ಅಂಗನವಾಡಿ ವಠಾರದಲ್ಲಿ ಕಂಗೊಳಿಸುತ್ತಿದೆ ಸುಂದರ ಹಣ್ಣಿನ ತೋಟ-ಕಲ್ಲುಗುಡ್ಡೆ: ಫಲ ನೀಡಿದ 10ಕ್ಕೂ ಅಧಿಕ ವಿಧದ ಹಣ್ಣಿನ ಗಿಡಗಳು !

0

ನೂಜಿಬಾಳ್ತಿಲ: ಅಂಗನವಾಡಿ ಕೇಂದ್ರ ಎಂದರೆ ಅಲ್ಲಿ ಪುಟಾಣಿ ಮಕ್ಕಳ ಕಲರವ, ಆಟೋಟ, ಕಲಿಕೆ ಇತ್ಯಾದಿಗಳನ್ನು ಕಾಣಬಹುದಾಗಿದೆ. ಆದರೆ ಇಲ್ಲೊಂದು ಅಂಗನವಾಡಿ ಕೇಂದ್ರದಲ್ಲಿ ಕಲಿಕೆ, ಆಟೋಟ ಮಾತ್ರವಲ್ಲದೆ ವಠಾರದಲ್ಲಿ ಇದರ ಜೊತೆಗೆ ಸುಂದರ ಹಣ್ಣಿನ ತೋಟವನ್ನು ನಿರ್ಮಿಸಿ, ಅಂಗನವಾಡಿ ಕೇಂದ್ರವನ್ನು ಕಂಗೊಳಿಸುವಂತೆ ಮಾಡಲಾಗಿದೆ.


ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರ ಈ ವಿಭಿನ್ನ ಕಾರ್ಯ ಯೋಜನೆಯಿಂದ ಗುರುತಿಸಿಕೊಂಡಿದೆ. ಅಂಗನವಾಡಿ ಕೇಂದ್ರ ಎಂದರೆ ಬರೀ ಮಕ್ಕಳ ಲಾಲನೆ-ಪಾಲನೆಗೆ ಸೀಮಿತವಾಗದೆ, ಸರಕಾರದ ಕೆಲಸಕ್ಕೆ ಮಾತ್ರ ಸೀಮಿತವಾಗಿರದೆ ವಿಶೇಷ ಚಿಂತನೆ ಮೂಲಕ ಅಂಗನವಾಡಿ ವಠಾರದಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಗಿದೆ ಈಗ ಫಸಲು ಬಂದಿದ್ದು, ಅಂಗನವಾಡಿ ವಠಾರ ಹಣ್ಣಿನ ಗಿಡಗಳು ಹಾಗೂ ಅದರಲ್ಲಿ ಫಸಲು ನೀಡಿರುವ ಹಣ್ಣುಗಳಿಂದ ಕಂಗೊಳಿಸುತ್ತಿದೆ.

34 ಹಣ್ಣಿನ ಗಿಡಗಳು;
ಅಂಗನವಾಡಿ ಕಲ್ಲುಗುಡ್ಡೆ ಪೇಟೆಯಲ್ಲಿದ್ದು, ಅಂಗನವಾಡಿ ಸಮೀಪದವಿದ್ದ ಖಾಲಿ ಜಾಗದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಗಿತ್ತು. ಅದು ಇದೀಗ ಫಲ ನೀಡಿದೆ. ಇಲ್ಲಿ ಸುಮಾರು 10ಕ್ಕೂ ಅಧಿಕ ವಿಧದ 34 ಹಣ್ಣಿನ ಗಿಡಗಳಿವೆ. ರಂಬೂಟಾನ್, ಪೇರಳೆ, ಮಾವು,ಚಿಕ್ಕು, ರಾಮಫಲ, ಸೀತಾಫಲ, ಹಲಸು, ಬಾಳೆಗಿಡ ಗಳು ಬೆಳೆದು ನಿಂತಿದ್ದು, ಫಲ ನೀಡಿದೆ. ಅಂಗವಾಡಿಯವರ ಶ್ರಮಕ್ಕೆ ಇದೀಗ ಖುಷಿ ತಂದಿದೆ.


