ಬರಿಗಯ್ಯಲ್ಲಿ ತೆರಳಿದ ಅಧಿಕಾರಿಗಳು; ಸಭೆಯಲ್ಲಿ ಕಣ್ಣೀರು ಹಾಕಿದ ಅಶೋಕ್ ರೈ
ಪುತ್ತೂರು: ನಾನು ಬಿಜೆಪಿಯಲ್ಲಿರುವಾಗಲೇ ಕಳೆದ ಹಲವು ವರ್ಷಗಳಿಂದ ಉದ್ಯಮ ನಡೆಸುತ್ತಿದ್ದೇನೆ. ನಾನು ಮಾಡುವ ಎಲ್ಲಾ ವ್ಯವಹಾರವೂ ಪ್ರಾಮಾಣಿಕವಾಗಿಯೇ ಮಾಡುತ್ತಿದ್ದೇನೆ, ಸರಕಾರಕ್ಕೆ ಪಾವತಿಸಬೇಕಾದ ಎಲ್ಲಾ ತೆರಿಗೆಗಳನ್ನು ಸರಿಯಾದ ಸಮಯಕ್ಕೆ ಪಾವತಿಮಾಡುತ್ತಿದ್ದೇನೆ ಇದೆಲ್ಲವೂ ಬಿಜೆಪಿಗರಿಗೆ ಗೊತ್ತಿದೆ. ಇದೆಲ್ಲವೂ ಗೊತ್ತಿದ್ದೂ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹವಾ ಕಂಡು ಬೆದರಿದ ಬಿಜೆಪಿ ನನ್ನ ಮನೆಯ ಮೇಲೆ ಐ ಟಿ ದಾಳಿ ನಡೆಸಿ ನನ್ನನ್ನು ಕಟ್ಟಿಹಾಕುವ ಕೆಲಸವನ್ನು ಮಾಡಿದ್ದಲ್ಲದೆ ನನಗೆ ಮಾನಸಿಕ ಕಿರುಕುಳ ನೀಡುವ ಕೆಲಸವನ್ನು ಮಾಡುತ್ತಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಸಭೆಯಲ್ಲಿ ಕಣ್ಣೀರು ಹಾಕಿದ ಘಟನೆ ವಿಟ್ಲ ವ್ಯಾಪ್ತಿಯ ಚಂದಳಿಕೆಯಲ್ಲಿ ನಡೆದಿದೆ.
ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಯವರ ಅಧ್ಯಕ್ಷತೆಯಲ್ಲಿ ಚಂದಳಿಕೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅಶೋಕ್ ರೈ ನನ್ನ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆಯಲ್ಲೆಲ್ಲಾ ಹುಡುಕಾಡಿ ಮನೆಯಲ್ಲಿದ್ದ 1,89,000ರೂ.ವನ್ನು ಕೊಂಡೊಯ್ದಿದ್ದಾರೆ. ನಾನು ಮನೆಯಲ್ಲಿ ಕೋಟಿಗಟ್ಟಲೆ ಹಣ ಇಟ್ಟಿದ್ದೇನೆ ಎಂಬ ತಪ್ಪು ಮಾಹಿತಿಯನ್ನು ಬಿಜೆಪಿಯೇ ನೀಡಿದೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯದಲ್ಲಿ ಮಗ್ನನಾಗಿದ್ದೇನೆ. ನಾವು ಹೋದಲ್ಲೆಲ್ಲಾ, ಸಭೆ ನಡೆಸಿದಲ್ಲೆಲ್ಲಾ ಅಭೂತ ಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ ಇದನ್ನು ಕಂಡು ಸಹಿಸದ ಬಿಜೆಪಿ ಈ ಕೃತ್ಯಕ್ಕೆ ಕೈ ಹಾಕಿದೆ ಎಂದು ಹೇಳಿ ಭಾವುಕರಾದ ಅವರು ಮಾತನಾಡುತ್ತಲೇ ನೋವು ತಡೆಯಲಾರದೆ ಕಣ್ಣೀರು ಹಾಕಿದರು. ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ಸರಕಾರದ , ಇಲಾಖೆಯ ಕಣ್ಣು ತಪ್ಪಿಸಿ ವ್ಯವಹಾರ ಮಾಡಿಲ್ಲ. ನಾನು ನನ್ನ ಉದ್ದಿಮೆಯ ಒಂದು ಪಾಲು ಬಡವರಿಗೆ ದಾನವಾಗಿ ನೀಡಿದ್ದೇನೆ ಅದೇ ಬಡವನ ಆಶೀರ್ವಾದದಿಂದ ನನಗೆ ಎಷ್ಟೇ ಕಿರುಕುಳ ಕೊಟ್ಟರೂ ಧೈರ್ಯವಾಗಿ ಮುನ್ನಡೆಯುತ್ತಿದ್ದೇನೆ. ಬಡ ಜೀವಗಳ ಆಶೀರ್ವಾದ ಇರುವ ತನಕ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿಗರು ಅರಿತುಕೊಳ್ಳಬೇಕು ಎಂದು ಹೇಳಿದರು.
