ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ; ಅಧಿಕಾರಕ್ಕೆ ಬಂದ ಪ್ರಥಮ ಅಧಿವೇಶನದಲ್ಲೇ ಭರವಸೆ ಈಡೇರಿಕೆ-ಮಂಗಳೂರುನಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ

0

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಥಮ ಕ್ಯಾಬಿನೆಟ್ ಅಧಿವೇಶನದಲ್ಲಿಯೇ ಕಾಂಗ್ರೆಸ್ ನೀಡಿದ 4 ಭರವಸೆ ಮತ್ತು ರಾಜ್ಯದ ಸರಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ಈಡೇರಿಸಲು ಕ್ರಮಕೈಗೊಳ್ಳಲಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ,ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಪುತ್ತೂರು ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಅವರು ಸ್ಪರ್ಧಿಸುತ್ತಿರುವ ಕಾಪು ಕ್ಷೇತ್ರಕ್ಕೆ ಆಗಮಿಸಿ ಅಲ್ಲಿನ ಮೀನುಗಾರರ ಜೊತೆಗಿನ ಸಂವಾದದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿಯವರು, ಅಡ್ಯಾರ್ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಎದುರಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಶಾಸಕರನ್ನು ಖರೀದಿಸಿ ಭ್ರಷ್ಟಾಚಾರದ ಮೂಲಕ ಅಧಿಕಾರ ಪಡೆದ ಬಿಜೆಪಿ ಎಲ್ಲಾ ಕ್ಷೇತ್ರದಲ್ಲಿಯೂ ಶೇ.40 ಕಮೀಷನ್ ಪಡೆದಿದೆ. ಮಠದ ಕಾಮಗಾರಿಯಲ್ಲಿ ಶೇ.30 ಕಮೀಷನ್ ಪಡೆದು ಕಾಮಗಾರಿ ನಡೆಸಿದ್ದಾರೆ ಎನ್ನುವ ಬಗ್ಗೆ ಕರ್ನಾಟಕದ ಜನ ಹೇಳುತ್ತಿದ್ದಾರೆ.ಇನ್ನೊಂದು ಕಡೆ ಬೆಲೆ ಏರಿಕೆ ಬಿಸಿ ಜನರನ್ನು ಕಂಗೆಡಿಸಿದೆ. ದೇಶದಲ್ಲಿ 40 ಕೋಟಿ ಜನ ಬಡತನ ರೇಖೆಗಿಂತ ಕೆಳಗಿಳಿದಿದ್ದಾರೆ. ಶೇ ಒಂದರಷ್ಟು ಜನರಲ್ಲಿ ಶೇ 40 ಸಂಪತ್ತು ಶೇಖರಣೆಯಾಗಿದೆ. 90 ಲಕ್ಷ ಸಣ್ಣ, ಮಧ್ಯಮ ಕೈಗಾರಿಕೆಗಳು ಸಂಪೂರ್ಣ ಮುಚ್ಚಿವೆ. 1.4 ಲಕ್ಷ ಜನ ಉದ್ಯೋಗ ಕಳೆದುಕೊಂಡರು. ಮೋದಿ ಜನರಿಗೆ ನೀಡಿದ ಭರವಸೆ ಈಡೇರಿಸಿಲ್ಲ, ಆದರೆ ಅದಾನಿಗೆ ನೀಡಿದ ಎಲ್ಲಾ ಭರವಸೆ ಈಡೇರಿಸಿದ್ದಾರೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಮಂಗಳೂರು ನೆನಪಿಸಿದ ರಾಹುಲ್: ಇಂದಿರಾ ಗಾಂಧಿಯವರು ಮಂಗಳೂರು ವಿಮಾನ ನಿಲ್ದಾಣ, ಬಂದರು, ಎಂಸಿಎಫ್‌ನಂತಹ ಕಾರ್ಖಾನೆಯನ್ನು ಇಲ್ಲಿ ಸ್ಥಾಪನೆ ಮತ್ತು ಅಭಿವೃದ್ಧಿ ಮಾಡಿರುವುದು ನನಗೆ ಗೊತ್ತಿದೆ. ಇಲ್ಲಿನ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿ ಕೊಡುಗೆ ನೀಡಿದ್ದಾರೆ. ಇಂತಹ ಬ್ಯಾಂಕ್‌ಗಳನ್ನು ಮೋದಿ ಸರಕಾರ ವಿಲೀನಗೊಳಿಸಿದೆ. ವಿಮಾನ ನಿಲ್ದಾಣವನ್ನು ಅದಾನಿಗೆ ನೀಡಿ ಇಲ್ಲಿನ ಜನರನ್ನು ನಿರ್ಲಕ್ಷಿಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ನುಡಿದಂತೆ ನಡೆಯದಿದ್ದರೆ ಇನ್ನೊಮ್ಮೆ ಮತಯಾಚಿಸುವುದಿಲ್ಲ-ಡಿಕೆಶಿ: ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ.ಬಿಜೆಪಿಯನ್ನು ಬೆಂಬಲಿಸಿದವರಿಗೂ ಬಿಜೆಪಿ ನೆರವು ನೀಡಿಲ್ಲ. ರೈತರ ಬದುಕಿನಲ್ಲಿ ಬದಲಾವಣೆಯಾಗಿಲ್ಲ.ಅನೇಕ ನಾಯಕರು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಅವರು ದಡ್ಡರಲ್ಲ. ಕರಾವಳಿಯಲ್ಲಿ ಉದ್ಯೋಗ ಸೃಷ್ಟಿ ಕೆಲಸ ಆಗ್ತಾ ಇಲ್ಲ. ಹೂಡಿಕೆ ಆಗ್ತಾ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರಾವಳಿಗೆ ಪ್ರತ್ಯೇಕವಾಗಿ ಬಜೆಟ್‌ನಲ್ಲಿ ಯೋಜನೆ ರೂಪಿಸಲಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮ ಅನುಷ್ಠಾನ ಮಾಡುವ ಭರವಸೆ ನೀಡುತ್ತೇನೆ. ಈ ಪ್ರಕಾರ ನುಡಿದಂತೆ ನಡೆಯದಿದ್ದರೆ ಇನ್ನೊಂದು ಬಾರಿ ಮತಯಾಚಿಸುವುದಿಲ್ಲ. ರಾಜ್ಯದ 40 ಪರ್ಸೆಂಟ್ ಸರಕಾರದ ಆಡಳಿತ ಕೊನೆಗೊಳಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಭ್ರಷ್ಟಾಚಾರ ಕೊನೆಗೊಳಿಸಲು ಕಾಂಗ್ರೆಸ್ ಗೆಲ್ಲಿಸಿ-ಮೊಯ್ಲಿ: ಕರಾವಳಿಯ ಸೌಹಾರ್ದತೆಯನ್ನು ಕದಡಿದ ಕೋಮುವಾದಿ ಪಕ್ಷ ಬಿಜೆಪಿಯನ್ನು ಸೋಲಿಸಿ ಕರಾವಳಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಮತ್ತೆ ಕಾಂಗ್ರೆಸ್ ಜಯಗಳಿಸಬೇಕಾಗಿದೆ.ಇಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸಲು ಕಾಂಗ್ರೆಸ್‌ನ್ನು ಬೆಂಬಲಿಸಿ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದರು.

ಸಮಾರಂಭದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿಧಾನಪರಿಷತ್ ಶಾಸಕ ಕೆ.ಹರೀಶ್ ಕುಮಾರ್, ಶಾಸಕ ಯು.ಟಿ.ಖಾದರ್, ರಾಜ್ಯ ಸಭಾ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಶಾಸಕ ಡಾ|ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಎಐಸಿಸಿ ವಕ್ತಾರರಾದ ಕೆ.ಸಿ.ವೇಣುಗೋಪಾಲ, ಚರಣ್ ಸಿಂಗ್ ಸಪ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರೋಜಿ ಎಂ ಜೋನ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ಪಕ್ಷದ ಅಭ್ಯರ್ಥಿಗಳಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಜಿ.ಕೃಷ್ಣಪ್ಪ, ಮಾಜಿ ಸಂಸದ ಇಬ್ರಾಹಿಂ, ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜ, ಮುಹಮ್ಮದ್ ಮಸೂದ್, ಇಬ್ರಾಹಿಂ ಕೋಡಿಜಾಲ್, ಜಿ.ಎ.ಬಾವ, ಭರತ್ ಮುಂಡೋಡಿ, ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೋ, ಮಮತಾ ಗಟ್ಟಿ, ಕೃಪಾ ಅಮರ್ ಆಳ್ವ ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ ಬಡಗನ್ನೂರು ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.ಪುತ್ತೂರು,ಸುಳ್ಯ, ಕಡಬ, ವಿಟ್ಲ ಭಾಗದಿಂದಲೂ ಕಾಂಗ್ರೆಸ್‌ನ ಹಲವು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

40 ಪರ್ಸೆಂಟ್ ಬಿಜೆಪಿಗೆ 40 ಸೀಟ್ ಮಾತ್ರ ನೀಡಿ

ಬಿಜೆಪಿಯದ್ದು 40 ಪರ್ಸೆಂಟ್ ಸರಕಾರ. ಅವರಿಗೆ ಈ ಬಾರಿ ಕೇವಲ 40 ಸೀಟ್ ಮಾತ್ರ ನೀಡಿ ಕಾಂಗ್ರೆಸ್ 150 ಸೀಟ್‌ಗಳಿಸುವಂತೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಜಯಗಳಿಸಿ ಎಂದು ರಾಹುಲ್ ಗಾಂಧಿ ಮನವಿ ಮಾಡಿದರು.

LEAVE A REPLY

Please enter your comment!
Please enter your name here