ಫಿಲೋಮಿನಾ ಕಾಲೇಜಿನಲ್ಲಿ ರ‍್ಯಾಂಕ್ ವಿಜೇತರಿಗೆ ಸನ್ಮಾನ

0


ಸಂಪಾದಿಸಿದ ಜ್ಞಾನವನ್ನು ವಿವೇಕವಾಗಿ ಪರಿವರ್ತಿಸಿಕೊಳ್ಳುವುದು ಅಗತ್ಯ-ಡಾ|ಗಿರಿಧರ್ ರಾವ್

ಪುತ್ತೂರು:ಜ್ಞಾನವೇ ಬಹು ದೊಡ್ಡ ಬಂಡವಾಳ. ಇಂತಹಾ ಕಾಲಘಟ್ಟದಲ್ಲಿ ಸಂಪಾದಿಸಿಕೊಂಡ ಜ್ಞಾನವನ್ನು ವಿವೇಕವಾಗಿ ಪರಿವರ್ತಿಸಿಕೊಳ್ಳುವುದು ಅತಿ ಅಗತ್ಯ. ಸುಶಿಕ್ಷಿತರಾದ ನಾವು ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡಲ್ಲಿ ನಮ್ಮ ಜ್ಞಾನ ಸಂಪಾದನೆಯು ಸಾರ್ಥಕವಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ಆಯುಕ್ತರಾದ ಡಾ.ಗಿರಿಧರ ರಾವ್‌ರವರು ಹೇಳಿದರು.


ಮೇ 3ರಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನಲ್ಲಿ 2022-23ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಬೆಳ್ಳಿ ಹಬ್ಬದ ಸಭಾ ಭವನದಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಮೇಲೆ ಬಹಳ ದೊಡ್ಡ ಸಾಮಾಜಿಕ ಜವಾಬ್ದಾರಿ ಇದೆ. ಮುಂದೆ ಉದ್ಯೋಗ ದೊರಕಿದ ಮೇಲೆ ವಿದ್ಯಾಭ್ಯಾಸ ಮಾಡಿದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಸಮಾಜಕ್ಕೆ ಒಳಿತಾಗುವಂತಹ ಕಾರ್ಯಗಳನ್ನು ಮಾಡಬೇಕು. ಕಲಿಕೆ ನಿರಂತರ ಪ್ರಕ್ರಿಯೆ. ಜೀವನದುದ್ದಕ್ಕೂ ಕಲಿಯುತ್ತಿದ್ದಲ್ಲಿ ಯಶಸ್ಸನ್ನು ಸಾಧಿಸಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕರಾದ ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ವಿದ್ಯಾರ್ಥಿಗಳ ಈ ಸಾಧನೆಯು ಅವರ ಹೆತ್ತವರ ತ್ಯಾಗಕ್ಕೆ ಸಿಕ್ಕ ಅತಿ ದೊಡ್ಡ ಉಡುಗೊರೆಯಾಗಿದೆ. ನಿಮ್ಮ ಜೀವನದಲ್ಲಿ ಹಲವಾರು ಸಂತಸದ ಕ್ಷಣಗಳು ಹಾಗೂ ವಿಷಯಗಳನ್ನು ಬದಿಗಿರಿಸಿ ಓದಿನ ಬಗ್ಗೆ ವಿಶೇಷ ಗಮನಹರಿಸಿರುವುದೇ ಅವರ ಸಾಧನೆಗೆ ಕಾರಣವಾಗಿದೆ. ಕಾಲೇಜಿನಲ್ಲಿ ಕಲಿತ ಒಳ್ಳೆಯ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿ ಉತ್ತಮ ನಾಗರಿಕರಾಗಿ ಬಾಳಿರಿ. ನಿಮ್ಮ ಜ್ಞಾನವನ್ನು ಸಮಾಜಕ್ಕೆ ಒಳಿತನ್ನು ಕೊಡುವ ನಿಟ್ಟಿನಲ್ಲಿ ಉಪಯೋಗಿಸಿರಿ. ಜೀವನದಲ್ಲಿ ಬಂದೊದಗುವ ಅವಕಾಶಗಳನ್ನು ಸದುಪಯೋಗಪಡಿಸಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ ಎಂದರು.
ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಆಂಟನಿ ಪ್ರಕಾಶ್ ಮೊಂತೇರೊರವರು ಮಾತನಾಡಿ, ಕಠಿಣ ಪರಿಶ್ರಮ ಹಾಗೂ ಬದ್ಧತೆಯಿಂದ ಸಾಧನೆಗೈದ ವಿದ್ಯಾರ್ಥಿಗಳಿಗೆ ಹೆತ್ತವರ ನಿರಂತರ ಪ್ರೋತ್ಸಾಹ ಹಾಗೂ ಶಿಕ್ಷಕರ ಮಾರ್ಗದರ್ಶನ ಮಾತ್ರವಲ್ಲದೆ ಕಾಲೇಜು ಆಡಳಿತ ಮಂಡಳಿಯ ಬೆಂಬಲವಿತ್ತು. ಅವರ ಜೀವನವನ್ನು ರೂಪಿಸುವಲ್ಲಿ ಸಹಕಾರ ನೀಡಿದ ಪ್ರತಿಯೋರ್ವರಿಗೂ ಅಭಿನಂದನೆಗಳು ಎಂದರು.
ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ಸ್ಟ್ಯಾನಿ ಪಿಂಟೋರವರು ರ‍್ಯಾಂಕ್ ವಿಜೇತರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಸಾಧನೆಗೆ ವಯಸ್ಸು ಹಾಗೂ ದೈಹಿಕ ನ್ಯೂನತೆಗಳು ಅಡ್ಡಿಯಾಗಬಾರದು. ಎಲ್ಲಾ ಸವಾಲುಗಳನ್ನೂ ಎದುರಿಸಿ ಉತ್ತಮ ಸಾಧನೆ ಮಾಡುವಂತಾಗಬೇಕು ಎಂದರು.
ಮಾಯಿದೆ ದೇವುಸ್ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ಆಶಿಕ್, ಕಾರ್ಯದರ್ಶಿ ಅನುಶ್ರೀ, ಜೊತೆ ಕಾರ್ಯದರ್ಶಿ ಶಿವಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರದರ್ಶನ ಕಲಾ ಘಟಕದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಚಂದ್ರಶೇಖರ್ ಕೆ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಭಾರತಿ ಎಸ್ ರೈ ವಂದಿಸಿದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಪ್ರೊ. ಗಣೇಶ್ ಭಟ್ ಅತಿಥಿಗಳ ಪರಿಚಯ ಮಾಡಿದರು.
ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ, ಉಪ-ಪ್ರಾಂಶುಪಾಲ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ.ಪಿ.ರಾಧಾಕೃಷ್ಣ, ವ್ಯವಹಾರ ನಿರ್ವಹಣಾ ವಿಭಾಗ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೇಮಲತಾ ಕೆ, ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗದ ಸಂಯೋಜಕ ಗೋವಿಂದ ಪ್ರಕಾಶ್, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಯೋಜಕಿ ಶ್ರೀಮಣ, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕ ಯಶವಂತ್ ಜಿ.ನಾಯಕ್‌ರವರು ರ‍್ಯಾಂಕ್ ವಿಜೇತರನ್ನು ಪರಿಚಯಿಸಿದರು. ವ್ಯವಹಾರ ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗಜೀವನ್‌ದಾಸ್ ರೈ ಮತ್ತು ಪದಾಧಿಕಾರಿಗಳು, ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ಹೆತ್ತವರು, ಶಿಕ್ಷಕರು ಹಾಗೂ ಕಾಲೇಜಿನ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.



