ಪುತ್ತೂರು ತಾ| ಕಸಾಪ ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕರಾಗಿ ನಾರಾಯಣ ಕುಂಬ್ರ ಆಯ್ಕೆ

0

ಪುತ್ತೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಡೆಸುತ್ತಿರುವ ’ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಎಂಬ ಘೋಷ ವಾಕ್ಯದಲ್ಲಿ ಪುತ್ತೂರು ತಾಲೂಕಿನ 32 ಗ್ರಾಮದಲ್ಲಿ ನಡೆಯುವ ’ಗ್ರಾಮ ಸಾಹಿತ್ಯ ಸಂಭ್ರಮ’ ಸರಣಿ ಕಾರ್ಯಕ್ರಮದ ಸಂಚಾಲಕರಾಗಿ ಯುವ ಸಾಹಿತಿ ನಾರಾಯಣ ಕುಂಬ್ರ ನೇಮಕಗೊಂಡಿದ್ದಾರೆ.

ಯುವ ಜನತೆಯಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಹಾಗೂ ಯುವ ಜನತೆಯನ್ನು ಸಾಹಿತ್ಯ ಕ್ಷೇತ್ರದತ್ತ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಹಿತ್ಯ ಪೋಷಕರಾಗಿರುವ ಅಬುಧಾಬಿಯ ಉದ್ಯಮಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ ರೈರವರ ಮಹಾ ಪೋಷಕತ್ವದಲ್ಲಿ ’ಗ್ರಾಮ ಸಾಹಿತ್ಯ ಸಂಭ್ರಮ’ ನಡೆಯುತ್ತಿದೆ. 2022 ನವೆಂಬರ್‌ನಲ್ಲಿ ಪ್ರಾರಂಭಿಸಿದ ಈ ಸರಣಿ ಕಾರ್ಯಕ್ರಮ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ, ಪಾಣಾಜೆ ಗ್ರಾಮದ ಆರ್ಲಪದವಿನಲ್ಲಿ ಮತ್ತು ವಡ್ಯದಲ್ಲಿ, ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ, ಕಬಕ ಗ್ರಾಮದ ಮುರದಲ್ಲಿ ಐದು ಸರಣಿ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ನಾರಾಯಣ ಕುಂಬ್ರರವರ ಸಂಚಾಲಕತ್ವದಲ್ಲಿ ಅಚ್ಚುಕಟ್ಟಾಗಿ ಜೋಡಿಸಿ ಯಶಸ್ವಿಯಾಗಿ ನೆರವೇರಿಸಲಾಗಿದೆ. ಇನ್ನೂ ಉಳಿದ ಗ್ರಾಮಗಳಲ್ಲಿ ಮುಂದಿನ 4 ವರ್ಷ ಪರ್ಯಂತ ನಿರಂತರವಾಗಿ ಈ ಗ್ರಾಮ ಸಾಹಿತ್ಯ ಸಂಭ್ರಮ ಇವರ ನೇತೃತ್ವದಲ್ಲಿ ನಡೆಯಲಿದೆ.

ಪ್ರಸ್ತುತ ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಲ್ಯಾಬ್ ಸಹಾಯಕರಾಗಿ ಸೇವೆಯನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿ ದಿಸೆಯಿಂದಲೇ ಸಾಹಿತ್ಯ ಹಾಗೂ ಯಕ್ಷಗಾನ,ನಾಟಕ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ರಾಜ್ಯ, ಜಿಲ್ಲಾ, ಅಂತರ್ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾರೆ. ನಿಮ್ಮ ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಆಯೋಜಿಸಲು ನಾರಾಯಣ ಕುಂಬ್ರ ಅವರ ಈ ದೂರವಾಣಿ ಸಂಖ್ಯೆ ಗೆ 8073319717 ಕರೆ ಮಾಡಬಹುದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here