ಮಳೆಗಾಲ ಎದುರಿಸಲು ನಗರಸಭೆಯಿಂದ ಸಿದ್ದತೆ ಪೂರ್ಣ; ಟಾಸ್ಕ್‌ಫೋರ್ಸ್ ರಚನೆ, 24X7 ಕರೆ ಸ್ವೀಕರಿಲು ಅಧಿಕಾರಿಗಳ ನಿಯೋಜನೆ

0

ಪುತ್ತೂರು:ಪುತ್ತೂರು ನಗರ ಸಭೆಯ ವತಿಯಿಂದ ಮಳೆಗಾಲವನ್ನು ಎದುರಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.ಇಬ್ಬರು ಅಧಿಕಾರಿಗಳನ್ನು ಒಳಗೊಂಡಿರುವ ಎರಡು ಟಾಸ್ಕ್‌ಫೋರ್ಸ್ ಸಮಿತಿಗಳನ್ನು ರಚಿಸಿಕೊಳ್ಳಲಾಗಿದೆ. ರಜಾದಿನ ಹಾಗೂ ರಾತ್ರಿ ಸಮಯ ಸೇರಿದಂತೆ ದಿನದ 24 ಗಂಟೆಯೂ ಸಾರ್ವಜನಿಕರಿಂದ ದೂರುಗಳ ಕರೆ ಸ್ವೀಕರಿಸಲು ಅಧಿಕಾರಿಗಳನ್ನು ನಿಯೋಜಿಸಿ ಆದೇಶಿಸಲಾಗಿದೆ ಎಂದು ನಗರ ಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ‘ಸುದ್ದಿ’ಗೆ ಮಾಹಿತಿ ನೀಡಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಭೂ ಕುಸಿತಗೊಂಡಿರುವಲ್ಲಿ ಹಾಗೂ ನದಿಗಳ ಹೂಳೆತ್ತುವ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಹಲವು ಕಡೆಗಳಲ್ಲಿ ಕಾಮಗಾರಿ ಮುಕ್ತಾಯವಾಗಿದ್ದು ಇನ್ನು ಬಾಕಿಯುಳಿದಿರುವುದನ್ನು ಈ ವಾರದಲ್ಲಿ ಮುಕ್ತಾಯಗೊಳಿಸಲು ಪ್ರಯತ್ನಿಸಲಾಗುವುದು. ಎರಡು ವರ್ಷದ ಹಿಂದೆ ಗುಡ್ಡ ಜರಿದು ಹಾನಿಗೊಂಡಿರುವ, ತಡೆಗೋಡೆ ಕುಸಿತಗೊಂಡಿರುವಂತಹ ಪ್ರದೇಶಗಳಲ್ಲಿ ಜನರು ಎಚ್ಚೆತ್ತುಕೊಳ್ಳುವಂತೆ ಸೂಚಿಸಲಾಗಿದೆ. ನಗರ ಸಭೆಯ ಸಮುದಾಯ ಭವನದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗುವುದು. ಅಪಾಯಕಾರಿ ಸ್ಥಳಗಳಲ್ಲಿರುವ ಜನರನ್ನು ಸ್ಥಳಾಂತರಿಸಲು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುವುದು. ಗುಡ್ಡ ಜರಿಯುವ, ಮನೆ ಬೀಳುವ ಪ್ರದೇಶಗಳಲ್ಲಿರುವ ಜನರಿಗೆ ಈಗಾಗಲೇ ಅಧಿಕಾರಿಗಳ ಮೂಲಕ ಮಾಹಿತಿ ನೀಡಲಾಗಿದೆ.ಕೆಲವು ಭಾಗದಲ್ಲಿ ಗುಡ್ಡ ಕಡಿದು ಸಮತಟ್ಟು ಮಾಡುತ್ತಿರುವುದು ಕಂಡುಬಂದಿದೆ. ಸಮತಟ್ಟು ಮಾಡುವ ಸಂದರ್ಭದಲ್ಲಿ ಗುಡ್ಡ ಜರಿಯದಂತೆ ಹಾಗೂ ಮನೆಗಳಿಗೆ ಹಾನಿಯುಂಟಾಗದಂತೆ ಅಲ್ಲಿ ತಡೆಗೋಡೆ ನಿರ್ಮಿಸಬೇಕಾಗಿರುವುದು ಸಮತಟ್ಟು ಮಾಡುವವರ ಜವಾಬ್ದಾರಿಯಾಗಿದೆ. ಅಂತಹ ಮ್ಹಾಲಕರಿಗೆ ಈಗಾಗಲೇ ನೋಟೀಸ್ ನೀಡಲಾಗಿದ್ದು ಅನಾಹುತಗಳು ಸಂಭವಿಸಿದಲ್ಲಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗವುದು ಎಂದು ನೋಟೀಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.ಅನಾಹುತ ಉಂಟಾಗದ ರೀತಿಯಲ್ಲಿ ಕಾಮಗಾರಿ ಮಾಡುವಂತೆ ಜನರಿಗೂ ಮಾಹಿತಿ ನೀಡಲಾಗಿದೆ ಎಂದರು.