ಅಭಿವೃದ್ದಿ ಕೆಲಸ ಮಾಡಿದ್ದರೆ ಚರ್ಚೆಗೆ ಬನ್ನಿ
ಬಿಜೆಪಿ ಶಾಸಕರು ಕಳೆದ ಐದು ವರ್ಷಗಳಿಂದ ಮಾಡಿದ ಅಭಿವೃದ್ದಿ ಕಾರ್ಯ ಏನು ಎಂಬುದನ್ನು ಜನರ ಮುಂದೆ ಇಡಿ, ಆ ವಿಚಾರದಲ್ಲಿ ನಾನು ಚರ್ಚೆ ಮಾಡುವ. ಜಿಲ್ಲೆಯಲ್ಲಿ ಏಳುಮಂದಿ ಶಾಸಕರು, ಇಬ್ಬರು ಮಂತ್ರಗಳಿದ್ದರೂ ಒಬ್ಬ ಬಡವನಿಗೆ ಸೂರು ಕಲ್ಪಿಸಲು ಸಾಧ್ಯವಾಗಿಲ್ಲ, ಬಡವನ ಮನೆಯನ್ನು ಬೆಳಗಿಸಲು ಸಾಧ್ಯವಾಗಿಲ್ಲ. ಅಭಿವೃದ್ದಿ ಕೆಲಸ ಮಾಡದೆ ಚುನವಣೆ ಸಂದರ್ಭದಲ್ಲಿ ಎದುರಾಳಿ ಅಭ್ಯರ್ಥಿಗೆ ಐಟಿ ದಾಳಿ ಮಾಡಿಸುವುದು, ನನ್ನ ಸಿಬಂಧಿಗಳನ್ನು ದಿಗ್ಬಂದನದಲ್ಲಿರಿಸುವ ಕೆಲಸಕ್ಕೆ ಯಾಕೆ ಕೈ ಹಾಕುತ್ತೀರಿ. ಅಭಿವೃದ್ದಿ ಮಾಡಿದ್ದರೆ ಧೈರ್ಯವಾಗಿ ಬನ್ನಿ ಎಂದು ಬಿಜೆಪಿಗೆ ಸವಾಲು ಹಾಕಿದರು. ವಿಟ್ಲ- ಕಬಕ ರಸ್ತೆಯನ್ನು 60% ನಲ್ಲಿ ಡಾಮರೀಕರಣ ಮಾಡಲಾಗಿದೆ. ಈ ಬಾರಿಯ ಮಳೆಗಾಲದಲ್ಲಿ ಡಾಮಾರು ಕೊಚ್ಚಿ ಹೋಗಬಹುದು, ವಿಟ್ಲದಲ್ಲಿ, ಪುತ್ತೂರಿನಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ರಿಂಗ್ ರೋಡ್ ಮಾಡುವುದಾಗಿ ಹೇಳಿದವರು ಕಮಿಷನ್ ಪಡೆದು ತನ್ನ ಹಾಗೂ ತನ್ನ ಕುಟುಮಬದವರ ಕೈ ಬೆರಳಿಗೆ ಚಿನ್ನದ ರಿಂಗ್ ಹಾಕಿಸಿದ್ದು ಬಿಟ್ಟರೆ ಏನೂ ಅಭಿವೃದ್ದಿ ಕೆಲಸ ಮಾಡಿಲ್ಲ ಎಂದು ಹೇಳಿದರು.
