ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ, ಬೀಳ್ಕೊಡುಗೆ ಸಮಾರಂಭ, ಸತ್ಕಾರ ಕೂಟ
ಪುತ್ತೂರು: ಎ.30ರಂದು ಸೇವಾ ನಿವೃತ್ತಿ ಹೊಂದಿದ ಸರ್ವೆ ಎಸ್ಜಿಎಂ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ಮತ್ತು ಅವರ ಪತಿ ಎಸ್ಜಿಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು ಶ್ರೀನಿವಾಸ್ ಎಚ್.ಬಿ ಅವರ ವತಿಯಿಂದ ಕೃತಜ್ಞತಾ ಸಮಾರಂಭ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ, ಹಿತೈಷಿಗಳಿಗೆ, ವಿದ್ಯಾಭಿಮಾನಿಗಳಿಗೆ, ಊರವರಿಗೆ ಸತ್ಕಾರ ಕೂಟ ಎ.30ರಂದು ಸರ್ವೆ ಗ್ರಾಮದ ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ ನಡೆಯಿತು. ಹಿರಿಯ ವಿದ್ಯಾರ್ಥಿಗಳು, ಹಿತೈಷಿಗಳು ಸೇರಿದಂತೆ ನೂರಾರು ಮಂದಿ ಆಗಮಿಸಿ ಶುಭ ಹಾರೈಸಿದರು. ನಂತರ ಭೋಜನ ಸ್ವೀಕರಿಸಿದರು.
ಪುತ್ತೂರು ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ್ ರಾವ್, ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಡಿ ವಸಂತ, ಸದಸ್ಯರಾದ ಚಂದ್ರಶೇಖರ್ ಎನ್ಎಸ್ಡಿ, ಕಾವ್ಯ ಕಡ್ಯ, ಮುಂಡೂರು ಸಿ.ಎ ಬ್ಯಾಂಕ್ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು, ನಿವೃತ್ತ ಪ್ರಾಂಶುಪಾಲರಾದ ಸೂರ್ಯನಾರಾಯಣ ಎಲಿಯ, ನಿವೃತ್ತ ಶಿಕ್ಷಕರಾದ ಗೋಪಾಲಕೃಷ್ಣ ರಾವ್, ದಯಾನಂದ ರೈ, ಮಹಾಬಲ ರೈ, ಮೋಹಿನಿ, ವಿಜಯಲಕ್ಷ್ಮೀ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ವಿಷ್ಣುಪ್ರಸಾದ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ, ಷಣ್ಮುಖ ಯುವಕ ಮಂಡಲದ ಪದಾಽಕಾರಿಗಳು ಮತ್ತು ಸದಸ್ಯರು, ಗೌರಿ ಯುವತಿ ಮಂಡಲದ ಸದಸ್ಯರು, ಎಸ್ಜಿಎಂ ಮೇಲುಸ್ತುವಾರಿ ಸಮಿತಿ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಊರ ಪರವೂರ ಹಿತೈಷಿಗಳು, ಕುಟುಂಬಸ್ಥರು, ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.
ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಕಾರ್ಯಕ್ರಮ ನಿರೂಪಿಸಿದರು.