ಕಂಗೊಳಿಸುತ್ತಿದೆ ಸುಂದರ ಹಣ್ಣಿನ ತೋಟ;
ಅಂಗನವಾಡಿ ಕಾರ್ಯಕರ್ತೆಯಾಗಿರುವ ಅಮೀನಾ ಕೆ. ಅವರ ಪತಿ ಖಾದರ್ ಸಾಹೇಬ್ ಅವರ ವಿಶೇಷ ಮುತುವರ್ಜಿ ಹಾಗೂ ಕಲ್ಪನೆಯಂತೆ ಇಲ್ಲಿ ಹಣ್ಣಿನ ತೋಟ ನಿರ್ಮಾಣಗೊಂಡಿದೆ. ನೂಜಿಬಾಳ್ತಿಲ ಗ್ರಾಮ ಪಂಚಾಯತ್‌ನ ಉದ್ಯೋಗ ಖಾತರಿ ಹಾಗೂ ಊರವರ ಸಹಕಾರದಲ್ಲಿ ಹಣ್ಣಿನ ತೋಟ ನಿರ್ಮಾಣವಾಗಿದೆ. ಖಾಸಗಿ ನರ್ಸರಿಯಿಂದ ಹಣ್ಣಿನ ಗಿಡಗಳನ್ನು ತಂದು ಮಣ್ಣನ್ನು ಅಗೆದು ನಾಟಿ ಮಾಡಲಾಗಿತ್ತು.ನಂತರದ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹಣ್ಣಿನ ಗಿಡಗಳ ಪೋಷಣೆ ಮಾಡಿದ್ದಾರೆ. ವಿಶೇಷ ಎಂದರೆ ನಾಟಿ ಮಾಡಿದ ಎಲ್ಲಾ ಗಿಡಗಳು ಬೆಳೆದು ನೀಮತು ಇಂದು ಫಲ ನೀಡುತ್ತಿದೆ.


ಫಸಲು ನೀಡಿದ ಹಣ್ಣುಗಳನ್ನು ಅಂಗನವಾಡಿಯ ಪುಟಾಣಿಗಳಿಗೆ ತಿನ್ನಲು ನೀಡಲಾಗುತ್ತದೆ. ಮಕ್ಕಳಿಗೆ ಪ್ರತೀ ದಿನ ವಿವಿಧ ಬಗೆಯ ಹಣ್ಣುಗಳನ್ನು ನೀಡಲು ಸಿಗುತ್ತಿದೆ. ಇದು ಮಕ್ಕಳ ಆರೋಗ್ಯಕ್ಕೂ ಪೂರಕವಾಗಿದೆ. ಅಂದ ಹಾಗೆ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ 36 ಮಕ್ಕಳು ದಾಖಲಾಗಿದ್ದಾರೆ.

ಎರಡು ವರ್ಷಗಳ ಹಿಂದೆ ನಾಟಿ ಮಾಡಿದ ಹಣ್ಣಿನ ಗಿಡಗಳು ಇಂದು ಬೆಳೆದು ಫಲ ನೀಡಿದೆ. ಇಲ್ಲಿನ ಬೆಳೆದಿರುವ ಹಣ್ಣನ್ನು ಮಕ್ಕಳಿಗೆ ನೀಡುತ್ತಿದ್ದೇವೆ. ನಮ್ಮ ಶ್ರಮಕ್ಕೆ ಇಂದು ಫಲ ಸಿಕ್ಕಿದೆ
:- ಅಮಿನ ಕೆ. ಅಂಗನವಾಡಿ ಕಾರ್ಯಕರ್ತೆ ಕಲ್ಲುಗುಡ್ಡೆ

LEAVE A REPLY

Please enter your comment!
Please enter your name here