ಬಡವರಿಗೆ ನೆರವು ನೀಡುವೆ ತಾಕತ್ತಿದ್ದರೆ ತಡೆಯಿರಿ
ನಾನು ಬಡವರ ಸಮಾಜ ಸೇವೆ ಮಾಡಲೆಂದೇ ಚುನಾವಣಾ ಆಖಾಡಕ್ಕೆ ಇಳಿದಿದ್ದೇನೆ. ಕಳೆದ 12 ವರ್ಷಗಳಿಂದ ಇದನ್ನೇ ಮಾಡುತ್ತಿದ್ದೇನೆ ಸಮಾಜ ಸೇವೆಯಲ್ಲಿ ನನಗೆ ಆತ್ಮ ತೃಪ್ತಿ ಇದೆ ಇದನ್ನು ತಡೆಯುವ ತಾಕತ್ತಿದ್ದರೆ ಬಂದು ತಡೆಯಿರಿ ಎಂದು ಬಿಜೆಪಿಗರಿಗೆ ಸವಾಲು ಹಾಕಿದರು. ತಾನು ಶಾಸಕನಾದಲ್ಲಿ ಬಡವರ ಮನೆಗೆ ಅಧಿಕಾರಿಗಳನ್ನು ಕಳಿಸಿ ಅವರ ಕೆಲಸವನ್ನು ಮಾಡಿಸುತ್ತೇನೆ. ಜನಪ್ರತಿನಿಧಿಯಾದವ ಜನಸೇವೆ ಮಾಡಬೇಕೇ ವಿನಾ ಸರಕಾರದ, ಜನರ ಸೊತ್ತನ್ನು ಲೂಟಿ ಹೊಡೆಯುವುದಲ್ಲ, ಮೋಜು ಮಸ್ತಿ ಮಾಡುವುದಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ ಅಶೋಕ್ ರೈ ಜನರ ಸೇವೆ ಮಾಡಲು ಸಾಧ್ಯವಾಗದ ಜನಪ್ರತಿನಿಧಿ ಚುನಾವಣೆಗೆ ಸ್ಪರ್ಧಿಸಬಾರದು ಎಂದು ಹೇಳಿದರು.
8 ಊಟದ ಲೆಕ್ಕವನ್ನು ತನಿಖೆ ಮಾಡಿದ ಮಠಂದೂರು
ಇಂದಿರಾ ಕ್ಯಾಂಟೀನ್ ಬಂದ್ ಮಾಡಿಸಿದ್ದು ಯಾಕೆ; ಶಕುಂತಳಾ ಶೆಟ್ಟಿ
ಎಂಟು ಊಟ ಯಾರಿಗೆ ಕೊಟ್ಟಿದ್ದು ಎಂಬುದರ ತನಿಖೆ ಮಾಡಬೇಕು ಎಂದು ಹೇಳಿದ್ದ ಶಾಸಕ ಸಂಜೀವ ಮಠಂದೂರುರವರು ಬಡವರ ಇಂದಿರಾ ಕ್ಯಾಂಟೀನ್ ಬಂದ್ ಮಾಡಿಸಿದ್ದು ಯಾಕೆ? ಬಡವರು ಕನಿಷ್ಠ ದರಕ್ಕೆ ಊಟ ಮಾಡಬಾರದು ಎಂಬುದೇ ಬಿಜೆಪಿಯ ಉದ್ದೇಶವಾಗಿತ್ತು. ಕಾಂಗ್ರೆಸ್ ಸರಕರ ಜಾರಿಗೆ ತಂದಿದ್ದ ಎಲ್ಲಾ ಜನಪ್ರ ಯೋಜನೆಗಳನ್ನು ಬಂದ್ ಮಾಡಿದ್ದ ಬಿಜೆಪಿ ಮಕ್ಕಳಿಗೆ ಕೊಡುವ ಹಾಲು, ಮೊಟ್ಟೆ, ಶೂ ಭಾಗ್ಯ ಎಲ್ಲವನ್ನೂ ಬಂದ್ ಮಾಡಿದ್ದರು. ಬಿಜೆಪಿಗೆ ಮಾನವೀಯತೆ ಇದ್ದರೆ ಆ ಕೆಲಸ ಮಾಡುತ್ತಿದ್ರ ಎಂದು ಪ್ರಶ್ನಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಬಿಜೆಪಿಗರ ಅಮಾನವೀಯ ಕೃತ್ಯಗಳು ಮಿತಿಮೀರಿದ್ದು, ಇದು ಇಂದು ಶಾಪವಾಗಿ ಅವರಿಗೆ ತಟ್ಟಿದೆ ಎಂದು ಹೇಳಿದರು. ಬೆಲೆ ಏರಿಕೆ ಮಾಡಿ ಬಡವರನ್ನು ಸುಲಿಗೆ ಮಾಡುತ್ತಿರುವ ಬಿಜೆಪಿಗೆ ಹಸಿದವನ ಕಣ್ಣೀರ ಒಂದೊಂದು ಹನಿಗಳೂ ಅವರಿಗೆ ಕಂಟಕವಾಗಿ ಚುಚ್ಚಲಿದೆ ಎಂಬುದನ್ನು