ಪುತ್ತೂರು : ವಿದ್ಯಾರ್ಥಿಗಳು ಜ್ಞಾನದ ನಿಧಿಯಾಗಬೇಕು.ಪ್ರತಿಯೊಬ್ಬರ ಅಂತರಂಗದಲ್ಲಿ ಅಗಾಧ ಶಕ್ತಿಯಿದೆ.ಅದರ ಬಗ್ಗೆ ಯಾರಿಗೂ ಅರಿವಿಲ್ಲ.ಅಂತರಂಗದ ಶಕ್ತಿಯನ್ನು ಪರಿಪೂರ್ಣವಾಗಿ ಬಳಸಿಕೊಳ್ಳುವವರು ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ.ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ಹೈಸ್ಕೂಲು ಮತ್ತು 10ನೇ ತರಗತಿ ಪರೀಕ್ಷೆ ಬರೆದು ಪ್ರಥಮ ಪಿಯುಸಿ ಸೇರ ಬಯಸುವ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಮೂರು ದಿನಗಳ ಶಿಬಿರ ತರಂಗ- 2023 ವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ , ಕ್ರೀಡೆ,ಚಿತ್ರಕಲೆ,ಸಂಗೀತ , ನಾಟಕ, ಹೀಗೆ ಪ್ರತೀ ಕ್ಷೇತ್ರದ ಚಟುವಟಿಕೆಗಳಲ್ಲಿಯೂ ನಿತ್ಯಭಾಗಿಯಾಗುವ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತಾ ಸಾಗಬೇಕು.ಆಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ.ಎಲ್ಲರೂ ದಿನನಿತ್ಯ ಒಂದೊಂದು ಗುಣಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಆಲೋಚನೆಗಳಿಂದ ಜೀವನದ ಯಾವುದೇ ಸವಾಲನ್ನು ಧೈರ್ಯವಾಗಿ ಎದುರಿಸಬಹುದು.ಜೀವನದಲ್ಲಿಎದುರಾಗುವ ಸವಾಲನ್ನು ಎದುರಿಸಿ ಸೋಲಲ್ಲೂ ಗೆಲುವನ್ನು ಕಾಣುವ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಎಂದು ಹೇಳಿದರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಸುಧಾ ಹೇರಳೆ ಮಾತನಾಡುತ್ತಾ, ಕಲೆ,ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಇಂದಿನ ಯುವಜನತೆಗೆ ಪರಿಚಯಿಸುವ ಈ ಕಾರ್‍ಯಕ್ರಮ ಅರ್ಥಪೂರ್ಣವಾಗಿದೆ. ಶೈಕ್ಷಣಿಕ ಕಾಲ ಘಟ್ಟದಲ್ಲಿ ಪಠ್ಯದ ಜೊತೆಗೆ ಇನ್ನಿತರ ಚಟುವಟಿಕೆಗಳಲ್ಲಿ ನಮ್ಮನ್ನು ಹೆಚ್ಚು ಸಕ್ರಿಯರಾಗಿಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಇಂತಹ ಕಾರ್‍ಯಕ್ರಮಗಳಲ್ಲಿ ಹೆಚ್ಚು ಭಾಗವಹಿದ್ದಲ್ಲಿ ವಿದ್ಯಾರ್ಥಿಗಳು ಕ್ರಿಯಾತ್ಮಕ ಯೋಚನೆಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಾರೆ. ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಮಾತನಾಡಿ, ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕಾಗಿ ತನ್ನ ಜೀವನದಲ್ಲಿ ಏಕಾಗ್ರತೆ , ಬದ್ಧತೆ,ಗುರಿಗಳನ್ನು ಅಳವಡಿಸಿಕೊಳ್ಳಬೇಕು. ಅದಕ್ಕಾಗಿ ಇಂತಹ ಕಾರ್‍ಯಾಗಾರಗಳು ತುಂಬಾ ಸಹಕಾರಿ. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಮೊದಲು ಆ ಬಗೆಗೆ ನಿರ್ಧಿಷ್ಟವಾದ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಗುರಿಯ ದಿಕ್ಕಿನಲ್ಲಿ ಶ್ರಮವಹಿಸಿದರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ ಎಂದರು.
ವೇದಿಕೆಯಲ್ಲಿ ಕಾರ್‍ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ನಿವೃತ್ತ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಕಾಶ್ ಪ್ರಭು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಪುತ್ತೂರು,ಬಂಟ್ವಾಳ,ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ದೀಪ್ತಿ ಸ್ವಾಗತಿಸಿ, ಶ್ರಾವ್ಯ ವಂದಿಸಿ, ಸುಮಾ ಭಟ್ ಕಾರ್ಯಕ್ರಮ ನಿರೂಪಿಸಿದರು.