@ಯೂಸುಫ್ ರೆಂಜಲಾಡಿ
ಅಮ್ಮಾ…ಈ ಶಬ್ದವೇ ಅದೇನೋ ರೋಮಾಂಚನ. ಇಡೀ ಜಗತ್ತಿನಲ್ಲಿಯೇ ಅಮ್ಮನಿಗಿರುವಷ್ಟು ಮಹತ್ವ ಇನ್ಯಾರಿಗೂ ಇರಲಾರದು. ಅಮ್ಮ ಎನ್ನುವ ಎರಡಕ್ಷರದಲ್ಲಿ ವಾತ್ಸಲ್ಯ, ಪ್ರೀತಿ, ಮಮತೆಯ ಅನುಬಂಧ ಹೀಗೇ ಎಲ್ಲವೂ ಅಡಗಿದೆ. ತ್ಯಾಗದ ಪ್ರತಿರೂಪವೇ ಅಮ್ಮ. ಮಹಿಳಾ ದಿನ, ಮಕ್ಕಳ ದಿನ, ಕಾರ್ಮಿಕರ ದಿನ ಹೀಗೇ ಅನೇಕ ದಿನಾಚರಣೆಗಳು ನಮ್ಮಡೆಯಲ್ಲಿ ಸಾಕಷ್ಟು ನಡೆಯುತ್ತಿರುವಾಗ ಅಮ್ಮನ ದಿನವನ್ನೂ ನಾವೇಕೆ ಅರ್ಥಪೂರ್ಣವಾಗಿ ಆಚರಿಸಬಾರದು. ಹಾಗಾಗಿಯೇ ಮೇ ತಿಂಗಳ ಎರಡನೇ ಭಾನುವಾರವನ್ನು ಅಮ್ಮನ ದಿನವಾಗಿ ಆಚರಿಸಲಾಗುತ್ತಿದೆ.
ನಮಗೆ ಜನ್ಮ ನೀಡಿರುವ ಅಮ್ಮ ಬಳಿಕ ಎಲ್ಲವನ್ನೂ ನಮಗಾಗಿ ಧಾರೆಯೆರೆದಿದ್ದಾಳೆ. ಅವಳ ಕಷ್ಟ, ದುಃಖ, ದುಮ್ಮಾನಗಳನ್ನು ಬದಿಗೊತ್ತಿ ಸಕಲ ಸುಖವನ್ನೂ ನಮಗೆ ದಯೆಪಾಲಿಸಿದ್ದಾಳೆ. ತನ್ನ ಜೀವನ ಸಂಕಷ್ಟದ ಬಿರುಗಾಳಿಯಲ್ಲಿ ಸಿಲುಕಿಕೊಂಡರೂ ಅದನ್ನು ಲೆಕ್ಕಿಸದೇ ಮಕ್ಕಳಿಗಾಗಿ ಮರುಗುವ ಜೀವವೊಂದಿದ್ದರೆ ಅದು ಅಮ್ಮ ಮಾತ್ರ. ತಾನೆಷ್ಟೇ ದೊಡ್ಡ ಹುದ್ದೆ ಅಲಂಕರಿಸಿದರೂ ‘ಅಮ್ಮ’ ಎನ್ನುವ ಹುದ್ದೆಯೇ ಅವಳಿಗೆ ಪರಮಶ್ರೇಷ್ಠ. ಹೀಗೇ ಹೇಳುತ್ತಾ ಹೋದರೆ ಅಕ್ಷರಗಳಲ್ಲಿ ಬರೆದು ಮುಗಿಸಲಾಗದಷ್ಟು ಗುಣಗಾನ ಮಾಡಬಲ್ಲ ತ್ಯಾಗಮಯಿಯೇ ಈ ಅಮ್ಮ.
