ಮನೆಯಂಗಳದಿ ಔಷಧಿ ಸಸ್ಯ- 1(ಅಂಟುತುತ್ತಿ)

0

ಮೂಲಿಕಾ ಪರಿಚಯ:

ʼಬಲಾʼ ಯಾ ʼಕಳ್ಳಂಗಡಲೆʼ ವರ್ಗದೊಳಗಿನ ಮೂರು ಒಳಗುಂಪುಗಳು ʼತುಪ್ಪಿʼ, ʼತುತ್ತಿʼ ಮತ್ತು ʼತುರುಬೆʼ, ತುಪ್ಪಿ ಮತ್ತು ತುತ್ತಿ ಎರಡೂ ಗುಂಪಿನ ಗುಣಗಳನ್ನೂ, ʼತುತಿʼ ರೂಪ ಸಾದೃಶ್ಯವನ್ನೂ ಹೊಂದಿದ ವಿಶಿಷ್ಟ ಸಸ್ಯ ಇದು ʼಅಂಟುತುತ್ತಿʼ. ಕರ್ನಾಟಕ ಒಳನಾಡಿನಿಂದ ಹರಡುತ್ತ ಕಡಲಕರೆಯಲ್ಲೂ ಇಣುಕುತ್ತಿದೆ ಕಳೆಯೆಂದು ಹೆಸರು ಹೊತ್ತಿರುವ ಈ ಗಿಡ. ಅಂಗೈ ಅಗಲ ಹೃದಯಾಕಾರ ಎಲೆಗಳು, ತುದಿ ಚೂಪು, ಎಲೆ-ಕಾಂಡ ರೆಂಬೆಗಳು ರೋಮಶ. ಮುಟ್ಟಿದರೆ ಮೃದು, ಜೊತೆಗೆ ಕೈಗಂಟುವ ಅಂಟುದ್ರವ್ಯ. ನಾಡಿಹಿಂಗಿನ ಪರಿಮಳ ಬೇರೆ. ಕುರುಂತೋಟಿಯಂತಹದೇ ಚಿಕ್ಕ ಹಳದಿ ಹೂ, ಕಾಯಿಗಳು. 3-5 ಅಡಿ ಎತ್ತರ, ಮೃದುಸಸ್ಯ. ತೊಗಟೆ ನಾರಿನಂತೆ ಸೆಳೆಯಲು ಸಾಧ್ಯ. ಈ ಭಾಗವೇ ವಿಶಿಷ್ಟ ಔಷಧ. ಸಾಕಷ್ಟು ಲೋಳೆ ರಸ. ತಂಪು ಗುಣ. ಶರೀರ ಸ್ರೋತಸ್ಸು, ಧಾತುಗಳನ್ನು ಹೆಚ್ಚಿಸುವುದು. ಜ್ವರ, ನೋವುಗಳು, ಅತಿಸಾರ, ಶ್ವಾಸ, ಕೆಮ್ಮು ಪತಿಹಾರಕ. ವಾತಹರ, ಉರಿ, ಬಾಯಾರಿಕೆಗಳಲ್ಲಿ ಶಾಮಕ. ಎಲುಬುನೋವು-ಪೊಳ್ಳುತನಗಳಲ್ಲಿ ಗುಣಕಾರಿ. ಜ್ವರಹರ, ಪೋಷಕ, ಶರೀರ ತಂಪುಗೊಳಿಸುವುದು. ನಿದ್ರಾಜನಕ, ಕೂದಲು ವರ್ಧಕ, ಬೇರು ʼಬಲಾʼದಂತೆಯೇ ಉಪಯುಕ್ತ. ಉಷ್ಣವಲಯದ ಸಸ್ಯ. ಭಾರತ, ಮಲೇಶಿಯಾ ಮೂಲ. ಇದರ ಮೂಲ ಪ್ರದೇಶಗಳಲ್ಲಿ ಅನುಭೂತ ಜಾನಪದ ಔಷಧ. ಕೊಳೆಹುಣ್ಣಿಗೆ ಇದರ ತೈಲ ಪ್ರಸಿದ್ಧ. ನೆಲಕ್ಕೆ ಹೊಳಪು ನೀಡಲು ತಲೆಸ್ನಾನಕ್ಕೆ ಇದರೆಲೆ, ನಾರುಗಳ ಬಳಕೆ ಇದೆ. ಚಳಿಯಾರಂಭದೊಂದಿಗೆ ಹೂ ಬಿಡುವುದು. ಕೀಟನಾಶಕವೂ ಹೌದು.