ಗೌರವಾರ್ಪಣೆ-ಬೀಳ್ಕೊಡುಗೆ: ನಿವೃತ್ತಿ ಹೊಂದಿದ ಜಯಶ್ರೀ ಶ್ರೀನಿವಾಸ್ ಹಾಗೂ ಶ್ರೀನಿವಾಸ್ ಎಚ್.ಬಿ ಅವರಿಗೆ ಎಸ್ಜಿಎಂ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಅಧ್ಯಕ್ಷ ಸುರೇಶ್ ಎಸ್.ಡಿ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ ಅಧ್ಯಕ್ಷ ಅಶೋಕ್ ಎಸ್.ಡಿ ನೇತೃತ್ವದಲ್ಲಿ ಗೌರವಿಸಲಾಯಿತು. ಕಲ್ಲಮ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ.ಕೆ.ಎಸ್ ಭಟ್ ಕಲ್ಲಮ ಮತ್ತು ಅನುರಾಧ ಭಟ್ ದಂಪತಿಗಳು ಗೌರವಾರ್ಪಣೆ ಮಾಡಿದರು. ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ವತಿಯಿಂದ ಅಧ್ಯಕ್ಷ ಗೌತಮ್ರಾಜ್ ಕರುಂಬಾರು ನೇತೃತ್ವದಲ್ಲಿ ಗೌರವಾರ್ಪಣೆ ನಡೆಯಿತು. ಶ್ರೀ ಗೌರಿ ಮಹಿಳಾ ಮಂಡಲದ ವತಿಯಿಂದ ಅಧ್ಯಕ್ಷೆ ಮೋಹಿನಿ ನೇತೃತ್ವದಲ್ಲಿ ಗೌರವಾರ್ಪಣೆ ನಡೆಯಿತು. ಸಂಘ ಸಂಸ್ಥೆಗಳಿಂದ, ಊರವರಿಂದ, ಹಿರಿಯ ವಿದ್ಯಾರ್ಥಿಗಳಿಂದ, ಪೋಷಕರಿಂದ ಗೌರವಾರ್ಪಣೆ ನಡೆದು ಬೀಳ್ಕೊಡಲಾಯಿತು.
ಗುರುಪ್ರಿಯಾ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ: ಪ್ರಿಯಾ ಮ್ಯೂಸಿಕಲ್ಸ್ ಪುತ್ತೂರು ಇದರ ವತಿಯಿಂದ ಗಾಯಕಿ ಗುರುಪ್ರಿಯಾ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ಶ್ರೀನಿವಾಸ್ ಎಚ್.ಬಿ-ಜಯಶ್ರೀ ಶ್ರೀನಿವಾಸ್ರವರ ಸಾಧನೆಯನ್ನು ಬಿಂಬಿಸುವ ಸ್ವರಚಿತ ಕವನ ಗಮನ ಸೆಳೆಯಿತು.
ಭರ್ಜರಿ ಭೋಜನ: ಭಾಗವಹಿಸಿದವರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಭೋಜನದ ಜೊತೆಗೆ ತಂಪು ಪಾನೀಯ, ಐಸ್ಕ್ರೀಂ ಹಾಗೂ ಸ್ವೀಟ್ ಬಾಕ್ಸ್ನ್ನೂ ನೀಡಲಾಯಿತು
ಶಿಕ್ಷಕ ಸಮುದಾಯಕ್ಕೆ ಮಾದರಿ
ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಶ್ರೀನಿವಾಸ್ ಎಚ್.ಬಿ-ಜಯಶ್ರೀ ಶ್ರೀನಿವಾಸ್ ದಂಪತಿಗಳಿಗೆ ಶುಭ ಕೋರಿ ಮೆಚ್ಚುಗೆಯ ಶುಭಾಶಯ ಸಲ್ಲಿಸಿದರು. ಸರ್ವೆ ಎಸ್ಜಿಎಂ ಪ್ರೌಢ ಶಾಲೆಯಲ್ಲಿ ಸುಧೀರ್ಘ ಸಮಯ ಸೇವೆ ಸಲ್ಲಿಸಿದ ಇವರಿಬ್ಬರು ಮಾದರಿಯಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಜನ ಮೆಚ್ಚಿದ ಶಿಕ್ಷಕ’ ಖ್ಯಾತಿಯ ಶ್ರೀನಿವಾಸ್ ಎಚ್.ಬಿ ಅವರು ಎಲ್ಲರನ್ನು ಸೇರಿಸಿಕೊಂಡು ಶಾಲೆಯ ಅಭಿವೃದ್ದಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದು ಅದರ ಹಿಂದೆ ಜಯಶ್ರೀ ಅವರ ಶ್ರಮವೂ ಬಹಳಷ್ಟಿದೆ ಎಂದು ಹಲವರು ಹೇಳಿದರು. ಒಟ್ಟಿನಲ್ಲಿ ಶ್ರೀನಿವಾಸ್ ಎಚ್.ಬಿ-ಜಯಶ್ರೀ ಶ್ರೀನಿವಾಸ್ ದಂಪತಿ ಶಿಕ್ಷಕ ಸಮುದಾಯಕ್ಕೆ ಮಾದರಿ ಎನ್ನುವ ಮಾತುಗಳು ಎಲ್ಲೆಡೆಯಿಂದ ಕೇಳಿ ಬಂದಿದೆ.