ಮಕ್ಕಳನ್ನು ಕಣ್ಣಿನಲ್ಲಿ ಕಣ್ಣಿಟ್ಟು ಸಂರಕ್ಷಿಸುವ ಅಮ್ಮ ಶ್ರೇಷ್ಠ ರಕ್ಷಕಿಯಾಗಿದ್ದಾಳೆ. ಮಕ್ಕಳಿಗೆ ಸಣ್ಣಪುಟ್ಟ ಅನಾರೋಗ್ಯ ಬಾಧಿಸಿದಾಗ ಪ್ರಾಥಮಿಕ ಚಿಕಿತ್ಸೆ ನೀಡುವ ಅಮ್ಮ ಶ್ರೇಷ್ಠ ಡಾಕ್ಟರ್ ಕೂಡಾ ಆಗಿದ್ದಾಳೆ. ಮಕ್ಕಳು ತಪ್ಪೇ ಮಾಡಿದರೂ ಅದನ್ನು ತಂದೆಯ ಜೊತೆ ವಾದಿಸಿ ಮಕ್ಕಳ ಪರವಾಗಿ ಕಾಳಜಿ ವಹಿಸುವ ಅಮ್ಮ ಶ್ರೇಷ್ಠ ವಕೀಲೆಯಾಗಿದ್ದಾಳೆ. ಮಕ್ಕಳಿಗೆ ಒಳಿತು ಕೆಡುಕುಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಿಕೊಡುವ ಅಮ್ಮ ಶ್ರೇಷ್ಠ ಶಿಕ್ಷಕಿಯಾಗಿದ್ದಾಳೆ. ಹೀಗೇ ಮಕ್ಕಳಿಗಾಗಿ, ಮಕ್ಕಳ ಭವಿಷ್ಯಕ್ಕಾಗಿ, ಕುಟುಂಬದ ಅಭ್ಯುದಯಕ್ಕಾಗಿ ಎಲೆಮರೆ ಕಾಯಿಯಂತೆ ನಿಷ್ಕಳಂಕ ಮನಸ್ಸಿನಿಂದ ಸೇವೆ ಸಲ್ಲಿಸುವ ತಾಯಿ ಅದನ್ನೆಂದೂ ಸೇವೆಯೆಂದು ಪರಿಗಣಿಸಿಯೇ ಇಲ್ಲ, ಅದರಲ್ಲಿ ಕಷ್ಟವನ್ನೂ ಕಂಡಿಲ್ಲ, ಕಷ್ಟ, ನಷ್ಟದಲ್ಲೂ ಸಂತೋಷವನ್ನು ಮಾತ್ರ ಆಕೆ ಕಂಡಿದ್ದಾಳೆ. ತನ್ನ ಮಕ್ಕಳ ಭವಿಷ್ಯದ ಬಗ್ಗೆ ಬಂಗಾರದ ಕನಸುಗಳನ್ನು ಕಾಣುವ ತಾಯಿಯು ಮಕ್ಕಳು ತಪ್ಪು ಮಾಡಿದರೂ, ಅನ್ಯಾಯ ಮಾಡಿದರೂ ಕೋಪಿಸಿಕೊಳ್ಳುವುದಿಲ್ಲ, ಮಕ್ಕಳನ್ನು ದ್ವೇಷಿಸುವುದಿಲ್ಲ, ಮಕ್ಕಳನ್ನು ದೂರ ಮಾಡುವುದಿಲ್ಲ, ತನ್ನ ಜೀವನವೇ ತನ್ನ ಮಕ್ಕಳಿಗಾಗಿ ಎಂಬ ರೀತಿಯಲ್ಲಿ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಾಳೆ, ತನ್ನ ಸಂತೋಷವನ್ನು ತ್ಯಾಗ ಮಾಡಿಯಾದರೂ ಮಕ್ಕಳಲ್ಲಿ ಸಂತೋಷವನ್ನು ಕಾಣುತ್ತಾಳೆ. ಮಕ್ಕಳು ಮನೆ ತಲುಪದೇ ರಾತ್ರಿ ನಿದ್ದೆ ಮಾಡದೇ ಇರುವ ಜಗತ್ತಿನಲ್ಲಿರುವ ಏಕೈಕ ಜೀವಿಯೆಂದರೆ ಅದು ಕೂಡಾ ಅಮ್ಮ ಮಾತ್ರವಾಗಿದ್ದಾಳೆ. ಮಕ್ಕಳು ಮನೆಯಲ್ಲಿ ತಿಂಡಿ ಕೇಳಿದಾಗ ಒಂದರ ಬದಲು ಎರಡು ನೀಡುವ ಅಮ್ಮ ತಾನು ಹೊಟ್ಟೆ ತುಂಬಿಸದಿದ್ದರೂ ತನ್ನ ಮಕ್ಕಳ ಹಸಿವು ನೀಗಿಸುತ್ತಾಳೆ. ಆ ಅಮ್ಮನ ಸುಖಕ್ಕಾಗಿ ನಾವು ಒಂದು ದಿನವನ್ನಾದರೂ ‘ಮದರ್ಸ್ ಡೇ’ ಹೆಸರಿನಲ್ಲಿ ಆಚರಿಸಿ ಆಕೆಯನ್ನು ಒಂದು ದಿನದ ಮಟ್ಟಿಗಾದರೂ ಸಂತೃಪ್ತಿಯಿಂದಿರುವಂತೆ ಮಾಡಬೇಕಲ್ಲವೇ.. ಅಮ್ಮನ ತ್ಯಾಗದ ಮುಂದೆ ಮಕ್ಕಳು ಅಮ್ಮನಿಗೆ ಕೊಡುವ ಎಲ್ಲವೂ ಶೂನ್ಯ, ಅಮ್ಮನ ತ್ಯಾಗದ ಮುಂದೆ ಮಕ್ಕಳು ಕೊಡುವ ಕೊಡುಗೆಗಳು ನಗಣ್ಯ. ಆದರೂ ವರ್ಷವಿಡೀ ರಾತ್ರಿ ಹಗಲು ದುಡಿಯುವ ತಾಯಿಗೆ ಅಮ್ಮನ ದಿನದ ಹೆಸರಿನಲ್ಲಾದರೂ ಒಂದು ದಿನ ವಿಶ್ರಾಂತಿ ದೊರಕಿಸಿಕೊಡಬೇಕಲ್ಲವೇ..
