ಪುತ್ತೂರು:ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ನಿಗಮ ಮಂಡಳಿಗಳಿಗೆ ಮಾಡಲಾಗಿದ್ದ ನಾಮನಿರ್ದೇಶನವನ್ನು ರದ್ದುಗೊಳಿಸಿ ನೂತನ ಸರಕಾರ ಆದೇಶ ಹೊರಡಿಸಿದೆ. ರಾಜ್ಯ ಸರಕಾರದ ವಿವಿಧ ನಿಗಮ ಮಂಡಳಿ, ಸ್ವಾಯತ್ತ ಸಂಸ್ಥೆಗಳು ಮತ್ತು ಇತರೇ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಿಗೆ ನೇಮಕ ಮಾಡಲಾಗಿದ್ದ ಅಧ್ಯಕ್ಷರು/ ನಿರ್ದೇಶಕರು ಹಾಗೂ ಸದಸ್ಯರ ನಾಮನಿರ್ದೇಶನಗಳನ್ನು ರದ್ದು ಪಡಿಸಿ ರಾಜ್ಯ ಸರಕಾರ ಆದೇಶಿಸಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿರುವ ಮುರಳಿಕೃಷ್ಣ ಹಸಂತಡ್ಕ, ಮೆಸ್ಕಾಂ ನಿರ್ದೇಶಕ ಕಿಶೋರ್ ಬೊಟ್ಯಾಡಿ ಸೇರಿದಂತೆ ಪ್ರಮುಖರ ನಾಮನಿರ್ದೇಶನ ರದ್ದುಗೊಂಡಿರುವುದರಿಂದ ಅವರ ಅಧಿಕಾರದ ಅವಧಿ ಮುಕ್ತಾಯಗೊಂಡಂತಾಗಿದೆ.
ರಾಜ್ಯ ಧಾರ್ಮಿಕ ಪರಿಷತ್ತು, ಜಿಲ್ಲಾ ಧಾರ್ಮಿಕ ಪರಿಷತ್ತು, ಆರಾಧನಾ ಸಮಿತಿ, ಶ್ರೀ ಮಲೈಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಽಕಾರ ಹಾಗೂ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಲ್ಲಿ ಸರಕಾರದಿಂದ ನಾಮ ನಿರ್ದೇಶಿತ ಸದಸ್ಯರ ಸದಸ್ಯತ್ವವನ್ನು ಮೇ22ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆದೇಶಿಸಲಾಗಿದೆ. ವಿವಿಧ ನಿಗಮ ಮಂಡಳಿಗಳಿಗೆ ನೂತನ ರಾಜ್ಯ ಸರಕಾರದಿಂದ ಕೆಲವೇ ದಿನಗಳಲ್ಲಿ ಮತ್ತೆ ಹೊಸದಾಗಿ ನೇಮಕ ನಡೆಯುವ ಸಾಧ್ಯತೆಗಳಿವೆ.