ನಿಮ್ಮೆಲ್ಲರನ್ನು ಮರೆಯುವ ಪ್ರಶ್ನೆಯೇ ಇಲ್ಲ
ನಾನು ಮತ್ತು ಪತ್ನಿ ಜಯಶ್ರೀ ಅವರು ಎಸ್ಜಿಎಂ ಪ್ರೌಢ ಶಾಲೆಯಲ್ಲಿ ಸುಧೀರ್ಘ ಸಮಯ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಊರಿನ, ಗ್ರಾಮದ ಜನತೆಗೆ ಆಭಾರಿಗಳಾಗಿದ್ದೇವೆ. ನಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಈ ಊರವರು, ಹಿರಿಯ ವಿದ್ಯಾರ್ಥಿಗಳು, ಹಿತೈಷಿಗಳು, ಯುವಕ ಮಂಡಲದವರು ಸಂಪೂರ್ಣ ಸಹಕಾರ ನೀಡಿದ್ದು ನಿಮ್ಮೆಲ್ಲರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ಸೇವಾವಧಿಯಲ್ಲಿ ಶಾಲೆ ಅಭಿವೃದ್ಧಿ ಕಾಣುವುದಕ್ಕೂ ನಿಮ್ಮೆಲ್ಲರ ಸಹಕಾರವೇ ಕಾರಣ. ಹಾಗಾಗಿ ಈ ಊರನ್ನು ಮರೆಯುವ ಪ್ರಶ್ನೆಯೇ ಇಲ್ಲ. ನೀವೆಲ್ಲ ನಮ್ಮ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ನಾವೆಂದೂ ಚಿರಋಣಿ. ಮುಂದೆಯೂ ನಿಮ್ಮೆಲ್ಲರ ಪ್ರೀತಿ, ಒಡನಾಟ ಹೀಗೆಯೇ ಇರಲಿ.
-ಶ್ರೀನಿವಾಸ್ ಎಚ್.ಬಿ, ಎಸ್ಜಿಎಂ ಪ್ರೌಢ ಶಾಲಾ ನಿವೃತ್ತ ಶಿಕ್ಷಕ
ಪ್ರೀತಿ, ವಿಶ್ವಾಸವೇ ನನ್ನ ಪಾಲಿನ ಸನ್ಮಾನ
ನನ್ನ 38 ವರ್ಷಗಳ ವೃತ್ತಿ ಜೀವನಕ್ಕೆ ಊರವರು, ಹಿರಿಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ನಿರಂತರ ಸಹಕಾರ, ಪ್ರೋತ್ಸಾಹ ನೀಡಿದ್ದಾರೆ. ಈ ಊರವರ ಪ್ರೀತಿ ಮತ್ತು ವಿಶ್ವಾಸವೇ ನನ್ನ ಪಾಲಿನ ದೊಡ್ಡ ಸನ್ಮಾನ. ನಮ್ಮೊಂದಿಗೆ ಎಲ್ಲಾ ಕಾರ್ಯಗಳಲ್ಲೂ ಕೈ ಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಶಿಕ್ಷಕ ವೃತ್ತಿಯ ಮಧ್ಯೆ ಶಾಲೆಯ ಅಭಿವೃದ್ಧಿ ವಿಚಾರದಲ್ಲೂ ನೀವೆಲ್ಲಾ ಕೈಜೋಡಿಸಿರುವುದು ಬಹಳ ಖುಷಿಯಾಗಿದೆ. ಮುಂದಕ್ಕೂ ನಮ್ಮೆಲ್ಲರ ಬಾಂಧವ್ಯ ಇದೇ ರೀತಿ ಮುಂದುವರಿಯಲಿ.
-ಜಯಶ್ರೀ ಶ್ರೀನಿವಾಸ್,ಎಸ್ಜಿಎಂ ಪ್ರೌಢಶಾಲೆಯಿಂದ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕಿ