ಉಪ್ಪಿನಂಗಡಿ: ಜಿಲ್ಲೆಯ ಜೀವನದಿಯಾದ ನೇತ್ರಾವತಿ ನದಿಯು ಹರಿವು ನಿಲ್ಲಿಸಿದ್ದು, ಪ್ರಾಕೃತಿಕ ಅಸಮತೋಲನವೇ ತಪ್ಪಿ ಹೋದಂತಾಗಿದೆ. ಬತ್ತಿ ಬರಡಾದ ನದಿಯಲ್ಲೀಗ ನೀರಿಗಾಗಿ, ಮೀನಿಗಾಗಿ ಹೀಗೆ ಮಾನವನಿಂದ ಹಿಡಿದು ಪ್ರಾಣಿ- ಪಕ್ಷಿಗಳವರೆಗೆ ಹುಡುಕಾಟ ನಡೆಯುತ್ತಿದೆ.
ಉಪ್ಪಿನಂಗಡಿ ಭಾಗದಲ್ಲಿ ನೇತ್ರಾವತಿ ನದಿಯ ಹೊಂಡ-ಗುಂಡಿಗಳಲ್ಲಿ ಮಾತ್ರ ನಿಂತ ನೀರಿದೆ. ಇದರಿಂದಾಗಿ ನದಿಯ ಮೂಲವನ್ನೇ ನಂಬಿದ ಕೃಷಿಕನಿಗೂ ನೀರಿನ ಅಭಾವ ಕಂಡು ಬಂದಿದೆ. ನದಿ ಪಾತ್ರದ ತೋಟಗಳ ಬದಿಗಳಲ್ಲಿ ನದಿಯಲ್ಲಿ ಗುಂಡಿ ತೋಡಿಯೋ, ಅದಕ್ಕೆ ರಿಂಗ್ ಇಳಿಸಿಯೋ, ದೂರದಲ್ಲಿ ನಿಂತಿರುವ ನೀರನ್ನು ಈ ಗುಂಡಿಗೆ ಹರಿಸಿಯೋ ಹೀಗೆ ಹತ್ತು ಹಲವು ವಿಧಾನಗಳ ಮೂಲಕ ನೀರನ್ನು ಹಿಡಿದಿಟ್ಟುಕೊಂಡು ತಮ್ಮ ತೋಟಗಳಿಗೆ ನೀರುಣಿಸುವ ಕೆಲಸ ಕೃಷಿಕರಿಂದ ನಡೆಯುತ್ತಿದೆ. ಇಷ್ಟೊಂದು ರೀತಿಯ ನೀರಿನ ಅಭಾವ ನದಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡು ಬಂದಿರುವುದು ಇದೇ ಮೊದಲು. ಅಂತರ್ಜಲ ಗಮನಾರ್ಹ ಕುಸಿತ ಕಂಡಿದ್ದು, ಇದರಿಂದಾಗಿ ಕೆರೆ, ಬಾವಿಗಳು ಬತ್ತಿ ಹೋಗಿದ್ದರೆ, ಕೊಳವೆ ಬಾವಿಗಳಲ್ಲೂ ನೀರಿನ ಬರ ಉಂಟಾಗಿದೆ. ಹಲವರು ಪೈಪ್‌ಗಳನ್ನು ಇನ್ನಷ್ಟು ಇಳಿಸುವುದು, ಹೊಸ ಕೊಳವೆ ಬಾವಿಯನ್ನು ಕೊರೆಸುವುದು ಮಾಡಿಯಾಗಿದೆ.