ಅರಿತುಕೊಂಡರೆ ಉತ್ತಮ ಎಂದು ಹೇಳಿದ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯಾ ಬ್ಯಾಂಕನ್ನು ಮಾರ್ವಾಡಿಗಳ ಮುಳುಗುತ್ತಿದ್ದ ಬ್ಯಾಂಕ್ ಜೊತೆ ಮಾಡಿದೆ ವಿಜಯಾ ಬ್ಯಾಂಕ್ ಯಾವಾಗ ಮುಳುಗುತ್ತದೋ ಆ ದೇವರೇ ಬಲ್ಲ ಎಂದು ಹೇಳಿದರು. ಭೂ ಮಸೂದೆ ಕಾನೂನಿನಲ್ಲಿ ಭೂಮಿ ದೊರೆತ ಮನೆಯ ಯಜಮಾನನ ಮಕ್ಕಳು ಇಂದು ಭೂಮಿ ಕೊಟ್ಟ ಕಾಂಗ್ರೆಸ್ಸನ್ನು ಮರೆತು ಕೇಸರಿ ಶಾಲು ಹಾಕಿ ಬಿಜೆಪಿ ಜೊತೆ ಹೆಜ್ಜೆ ಹಾಕುತ್ತಿರುವುದು ಖೇದಕರ ಸಂಗತಿ ಎಂದು ಹೇಳಿದರು.
ವಿಟ್ಲ ಪಟ್ಟಣ ಪಂಚಾಯತ್ ದುರಾವಸ್ಥೆಯಿಂದ ಕೂಡಿದೆ: ಹೇಮನಾಥ ಶೆಟ್ಟಿ
ವಿಟ್ಲ ಪಟ್ಟಣ ಪಂಚಾಯತ್‌ಗೆ ಚುನಾವಣೇ ನಡೆದು ಹಲವು ತಿಂಗಳುಗಳೇ ಕಳೆದರೂ ಇನ್ನೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಚುನಾಯಿತ ಸದಸ್ಯರು ಯಾವುದೇ ಕೆಲಸವನ್ನು ಮಾಡದಂತ ಸನ್ನಿವೇಶ ನಿರ್ಮಾಣವಾಗಿದೆ. ವಿಟ್ಲದಲ್ಲಿರುವ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಒಳಚರಂಡಿ ಇಲ್ಲದೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲದೆ ಜನ ಕಂಗೆಟ್ಟಿದ್ದಾರೆ. ಬಿಜೆಪಿಗೆ ಮತ ಕೊಟ್ಟ ಮತದಾರ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಆರೋಪಿಸಿದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಗೆ ಗೆಲುವಾಗಲಿದೆ. ಇದನ್ನು ಕಂಡು ಬಿಜೆಪಿ ಬೆರಗಾಗಿದೆ. ಬಿಜೆಪಿಯವರ ಕೈಯ್ಯಲ್ಲಿದ್ದ ಹಿಂದುತ್ವವನ್ನು ಪಕ್ಷೇತರ ಅಭ್ಯರ್ಥಿಕೊಂಡು ಹೋಗಿದ್ದಾರೆ. ಈಗ ಬಿಜೆಪಿಯನ್ನು ಹಿಂದೂ ಸಂಘಟನೆಗಳು ದೂರುತ್ತಿದೆ, ಹಿಂದೂ ಸಂಘಟನೆಗಳನ್ನು ಬಿಜೆಪಿ ತೆಗಳುವ ಕೆಲಸವನ್ನು ಮಾಡುತ್ತಿದೆ ಇದೆಲ್ಲವೂ ಶಾಪದ ಪರಿಣಾಮವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯರಾದ ಎಂ ಎಸ್ ಮಹಮ್ಮದ್, ಹಿರಿಯ ಕಾಂಗ್ರೆಸ್ ಮುಖಂಡ ದೇಜಪ್ಪ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