ಕಳೆದ ಬಾರಿ ಮಳೆಗಾಲದಲ್ಲಿ ತಡೆಗೋಡೆ ಕುಸಿತ, ರಸ್ತೆ ಸಮಸ್ಯೆಗಳು ಉಂಟಾಗಿದೆ. ಇಂತಹ ಕೆಲವು ಭಾಗದಲ್ಲಿ ದುರಸ್ತಿ ಮಾಡಲಾಗಿದೆ. ಉಳಿದ ಕಡೆಗಳಲ್ಲಿ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಹಾಗೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಬಂದ ಕೂಡಲೇ ಕ್ರಮ ವಹಿಸಲಾಗುವುದು. ಪರ್ಲಡ್ಕ, ಸಾಮೆತ್ತಡ್ಕ ಮೊದಲಾದ ಕಡೆಗಳಲ್ಲಿ ಚರಂಡಿ ತಡೆಗೋಡೆ ಕುಸಿತಗೊಂಡಿರುವಲ್ಲಿ ಬೇರೆ ಬೇರೆ ಅನುದಾನಗಳ ಮೂಲಕ ನಿರ್ಮಾಣ ಮಾಡಲಾಗಿದೆ. ಕೆಲವೊಂದು ಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅನುದಾನದ ಅವಶ್ಯಕತೆಯಿದ್ದು ಸರಕಾರಕ್ಕೆ ಬರೆಯಲಾಗಿದ್ದು ಅನುದಾನ ಬಂದ ಕೂಡಲೇ ಕ್ರಮವಹಿಸಲಾಗುವುದು ಎಂದವರು ಹೇಳಿದರು.

ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಡಳಿತ ಅವಧಿಯು ಮುಕ್ತಾಯಗೊಂಡಿದ್ದು ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಜನಪ್ರತಿನಿಧಿಗಳ ಜೊತೆಯಲ್ಲಿ, ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳ ಮುಖಾಂತರ ಎಲ್ಲಾ ನಿರ್ವಹಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ತೆಂಕಿಲದಲ್ಲಿ ಅಪಾಯ
ಪ್ರಸ್ತುತ ತೆಂಕಿಲದಲ್ಲಿ ಅಪಾಯ ಇರುವುದನ್ನು ಗುರುತಿಸಲಾಗಿದೆ. ಇದರ ಹೊರತಾಗಿಯೂ ಕೆಲವು ಕಡೆಗಳಲ್ಲಿ ಗುಡ್ಡ ಕಡಿದು ಸಮತಟ್ಟು ಮಾಡಲಾಗುತ್ತಿದ್ದು ಎಲ್ಲಾ ಪ್ರದೇಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಲಾಗಿದೆ. ಇದರ ಬಗ್ಗೆ ನಿಗಾ ವಹಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಹಲವು ಸಭೆಗಳನ್ನು ನಡೆಸಲಾಗಿದೆ. ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಹಾಗೂ ಶಾಸಕರು ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದು ತಂಡ ರಚಿಸಿ ವ್ಯವಸ್ಥೆ ಮಾಡಲಾಗಿದೆ ಎಂದರು.

LEAVE A REPLY

Please enter your comment!
Please enter your name here