ಉಪ್ಪಿನಂಗಡಿ: ಯಾವುದೇ ವಿಳಂಬವಿಲ್ಲದೆ ಸಾಲ ನೀಡುವ ಆನ್ ಲೈನ್ ಆಪ್ಗಳ ಮೂಲಕ ಸಾಲ ಪಡೆದ ಯುವಕನೋರ್ವ ಸಾಲವನ್ನು ಹಿಂದಿರುಗಿಸಿದ ಬಳಿಕವೂ ಸಾಲ ಬಾಕಿ ಇದೆ ಎಂದು ಪ್ರಕಟಿಸಿ ಯುವಕನ ಫೋಟೋವನ್ನು ಅಶ್ಲೀಲ ದೃಶ್ಯಾವಳಿಗೆ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟು ಮಾನ ಹಾನಿಗೊಳಿಸುತ್ತಿರುವ ಕೃತ್ಯದ ವಿರುದ್ದ ನೊಂದ ಯುವಕ ಸೈಬರ್ ಕ್ರೈಂ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾರೆ.
ಉಪ್ಪಿನಂಗಡಿಯ ಹಿತೇಶ್ ಕುಮಾರ್ ಎಂಬ ಯುವಕನೇ ವಂಚನೆಗೆ ತುತ್ತಾದ ನತದೃಷ್ಟ. ತಾನು ಸುಲಲಿತವಾಗಿ ಸಾಲ ಒದಗಿಸುವ ಆನ್ ಲೈನ್ ಆಪ್ ಮೂಲಕ ಸಾಲ ಪಡೆದು, ಸಾಲದ ಮೊತ್ತವನ್ನು ನಿಯಮಿತವಾಗಿ ಮರುಪಾವತಿ ಮಾಡಿದ್ದೇನೆ. ಆದಾಗ್ಯೂ ಸಾಲ ಇನ್ನೂ ಬಾಕಿ ಇದೆ ಎನ್ನುತ್ತಾ ಸಂದೇಶ ಕಳುಹಿಸುತ್ತಿದ್ದ ಆಪ್ನಲ್ಲಿನ ಮಂದಿ ನನಗೆ ಮಾನಸಿಕ ಹಿಂಸೆ ನೀಡಲು ಮುಂದಾಗಿದ್ದರು. ಇದಕ್ಕೆ ನಿರ್ಲಕ್ಷ್ಯ ನೀತಿಯನ್ನು ಅನುಸರಿಸಿದಾಗ, ತನ್ನ ಭಾವಚಿತ್ರವನ್ನು ಅಶ್ಲೀಲ ದೃಶ್ಯಾವಳಿಗೆ ಜೋಡಿಸಿಕೊಂಡು, ಸದ್ರಿ ದೃಶ್ಯಾವಳಿಗಳನ್ನು ತನ್ನ ಗೆಳೆಯರ ಬಳಗಕ್ಕೆ ರವಾನಿಸಿ ತೇಜೋವಧೆ ಮಾಡುತ್ತಿರುವ ಕೃತ್ಯಗಳನ್ನು ಎಪ್ರಿಲ್ 23 ರಿಂದ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಹಿತೇಶ್ ಕುಮಾರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಲದ ಮರುಪಾವತಿಯ ದಾಖಲೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಅಶ್ಲೀಲ ದೃಶ್ಯಾವಳಿಗಳ ದಾಖಲೆಗಳನ್ನು ಲಗತ್ತೀಕರಿಸಿ ನೀಡಲಾದ ದೂರನ್ನು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾರಣವಿಲ್ಲದೆ ನಡೆಯುತ್ತಿರುವ ಆತ್ಮಹತ್ಯೆ ಪ್ರಕರಣಗಳಲ್ಲಿ ಇಂತಹ ಬೆದರಿಕೆ ತಂತ್ರಗಳೂ ದುಷ್ಪ್ರೇರಣೆ ನೀಡುತ್ತಿದ್ದು, ಸಂತ್ರಸ್ತರು ಯಾವುದೇ ಹಿಂಜರಿಕೆ ಇಲ್ಲದೆ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿ ನ್ಯಾಯ ದೊರಕಿಸಿಕೊಳ್ಳಬಹುದೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.