ನೇತ್ರಾವತಿ ನದಿ ಹರಿವಿನ ವ್ಯಾಪ್ತಿಯ ಗ್ರಾಮಗಳನ್ನೊಳಗೊಂಡ ಗ್ರಾ.ಪಂ.ಗಳು ಕೂಡಾ ಕುಡಿಯುವ ನೀರಿಗಾಗಿ ಈ ಭಾಗದಲ್ಲಿ ಹೆಚ್ಚಾಗಿ ನೆಚ್ಚಿಕೊಂಡಿರುವುದು ಕೊಳವೆ ಬಾವಿಯನ್ನೇ. ಇಲ್ಲಿ ನದಿಯ ನೀರನ್ನು ಸಂಗ್ರಹಿಸಿ ಗ್ರಾಮಕ್ಕೆ ನೀಡುವ ಕಾರ್ಯ ನಡೆದಿಲ್ಲ. ಇಳಂತಿಲ ಗ್ರಾ.ಪಂ. ವ್ಯಾಪ್ತಿಯ ಕಡವಿನ ಬಾಗಿಲು ಎಂಬಲ್ಲಿ ಮಾತ್ರ ನದಿಯಲ್ಲಿ ಗುಂಡಿ ತೋಡಿ, ಅದಕ್ಕೆ ರಿಂಗ್ ಅಳವಡಿಸಿ ಅಲ್ಲಿ ಶೇಖರಣೆಯಾದ ನೀರನ್ನು ಅಲ್ಲಿಂದ ಸರಬರಾಜು ಮಾಡಲಾಗುತ್ತದೆ. ಆದರೆ ಈ ಬಾರಿ ಅಲ್ಲಿಯೂ ನೀರಿನ ಕೊರತೆ ಕಂಡು ಬಂದಿದ್ದು, ಆದ್ದರಿಂದ ದೂರದಲ್ಲಿ ನದಿಯಲ್ಲಿ ಶೇಖರಣೆಗೊಂಡ ನೀರನ್ನು ಕಾಲುವೆಯನ್ನು ತೆಗೆದು, ಅದರ ಮೂಲಕ ಆ ಗುಂಡಿಗೆ ಹರಿಸಲಾಗಿದೆ.
ನಿಂತ ನೀರಲ್ಲಿ ಅಳಿದುಳಿದ ಮೀನಿಗಾಗಿ ಹುಡುಕಾಟ:
ನದಿಯಲ್ಲಿ ಶೇಖರಣೆಗೊಂಡಿರುವ ನೀರು ಕೂಡ ಈ ಬಿಸಿಲಿಗೆ ಬಿಸಿಯಾಗುತ್ತಿದ್ದು, ಇದು ಜಲಚರಗಳ ಸಾವಿಗೂ ಕಾರಣವಾಗುತ್ತಿದೆ. ಇನ್ನೊಂದು ಕಡೆ ಈ ನೀರಿನ ಬಳಿ ಕುಳಿತು ತಮ್ಮ ಹಸಿವ ನೀಗಿಸಲು ನೀರುಕಾಗೆ, ಕೊಕ್ಕರೆಯಂತಹ ಪಕ್ಷಿಗಳು, ನಾಯಿಗಳು ಮೀನಿಗಾಗಿ ಕಾಯುತ್ತಿರುವ ದೃಶ್ಯ ಕಂಡು ಬರುತ್ತಿವೆ. ಇನ್ನೊಂದು ಕಡೆ ಮನುಷ್ಯರೂ ಕೂಡಾ ಮೀನುಗಳನ್ನು ಹಿಡಿಯಲು ಇಂತಹ ಪ್ರದೇಶಗಳಲ್ಲಿ ಬಲೆ ಬೀಸುತ್ತಿರುವುದು ಕಾಣಬಹುದಾಗಿದೆ.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳಿಗೂ ನೀರಿನ ಅಭಾವ ಕಂಡು ಬಂದಿದ್ದು, ಅವರು ಕೂಡಾ ಇಂತಹ ಗುಂಡಿಗಳಿಂದ ಟ್ಯಾಂಕರ್ ಮೂಲಕ ನೀರನ್ನು ಶೇಖರಿಸಿ ಕೊಂಡು ಹೋಗುವುದು ಕಾಣಬಹುದಾಗಿದೆ. ಇನ್ನೊಂದೆಡೆ ಬತ್ತಿ ಬರಡಾದ ನದಿಯಲ್ಲಿ ಮರಳುಗಾರಿಕೆಯೂ ಸುಲಭವಾದಂತಾಗಿದೆ. ಈಗ ಶಾಲೆಗೆ ರಜೆವಿರುವ ಕಾರಣ ಕೆಲವೆಡೇ ಬತ್ತಿದ ನದಿಯು ಕ್ರಿಕೆಟ್ ಸೇರಿದಂತೆ ಇನ್ನಿತರ ಆಟದ ಮೈದಾನವಾಗಿಯೂ ಉಪಯೋಗವಾಗಿದೆ.
ಒಟ್ಟಿನಲ್ಲಿ ಜೀವ ನದಿಯಾದ ನೇತ್ರಾವತಿ ನದಿಯಲ್ಲಿ ಜೀವ ಜಲವೇ ಬರಿದಾಗುತ್ತಿದ್ದು, ಇದೇ ರೀತಿ ಬಿಸಿಲು ಮುಂದುವರಿದರೆ ಹೊಂಡ- ಗುಂಡಿಗಳಲ್ಲಿ ಶೇಖರಣೆಯಾಗಿರುವ ನೀರು ಕೂಡಾ ಸಂಪೂರ್ಣ ಬತ್ತಿ ಹೋಗಿ ಊರಿಗೆ ಬರಗಾಲ ಆವರಿಸುವ ಆತಂಕವೂ ಎದುರಾಗಿದೆ.
ನಮ್ಮಲ್ಲಿ ನೀರಿಂಗಿಸುವ ಪರಿಕಲ್ಪನೆ ಮಾತ್ರ ಚೆನ್ನಾಗಿದೆ. ಆದರೆ ಅದು ಅನುಷ್ಠಾನಕ್ಕೆ ಮಾತ್ರ ಬರುತ್ತಿಲ್ಲ. ಇದ್ದ ಕೆರೆ, ಬಾವಿಗಳನ್ನು ಮುಚ್ಚಿ ಅದರಲ್ಲಿ ಕಟ್ಟಡವೋ, ಅಡಿಕೆ ಗಿಡಗಳನ್ನೋ ಹಾಕಲಾಗಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ, ಕುಮಾರಧಾರ ನದಿಗಳ ನೀರು ಸೀದಾ ಪಶ್ಚಿಮಕ್ಕೆ ಹರಿದು ಹೋಗುತ್ತವೆಯೇ ಹೊರತು ಅದನ್ನು ತಡೆ ಹಿಡಿಯುವ ಕಾರ್ಯ ಆಗುತ್ತಿಲ್ಲ. ಪ್ರಕೃತಿಯ ನಾಶ ಎಗ್ಗಿಲ್ಲದೆ ನಡೆಯುತ್ತಿದೆ. ಎಲ್ಲಾ ಕಡೆಗಳಲ್ಲಿ ನೀರಿಗಾಗಿ ಅಂತರ್ಜಲಕ್ಕೆ ಕನ್ನ ಕೊರೆಯಲಾಗಿದೆ. ಹೆಚ್ಚಿನ ಕಡೆಗಳಲ್ಲಿ ಅಮೂಲ್ಯ ಜೀವಜಲ ಪೋಲು ಮಾಡಲಾಗುತ್ತಿದೆ. ಹೀಗೆ ಹತ್ತು ಹಲವು ಕಾರಣಗಳು ಪ್ರಾಕೃತಿಕ ಅಸಮತೋಲನವನ್ನು ಸೃಷ್ಟಿಸಿವೆ. ಇದರಿಂದ ಇಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿ ಬರಲು ಮನುಷ್ಯನೇ ಮೂಲ ಕಾರಣ. ಮನುಷ್ಯ ಜಾಗೃತಿಯಾಗದ ಹೊರತು ಪರಿಸ್ಥಿತಿ ಸುಧಾರಣೆಯಾಗದು.
———ರಾಜಗೋಪಾಲ ಭಟ್ ಕೈಲಾರು
ಸಾಮಾಜಿಕ ಕಾರ್ಯಕರ್ತರು