ಒಂದು ದಿನವಾದರೂ ಅಮ್ಮನಿಗೆ ಮೀಸಲಿಡೋಣ:
ಹೌದು… ಖಂಡಿತಾ ಅಮ್ಮನ ದಿನ ಮಹತ್ವದ ದಿನವಾಗಬೇಕು. ದಾಂಪತ್ಯ ದಿನಾಚರಣೆ ಹೆಸರಿನಲ್ಲಿ ವಿಹಾರಕ್ಕೆ ತೆರಳುವವರು, ಬರ್ತ್ಡೇ ಹೆಸರಿನಲ್ಲಿ ಪಾರ್ಟಿ ಏರ್ಪಡಿಸುವ ನಾವು ಅಮ್ಮನ ದಿನವನ್ನು ಅದಕ್ಕಿಂತಲೂ ಮಿಗಿಲಾಗಿ ಆಚರಿಸಬೇಕಲ್ಲವೇ.. ಮದುವೆಯಾಗಿ ಹೆತ್ತ ತಾಯಿಯನ್ನೇ ದೂರ ಮಾಡುವ ಘಟನಾವಳಿಗಳು ಅನೇಕ ಕಡೆಗಳಲ್ಲಿ ಕಂಡು ಬರುತ್ತಿದ್ದು ಸ್ವಾರ್ಥಕ್ಕಾಗಿ ಅಮ್ಮನನ್ನೇ ದೂರ ಮಾಡುವ ಮಕ್ಕಳೂ ಒಂದು ಕ್ಷಣ ಅಮ್ಮನ ಬಗ್ಗೆ ಚಿಂತಿಸಬೇಕಾಗಿದೆ. ವಿದ್ಯಾಭ್ಯಾಸಕ್ಕಾಗಿ, ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಅಮ್ಮನಿಂದ ದೂರವಾಗುವ ಪ್ರಮೇಯ ಇದ್ದರೂ ಜನ್ಮ ನೀಡಿ, ಪೋಷಿಸಿ, ಬೆಳೆಸಿದ ಅಮ್ಮನನ್ನು ಮರೆತು ಜೀವಿಸುವುದು ನೈಜ ಜೀವನವಾಗದು. ಕುಟುಂಬದ ಸಂತೋಷದ, ಸಂತೃಪ್ತಿಯ ಕೇಂದ್ರ ಬಿಂದುವಾದ ತಾಯಿಯನ್ನು ಸಂತೋಷವಾಗಿರಿಸುವುದು ನಮ್ಮ ಆದ್ಯ ಕರ್ತವ್ಯ. ಅಮ್ಮನನ್ನು ಕಳೆದುಕೊಂಡಿರುವ ಅದೆಷ್ಟೋ ಮಂದಿ ಅಮ್ಮನ ನೆನಪಲ್ಲಿ ದಿನ ದೂಡುವಾಗ ಅಮ್ಮ ಇದ್ದವರು ಆ ಅಮ್ಮನನ್ನು ಪ್ರತಿ ಕ್ಷಣವೂ ಸಂತೋಷದಿಂದ ಇರುವಂತೆ ಮಾಡಬೇಕಾಗಿದೆ. ಆ ಅಮ್ಮನ ದಿನವನ್ನು ‘ಮದರ್ಸ್ ಡೇ’ ಹೆಸರಿನಲ್ಲಿ ಒಂದು ದಿನವಾದರೂ ಸಾರ್ಥಕಗೊಳಿಸಬೇಕಾಗಿದೆ. ಎಲ್ಲ ಅಮ್ಮಂದಿರಿಗೂ ಅಮ್ಮನ ದಿನದ ಶುಭಾಶಯಗಳು.
@ಯೂಸುಫ್ ರೆಂಜಲಾಡಿ