ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಪುತ್ತೂರು, ತಾಲೂಕು ಸ್ವೀಪ್ ಸಮಿತಿಯ ಸಹಕಾರದೊಂದಿಗೆ ರೋಟರಿ ಪುತ್ತೂರು ಎಲೈಟ್ ಹಾಗೂ ರೋಟರಾಕ್ಟ್ ಕ್ಲಬ್, ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ “ಮತದಾನ ಜಾಗೃತಿಗೆ ಬೀದಿ ನಾಟಕ” ವನ್ನು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು.
ಕಾರ್ಯಕ್ರಮವನ್ನು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಡಾ. ಆಂಟನಿ ಪ್ರಕಾಶ್ ಮೊಂತೆರೊ ತಮಕಿ ಬಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧಿಕಾರಿಗಳಾದ ನವೀನ್ ಭಂಡಾರಿ, ರೊಟೇರಿಯನ್ ಆಸ್ಕರ್ ಆನಂದ್, ಸಂಸಾರ ಜೋಡು ಮಾರ್ಗದ ನಿರ್ದೇಶಕರು ಹಾಗೂ ಪತ್ರಕರ್ತ ಮೌನೇಶ್ ವಿಶ್ವಕರ್ಮ, ಬೀದಿ ನಾಟಕದ ಕಲಾವಿದರು, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪಾನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರು ಮಾತನಾಡಿ “ಮತದಾನ ಮಾಡುವ ಬಗೆಗಿನ ಹೆಚ್ಚಿನ ಅರಿವು ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ಅಗತ್ಯ,ಮತದಾನ ಮಾಡುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧಿಕಾರಿ ನವೀನ್ ಭಂಡಾರಿ ಮಾತನಾಡಿ ” ಯಾವುದೇ ಆಮಿಷಗಳಿಗೆ ಬಲಿಯಾಗದೆ ಧೈರ್ಯದಿಂದ ಸ್ವಾಭಿಮಾನದಿಂದ ನಿಮ್ಮ ಹಕ್ಕನ್ನು ಚಲಾಯಿಸಿ” ಎಂದು ಕರೆ ನೀಡಿದರು. ಸ್ನಾತಕೋತ್ತರ ಸಮಾಜ ಕಾರ್ಯದ ಸಂಯೋಜಕರಾದ ಶ್ರೀಮಣಿ ಸ್ವಾಗತಿಸಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಯಶವಂತ್ ನಾಯಕ್ ಸಂಯೋಜಿಸಿದರು.