿ ಅನಾವರಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದೆ. ಪ್ರವೀಣ್ ಪತ್ನಿ ನೂತನ ಅವರಿಗೆ ಸರಕಾರಿ ಉದ್ಯೋಗ ನೀಡಲಾಗಿದೆ. ಇದೀಗ ಆ ಕುಟುಂಬಕ್ಕೆ ನೂತನ ಮನೆಯನ್ನು ನಿರ್ಮಿಸಿಕೊಡಲಾಗಿದೆ. ಈ ಮನೆ ಅವರಿಗೆ ಸಮಾಧಾನ ತಂದಿದೆ ಎಂದರು.
ಹಿಂದೂ ಧರ್ಮಕ್ಕಾಗಿ ನಾವೆಲ್ಲ ಒಂದಾಗೋಣ-ಮಾಣಿಲ ಶ್ರೀ
ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮಕ್ಕಾಗಿ ದುಡಿದ ಯುವಕನ ಮನೆಯವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮನೆ ನಿರ್ಮಿಸಿ ಕೊಡುವ ಮೂಲಕ ಮಾಡಲಾಗಿದೆ. ಯುವಕರಲ್ಲಿ ತತ್ವ, ಸಿದ್ಧಾಂತಗಳು ಮುಖ್ಯ. ಆ ದಿಕ್ಕಿನಲ್ಲಿ ಯೋಚಿಸಬೇಕು. ಚುನಾವಣೆಯ ಈ ಸಂದರ್ಭದಲ್ಲಿ ಬದ್ಧತೆ, ಭದ್ರತೆ ನೀಡುವ ಸರಕಾರಕ್ಕೆ ನಾವೂ ಶಕ್ತಿ ನೀಡೋಣ, ಹಿಂದೂ ಧರ್ಮಕ್ಕಾಗಿ ನಾವೆಲ್ಲ ಒಂದಾಗೋಣ ಎಂದರು.
ಹಿಂದೂ ಸಮಾಜ ಸದೃಢರಾಗಬೇಕು- ವಜ್ರದೇಹಿ ಶ್ರೀ
ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜದ ಮೇಲೆ ನಡೆಯುವ ದಾಳಿಯ ಬಗ್ಗೆ ಸುಮ್ಮನಿದ್ದರೆ ಇನ್ನಷ್ಟು ಪ್ರವೀಣರು ಹೋಗುತ್ತಾರೆ. ಈ ನಿಟ್ಟಿನಲ್ಲಿ ಹಿಂದೂ ಸಮಾಜದ ಮೇಲೆ ದಾಳಿ ಮಾಡುವವರನ್ನು ಮಟ್ಟ ಹಾಕಲು ಹಿಂದೂ ಸಮಾಜ ಸದೃಢರಾಗಬೇಕು. ನಮ್ಮ ಮೇಲೆ ದಾಳಿ ಮಾಡುವವರನ್ನು ರಾಜಕೀಯವಾಗಿಯೂ ಮಟ್ಟ ಹಾಕುವ ಕೆಲಸ ಅಗಬೇಕು ಎಂದರು.
ಹಿಂದುತ್ವದ ಮೂಲಕ ಭಾರತವನ್ನು ಮಟ್ಟ ಹಾಕುವುದು ಅವರ ಗುರಿಯಾಗಿದೆ- ಡಾ. ಪ್ರಭಾಕರ್ ಭಟ್
ಆರ್‌ಎಸ್‌ಎಸ್ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಹಿಂದೂ ಧರ್ಮಕ್ಕೆ ಮನೆ ಸಂಸ್ಕಾರ, ಸಂಸ್ಕೃತಿ, ಜೀವನ ಮೌಲ್ಯದ ಪವಿತ್ರ ಕೇಂದ್ರ. ಹಿಂದುತ್ವವನ್ನು ಮಟ್ಟ ಹಾಕಲು ಪ್ರಯತ್ನ ನಡೆಯುತ್ತಿದೆ, ಹಿಂದುತ್ವದ ಮೂಲಕ ಭಾರತವನ್ನು ಮಟ್ಟ ಹಾಕುವುದು ಅವರ ಗುರಿಯಾಗಿದೆ. ಅದನ್ನು ಹಿಂದುಗಳು ಎದುರಿಸಿ, ಮಟ್ಟ ಹಾಕಬೇಕು ಎಂದರು.
ನಳಿನ್‌ಗೆ ಕೃತಜ್ಞತೆ ಸಲ್ಲಿಸಿದ ಶಕುಂತಲಾ ಶೆಟ್ಟಿ
ಬಿಜೆಪಿ ಕಾರ್ಯಕರ್ತ ಪ್ರವೀಣ್ ಕುಟುಂಬಕ್ಕೆ ಅತ್ಯಂತ ಒಳ್ಳೆಯ ಮನೆಯನ್ನು ನಿರ್ಮಿಸಿಕೊಡಲು ನೇತೃತ್ವ ವಹಿಸಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ತಾನು ಕೃತಜ್ಞತೆ ಸಲ್ಲಿಸುವುದಾಗಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದರು. ಕಾರ್ಯಕರ್ತರನ್ನು ಯಾವತ್ತೂ ಪಕ್ಷಗಳು ಬಿಟ್ಟು ಹಾಕಬಾರದು ಎಂದವರು ಈ ಸಂದರ್ಭ ಹೇಳಿದರು.
ಬಿಗಿ ಬಂದೋಬಸ್ತ್
ರಾಜ್ಯ ಮಟ್ಟದ ಜನಪ್ರತಿನಿಽಗಳು, ರಾಜಕೀಯ ನಾಯಕರು ಸೇರಿದಂತೆ ಹಲವು ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.