ರ‍್ಯಾಂಕ್ ವಿಜೇತರಿಗೆ ಸನ್ಮಾನ…
ಬಿಸಿಎ ಪದವಿ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಫಾತಿಮತ್ ಸಾನಿದ, ಬಿಎಸ್ಸಿ ವಿಭಾಗದಲ್ಲಿ ಮೂರನೇ ರ‍್ಯಾಂಕ್ ಪಡೆದ ಧೀರಜ್ ಎಂ, 5ನೇ ರ‍್ಯಾಂಕ್ ಗಳಿಸಿದ ಶ್ರೀಶ ಎಂ.ಎಸ್, ಬಿಬಿಎ ವಿಭಾಗದಲ್ಲಿ 5ನೇ ರ‍್ಯಾಂಕ್ ಪಡೆದ ಹರ್ಷಿತ ಕೆ, ಬಿಕಾಂ ವಿಭಾಗದಲ್ಲಿ 6ನೇ ರ‍್ಯಾಂಕ್ ಪಡೆದ ಶ್ರೀದೇವಿ ಕೆ, 7ನೇ ರ‍್ಯಾಂಕ್ ಪಡೆದ ಪ್ರತಿಮಾ ಎ, 10ನೇ ರ‍್ಯಾಂಕ್ ಪಡೆದ ನಿಶಾ ಪ್ರಭಾ ಎನ್, ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ದೀಪ್ತಿ ವಿ, ಎಂಎಸ್‌ಡಬ್ಲ್ಯೂ ವಿಭಾಗದಲ್ಲಿ 2ನೇ ರ‍್ಯಾಂಕ್ ಪಡೆದ ಅನ್ಶ, ಎಂಕಾಂನಲ್ಲಿ 3ನೇ ರ‍್ಯಾಂಕ್ ಗಳಿಸಿದ ಅಪೂರ್ವ ಪಿ.ವಿ, ವಿನೋಲಿಯಾ ಜಸ್ಲಿನ್ ಮಿನೇಜಸ್, 4ನೇ ರ‍್ಯಾಂಕ್ ಗಳಿಸಿದ ಶ್ಲಾಘ್ಯ ಆಳ್ವ ಕೆ, ಶ್ರಾವ್ಯ ಎನ್.ಕೆ, ಶ್ರೀಲಕ್ಷ್ಮಿ ಭಟ್ ಕೆ, 5ನೇ ಪಡೆದ ಬಾಸಿಲ, ಸಿ.ಎಸ್ ಜಯಶ್ರೀ, ಚೈತ್ರಾ ಬಿ, 7ನೇ ರ‍್ಯಾಂಕ್ ಪಡೆದ ಹರಿಣಿ ಎಸ್.ಪೈ, 10ನೇ ರ‍್ಯಾಂಕ್ ಪಡೆದ ಹರ್ಷಿತ ಎಸ್, ಜೋತ್ಸ್ನಾ ಸಿ.ಜೆ ರವರುಗಳನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here