ಉಪಯೋಗಗಳು:

ಮೊಣಕಾಲು ಸಂದಿ, ಎಲುಬು ಸವೆತಕ್ಕೆ:
ಅಂಟುತುತ್ತಿ ಎಲೆ, ಕಾಂಡದ ಸಿಪ್ಪೆ (ಹಸಿರು ಭಾಗಗಳೆಲ್ಲಾ) ನಾರು ಸಹಿತ ಹಾಲಲ್ಲಿ ಅರೆದು, 1 ಲೋಟದಷ್ಟಕ್ಕೆ, ಉದ್ದಿನ ಹುಡಿ 6-8 ಚಮಚ, 1 ನಿಂಬೆಗಾತ್ರ ಬೆಣ್ಣೆ ಚೆನ್ನಾಗಿ ಕಲಸಿ ಮೊಣಕಾಲು ಸುತ್ತಲೂ ದಪ್ಪ ಲೇಪ(ಲೇಪ ಆರದು). ಒಂದೂವರೆ- ಮೂರು ಗಂಟೆ ಕಾಲ. ಸಾಯಂಕಾಲ ಉತ್ತಮ. ದಿನಬಿಟ್ಟು ದಿನದಂತೆ 4-6 ಬಾರಿ.

ಸೂಚನೆ: ಜೊತೆಗೆ ಅಸ್ಥಿಧಾತು ಹೆಚ್ಚಳಕ್ಕಾಗಿ ಸೇವನೌಷಧವೂ ಪೂರಕ.

ಚರ್ಮ, ಒಡೆತ, ಬಿರಿಯುವಿಕೆ, ಒಣಗುವಿಕೆ ಇವಕ್ಕೆ:
ಎಲೆ ಮತ್ತು ನಾರು ಅರೆದು ಹಿಂಡಿದ ರಸ ಒಂದೂವರೆ ಲೋಟಕ್ಕೆ (ಕೊಂಚನ ನೀರು ಸೇರಿಸಬಾರದು) 1 ಲೋಟ ಕೊಬ್ಬರಿ ಎಣ್ಣೆ (ಪೆರಟೆಣ್ಣೆ ಉತ್ತಮ. ಪೆರಟೆಣ್ಣೆ-ಕೊಬ್ಬರಿ ಹೋಳುಗಳನ್ನುಅರೆದು ಕುದಿಸಿ ಎತ್ತಿದ ಎಣ್ಣೆ) 8 ಚಮಚ ಹರಳೆಣ್ಣೆ ಸೇರಿಸಿ ಕುದಿಸಿ ತೈಲ ತಯಾರಿಸಿಟ್ಟುಕೊಂಡು ಲೇಪನ. ದಿನಾ 1 ಗಂಟೆಯಂತೆ 1 ರಿಂದ 3 ವಾರ. ಅಥವಾ ಎಲೆ, ನಾರು, ತೆಂಗಿನಕಾಯಿ ಹಾಲಲ್ಲಿ ಅರೆದು, ಅನ್ನದ ತಿಳಿ ಮಿಶ್ರ ಮಾಡಿ ದಿನಾ 1 ಗಂಟೆಯಂತೆ 3-6 ದಿನಗಳು.

ಅಂಟುತುತ್ತಿ ಸಂಧಿ ಸವೆತಗಳಿಗೆ ದಿವ್ಯೌಷಧಿ ಹೆಸರುಗಳು:
ಕನ್ನಡ: ಅಂಟುತುತ್ತಿ, ಬಿಳೇತುತ್ತಿ, ಆನೆಮದ್ದು, ಮೈಸೂರುಬಲಾ
ಮಲಯಾಳ: ಕಾಟ್ಟೂರಂ
ತಮಿಳು: ಮೈರ್‌ ಮಾಣಿಕ್ಯಂ
ತೆಲುಗು: ಚೂಡಿಮುಟ್ಟಿ
ಹಿಂದಿ: ಬರಿಯಾಲ್‌
ಸಂಸ್ಕೃತ: ಬಲಾಭೇದ
ಇಂಗ್ಲಿಷ್:‌ sticky mallow
ಸಸ್ಯ ಶಾಸ್ತ್ರೀಯ: sida mysorensis wight & arn
ಕುಟುಂಬ: mavaceae
ಉಪಯೋಗ: ಎಲೆ, ನಾರು ಮತ್ತು ಬೇರು

ಮೂಲ ಬರಹ: ಪಿ ಎಸ್‌ ವೆಂಕಟರಾಮ ದೈತೋಟ

LEAVE A REPLY

Please enter your comment!
Please enter your name here