ನಾವು ಸೋತಿದ್ದೇವೆ, ಹೊಸ ಪೀಳಿಗೆಯವರು ಪಕ್ಷ ಕಟ್ಟಲಿ: ಡಾ.ಎಂ.ಕೆ.ಪ್ರಸಾದ್

0

ಪುತ್ತೂರು: ಜನರು ನಮಗೆ ಓಟ್ ಹಾಕಲಿಲ್ಲ, ಪರಿಣಾಮ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಹೊಸ ಪೀಳಿಗೆಯವರು ನಮ್ಮನ್ನು ಸೋಲಿಸಿದ್ದಾರೆ. ಹೊಸ ಪೀಳಿಗೆಯವರು ಪಕ್ಷವನ್ನು ಕಟ್ಟಲಿ ಎಂದು ಹಿರಿಯ ಮುಖಂಡರಾದ ಡಾ. ಎಂ.ಕೆ. ಪ್ರಸಾದ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ಫಲಿತಾಂಶದ ಬಗ್ಗೆ ‘ಸುದ್ದಿ’ಗೆ ಪ್ರತಿಕ್ರಿಯೆ ನೀಡಿದ ಅವರು, ಜನರೇಷನ್ ಗ್ಯಾಪ್‌ನಿಂದ ಈ ರೀತಿಯ ಫಲಿತಾಂಶ ಬಂದಿದೆ. ಜನರಿಗೆ ನಾವು ಮಾಡಿದ ಕೆಲಸ ಸರಿಯಾಗಿದೆ ಎಂದು ಕಂಡಿಲ್ಲವೆಂದು ಅನಿಸುತ್ತದೆ. ಪಕ್ಷೇತರ ಅಭ್ಯರ್ಥಿಯ ಸ್ಪರ್ಧೆಯಿಂದಲೇ ಸೋಲು ಆಗಿರುವಂತದ್ದು ಎಂದು ಹೇಳಿದರು.

ಪಕ್ಷೇತರ ಅಭ್ಯರ್ಥಿಯನ್ನು ಟಾರ್ಗೆಟ್ ಮಾಡಲಾಗಿತ್ತು ಎನ್ನುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನೇ ಪತ್ರಿಕಾಗೋಷ್ಠಿ ಮಾಡಿರುವುದು. ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಕೆಲವೊಂದು ಸತ್ಯಗಳನ್ನು ಹೇಳಬೇಕಾಗುತ್ತದೆ. ಅದನ್ನು ಹೇಳಿದ್ದೇವೆ ಅಷ್ಟೇ. ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಲಾಭವಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಕಾರ್ಡ್ ನಂಬಿ ಜನರು ಓಟ್ ಹಾಕಿದ್ದಾರೆ. ಆಡಳಿತದಲ್ಲಿದ್ದ ಪಕ್ಷ ಜನರ ಬೇಸರವನ್ನು ಯಾವಾಗಲೂ ಕಟ್ಟಿಕೊಳ್ಳುತ್ತದೆ. ಅಂದುಕೊಂಡ ಕೆಲಸ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಅಭಿವೃದ್ಧಿ ಸಿಕ್ಕಾಪಟ್ಟೆ ಆಗಿದೆ. ಆದರೆ ವೈಯಕ್ತಿಕ ವಿಷಯದಲ್ಲಿ ಜನತೆಗೆ ಬಹುಶಃ ಸಂತೋಷ ಆಗಿಲ್ಲ. ಅದಕ್ಕೆ ನಮ್ಮನ್ನು ಸೋಲಿಸಿದ್ದಾರೆ ಎಂದು ಹೇಳಿದರು.

ನಾನು ಮುದುಕ. ಮೊನ್ನೆಯವರೆಗೆ ಪಕ್ಷ ಕಟ್ಟಿದ್ದೇನೆ. ನಮಗೂ ಪ್ರಾಯವಾಯಿತು. ಇನ್ನು ಪಕ್ಷ ಕಟ್ಟಲು ಸಾಧ್ಯವಿಲ್ಲ. ಹೊಸ ಪೀಳಿಗೆಯವರು ಬಂದು ಪಕ್ಷ ಕಟ್ಟಲಿ. ಅಭ್ಯರ್ಥಿಗಳ ಹೆಸರು ಬಂದಿದ್ದು ಕೇಂದ್ರೀಯ ಸಮಿತಿಯಿಂದ. ಅದರ ಬಗ್ಗೆ ನಾವು ಹೇಳುವಂತಿಲ್ಲ. ಅವರು ಹೇಳಿದ್ದನ್ನು ಫಾಲೋ ಮಾಡುವುದಷ್ಟೇ. ಅವರು ಯಾರನ್ನು ಕಣಕ್ಕೆ ಇಳಿಸುತ್ತಾರೋ ಅವರಿಗೆ ಸಪೋರ್ಟ್ ಮಾಡಿ ಗೆಲ್ಲಿಸುವುದು ನಮ್ಮ ಕೆಲಸ ಎಂದು ಹೇಳಿದರು.

ಆರ್‌ಎಸ್‌ಎಸ್‌ನ ಕಾರ್ಯಕ್ರಮವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಡಾ.ಎಂ.ಕೆ.ಪ್ರಸಾದ್ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ ಎರಡೂ ಒಂದೇ. ಹಿಂದುತ್ವಕ್ಕಾಗಿ ಹೋರಾಡುವ ಎರಡು ಮುಖಗಳು. ಹಿಂದುತ್ವವನ್ನು ಉಳಿಸಬೇಕಾದರೆ ಬಳಸಿಕೊಳ್ಳಲೇಬೇಕು, ಅದರಲ್ಲಿ ತಪ್ಪೇನಿಲ್ಲ. ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದರು.

ನೂತನ ಶಾಸಕರು ಅಭಿವೃದ್ಧಿಯ ಬಗ್ಗೆ ಬಹಳಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಅವರು ಮಾಡಲಿ, ದೇಶ ಅಭಿವೃದ್ಧಿಯಾಗಲಿ ಎನ್ನುವುದು ನಮ್ಮ ಆಶಯ ಎಂದು ಡಾ.ಎಂ.ಕೆ.ಪ್ರಸಾದ್ ಹೇಳಿದರು.

LEAVE A REPLY

Please enter your comment!
Please enter your name here